ಮುಡಾ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮ; ಏಕ, ಬಹು ನಿವೇಶನಗಳಿಗೆ ನಿಯಮಬಾಹಿರ ತಾಂತ್ರಿಕ ಅನುಮೋದನೆ

ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೊಳಪಟ್ಟಿರುವ ಗ್ರಾಮಗಳ ವಿವಿಧ ಸರ್ವೆ ನಂಬರ್‍‌ಗಳಲ್ಲಿನ ಆಸ್ತಿಗಳ ವಿನ್ಯಾಸ ನಕ್ಷೆಗಳಿಗೆ ಕಾನೂನುಬಾಹಿರವಾಗಿ ಅನುಮೋದನೆ ನೀಡಿರುವ ಮತ್ತೊಂದು ಬಹುದೊಡ್ಡ ಅಕ್ರಮವು ತನಿಖೆಯಿಂದ ಬಯಲಾಗಿದೆ.

 

ಒಟ್ಟು 49ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಮೈಸೂರು ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‍‌ಗಳು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗಿಯಾಗಿದ್ದಾರೆ.

 

ಮುಡಾ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಿಗೆ ನಿಯಮಬಾಹಿರವಾಗಿ ನಕ್ಷೆ ತಯಾರಿಸಿ ಅನುಮೋದನೆ ನೀಡಲಾಗಿದೆ. ನಮೂನೆ 9-11 ಎ ಮತ್ತು 11 ಬಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣಲ್ಲಿ ಆರ್ಥಿಕ ನಷ್ಟವುಂಟಾಗಿದೆ.

 

ಮೈಸೂರು ತಾಲೂಕಿನ ಸಿದ್ದಲಿಂಗಪುರ, ಬೆಳವಾಡಿ, ನಾಗವಾಲ, ಬೋಗಾದಿ, ವಾಜಮಂಗಲ, ಇಲವಾಲ, ಮರಟಿಕ್ಯಾತನಹಳ್ಳಿ, ಹೊಸಹುಂಡಿ, ಶ್ರೀರಾಂಪುರ ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿರುವ ಅಕ್ರಮವನ್ನು ತನಿಖಾ ತಂಡವು ಬಯಲು ಮಾಡಿದೆ.

 

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಪತ್ನಿಗೆ ಮಂಜೂರು ಮಾಡಿದ್ದ 14 ಬದಲಿ ನಿವೇಶನಗಳ ಕುರಿತು ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ ಇದೇ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳಲ್ಲೂ ಅಕ್ರಮ ನಡೆದಿರುವ ಪ್ರಕರಣಗಳು ಮುನ್ನೆಲೆಗೆ ಬಂದಿವೆ.

 

ಮೈಸೂರು ನಂಜನಗೂಡು ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ಮತ್ತು ಕಟ್ಟಡ ನಿರ್ಮಾಣ ಆಗುತ್ತಿದೆ ಎಂದು ಖುದ್ದು ಮುಡಾ ಆಯುಕ್ತರೇ ವರದಿ ಮಾಡಿದ್ದರು. ಈ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರವು 2022ರ ಡಿಸೆಂಬರ್‍‌ 1ರಲ್ಲಿ ತನಿಖೆಗೆ ಸೂಚಿಸಿತ್ತು.

 

ಈಗಿನ ಕಾಂಗ್ರೆಸ್‌ ಸರ್ಕಾರವು 2023ರ ನವೆಂಬರ್‍‌ 27ರಂದು ತನಿಖಾ ತಂಡ ರಚಿಸಿತ್ತು. 2024ರ ಜನವರಿ 10ರಂದು ತಪಾಸಣೆ ನಡೆಸಿದ್ದ ತನಿಖಾ ತಂಡವು 2024ರ ಫೆ.6ರಂದು ಮೈಸೂರು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ  ತನಿಖಾ ವರದಿ ಸಲ್ಲಿಸಿತ್ತು. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

 

 

ಮೈಸೂರು-ನಂಜನಗೂಡು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ವಿನ್ಯಾಸ ನಕ್ಷೆಗಳಿಗೆ ಕಾನೂನುಬಾಹಿರವಾಗಿ ಅನುಮೋದನೆ ನೀಡಲಾಗಿದೆ. ಒಟ್ಟು 49 ಪ್ರಕರಣಗಳಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಲಾಗಿದೆ. ಈ ಪ್ರಕರಣಗಳಲ್ಲಿ ಉಲ್ಲೇಖಿಸಿರುವ ಗ್ರಾಮಗಳು ಸ್ಥಳೀಯ ಯೋಜನಾ ಪ್ರಾಧಿಕಾರ ವ್ಯಾಪ್ತಿಗೊಳಪಟ್ಟಿದೆ.

 

ಈ ಗ್ರಾಮಗಳ ಸರ್ವೆ ನಂಬರ್‍‌ಗಳ ಅನ್ಯಕ್ರಾಂತಗೊಂಡ ಆಸ್ತಿಗಳ ವಿನ್ಯಾಸದಲ್ಲಿ ರಚನೆಗೊಂಡಿರುವ ಬಹು ನಿವೇಶನ, ಏಕ ನಿವೇಶನ ನಕ್ಷೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ವಾಸ್ತವದಲ್ಲಿ ಈ ಅನುಮೋದನೆ ನೀಡುವ ಸಂಬಂಧ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡಿಲ್ಲ. ಆದರೂ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವುದನ್ನು ತನಿಖಾ ತಂಡವು ದೃಢಪಡಿಸಿರುವುದು ತನಿಖಾ ವರದಿಯಿಂದ ಗೊತ್ತಾಗಿದೆ.

 

 

ಈ ತನಿಖಾ ವರದಿ ಸರ್ಕಾರದ ಕೈಯಲ್ಲಿದ್ದರೂ ಸಹ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಮೈಸೂರು ಜಿಲ್ಲೆಯವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದುವರೆಗೂ ಯಾವುದೇ ಕ್ರಮಕ್ಕೆ ಸೂಚನೆ ನೀಡಿಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಮಹದೇವಸ್ವಾಮಿ ಎಂಬುವರು ಈ ತನಿಖಾ ವರದಿಯನ್ನಿಡಿದು ಮತ್ತೊಮ್ಮೆ ಸರ್ಕಾರದ ಕದ ತಟ್ಟಿದ್ದಾರೆ.

 

 

 

ಮೈಸೂರು ತಾಲೂಕಿನ ಸಿದ್ದಲಿಂಗಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 1, ಬೆಳವಾಡಿಯಲ್ಲಿ  5, ನಾಗವಾಲದಲ್ಲಿ 1 , ಬೋಗಾದಿಯಲ್ಲಿ ಅತೀ ಹೆಚ್ಚು ಎಂದರೆ 33, ವಾಜಮಂಗಲದಲ್ಲಿ 1, ಇಲವಾಲದಲ್ಲಿ 4, ಮರಟಿಕ್ಯಾತನಹಳ್ಳಿಯಲಿ 2, ಹೊಸಹುಂಡಿಯಲ್ಲಿ 1, ಶ್ರೀ ರಾಮಪುರದಲ್ಲಿ 1 ಸೇರಿ ಒಟ್ಟಾರೆ 49 ಪ್ರಕರಣಗಳಲ್ಲಿ ಈ ಅಕ್ರಮ ನಡೆದಿರುವುದು ತನಿಖಾ ವರದಿಯಿಂದ ತಿಳಿದು ಬಂದಿದೆ.

 

 

 

ಮೈಸೂರು ತಾಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿ ಲಿಂಗರಾಜಯ್ಯ, ಇದೇ ತಾಲೂಕು ಪಂಚಾಯ್ತಿಯ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ಎಂ ಎಸ್‌ ರಮೇಶ್‌, ಕೃಷ್ಣಕುಮಾರ್‍‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‍‌ ಜಗದೀಶ್‌, ನಾಗರಾಜು, ಮಂಜುನಾಥ್‌ ಎಂಬುವರು ಭಾಗಿಯಾಗಿದ್ದಾರೆ ಎಂದು ತನಿಖಾ ತಂಡವು ದೃಢಪಡಿಸಿದೆ.

 

 

 

ಸಿದ್ದಲಿಂಗಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದ ಸರ್ವೆ ನಂಬರ್‍‌ 60/3ರಲ್ಲಿ 0.33 ಗುಂಟೆ ಜಮೀನನ್ನು ಏಕ ನಿವೇಶನವನ್ನಾಗಿಸಲಾಗಿತ್ತು. ಇದಕ್ಕೆ 2019ರ ಜೂನ್‌ 19ರಂದು ನಡೆದಿದ್ದ ಸಾಮಾನ್ಯ ಸಭೆಯು ಅನುಮೋದಿಸಿತ್ತು ಎಂದು ಹೇಳಲಾಗಿತ್ತು. ಆದರೆ ಸಭೆ ನಡವಳಿ ಪ್ರಕಾರ ಈ ವಿಷಯದ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ ಮತ್ತು ನಡವಳಿಯಲ್ಲಿಯೂ ದಾಖಲಾಗಿರಲಿಲ್ಲ.

 

ಈ ಗ್ರಾಮವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೊಳಪಟ್ಟ ಪ್ರದೇಶವಾಗಿತ್ತು. ಆದರೂ ಈ ನಿವೇಶನದ ವಿನ್ಯಾಸಕ್ಕೆ ಮೈಸೂರು ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿ ಲಿಂಗರಾಜಯ್ಯ, ಎಇಇ ಜಗದೀಶ್‌ ಅವರು ನಕ್ಷೆಗೆ ತಾಂತ್ರಿಕ ಅನುಮೋದನೆ ನೀಡಿರುವುದನ್ನು ತನಿಖಾ ತಂಡವು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

 

ಅದೇ ರೀತಿ ಬೆಳವಾಡಿ ಗ್ರಾಮ ಪಂಚಾಯ್ತಿಯ ಬೆಳವಾಡಿ ಗ್ರಾಮದ ಸರ್ವೆ ನಂಬರ್‍‌ 313/4ರಲ್ಲಿ 0.15 ಗುಂಟೆ ಜಮೀನು ಏಕ ನಿವೇಶನಕ್ಕೆ ನಕ್ಷೆ ಅನುಮೋದಿಸಲಾಗಿತ್ತು. ಇದು ಕೂಡ ಮುಡಾ ವ್ಯಾಪ್ತಿಯ ಪ್ರದೇಶವಾಗಿತ್ತು. ಆದರೂ ಈ ಸರ್ವೇ ನಂಬರ್‍‌ ಜಮೀನಿಗೆ ಮೈಸೂರು ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಕುಮಾರ್‍‌, ಎಇಇ ಜಗದೀಶ್‌ ಅವರು ನಕ್ಷೆಗೆ ತಾಂತ್ರಿಕ ಅನುಮೋದನೆ ನೀಡಿದ್ದರು.

 

 

ನಾಗವಾಗಲ ಗ್ರಾಮ ಪಂಚಾಯ್ತಿಯ ಸರ್ವೆ ನಂಬರ್‍‌ 23/3ರಲ್ಲಿನ 1.10 ಎಕರೆ, ಬೋಗಾದಿ ಗ್ರಾಮ ಪಂಚಾಯ್ತಿಯ ಬೋಗಾದಿ ಸರ್ವೆ ನಂಬರ್‍‌ 57/3ರಲ್ಲಿನ 0.01.04.00 ಗುಂಟೆ ಜಮೀನು, ಬೆಳವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾದಗಳ್ಳಿ ಸರ್ವೇ ನಂಬರ್‍‌ 47/2 ಬಿ ರಲ್ಲಿನ 0.21 ಗುಂಟೆ, ವಾಜಮಂಗಲ ಸರ್ವೆ ನಂಬರ್‍‌ 62/2ರಲ್ಲಿನ 0.33 ಗುಂಟೆ ಜಮೀನು, ಇಲವಾಲ ಗ್ರಾಮದ ಸರ್ವೆ ನಂಬರ್‍‌ 45/6ರಲ್ಲಿನ 0.25.08 ಗುಂಟೆ, ಸರ್ವೆ ನಂಬರ್‍‌ 43/3ರಲ್ಲಿನ 0.37 ಗುಂಟೆ ಜಮೀನನ್ನೂ ನಿಯಮಬಾಹಿರವಾಗಿ ಏಕ ನಿವೇಶನವನ್ನಾಗಿಸಿತ್ತು.

 

 

ಮರಟಿಕ್ಯಾತನಹಳ್ಳಿಯ ಸರ್ವೆ ನಂಬರ್‍‌ 84/1ರಲ್ಲಿನ 00.29.12 ಗುಂಟೆ, 84/2ರಲ್ಲಿನ 00.06 ಗುಂಟೆ ಜಮೀನಿನಲ್ಲಿ ನಿಯಮಬಾಹಿರವಾಗಿ ಬಹು ನಿವೇಶನಗಳನ್ನಾಗಿ ರೂಪಿಸಿದ್ದ ವಿನ್ಯಾಸಕ್ಕೆ ತಾಂತ್ರಿಕ ಅನುಮೋದನೆ ನೀಡಲಾಗಿತ್ತು. ಇಲವಾಲ ಸರ್ವೆ ನಂಬರ್‍‌ 45/7ರಲ್ಲಿ 0.27.08 ಗುಂಟೆ ಏಕ ನಿವೇಶನದ ವಿನ್ಯಾಸಕ್ಕೆ ತಾಂತ್ರಿಕ ಅನುಮೋದನೆ ನೀಡಲಾಗಿತ್ತು.

 

 

ಬೆಳವಾಡಿ ಪಂಚಾಯ್ತಿಯ ಕೆ ಹೆಮ್ಮನಹಳ್ಳಿಯ ಸರ್ವೆ ನಂಬರ್‍‌ 87/2ರಲ್ಲಿನ 0.32 ಗುಂಟೆ, 82/1ರಲ್ಲಿ 0.08 ಗುಂಟೆ 88/2ರಲ್ಲಿ 0.30 ಗುಂಟೆ, 87/3ರಲ್ಲಿನ 0.14 ಗುಂಟೆ ಬಹು ನಿವೇಶನವಿನ್ಯಾಸಕ್ಕೆ ನಿಯಮಬಾಹಿರವಾಗಿ ತಾಂತ್ರಿಕ ಅನುಮೋದನೆ ನೀಡಲಾಗಿತ್ತು ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

 

ಬೋಗಾದಿಯಲ್ಲೇ ಅತೀ ಹೆಚ್ಚು

 

ಇಲವಾಲ ಸರ್ವೆ ನಂಬರ್‍‌ 6/6ರಲ್ಲಿನ 0.21, 1/2 ಗುಂಟೆ, ಬೋಗಾದಿ ಸರ್ವೆ ನಂಬರ್‍‌ 57/20ರಲ್ಲಿ 0.04 ಗುಂಟೆ, ಸರ್ವೆ ನಂಬರ್‍‌ 57/12 ರಲ್ಲಿ 0.01 ಗುಂಟೆ, ಸರ್ವೆ ನಂಬರ್‍‌ 57/24ರಲ್ಲಿ 0.04 ಗುಂಟೆ, ಸರ್ವೆ ನಂಬರ್‍‌ 57/18ರಲ್ಲಿ 0.06 ಗುಂಟೆ, ಸರ್ವೆ ನಂಬರ್‍‌ 57/10ರಲ್ಲಿ 0.01 ಗುಂಟೆ, 57/19ರಲ್ಲಿ 0.10 ಗುಂಟೆ, 57/15ರಲ್ಲಿ 01.04 ಗುಂಟೆ, 57/4ರಲ್ಲಿ 0.01 ಗುಂಟೆ, 57/31ರಲ್ಲಿ 0.01.08 ಗುಂಟೆ, 57/36ರಲ್ಲಿ 0.01.08 ಗುಂಟೆ,

 

 

57/40ರಲ್ಲಿ 0.02.08 ಗುಂಟೆ, 57/26ರಲ್ಲಿ 0.01.08 ಗುಂಟೆ, 57/13ರಲ್ಲಿ 0.01 ಗುಂಟೆ, 57/25ರಲ್ಲಿ 0.01.08 ಗುಂಟೆ, 57/28ರಲ್ಲಿ 00.2.08 ಗುಂಟೆ, 57/48ರಲ್ಲಿ 0.02.08 ಗುಂಟೆ, 57/9ರಲ್ಲಿ 0.01 ಗುಂಟೆ, 57/44ರಲ್ಲಿ 0.02.08 ಗುಂಟೆ, 57/27ರಲ್ಲಿ 0.01.08 ಗುಂಟೆ, 57/35ರಲ್ಲಿ 0.01.08 ಗುಂಟೆ, 57/46ರಲ್ಲಿ 0.01.08 ಗುಂಟೆ,

 

 

57/45ರಲ್ಲಿ 0.02.08 ಗುಂಟೆ, 57/1ರಲ್ಲಿ 0.02.00 ಗುಂಟೆ, 57/14ರಲ್ಲಿ 0.01 ಗುಂಟೆ, 57/21ರಲ್ಲಿ 0.04 ಗುಂಟೆ, 57/58ರಲ್ಲಿ 0.02 ಗುಂಟೆ, 57/61ರಲ್ಲಿ 01.08 ಗುಂಟೆ, 57/43ರಲ್ಲಿ 0.05.00 ಗುಂಟೆ, 57/11ರಲ್ಲಿ 0.11.04 ಗುಂಟೆ, 57/22ರಲ್ಲಿ 0.05.08 ಗುಂಟೆ, 57/*/44ರಲ್ಲಿ 0.2.8.00 ಗುಂಟೆ ಏಕ ನಿವೇಶನದ ವಿನ್ಯಾಸಗಳ ಅನುಮೋದನೆ ಸಂಬಂಧ ಸಭಾ ನಡವಳಿಯಲ್ಲಿ ನಮೂದಿಸಿಲ್ಲ ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.

 

 

ಹೊಸಹುಂಡಿ ಪಂಚಾಯ್ತಿ ವ್ಯಾಪ್ತಿಯ ಗುಡುಮಾದನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 97/8ರಲ್ಲಿ 30 ಗುಂಟೆ, ಶ್ರೀರಾಮಪುರ ಪಂಚಾಯ್ತಿ ವ್ಯಾಪ್ತಿಯ ಗೊರೂರು ಗ್ರಾಮದ ಸರ್ವೆ ನಂಬರ್‍‌ 49/4ರಲ್ಲಿ 0.20 ಗುಂಟೆ, ಹಿನಕಲ್‌ ಗ್ರಾಮದ ಸರ್ವೆ ನಂಬರ್‍‌ 12/5ರಲ್ಲಿನ 36 ಗುಂಟೆ ನಿವೇಶನದ ವಿನ್ಯಾಸಕ್ಕೆ ತಾಂತ್ರಿಕ ಅನುಮೋದನೆ ನೀಡಿದೆ. ಈ ಕಡತವೂ ತಾಲೂಕು ಪಂಚಾಯ್ತಿಯಲ್ಲಿ ಲಭ್ಯವಿಲ್ಲ ಎಂಬ ಅಂಶವನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

 

‘ಅನ್ಯಕ್ರಾಂತವಾದ ಜಮೀನುಗಳಿಗೆ ಏಕ ನಿವೇಶನ ಹಾಗೂ ಬಹು ನಿವೇಶನ ನಕ್ಷೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಹಾಗೂ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳದೇ ಇರುವುದು ಕಂಡು ಬಂದಿರುತ್ತದೆ.

 

 

ಆದರೆ ನಡವಳಿ ಪುಸ್ತಕದಲ್ಲಿ ನಮೂದಿಸದಿದ್ದರೂ ಸಹಾ ತೀರ್ಮಾನವಾಗಿರುವುದು ಕಂಡು ಬಂದಿದೆ,’ ಎಂದು ಮುಡಾ ನಗರ ಯೋಜಕ ಶೇಖ್‌ ಅಪ್ಸರ್‍‌ ಅಹ್ಮದ್‌ ಅವರ ನೇತೃತ್ವದ ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

the fil favicon

SUPPORT THE FILE

Latest News

Related Posts