ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದ ಅನುದಾನ ಬಳಕೆಯ ಪ್ರಮಾಣ ಪತ್ರಗಳನ್ನು ಸಲ್ಲಿಸದೇ ಕರ್ತವ್ಯಲೋಪ ಎಸಗಿ ಅಮಾನತಾಗಿದ್ದ ಬಿ ಕಲ್ಲೇಶ್ ಗೆ ಸಂಬಂಧಿಸಿದ ಕಡತದಲ್ಲಿನ ದಾಖಲೆಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿಲ್ಲ ಮತ್ತು ಅದು ವೈಯಕ್ತಿಕ ಮಾಹಿತಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ನಿರ್ಣಯಿಸಿದೆ.
ಬಿ ಕಲ್ಲೇಶ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿಯೂ ಆರೋಪಕ್ಕೆ ಗುರಿಯಾಗಿದ್ದಾರೆ. ಇವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸರ್ಕಾರದ ಬೆನ್ನಿಗೆ ನಿಂತಿದ್ದರು. ಇದೀಗ ಬೇರೊಂದು ಪ್ರಕರಣದಲ್ಲಿ ಅಮಾನತುಗೊಂಡಿರುವ ಸಂಬಂಧದ ಕಡತವನ್ನು ಒದಗಿಸಲು ನಿರಾಕರಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿದ್ದ ಬಿ ಕಲ್ಲೇಶ್ ಅವರನ್ನು 42.97 ಕೋಟಿ ರು. ಅನುದಾನದ ಬಳಕೆ ಪ್ರಮಾಣ ಪತ್ರ ಸಲ್ಲಿಸದೇ ಕರ್ತವ್ಯಲೋಪ ಆರೋಪದಡಿಯಲ್ಲಿ 2024ರ ಜೂನ್ 22ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಆದರೀಗ ಕೇವಲ ಮೂರೇ ಮೂರು ತಿಂಗಳಲ್ಲಿ ಅವರ ಅಮಾನತು ತೆರವುಗೊಳಿಸಿ ಮತ್ತೊಂದು ಆಯಕಟ್ಟಿನ ಹುದ್ದೆಯನ್ನು ಕರುಣಿಸಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.
ಇದೀಗ ಇದೇ ಆದೇಶಕ್ಕೆ ಸಂಬಂಧಿಸಿದಂತೆ ಕಡತವನ್ನು ಪಡೆಯಲು ‘ದಿ ಫೈಲ್’, ಆರ್‍ಟಿಐ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ‘ದಿ ಫೈಲ್’ ಮೇಲ್ಮನವಿ ಸಲ್ಲಿಸಿತ್ತು.
ಈ ಮೇಲ್ಮನವಿಯನ್ನು ವಿಚಾರಣೆ ನಡೆಸಿದ್ದ ಇಲಾಖೆಯ ಉಪ ಕಾರ್ಯದರ್ಶಿ ಎಂ ಎಸ್ ಜ್ಯೋತಿ ಅವರು ಹಿಂದಿನ ಆದೇಶದಲ್ಲಿದ್ದ ಅಂಶಗಳನ್ನೇ ಉಲ್ಲೇಖಿಸಿ ಕಡತವನ್ನು ಒದಗಿಸಲು ನಿರಾಕರಿಸಿ ಮೇಲ್ಮನವಿಯನ್ನು ಮುಕ್ತಾಯಗೊಳಿಸಿ ಆದೇಶಿಸಿದೆ.
ಮೇಲ್ಮನವಿ ಆದೇಶದಲ್ಲೇನಿದೆ?
ಪರಿಶಿಷ್ಟ ಪಂಗಡಗಳ ಕಲ್ಯಾಣ ನಿರ್ದೇಶಕರಾದ ಬಿ ಕಲ್ಲೇಶ್ ಅವರ ವಿರುದ್ಧ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಅಮಾನತುಗೊಳಿಸುವ ಮತ್ತು ಶಿಸ್ತು ಕ್ರಮ ಕೈಗೊಳ್ಳಲು ಪರಿಶೀಲಿಸಲಾಗಿರುವ ಕಡತವಾಗಿದೆ. ಈ ಕಡತದಲ್ಲಿ ಕಾರಣ ಕೇಳುವ ನೋಟೀಸ್‌ನ್ನು ಜಾರಿ ಮಾಡಿರುವ ಪ್ರತಿ ಮತ್ತು ಮುಂತಾದ ದಾಖಲೆಗಳು ಹಾಗೂ ಅವರು ನೀಡಿರುವ ಉತ್ತರದ ವಿವರಣೆಯ ಪ್ರತಿಗಳು ಕಡತದಲ್ಲಿರುತ್ತದೆ.
ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 8(1)(ಜೆ) ಅಡಿಯಲ್ಲಿ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಅಪೀಲು ಪ್ರಾಧಿಕಾರಕ್ಕೆ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವ್ಯಕ್ತಿಗತ ಗೌಪ್ಯತೆಯನ್ನು ಅನಗತ್ಯವಾಗಿ ಅತಿಕ್ರಮಿಸಿದಂತಾಗುತ್ತದೆಯೋ ಅಂಥ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ಇರುತ್ತದೆ.
ಮೆಮೋ, ಶೋಕಾಸ್ ನೋಟೀಸ್ ಮತ್ತು ಅಮಾನತು ಆದೇಶ ಇತ್ಯಾದಿ ಮಾಹಿತಿ ಹಕ್ಕು ಅಧಿನಿಯಮದ ಕಲಂ 8 (1) (ಜೆ) ನಲ್ಲಿ ವ್ಯಾಖ್ಯಾನಿಸಿದಂತೆ ವೈಯಕ್ತಿಕ ಮಾಹಿತಿಯು ಇಲಾಖೆಯ ಅಧಿಕಾರಿ ನಡುವಿನ ವಿಷಯವಾಗಿದೆ. ಈ ಅಂಶಗಳು ಸೇವಾ ನಿಯಮಗಳಿಂದ ನಿಯಂತ್ರಿಸಲಾಗಿದೆ. ಇದು ವೈಯಕ್ತಿಕ ಮಾಹಿತಿ ಎಂಬ ಅಭಿವ್ಯಕ್ತಿ ಅಡಿಯಲ್ಲಿ ಬರುತ್ತದೆ. ಅದರ ಬಹಿರಂಗಪಡಿಸುವಿಕೆಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿ ಪ್ರಕರಣಕ್ಕೆ ಸಂಬಂಧಿಸಿಲ್ಲ.
ಬಿ ಕಲ್ಲೇಶ್ ಅವರ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಶಿಸ್ತು ಕ್ರಮ ನಡವಳಿಗೆ ಸಂಬಂಧಿಸಿದ ಕಡತದಲ್ಲಿನ ದಾಖಲೆಗಳು ಮಾಹಿತಿ ಹಕ್ಕು ಅಧಿನಿಯಮ ಕಲಂ 8(1) (ಜೆ) ಮತ್ತು (ಹೆಚ್) ಅಡಿಯಲ್ಲಿ ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ಇದೆ ಎಂದು ಇಲಾಖೆಯು ವಿವರಿಸಿದೆ.
ಅಲ್ಲದೇ ಸರ್ವೋಚ್ಛ ನ್ಯಾಯಾಲಯವು ಕೆನರಾ ಬ್ಯಾಂಕ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮತ್ತು ಸಿ ಎಸ್ ಶ್ಯಾಮ್ ಅಂಡ್ ಎಎನ್‌ಆರ್ ಪ್ರಕರಣ 2009ಕ್ಕೆ ಸಂಬಂಧಿಸಿದಂತೆ 2017ರ ಆಗಸ್ಟ್ 31ರಂದು ಹೊರಡಿಸಿದ್ದ ಆದೇಶದ ಅನ್ವಯ ಕಲ್ಲೇಶ್ ಅವರ ಅಮಾನತುಗೊಳಿಸುವ ಸಂಬಂಧ ಪರಿಶೀಲಿಸಿರುವ ಕಡತ (ಸಂಖ್ಯೆ STW/SECA/STC/49/2024) ದಲ್ಲಿನ ದಾಖಲೆಗಳು ವೈಯಕ್ತಿಕ ಮಾಹಿತಿಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ವಿಶೇಷವೆಂದರೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಸಚಿವರಾಗಿದ್ದ ಬಿ ನಾಗೇಂದ್ರ ಅವರನ್ನು ಮೊದಲ ಆರೋಪಿಯನ್ನಾಗಿಸಿ ಚಾರ್ಜ್‌ಶೀಟ್ ಸಲ್ಲಿಸಿರುವ ಬೆನ್ನಲ್ಲೇ ಇದೀಗ ಇದೇ ನಿಗಮದಲ್ಲಿ ಪದನಿಮಿತ್ತ ನಿರ್ದೇಶಕರಾಗಿದ್ದ ಬಿ ಕಲ್ಲೇಶ್ ಅವರ ಅಮಾನತನ್ನು ತೆರವುಗೊಳಿಸಿರುವುದು ಮುನ್ನೆಲೆಗೆ ಬಂದಿದೆ.
2024ರ ಜೂನ್ 22ರಂದು ಅಮಾನತಾಗಿದ್ದ ಬಿ ಕಲ್ಲೇಶ್ ಅವರು 2024ರ ಸೆ.9ರಂದು ಇಲಾಖೆಗೆ ಮನವಿ ಸಲ್ಲಿಸಿದ್ದರು. ಅಮಾನತು ತೆರವುಗೊಳಿಸಿ ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕೊಪ್ಪಳದ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ನಿಯೋಜಿಸಲು ಕೋರಿದ್ದರು. ಈ ಕೋರಿಕೆಯನ್ನೂ ಸಹ ಕಾಂಗ್ರೆಸ್ ಸರ್ಕಾರವು ಪುರಸ್ಕರಿಸಿತ್ತು.
ಬಿ. ಕಲ್ಲೇಶ್ ಅಮಾನತು ತೆರವು!: ಇ.ಡಿ ವಿರುದ್ಧವೇ ದೂರು ದಾಖಲಿಸಿದ್ದ ಅಧಿಕಾರಿಗೆ ಆಯಕಟ್ಟಿನ ಹುದ್ದೆ
ಅಮಾನತು ತೆರವುಗೊಳಿಸುವ ಪ್ರಸ್ತಾವನೆಯಲ್ಲೇನಿತ್ತು?
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹಿಂದೆ ನಿರ್ದೇಶಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ ಕಲ್ಲೇಶ್ ಅವರ ಕಾರ್ಯವೈಖರಿಯಿಂದಾಗಿ ಸಾರ್ವಜನಿಕರ ಹಣ ಸಮರ್ಪಕವಾಗಿ ನಿಯೋಜಿತ ಕಾರ್ಯಕ್ರಮಗಳಿಗೆ ಬಳಕೆಯಾಗಿರಲಿಲ್ಲ. ಮತ್ತು ವಸತಿ, ಆಶ್ರಮ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇ. 75ಕ್ಕಿಂತ ಕಡಿಮೆ ಇತ್ತು. ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಬೇತಿ ಮೂಲಕ ಗುಣಾತ್ಮಕ ಶಿಕ್ಷಣ ನೀಡಲು ಅಗತ್ಯ ಕ್ರಮ ವಹಿಸಿರಲಿಲ್ಲ. ಹಾಗೂ ಇನ್ನಿತರೆ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಲಾಗಿತ್ತು.
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)ರ (ಡಿ) ಮತ್ತು 10(3) ಅನ್ವಯ ಅಮಾನತುಗೊಳಿಸಿತ್ತು. ಅವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸಿ 2024ರ ಜೂನ್ 22ರಂದು ಆದೇಶ ಹೊರಡಿಸಿತ್ತು.
ಬಿ ಕಲ್ಲೇಶ್ ಅವರು 2024ರ ಸೆ.9ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದರಲ್ಲಿ ಅಮಾನತು ತೆರವುಗೊಳಿಸಿ ಕೊಪ್ಪಳದ ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ನಿಯೋಜಿಸಲು ಕೋರಿದ್ದಾರೆ.
‘ಈ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತುತ ಅಮಾನತಿನಲ್ಲಿರುವ ಬಿ ಕಲ್ಲೇಶ್ ಅವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(5)(ಸಿ) ಅನ್ವಯ ಇವರ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಇವರ ಅಮಾನತನ್ನು ತೆರವುಗೊಳಿಸಿ ಆದೇಶಿಸಿದೆ,’ ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಲ್ ನರಸಿಂಹಮೂರ್ತಿ ಅವರು ಆದೇಶ ( ಸರ್ಕಾರದ ಆದೇಶ ಸಂಖ್ಯೆ; ಸಕಇ 242 ಪಕಸೇ 2024 (ಭಾಗ) ಬೆಂಗಳೂರು) ಹೊರಡಿಸಿತ್ತು.
ಅಮಾನತು ತೆರವುಗೊಳಿಸುವ ಕುರಿತು ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದರು.
ಮತ್ತೊಂದು ವಿಶೇಷವೆಂದರೇ ಬಿ ಕಲ್ಲೇಶ್ ಅವರ ಅಮಾನತು ಆದೇಶದ ಕಡತವನ್ನೇ ಒದಗಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ನಿರಾಕರಿಸಿತ್ತು. ಈ ಆದೇಶಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ 2024ರ ಜುಲೈ 1ರಂದು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ಒಂದು ತಿಂಗಳವರೆಗೂ ನಿರ್ದೇಶನಾಲಯ ಮತ್ತು ಇಲಾಖೆಯು ತನ್ನ ಬಳಿಯೇ ಇಟ್ಟುಕೊಂಡಿತ್ತು. ಇದೀಗ 2024ರ ಆಗಸ್ಟ್ 3ರಂದು ಕಡತ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದಕ್ಕೆ ಮಾಹಿತಿ ಹಕ್ಕು ಅಧಿನಿಯಮ ಕಲಂ 8(ಹೆಚ್) ನ್ನು ಮುಂದಿರಿಸಿತ್ತು.
‘ತನಿಖಾ ಕ್ರಮಕ್ಕೆ ಅಥವಾ ಅಪರಾಧಿಗಳ ದಸ್ತಗಿರಿಗೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂತಹ ಮಾಹಿತಿ’ಯನ್ನು ಒದಗಿಸಲು ಮಾಹಿತಿ ಹಕ್ಕು ಅಧಿನಿಯಮದ ಸೆಕ್ಷನ್ 8(ಹೆಚ್)ರಡಿ ನಿರ್ಬಂಧವಿದೆ. ಆದರೆ ಕಲ್ಲೇಶ್ ಬಿ ಅವರನ್ನು ಅಮಾನತು ಮಾಡಿರುವ ಆದೇಶಕ್ಕೂ ಈ ಕಲಂಗೂ ಸಂಬಂಧವೇ ಇಲ್ಲ.
42.97 ಕೋಟಿ ರು ಬಳಕೆ ಪ್ರಮಾಣಪತ್ರ; ಕಲ್ಲೇಶ್ ಅಮಾನತು ಆದೇಶ ಕಡತ ಬಹಿರಂಗಪಡಿಸದ ಸರ್ಕಾರ
ಕೇಂದ್ರ ಸರ್ಕಾರವು ರಾಜ್ಯಕ್ಕೆ ಕಳೆದೆರಡು ವರ್ಷಗಳಲ್ಲಿ ಬಿಡುಗಡೆ ಮಾಡಿದ್ದ ಒಟ್ಟು ಅನುದಾನದ ಪೈಕಿ 42.97 ಕೋಟಿ ರು. ಮೊತ್ತ ಅನುದಾನ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನೇ ಸಲ್ಲಿಸಿರಲಿಲ್ಲ. ಇದರಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 21.59 ಕೋಟಿ ರು. ಪೈಕಿ 5.23 ಕೋಟಿ ರು ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಬಿ ಕಲ್ಲೇಶ್ ಅವರನ್ನು ಸೇವೆಯಿಂದಲೇ ಅಮಾನತುಗೊಳಿಸಿತ್ತು.
ನಕಲಿ ದಾಖಲೆ ಸೃಷ್ಟಿಸಿ ಅನಧಿಕೃತ ಖಾತೆಗಳಿಗೆ 94.73 ಕೋಟಿ ವರ್ಗಾವಣೆ; ನಿಗಮವನ್ನೇ ಕತ್ತಲಲ್ಲಿಟ್ಟಿದ್ದ ಬ್ಯಾಂಕ್!
ನಿಗಮದ ಲೆಕ್ಕ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣವು ರಾಜಕೀಯಕರಣಗೊಳ್ಳುತ್ತಿದ್ದಂತೆ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ಠಾಣೆಗೆ ನೀಡಿರುವ ದೂರಿನಲ್ಲಿ ಬ್ಯಾಂಕ್‌ನ ಮೋಸದ ಚಟುವಟಿಕೆಗಳನ್ನು ವಿವರಿಸಿದ್ದರು.