ಅನೀಮಿಯಾ ಪರೀಕ್ಷೆ; ಗುಣಮಟ್ಟವಿಲ್ಲದ ಕಂಪನಿಗೆ ಮನ್ನಣೆ, ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟ?

ಬೆಂಗಳೂರು; ಹೈದರಬಾದ್‌ ಮೂಲದ ಸೆನ್ಸಾ ಕೋರ್‍‌ ಮೆಡಿಕಲ್‌ ಇನ್ಸುಟ್ರೂಮೆಂಟ್‌  ಕಂಪನಿಯು ತಯಾರಿಸಿರುವ ಹಿಮೋಗ್ಲೋಬಿನ್‌ ಮೀಟರ್‍‌ ಉಪಕರಣವು ಉತ್ತಮ ಫಲಿತಾಂಶವನ್ನು ನೀಡುವಲ್ಲಿ ವಿಫಲವಾಗಿದೆ ಎಂಬ ಗುರುತರವಾದ ಆರೋಪಕ್ಕೆ ಒಳಗಾಗಿದ್ದರೂ ಸಹ ಇದೇ ಕಂಪನಿಯ ಉಪಕರಣದಿಂದಲೇ 58 ಲಕ್ಷ ಶಾಲಾ ಮಕ್ಕಳ ಅನೀಮಿಯಾ ಮಟ್ಟವನ್ನು ಪರೀಕ್ಷಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಹೊರಟಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

 

ಸೆನ್ಸಾ ಕೋರ್‍‌ ಮೆಡಿಕಲ್‌ ಇನ್ಸುಟ್ರೂಮೆಂಟ್‌ ಕಂಪನಿಯ ಹಿಮೋಗ್ಲೋಬಿನ್‌ ಮೀಟರ್‍‌ ಉಪಕರಣವನ್ನು ಕೇವಲ ಪ್ರಯೋಗಾಲಯ ಮಟ್ಟದಲ್ಲಿ ಮಾತ್ರ ಉಪಯೋಗಿಸಬಹುದು ಎಂದು ಔಷಧ ಮತ್ತು ಉಪಕರಣಗಳ ಪ್ರಮಾಣೀಕರಿಸುವ ಕೇಂದ್ರ ಸರ್ಕಾರ ಮೂಲದ ಸಿಡಿಎಸ್‌ಸಿಒ ಕಂಪನಿಯು  ಪ್ರಮಾಣ ಪತ್ರ ನೀಡಿದೆ.

 

ಆದರೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದೇ ಕಂಪನಿಯ ಹಿಮೋಗ್ಲೋಬಿನ್ ಮೀಟರ್‍‌ನಿಂದಲೇ ಅನೀಮಿಯಾ  ಮಟ್ಟ ಪರೀಕ್ಷಿಸಲು ಹೊರಟಿರುವುದು ಮಕ್ಕಳ ಆರೋಗ್ಯದ ಜತೆ  ಚೆಲ್ಲಾಟವಾಡುತ್ತಿದೆ ಎಂಬ ಆಪಾದನೆಗೂ ಇಲಾಖೆಯು  ಒಳಗಾಗಿದೆ.

 

ಈ ಸಂಬಂಧ ವಿನಯ್‌ ಎಂಬುವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2024ರ ಏಪ್ರಿಲ್‌ನಲ್ಲಿಯೇ ದೂರರ್ಜಿ ಸಲ್ಲಿಸಿದ್ದರು. ಅಲ್ಲದೇ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ 2024ರ ಅಕ್ಟೋಬರ್‍‌ 1ರಂದು ಸಲ್ಲಿಕೆಯಾಗಿದೆ.  ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಅದೇ ರೀತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ದೂರು ಸಲ್ಲಿಕೆಯಾಗಿದೆ.

 

 

ಅಲ್ಲದೇ ಈ ಕಂಪನಿಯು ರಾಜಸ್ಥಾನಕ್ಕೂ ಸರಬರಾಜು ಮಾಡಿರುವ ಉಪಕರಣದ ದರಕ್ಕೂ ಮತ್ತು ರಾಜ್ಯದಲ್ಲಿ ಸರಬರಾಜು ಮಾಡುತ್ತಿರುವ ಉಪಕರಣದ ದರಕ್ಕೆ ಹೋಲಿಸಿದರೆ  ವ್ಯತ್ಯಾಸ ಕಂಡು ಬಂದಿದೆ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.

 

ರಾಜಸ್ಥಾನ್ ಮೆಡಿಕಲ್ ಸಪ್ಲೈಸ್ ಕಾರ್ಪೊರೇಷನ್ ಸಂಧಾನದ ಪ್ರಕಾರ ಪ್ರತಿ ಹಿಮೋಗ್ಲೋಬಿನ್ ಪರೀಕ್ಷಾ ಪಟ್ಟಿ (50 ಸ್ಟ್ರಿಪ್ಸ್‌) ಗೆ ಜಿಎಸ್‌ಟಿ ಒಳಗೊಂಡಂತೆ ಒಟ್ಟಾರೆ 5.42 ರು ದರ ನಿಗದಿಯಾಗಿದೆ. ಇದರ ಜತೆ ಪ್ರತಿ 200 ಪರೀಕ್ಷಾ ಪಟ್ಟಿಗೆ ಒಂದು ಹಿಮೋಗ್ಲೋಬಿನ್ ಪರೀಕ್ಷಾ ಮೀಟರ್‍‌ ಉಚಿತವಾಗಿ ನೀಡುವ ಷರತ್ತೂ ಇದೆ.

 

 

ಆದರೆ ರಾಜ್ಯದಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಪ್ರತಿ ಪರೀಕ್ಷೆ ಪಟ್ಟಿಗೆ 5.58 ರು ದರ ನಿಗದಿ ಪಡಿಸಿದೆ. ಇದರಲ್ಲಿ ಪ್ರತಿ 3,000 ಪರೀಕ್ಷಾ ಪಟ್ಟಿಗೆ (ಸ್ಟ್ರಿಪ್‌) ಒಂದು ಹಿಮೋಗ್ಲೋಬಿನ್ ಮೀಟರ್‍‌ ಉಚಿತ ನೀಡಬೇಕು ಎಂಬ ಷರತ್ತು ವಿಧಿಸಿದೆ.

 

 

ಆದರೆ ರಾಜಸ್ಥಾನದ ದರ ಹೋಲಿಸಿದರೇ ಕರ್ನಾಟಕದಲ್ಲಿ ಪ್ರತಿ ಹಿಮೋಗ್ಲೋಬಿನ್‌ ಪರೀಕ್ಷೆ ಪಟ್ಟಿಯ ಬೆಲೆ 1.50 ರು. ಹೆಚ್ಚಿದೆ. ಇದೇ ದರದಲ್ಲಿ 3.50 ಕೋಟಿ ಪರೀಕ್ಷಾ ಪಟ್ಟಿಗಳನ್ನು ಖರೀದಿಸಲಿದೆ. ಆದರೆ ವಾಸ್ತವದಲ್ಲಿ ಪ್ರತಿ ಹಿಮೋಗ್ಲೋಬಿನ್ ಪರೀಕ್ಷಾ ಪಟ್ಟಿಯ ಬೆಲೆಯು 4 ಕ್ಕಿಂತ ಹೆಚ್ಚಿರಬಾರದು. ಆದರೂ 1.50 ರು. ಹೆಚ್ಚಿನ ದರದಲ್ಲಿ 3.50 ಕೋಟಿ ಪರೀಕ್ಷಾ ಪಟ್ಟಿಗಳನ್ನು ಖರೀದಿಸಲು ಮುಂದಾಗಿರುವುದರಿಂದ ಬೊಕ್ಕಸಕ್ಕೆ ಅಂದಾಜು 4 ರಿಂದ 5 ಕೋಟಿ ರು. ನಷ್ಟವಾಗಲಿದೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.

 

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಚಿದಾನಂದ ವಠಾರೆ ಅವರು ವರ್ಗಾವಣೆ ಆಗುವ ಎರಡು ದಿನದ ಮೊದಲು ತರಾತುರಿಯಲ್ಲಿ ಈ ಉಪಕರಣ ಬಳಸಲು ಅನುಮೋದನೆ ನೀಡಿದ್ದಾರೆ. ಇದರಲ್ಲಿ ನಿಗಮದ ಇಬ್ಬರು ಅಧಿಕಾರಿಗಳು ಭಾಗಿ ಆಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

 

ಮಕ್ಕಳ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದೆಯೇ?

 

ಕೇಂದ್ರ ಸರ್ಕಾರ ಮೂಲದ ಔಷಧ ಮತ್ತು ಉಪಕರಣಗಳ ಪ್ರಮಾಣೀಕರಣ ಸಂಸ್ಥೆಯು (ಸಿಡಿಎಸ್‌ಸಿಒ) ಸೆನ್ಸಾ ಕೋರ್‍‌ ಕಂಪನಿಯ ಹಿಮೋಗ್ಲೋಬಿನ್ ಮೀಟರ್ ಉಪಕರಣಗಳನ್ನು “ಪ್ರಯೋಗಾಲಯ” ಮಟ್ಟದಲ್ಲಿ ಮಾತ್ರ ಉಪಯೋಗಿಸಬಹುದು ಎಂದು ಪ್ರಮಾಣ ಪತ್ರ ಕೊಟ್ಟಿದೆ. ಆದರೂ ಕೆಎಸ್‌ಎಂಎಸ್‌ಸಿಎಲ್‌ನ ಕೆಲವು ಲಂಚಕೋರ ಅಧಿಕಾರಿಗಳು ಇದೇ ಕಂಪನಿಯ ಉಪಕರಣದಿಂದಲೇ ಮಕ್ಕಳಲ್ಲಿರುವ ಅನಿಮೀಯಾ ಮಟ್ಟವನ್ನು ಅಳೆಯಲು ಹೊರಟಿರುವುದಕ್ಕೆ ಹಲವು ಗಂಭೀರ ಆಕ್ಷೇಪಗಳು ವ್ಯಕ್ತವಾಗಿವೆ.

 

‘ರಾಜ್ಯದ ಸುಮಾರು 58 ಲಕ್ಷ ಮಕ್ಕಳ ಅನಿಮಿಯಾ ಮಟ್ಟವನ್ನು ಶಾಲಾ ಮಟ್ಟದಲ್ಲಿ ಪರೀಕ್ಷೆ ನಡೆಸಲು ಹೊರಟಿರುವುದು ಸರಿಯಲ್ಲ. ಈ ಕಂಪನಿಯ ಹಿಮೋಗ್ಲೋಬಿನ್ ಮೀಟರ್ ಉಪಯೋಗಿಸಿ ಪರೀಕ್ಷೆ ನಡೆಸಿದರೇ ಅದರಲ್ಲಿ ಬರುವ ಫಲಿತಾಂಶ ಸರಿ ಇರುವುದಿಲ್ಲ. ಇದರಿಂದ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡಿದಂತಾಗುತ್ತದೆ. ಮತ್ತು ಸಂಪೂರ್ಣ ಕಾರ್ಯಕ್ರಮ ಹಳ್ಳ ಹಿಡಿದು ಹಾಳಾಗಬಹುದು. ತಪ್ಪು ಫಲಿತಾಂಶ ಬಂದಾಗ ಮಕ್ಕಳಿಗೆ ಕೊಡುವ ಔಷಧಿಯ ಪ್ರಮಾಣವನ್ನು ಸರಿಯಾಗಿ ನಿಗದಿ ಪಡಿಸಲು ಆಗುವುದಿಲ್ಲಾ,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ತಜ್ಞರೊಬ್ಬರು.

 

ಅಲ್ಲದೇ ಇದೇ ಟೆಂಡರ್‍‌ನಲ್ಲಿ ಭಾಗಿಯಾಗಿದ್ದ ಇಬ್ಬರು ಬಿಡ್‌ದಾರರೂ ಸಹ ಸೆನ್ಸಾ ಕೋರ್‍‌ ಕಂಪನಿಯ ಉತ್ಪನ್ನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವತಃ ಸೆನ್ಸಾ ಕೋರ್‍‌ ಕಂಪನಿಯು ಚೀನಾದ ಶಾಂಘೈನ ಉಪಕರಣವನ್ನು ಮಾರ್ಕೆಂಟಿಂಗ್‌ ಮಾಡುತ್ತಿದೆ ಎಂದು ಘೋಷಿಸಿಕೊಂಡಿದೆ.

 

 

ಈ ಕಂಪನಿಯು ಪರೀಕ್ಷಿಸಲು ಬಳಸಿಕೊಳ್ಳುತ್ತಿರುವ ಹಿಮೋಗ್ಲೋಬಿನ್‌ ಪರೀಕ್ಷಾ ಪಟ್ಟಿಯು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿರುವುದು ದೂರಿನಿಂದ ಗೊತ್ತಾಗಿದೆ. ಹಾಗೆಯೇ ಬಹುತೇಕ ರಾಜ್ಯಗಳಲ್ಲಿ ಈ ಕಂಪನಿಯು ಉಪಯೋಗಿಸುತ್ತಿರುವ ಹಿಮೋಗ್ಲೋಬಿನ್‌ ಪರೀಕ್ಷಾ ಪಟ್ಟಿಯನ್ನೇ ತಿರಸ್ಕರಿಸಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಈಗಾಗಲೇ ಏಪ್ರಿಲ್‌ 2024ರಲ್ಲೇ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಇದೇ ದೂರನ್ನೂ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೂ ಸಲ್ಲಿಕೆಯಾಗಿದೆ. ಹೀಗಾಗಿ ಈ ದೂರಿನ ಮೇಲೆ ಕ್ರಮ ಕೈಗೊಳ್ಳುವ ಕುರಿತಂತೆ ಕಡತವೊಂದು ಸೃಜನೆಯಾಗಿದ್ದು ಇದು ಇ-ಆಫೀಸ್‌ನಲ್ಲಿ ಚಾಲ್ತಿಯಲ್ಲಿದೆ. ಆದರೂ ಸಹ ಭ್ರಷ್ಟ ಅಧಿಕಾರಿಗಳ ಕೂಟವು ಇಲಾಖೆ ಮುಖ್ಯಸ್ಥರ ಗಮನಕ್ಕೆ ಬಾರದಂತೆ ನೋಡಿಕೊಂಡಿದೆ ಎಂಬ ಆರೋಪವೂ ಕೇಳಿ ಬಂದಿದೆ.

SUPPORT THE FILE

Latest News

Related Posts