ಬೆಂಗಳೂರು; ಮುಡಾದಿಂದ ಮಂಜೂರಾಗಿದ್ದ 14 ಬದಲಿ ನಿವೇಶನಗಳನ್ನು ಪಾರ್ವತಿ ಅವರು ವಾಪಸ್ ನೀಡಿರುವ ಪ್ರಕ್ರಿಯೆಯಲ್ಲಿ ಅಧಿಕಾರಿ ವರ್ಗ ತೋರಿಸಿರುವ ಅತ್ಯುತ್ಸಾಹ ಮತ್ತು ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿರುವುದರಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಮಾತುಗಳು ಅಧಿಕಾರಿಶಾಹಿ ವಲಯದಿಂದಲೇ ಕೇಳಿ ಬಂದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮಗೆ ಮಂಜೂರಾಗಿದ್ದ 14 ನಿವೇಶನಗಳನ್ನು ಹಿಂಪಡೆಯಲು ನೀಡಿದ್ದ ಮನವಿಯನ್ನು ಸ್ವೀಕರಿಸಿದ ಕೆಲವೇ ಗಂಟೆಗಳಲ್ಲೇ ಹಿಂಪಡೆಯುವ ಪ್ರಕ್ರಿಯೆಯನ್ನೂ ಮುಡಾ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ. ಚಿರತೆ ವೇಗವನ್ನೂ ಮೀರಿಸಿರುವ ಮುಡಾ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವವಿಲ್ಲ ಎಂದು ಹೇಳಲಾಗದು ಎಂಬ ಮಾತುಗಳೂ ಅಧಿಕಾರಿಶಾಹಿ ವಲಯದಲ್ಲಿ ಕೇಳಿ ಬಂದಿವೆ.
ಅದೇ ರೀತಿ ಎಫ್‌ಐಆರ್‍ನಲ್ಲಿ ಕೇವಲ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ಸದಸ್ಯರ ಹೆಸರನ್ನಷ್ಟೇ ಹೆಸರಿಸಿರುವ ಲೋಕಾಯುಕ್ತ ಪೊಲೀಸರು, ಜಿಲ್ಲಾ, ತಾಲೂಕು ಮತ್ತು ಮುಡಾ ಅಧಿಕಾರಿಗಳ ಹೆಸರನ್ನೇಕೆ ಕೈ ಬಿಟ್ಟಿದ್ದಾರೆ ಎಂಬುದು ಸಹ ಅಧಿಕಾರಿಶಾಹಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
14 ನಿವೇಶನಗಳನ್ನು ವಾಪಸ್ ನೀಡಿರುವ ಪ್ರಕ್ರಿಯೆಯಲ್ಲಿಯೂ ಮುಡಾವು ನಿಯಮಗಳನ್ನು ಪಾಲಿಸಿಲ್ಲ. ಪಾರ್ವತಿ ಅವರ ಮನವಿ ಪತ್ರವನ್ನು ತರಾತುರಿಯಲ್ಲಿ ಅಂಗೀಕರಿಸಿದ್ದಲ್ಲದೇ ತ್ವರಿತಗತಿಯಲ್ಲಿ ಎಲ್ಲಾ ಪ್ರಕ್ರಿಯೆಗಳನ್ನೂ ಕಣ್ಣಿನ ರೆಪ್ಪೆ ಮಿಟುಕಿಸುವುದರೊಳಗೇ ಪೂರ್ಣಗೊಳಿಸಿದೆ. ಇದರ ಹಿಂದೆ ಮುಖ್ಯಮಂತ್ರಿ ಅವರ ಅಧಿಕಾರ ದುರುಪಯೋಗವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇನ್ನು, ಇದೇ ಪ್ರಕರಣದಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಲೋಕಾಯುಕ್ತ ಪೊಲೀಸರು ಮುಡಾ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್ ದಾಖಲಿಸಿಲ್ಲ. ಬದಲಿಗೆ ಮುಖ್ಯಮಂತ್ರಿ, ಅವರ ಪತ್ನಿ ಮತ್ತು ಭಾಮೈದ ಅವರ ಮೇಲಷ್ಟೇ ಎಫ್‌ಐಆರ್ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, ಅವರೊಂದಿಗೆ ಇತರೆ ಅಧಿಕಾರಿಗಳು ಎಂದಷ್ಟೇ ಉಲ್ಲೇಖಿಸಿದ್ದಾರೆ. ಎಲ್ಲಿಯೂ ಮುಡಾ ಮತ್ತು ಅಂದಿನ ಜಿಲ್ಲಾ, ತಾಲೂಕು ಮಟ್ಟದ ನಿರ್ದಿಷ್ಟ ಅಧಿಕಾರಿಯನ್ನು ಎಫ್‌ಐಆರ್‍ನಲ್ಲಿ ಹೆಸರಿಸಿಲ್ಲ. ಇಲ್ಲಿಯೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ದುರುಪಯೋಗವಾಗಿದೆ ಎಂದೇ ಹೇಳಲಾಗುತ್ತಿದೆ.
ವಿಶೇಷವೆಂದರೇ ಇಡೀ ಪ್ರಕರಣದಲ್ಲಿ ಮುಡಾ ಅಧಿಕಾರಿಗಳು ಎಸಗಿರುವ ಕಾನೂನುಬಾಹಿರ ಕ್ರಮಗಳ ಪಟ್ಟಿ ಅತಿ ದೊಡ್ಡದಿದೆ. ಹೀಗಿದ್ದರೂ ಒಬ್ಬೇ ಒಬ್ಬ ಅಧಿಕಾರಿಯ ಹೆಸರು ಎಫ್‌ಐಆರ್‍ನಲ್ಲಿ ದಾಖಲಿಸಿಲ್ಲ. ಇನ್ನು, ಯಾವುದೇ ಭೂ ಸ್ವಾಧೀನಕ್ಕೊಳಪಟ್ಟ ಆಸ್ತಿ ಈಗಾಗಲೇ ಅಭಿವೃದ್ಧಿ ಆಗಿದ್ದರೇ ಅಂತಹ ಆಸ್ತಿಗಳನ್ನು ಮಾತ್ರ ಡಿ-ನೋಟಿಫೈ ಮಾಡಲಾಗುತ್ತದೆ.
1998ರಲ್ಲಿ ಕೃಷಿ ಜಮೀನಾಗೇ ಇದ್ದ ಕೆಸರೆಯ ಜಮೀನನ್ನು ಡಿ-ನೋಟಿಫಿಕೇಷನ್ ಮೂಲಕ ಕೈ ಬಿಡಲು ಸ್ಥಳ ಪರಿಶೀಲನೆ ಮಾಡಿ ಶಿಫಾರಸ್ಸು ಮಾಡಿದ್ದ ಅಧಿಕಾರಿಗಳೂ ಕೂಡ ತಪ್ಪಿತಸ್ಥರೇ. ಹೀಗಿದ್ದರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಒಬ್ಬೇ ಒಬ್ಬ ಅಧಿಕಾರಿಯನ್ನೂ ಎಫ್‌ಐಆರ್‍ನಲ್ಲಿ ಸೇರಿಸಿಲ್ಲ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ದುರುಪಯೋಗವೇ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂಬ ಮಾತುಗಳು ಅಧಿಕಾರಿಶಾಹಿ ವಲಯದಿಂದಲೇ ಕೇಳಿ ಬಂದಿವೆ.
‘ಎಫ್‌ಐಆರ್‍ನಲ್ಲಿ ಅಧಿಕಾರಿಗಳನ್ನು ಸೇರಿಸಲು ಅವರ ಹೆಸರು ತಿಳಿದಿಲ್ಲವೇ, 2003ರಲ್ಲಿ ಬಡಾವಣೆ ಸೈಟುಗಳ ಹಂಚಿಕೆ ಪೂರ್ಣಗೊಂಡಿದೆ. ಹೀಗಿರುವಾಗ 2010ರ ನಂತರ ಸೈಟ್ ಮಾಡಲು ಭೂ ಸ್ವಾಧೀನಗೊಳ್ಳದ ಜಮೀನನ್ನು ಅಕ್ರಮವಾಗಿ ಬಳಸಿಕೊಂಡ ಮತ್ತು ಕಾಮಗಾರಿ ಮಾಡಿದ ಮುಡಾ ಇಂಜಿನಿಯರ್‍ಗಳು ಹಾಗೂ ಕಾಮಗಾರಿಗೆ ಅನುಮತಿ ನೀಡಿದ ಆಯುಕ್ತರೂ ಸಹ ತಪ್ಪಿತಸ್ಥರು. ಮುಡಾಕ್ಕೆ ಈ ಜಮೀನು ಸೇರಿಲ್ಲ ಎಂದಾದ ಮೇಲೆ ಈ ಜಮೀನಿನ ಮೇಲೆ ಮುಡಾ ಹಣವನ್ನು ಬಳಸಿ ಕಾಮಗಾರಿ ನಡೆಸಿರುವುದು ಸಹ ಬಹು ದೊಡ್ಡ ಅಕ್ರಮ,’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.
ಹಾಗೆಯೇ ಭೂ ಸ್ವಾಧೀನಗೊಳ್ಳದ ಜಮೀನಿನಲ್ಲಿ ಅಕ್ರಮವಾಗಿ ರಚಿಸಿದ್ದ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಅಧಿಕಾರಿಗಳು ಹಾಗೂ ಆಯುಕ್ತರು ಸಹ ತಪ್ಪಿತಸ್ಥರು ಎಂಬ ಆರೋಪವಿದೆ. ಅತಿಕ್ರಮಿತ ಜಮೀನಿನಲ್ಲಿ ರಚಿಸಿದ್ದ ನಿವೇಶನಗಳ ಬದಲಾಗಿ ಸಮಾನ ಬಡಾವಣೆಯಲ್ಲಿ ಸೈಟು ನೀಡದೇ ಪ್ರತಿಷ್ಠಿತ ಬಡಾವಣೆಯಲ್ಲಿ ನಿವೇಶನ ನೀಡಿ ಆರ್ಥಿಕ ನಷ್ಟಕ್ಕೂ ಅಧಿಕಾರಿಗಳು ಕಾರಣರಾಗಿದ್ದಾರೆ. ಆದರೂ ಎಫ್‌ಐಆರ್‍ನಲ್ಲಿ ಈ ಯಾವ ಅಧಿಕಾರಿಗಳ ಹೆಸರುಗಳನ್ನೂ ಸೇರಿಸದೇ ಇರುವುದು ಸಂಶಯಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
‘ಎಫ್‌ಐಆರ್‍ನಲ್ಲಿ ಹೆಸರು ಸೇರಿಸಲು ಈ ಪೈಕಿ ಯಾರ ಹೆಸರೂ ತಿಳಿದಿಲ್ಲವೇ, ಸಿದ್ದರಾಮಯ್ಯ ಅವರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎನ್ನುವುದಾದರೇ ಅದನ್ನು ತಮ್ಮ ಹೇಳಿಕೆಯಲ್ಲಿ ಖಾತರಿಪಡಿಸಬೇಕಿರುವುದು ಇದೇ ಅಧಿಕಾರಿಗಳು. ಅಧಿಕಾರಿಗಳ ಹೆಸರು ಸೇರಿಸಿ ವಿಚಾರಣೆ ನಡೆಸಿದರೆ ನೀರಿನಲ್ಲಿ ಮುಳುಗುವವರು ಸಿದ್ದರಾಮಯ್ಯ ಅವರನ್ನೂ ಎಳೆದುಕೊಂಡು ಮುಳುಗಬಹುದು ಎಂಬ ಆತಂಕ ಕಾಡುತ್ತಿರಬೇಕು,’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಬಡಾವಣೆ ರಚನೆಗಾಗಿ 1997ರಲ್ಲಿ ಅಧಿಸೂಚನೆ ಹೊರಡಿಸಿತ್ತು. ನಂತರ 1998ರಲ್ಲಿ ಈ ಜಮೀನನ್ನು ಡಿ-ನೋಟಿಫಿಕೇಷನ್ ಮೂಲಕ ಕೈ ಬಿಟ್ಟಿತ್ತು. ‘ಆದರೆ 1998ರಲ್ಲಿ ಡಿ-ನೋಟಿಫಿಕೇಷನ್ ಮಾಡುವ ಪೂರ್ವದಲ್ಲಿ ಸಿದ್ದರಾಮಯ್ಯ ಅವರ ಅತ್ತೆಯವರಾಗಲೀ ಅಥವಾ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಅವರಾಗಲೀ ಈ ಜಮೀನಿನ ಜಿಪಿಎ ಮಾಡಿಸಿಕೊಂಡು ಆ ನಂತರ ಡಿ-ನೋಟಿಫಿಕೇಷನ್ ಆಯಿತೋ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ,’ ಎಂದೂ ಅಧಿಕಾರಿಯೊಬ್ಬರು ತಮ್ಮ ಮಾತನ್ನು ವಿಸ್ತರಿಸುತ್ತಾರೆ.