ಒಟಿಎಸ್‌ ಭಕ್ಷೀಸು ತರಾತುರಿ; ಕಡತ ಮಂಡಿಸಲು ತಾಕೀತು, ಗಣಿ ಲಾಬಿ ಮುಂದೆ ಮಂಡಿಯೂರಿತೇ?

ಬೆಂಗಳೂರು; ಪರವಾನಿಗೆ ಉಲ್ಲಂಘನೆ, ಒತ್ತುವರಿ, ಅಕ್ರಮವಾಗಿ ಗಣಿಗಾರಿಕೆ ಮಾಡಿರುವ ಪ್ರಕರಣಗಳಲ್ಲಿ ಡ್ರೋಣ್‌ ಸರ್ವೆ ಅಪೂರ್ಣಗೊಂಡಿದ್ದರೂ ಸಹ ಗಣಿ ಉದ್ಯಮಿ, ಕಂಪನಿಗಳಿಗೆ ಒಟಿಎಸ್‌ ಭಕ್ಷೀಸು ನೀಡಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ತರಾತುರಿ ನಡೆಸುತ್ತಿದೆ.

 

ಇದೇ ನವೆಂಬರ್‍‌ 14ರಂದು ನಡೆಯಲಿರುವ ಸಚಿವ ಸಂಪುಟ ಸಭೆಗೆ ಕಡತ ಮಂಡಿಸಬೇಕು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ!. ಈ ಬೆಳವಣಿಗೆಯನ್ನು ನೋಡಿದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣಿ ಲಾಬಿ ಮತ್ತು ಗಣಿ ಮಾಫಿಯಾದ ಮುಂದೆ ಮಂಡಿಯೂರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಅಲ್ಲದೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪ ಸಮಿತಿಯೂ ಒಟಿಎಸ್‌ ನೀಡಲು ಶಿಫಾರಸ್ಸು ಮಾಡಿತ್ತು.  2024ರ ಜುಲೈ 15ರಲ್ಲೇ ಸಚಿವ ಸಂಪುಟದ ಮುಂದೆ ಕಡತ ಮಂಡಿಸಲಾಗಿತ್ತು. ಸಚಿವ ಸಂಪುಟದಲ್ಲಿ ಈ ವಿಚಾರ ಚರ್ಚೆ ಆಗಿತ್ತಾದರೂ ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ. ಹೀಗಾಗಿ ಒಟಿಎಸ್‌ ನೀಡುವ ಸಂಬಂಧ ಪ್ರಸ್ತಾವನೆಯನ್ನು ಮುಂದೂಡಲಾಗಿತ್ತು.

 

ಕಳೆದ ತಿಂಗಳಿನಲ್ಲಿ ಕಲ್ಬುರ್ಗಿಯಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆ ನಡೆದ ಸಂದರ್ಭದಲ್ಲೂ ಒಟಿಎಸ್‌ ಸಂಬಂಧಿತ ಕಡತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಿಸಿಕೊಂಡಿದ್ದರು. ಡ್ರೋಣ್‌ ಸರ್ವೆ ಮತ್ತು ಒಟಿಎಸ್‌ ಸಂಬಂಧಿತ ಹಣಕಾಸಿನ ಲೆಕ್ಕಾಚಾರವನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರು ತಾಕೀತು ಮಾಡಿದ್ದರು ಎಂದು ಗೊತ್ತಾಗಿದೆ.

 

ಇದಾದ ನಂತರ ಗಣಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ವಿಪುಲ್‌ ಬನ್ಸಾಲ್‌ ಅವರು ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು. ಸದ್ಯ ರಾಜ್ಯದ 23 ಜಿಲ್ಲೆಗಳಲ್ಲಿ ಮಾತ್ರ ಡ್ರೋನ್‌ ಸರ್ವೆ ಪೂರ್ಣಗೊಂಡಿದೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಡ್ರೋಣ್‌ ಸರ್ವೆ ಅಪೂರ್ಣವಾಗಿದೆ. ಮತ್ತು ಒಟಿಎಸ್‌ ನೀಡುವ ಸಂಬಂಧದ ಹಣಕಾಸಿನ ಲೆಕ್ಕಾಚಾರವೂ ಮುಗಿದಿಲ್ಲ ಎಂದು ತಿಳಿದು ಬಂದಿದೆ.

 

ಹೀಗಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ನವೆಂಬರ್‍‌ 14ರಂದು ನಡೆಯಲಿರುವ ಸಚಿವ ಸಂಪುಟ ಸಭೆಗೆ ಒಟಿಎಸ್‌ ಕಡತವನ್ನು ಮಂಡಿಸಬೇಕು ಎಂದು ನಿರ್ದೇಶಿಸಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಒಟಿಎಸ್‌ ಯೋಜನೆ ಜಾರಿಗೊಳಿಸಲು ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಈ ಪ್ರಸ್ತಾವವನ್ನು ಕೈ ಬಿಡಲಾಗಿತ್ತು.  ಹಿಂದಿನ ಬಿಜೆಪಿ ಸರ್ಕಾರವು ಕೈ ಬಿಟ್ಟಿದ್ದ ಒಟಿಎಸ್‌ ಯೋಜನೆ ಪ್ರಸ್ತಾವನೆಗೆ ಕಾಂಗ್ರೆಸ್‌ ಸರ್ಕಾರದ ತರಾತುರಿಯಿಂದ  ಬೊಕ್ಕಸಕ್ಕೆ 6,105ಕೋಟಿ ರು.ಗಳ ಆದಾಯಕ್ಕೆ ಕಲ್ಲು ಬೀಳುವ ಎಲ್ಲಾ ಸಾಧ್ಯತೆಗಳೂ ಇವೆ.

 

ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ರಹಸ್ಯ ಹಾಳೆಗಳು ಮತ್ತು ಸಮಗ್ರ ಕಡತವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಕೆಲವೇ ಕೆಲವು ತಿಂಗಳಲ್ಲಿ ಗಣಿ ಉದ್ಯಮಿಗಳಿಗೆ ಒಟಿಎಸ್‌ ಸೌಲಭ್ಯ ನೀಡಲು ಪ್ರಸ್ತಾವನೆಗೆ ಮರು ಜೀವ ಬಂದಿತ್ತು. ಈ ಕುರಿತು 2023ರ ನವೆಂಬರ್‍‌ 27ರಿಂದಲೇ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರ ಅಧ್ಯಕ್ಷತೆಯಲ್ಲಿ ಹಲವು ಸುತ್ತಿನ ಸಭೆಗಳು ನಡೆದಿದ್ದವು.

 

 

ವಿಶೇಷವೆಂದರೇ ಆರ್ಥಿಕ ಇಲಾಖೆಯು ಒಟಿಎಸ್‌ ಸೌಲಭ್ಯ ನೀಡುವುದರಿಂದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗುವುದರ ಬಗ್ಗೆ ಹೆಚ್ಚು ಗಮನವನ್ನೇ ಹರಿಸಿಲ್ಲ. ಬದಲಿಗೆ ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಆರ್ಥಿಕ ಪರಿಣಾಮಗಳನ್ನು ನಿರೀಕ್ಷಿಸಬಹುದು ಎಂದು ಒಂದು ಸಾಲಿನ ಅಭಿಪ್ರಾಯವನ್ನು ನೀಡಿತ್ತು.

 

ಗಣಿ ಗುತ್ತಿಗೆದಾರರಿಂದ 6,105 ಕೋಟಿ ರು. ದಂಡ ವಸೂಲು; ಒಟಿಎಸ್‌ ಜಾರಿಗೆ ಸಂಪುಟಕ್ಕೆ ಪ್ರಸ್ತಾವ ಸಲ್ಲಿಕೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ 2,145 ಕಲ್ಲು  ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಒಟಿಎಸ್‌ ಜಾರಿಯಾಗಲಿದೆ. 2018-19ನೇ ಸಾಲಿನಲ್ಲಿ ಕಲ್ಲು ಗಣಿ ಗುತ್ತಿಗೆಗಳ ಡ್ರೋನ್‌ ಮತ್ತು ಡಿಜಿಪಿಎಸ್‌ ಸರ್ವೆ ಕಾರ್ಯವನ್ನು ಕೈಗೊಂಡು ಈ ಸಾಲಿನಲ್ಲಿ ಚಾಲ್ತಿಯಲ್ಲಿದ್ದ ರಾಜಧನ 60 ರು.ರಂತೆ ಒಟ್ಟು 5 ಪಟ್ಟು ದಂಡ ವಿಧಿಸಲಾಗಿದ್ದು ಪ್ರಸ್ತುತ ಒಟಿಎಸ್‌ ಅನುಷ್ಠಾನಕ್ಕೆ ಈ ರಾಜಧನ ಮೊತ್ತವನ್ನೇ ಪರಿಗಣಿಸಬೇಕು ಎಂದು ಸಚಿವ ಎಸ್‌ ಎಸ್ ಮಲ್ಲಿಕಾರ್ಜುನ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

 

6,105 ಕೋಟಿ ದಂಡ ವಸೂಲಿ; ಗಣಿ ಉದ್ಯಮಿಗಳಿಗೆ ಕಾಂಗ್ರೆಸ್‌ ಸರ್ಕಾರದಿಂದ ಒಟಿಎಸ್‌ ಭಕ್ಷೀಸು

ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ‘ 2006ರ ನಂತರದ ವರ್ಷಗಳಲ್ಲಿ ನಿಗದಿಪಡಿಸಿದ ರಾಜಧನ ಮೊತ್ತಕ್ಕೆ ಕೆಎಂಎಂಸಿಆರ್‍‌ 1994ರ ನಿಯಮ 41 ಅನ್ವಯ ಬಾಕಿ ರಾಜಧನ, ಬಡ್ಡಿ ಮತ್ತು ದಂಡದ ಮೇಲಿನ ಮೊತ್ತಕ್ಕೆ ಶೇ.15ರಷ್ಟು ಬಡ್ಡಿಯನ್ನು ವಿಧಿಸಿದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ರಾಜಧನ 70 ರು.ಗಿಂತ ಹೆಚ್ಚಿನ ಮೊತ್ತವಾಗಲಿದೆ,’ ಎಂದು ಸಭೆಗೆ ವಿವರಿಸಿದ್ದರು.

 

 

ಹೀಗಾಗಿ ಲಭ್ಯವಿರುವ ಕಾರ್ಟ್ಸಾಟ್‌ ಇಮೇಜ್‌ಗಳನ್ನು ಬಳಸಿಕೊಂಡು ಗುತ್ತಿಗೆ ಪ್ರದೇಶದಲ್ಲಿ ತೆಗೆದಿರುವ ಖನಿಜ ಪ್ರಮಾಣವನ್ನು ಅಂಧಾಜಿಸಿ ಒಟಿಎಸ್‌ ಮೂಲಕ ರಾಜಧನ ಸಂಗ್ರಹಿಸಲು ಮೊತ್ತ ನಿಗದಿಪಡಿಸಬಹುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

 

‘ಇನ್ನು ಮುಂದೆ ಗುತ್ತಿಗೆ ಪ್ರದೇಶಗಳಲ್ಲಿ ಡ್ರೋನ್‌ ಮತ್ತು ಡಿಜಿಪಿಎಸ್‌ ಸರ್ವೆ ಕಾರ್ಯ ನಡೆಸಿ ತೆಗೆದ ಖನಿಜ ಪ್ರಮಾಣವನ್ನು ನಿಖರವಾಗಿ ಅಂದಾಜಿಸಿ ಸರ್ಕಾರಕ್ಕೆ ರಾಜಧನ ಸೋರಿಕೆಯಾಗದಂತೆ ತಡೆಯಲು ಹಾಗೂ ಈ ಹಿಂದೆ ತೆಗೆದಿರುವ ಖನಿಜವನ್ನು ಒಟಿಎಸ್‌ ಮೂಲಕ ಇತ್ಯರ್ಥಪಡಿಸಲು ಪ್ರಸ್ತಾಪಿಸಲಾಗಿದೆ,’ ಎಂದು ಕೃಷ್ಣಬೈರೇಗೌಡ ಅವರು ಅಭಿಪ್ರಾಯಿಸಿದ್ದರು.

 

 

2018-19ನೇ ಸಾಲಿನಲ್ಲಿ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಒಟ್ಟು 2438 ಕಟ್ಟಡ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಡ್ರೋನ್‌, ಡಿಜಿಪಿಎಸ್‌ ಉಪಕರಣಖ ಬಳಸಿ ಸರ್ವೆ ಮಾಡಲಾಗಿದೆ. ಈ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಖನಿಜ ರವಾನೆ ಪರವಾನಗಿ ಪಡೆಯದೇ 281.33 ಮಿಲಿಯನ್‌ ಮೆಟ್ರಿಕ್‌ ಟನ್‌, ಗುತ್ತಿಗೆ ಪ್ರದೇಶವನ್ನು ಒತ್ತುವರಿ ಮಾಡಿ 75.71 ಮಿಲಿಯನ್‌ ಮೆಟ್ರಿಕ್‌ ಟನ್‌ ಸೇರಿ ಒಟ್ಟಾರೆ 357.07 ಮಿಲಿಯನ್‌ ಮೆಟ್ರಿಕ್‌ ಟನ್‌ ಪ್ರಮಾಣದ ಕಟ್ಟಡ ಕಲ್ಲು ಉಪ ಖನಿಜವನ್ನು ತೆಗೆದಿದೆ ಎಂದು ಅಂದಾಜಿಸಿರುವುದನ್ನು ಸಚಿವ ಸಂಪುಟ ಸಭೆಯ ಟಿಪ್ಪಣಿಯಲ್ಲಿ ದಾಖಲಿಸಿತ್ತು.

 

ಕಲ್ಲು ಗಣಿ ಗುತ್ತಿಗೆ ಮಂಜೂರಾದ ದಿನಾಂಕದಿಂದ ಪ್ರಸ್ತುತ ಸಾಲಿನವರೆಗಿನ ಸಂಚಿತ ಆಡಿಟ್‌ ಪ್ರಮಾಣ 153.50 ಮಿಲಿಯನ್‌ ಮೆಟ್ರಿಕ್‌ ಟನ್‌ನ್ನು ಕಳೆದು ಉಳಿದ ಖನಿಜ ಪ್ರಜಾಣ 203.54 ಮಿಲಿಯನ್‌ ಮೆಟ್ರಿಕ್‌ ಟನ್‌ ಕಟ್ಟಡ ಕಲ್ಲು ಉಪ ಖನಿಜಕ್ಕೆ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ 36ರಂತೆ ಪ್ರತಿ ಮೆಟ್ರಿಕ್‌ ಟನ್‌ಗೆ 60 ರು. ಪಾವತಿಸಲು ಕಲ್ಲು ಗಣಿ ಗುತ್ತಿಗೆದಾರರಿಗೆ ಈಗಾಗಲೇ  ನೋಟೀಸ್‌ ಜಾರಿಗೊಳಿಸಿದೆ.

 

ಒಟ್ಟು 1,221.00 ಕೋಟಿ ರಾಜಧನ ಐದು ಪಟ್ಟು ದಂಡ 6,105 ಕೋಟಿಗಳ ದಂಡವನ್ನು ಅಂದಾಜಿಸಿದೆ. ಈ ದಂಡವನ್ನು ಒಟಿಎಸ್‌ ಮೂಲಕ ಅನುಷ್ಠಾನಗೊಳಿಸುವ ಕುರಿತು ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಇಲಾಖೆಯೂ ಸಮರ್ಥಿಸಿಕೊಂಡಿತ್ತು.

 

ಸಮರ್ಥನೆಯಲ್ಲೇನಿದೆ?

 

ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ 36ರಂತೆ ಪ್ರತಿ ಮೆಟ್ರಿಕ್‌ ಟನ್‌ ಗೆ 60 ರು.ನಂತೆ ರಾಜಧನ ಒಟ್ಟು 1,221 ಕೋಟಿ ರ.ಗಳ ಐದುಪಟ್ಟು ದಂಡದ ರೂಪದಲ್ಲಿ 6,105.98 ಕೋಇಟ ರು.ಗಳ ದಂಡ ವಸೂಲು ಗುತ್ತಿಗೆದಾರರಿಗೆ ನೋಟೀಸ್‌ ಜಾರಿಮಾಡಲಾಗಿದೆ. ಆದರೆ ಈ ನೋಟೀಸ್‌ಗಳನ್ನು ಗುತ್ತಿಗೆದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಹೀಗಾಗಿ ರಾಜಧನ ಸಂಗ್ರಹವಾಗದೇ ಬಾಕಿ ಉಳಿದಿದೆ. ಹೀಗಾಗಿ ಒಟಿಎಸ್‌ ಅನುಷ್ಠಾನಗೊಳಿಸಬಹುದು ಎಂದು ಇಲಾಖೆಯು ಸಮರ್ಥನೆ ಮಾಡಿಕೊಂಡಿತ್ತು.

 

 

ಆಡಳಿತ ಇಲಾಖೆಯ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿಸಿತ್ತು. ಆದರೆ ಎಲ್ಲಿಯೂ ಬೊಕ್ಕಸಕ್ಕೆ ಇದರಿಂದ ನಷ್ಟವಾಗಲಿದೆ ಎಂಬ ಕನಿಷ್ಟ ಕಾಳಜಿಯನ್ನೂ ವ್ಯಕ್ತಪಡಿಸಿರಲಿಲ್ಲ.

 

ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿದೆ?

 

‘ಉಪ ಖನಿಜಗಳ ಪ್ರಮಾಣಕ್ಕೆ ಅನುಗುಣವಾಗಿ ವಿಧಿಸಬೇಕಾಗಿರುವ ರಾಜಧನ, ದಂಡವನ್ನು ಒಟಿಎಸ್‌ ಮೂಲಕ ಅನುಷ್ಠಾನಗೊಳಿಸುವುದು ಸಮಂಜಸವಾಗಿರುತ್ತದೆ.

 

 

ಗಣಿ ಭೂ ವಿಜ್ಞಾನ ಇಲಾಖೆಯಿಂದ ವಿಧಿಸಿರುವ ದಂಡವನ್ನು ಒಟಿಎಸ್‌ ಮೂಲಕ ಅನುಷ್ಠಾನಗೊಳಿಸಿರುವ ಕುರಿತು ಶಿಫಾರಸ್ಸುಗಳನ್ನು ಮಾಡಲು ರಚಿತವಾಗಿರುವ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳ ಮೇಲೆ ಸಚಿವ ಸಂಪುಟವು ಕೈಗೊಳ್ಳುವ ತೀರ್ಮಾನದ ಹಿನ್ನೆಲೆಯಲ್ಲಿ ಆರ್ಥಿಕ ಪರಿಣಾಮಗಳನ್ನು ನಿರೀಕ್ಷಿಸಿದೆ,’ ಎಂದು ಅಭಿಪ್ರಾಯಿಸಿತ್ತು.

Your generous support will help us remain independent and work without fear.

Latest News

Related Posts