ಕಚೇರಿಗಳಲ್ಲಿ ಕೆಲಸ ಮಾಡದ ಶೇ.47ರಷ್ಟು ಸಿಬ್ಬಂದಿ; ರಾಶಿ ರಾಶಿ ಕಡತಗಳು, ಆಡಳಿತ ವ್ಯವಸ್ಥೆ ಕುಂಠಿತ

ಬೆಂಗಳೂರು; ಸಚಿವಾಲಯ ಸೇರಿದಂತೆ ಸರ್ಕಾರದ ಇಲಾಖೆಗಳಲ್ಲಿ ಪ್ರಿಂಟರ್‍‌, ಸ್ಕ್ಯಾನರ್‍‌ಗಳು ಇಲ್ಲದ ಕಾರಣ ಕಡತಗಳ ವಿಲೇವಾರಿಯಲ್ಲಿ ಕುಂಠಿತವಾಗುತ್ತಿದೆ. ಅದೇ ರೀತಿ ಇಲಾಖೆಗಳಲ್ಲಿ ಶೇ.47ರಷ್ಟು ಅಧಿಕಾರಿ, ಸಿಬ್ಬಂದಿಗಳು ನಿಗದಿತ ಅವಧಿಯಂತೆ ಕೆಲಸ ಮಾಡುತ್ತಿಲ್ಲ. ಹೀಗಾಗಿ ಆಡಳಿತ ವ್ಯವಸ್ಥೆಯು ಕುಂಠಿತವಾಗುತ್ತಿದೆ ಮತ್ತು ಕಡತ ನಿರ್ವಹಣೆಯ್ಲಲಿಯೂ ವಿಳಂಬವಾಗುತ್ತಿದೆ.

 

ಸಚಿವಾಲಯ ಮತ್ತು ಇಲಾಖೆಗಳಲ್ಲಿ ಅಧಿಕಾರಿ, ನೌಕರರ ಹಾಜರಾತಿ ನಿರ್ವಹಣೆ ಕುರಿತು ಮುಖ್ಯ ಕಾರ್ಯದರ್ಶಿಗಳು ಇತ್ತೀಚೆಗಷ್ಟೇ ಪರಿಶೀಲನೆ ನಡೆಸಿದ್ದರ ಬೆನ್ನಲ್ಲೇ ನಿಗದಿತ ಅವಧಿಯಂತೆ ಅಧಿಕಾರಿ, ನೌಕರರು ಕೆಲಸ ನಿರ್ವಹಿಸುತ್ತಿಲ್ಲ ಎಂಬ ಅಂಶವು ಮುನ್ನೆಲೆಗೆ ಬಂದಿದೆ.

 

ಅದೇ ರೀತಿ ಇ-ಆಡಳಿತ ಇಲಾಖೆಯಿಂದ ಪ್ರತೀ ವರ್ಷ ಕಂಪ್ಯೂಟರ್‍‌, ಸ್ಕ್ಯಾನರ್‍‌, ಪ್ರಿಂಟರ್‍‌ಗಳನ್ನು ಖರೀದಿಸುತ್ತಿದೆಯಾದರೂ ಇಲಾಖೆಗಳಲ್ಲಿ ಸ್ಕ್ಯಾನರ್‍‌, ಪ್ರಿಂಟರ್‍‌ಗಳೇ ಇಲ್ಲ ಎಂದು ಸಚಿವಾಲಯ ನೌಕರರ ಸಂಘವು ಹೇಳಿರುವುದು ಅಚ್ಚರಿ ಮೂಡಿಸಿದೆ.

 

ಸರ್ಕಾರದ ಇಲಾಖೆಗಳಲ್ಲಿ ಕಡತಗಳು ವಿಲೇವಾರಿ ಆಗದೇ ಬೆಟ್ಟದಷ್ಟು ಎದ್ದು ನಿಂತಿದೆ. ಇ-ಆಫೀಸ್‌ ಸೇವೆಯನ್ನು ಅನುಷ್ಠಾನಗೊಳಿಸಿ ಹಲವು ವರ್ಷಗಳಾದರೂ ಸಹ ಇದೇ ಇ-ಆಫೀಸ್‌ ತಂತ್ರಾಂಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಡತಗಳು ವಿಲೇವಾರಿ ಆಗದೇ ಬಾಕಿ ಇವೆ. ಇದೀಗ ಕಡತಗಳ ವಿಲೇವಾರಿಯಲ್ಲಿ ಕುಂಠಿತವಾಗಲು ಸ್ಕ್ಯಾನರ್‍‌ಗಳು ಮತ್ತು ಪ್ರಿಂಟರ್‍‌ಗಳು ಇಲ್ಲದೇ ಇರುವುದೇ ಕಾರಣ ಎಂದು ಸಚಿವಾಲಯ ನೌಕರರ ಸಂಘವು ಹೇಳಿರುವುದು ಮುನ್ನೆಲೆಗೆ ಬಂದಿದೆ.

 

ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಈ ವಿಚಾರವು ಪ್ರಸ್ತಾಪವಾಗಿದೆ. ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರು ಕಡತ ವಿಲೇವಾರಿಗೆ ಸಂಬಂಧಿಸಿದಂತೆ ಇಲಾಖೆಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಸ್ಕ್ಯಾನರ್‍‌ಗಳು, ಪ್ರಿಂಟರ್‍‌ಗಳು ಇಲ್ಲದೇ ಇರುವುದರಿಂದ ಕಡತ ವಿಲೇವಾರಿಯಲ್ಲಿ ಕುಂಠಿತವಾಗುತ್ತಿದೆ,’ ಎಂದು ಸಭೆಯ ಗಮನಕ್ಕೆ ತಂದಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

 

 

ಇಲಾಖೆಗಳಿಗೆ ಅಗತ್ಯವಾಗಿ ಬೇಕಾಗಿರುವ ಗಣಕ ಯಂತ್ರಗಳು, ಸ್ಕ್ಯಾನರ್‍‌ಗಳು, ಪ್ರಿಂಟರ್‍‌ಗಳ ಕೊರತೆ ಕುರಿತು ಇಲಾಖೆ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು. ಈ ಸಂಬಂಧ ಕಡತವನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

 

ಇಲಾಖೆಗಳಲ್ಲಿನ ಶಾಖಾಧಿಕಾರಿಗಳು ತಮ್ಮ ಶಾಖೆಯಲ್ಲಿನ ಪ್ರತಿ ಕಡತವಾರು ಪರಿಶೀಲನೆ ನಡೆಸಬೇಕು. ಅವುಗಳನ್ನು ಒಂದು ವಾರದಲ್ಲಿ ವರ್ಗೀಕರಿಸಿ ಎಷ್ಟು ಕಡತಗಳು ಬಾಕಿ ಇವೆ ಎಂಬ ಮಾಹಿತಿಯನ್ನು ಅಧೀನ ಕಾರ್ಯದರ್ಶಿಗಳಿಗೆ ಕಳಿಸಬೇಕು. ಹೀಗೆ ಕಡತಗಳನ್ನು 15 ದಿನದೊಳಗಾಗಿ ಚಲನವಲನಗೊಳಿಸಬೇಕು. ಪಾರ್ಕ್‌ ಮಾಡಿರುವ ಕಡತಗಳನ್ನು ಸಹ ಪರಿಶೀಲಿಸಬೇಕು. ಅಲ್ಲದೆ ಯಾವ ಕ್ರಮಕ್ಕಾಗಿ ಕಡತವು ಬಾಕಿ ಇದೆ ಎಂಬುದರ ಕುರಿತೂ ಗಮನಹರಿಸಬೇಕು. ಈ ಎಲ್ಲಾ ಮಾಹಿತಿಗಳನ್ನು ಮೇಲಾಧಿಕಾರಿಗಳಿಗೆ ಕಳಿಸಿ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು ಎಂದು ಸಭೆಯಲ್ಲಿ ಸೂಚಿಸಿರುವುದು ಗೊತ್ತಾಗಿದೆ.

 

ಬಾಕಿ ಇರುವ ಕಡತಗಳಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಕಡತವನ್ನು ತೆರೆಯಲಾಗುತ್ತಿದೆ. ಹೀಗಾಗಿ ಕಡತಗಳ ಸೃಜನೆಯು ಗಣನೀಯವಾಗಿ ಹೆಚ್ಚಾಗಿದೆ ಎಂದು ನಡವಳಿಯಲ್ಲಿ ದಾಖಲಿಸಿದೆ.

 

ಅದೇ ರೀತಿ ಇಲಾಖೆಗಳಲ್ಲಿ ಅಧಿಕಾರಿ, ನೌಕರರ ಪೈಕಿ ಶೇ.47ರಷ್ಟು ಮಂದಿ ನಿಗದಿತ ಅವಧಿಯಂತೆ ಕೆಲಸ ಮಾಡುತ್ತಿಲ್ಲ. ‘ ಹಾಜರಾತಿ ನಿರ್ವಹಣೆ ವ್ಯವಸ್ಥೆಯನ್ನು ಪರಿಶೀಲಿಸಲಾಗಿ ಶೇ.47ರಷ್ಟು ಅಧಿಕಾರಿ, ಸಿಬ್ಬಂದಿಗಳು ಪ್ರಸ್ತುತ ಒಂದು ದಿನಕ್ಕೆ ನಿಗದಿಪಡಿಸಲಾದ ಅವಧಿಯಂತೆ ಕೆಲಸವನ್ನು ನಿರ್ವಹಿಸುತ್ತಿಲ್ಲ. ಇದರಿಂದಲೂ ಆಡಳಿತ ವ್ಯವಸ್ಥೆಯು ಕುಂಠಿತವಾಗುತ್ತಿದೆ. ಹಾಗೂ ಕಡತಗಳ ನಿರ್ವಹಣೆಯಲ್ಲಿಯೂ ಸಹ ವಿಳಂಬವಾಗುವ ಸಾಧ್ಯತೆ ಇದೆ,’ ಎಂದು ಸಭೆಯಲ್ಲಿ ಚರ್ಚೆಯಾಗಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಒಂದು ದಿನದ ಕೆಲಸದ ಅವಧಿಯನ್ನು ಒಂದು ವರ್ಷದಲ್ಲಿನ ಕರ್ತವ್ಯದ ದಿನಗಳಿಗೆ ಲೆಕ್ಕ ಮಾಡಿದರೆ ಪ್ರತಿ ಕಡತಕ್ಕೆ ಸರಾಸರಿ ಎಷ್ಟು ಸಮಯ ಬೇಕಾಗುತ್ತದೆ ಎಂದು ಲೆಕ್ಕ ಹಾಕಬಹುದು. ಕೆಲಸ ನಿರ್ವಹಣೆಯನ್ನು ವಿಕೇಂದ್ರೀಕರಣ ಮಾಡಿದಲ್ಲಿ ಗುಣಾತ್ಮಕ ಕೆಲಸವಾಗುವ ಸಾಧ್ಯತೆ ಇರುತ್ತದೆ ಎಂದು ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಹೇಳಿರುವುದು ಗೊತ್ತಾಗಿದೆ.

 

ಹಾಗೆಯೇ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಸರ್ಕಾರದ ನೀತಿ, ನಿರೂಪಣೆ ಮತ್ತು ನಿಯಮಗಳನ್ನು ರೂಪಿಸುವ ಕಾರ್ಯವಾಗಬೇಕು. ಮತ್ತು ಎಲ್ಲಿಯೂ ಆಗದ ಕೆಲಸಗಳನ್ನು ಕನಾfಟಕ ಸರ್ಕಾರದ ಸಚಿವಾಲಯದ ಹಂತದಲ್ಲಿ ಆಗಬೇಕಿರುತ್ತದ.ಎ ಅಂತಹ ಕೆಲಸಗಳನ್ನು ಸರ್ಕಾರದ ಹಂತದಲ್ಲಿ ನಿರ್ವಹಣೆ ಮಾಡಬೇಕು.

 

ಆದರೆ ಪ್ರಸ್ತುತ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಎಷ್ಟು ಜನ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೋ ಅವರು ಇಲಾಖೆಗಳ ಅಧೀನದಲ್ಲಿ ಬರುವ ಕ್ಷೇತ್ರ ಇಲಾಖೆ, ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿಗಳ ಕುಂದುಕೊರತೆಗಳ ನಿವಾರಣೆ ವಿಷಯಗಳನ್ನು ಮತ್ತು ವೈಯಕ್ತಿಕ ವಿಷಯಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಸಚಿವಾಲಯದ ಶೇ.90ರಷ್ಟು ಕೆಲಸವು ಇತರೆ ಸಿಬ್ಬಂದಿಗಳ ಕುಂದುಕೊರತೆ, ವೈಯಕ್ತಿಕ ಕೆಲಸವನ್ನು ನಿರ್ವಹಣೆ ಮಾಡುವಂತಾಗಿದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ.

 

‘ಇ-ಆಫೀಸ್‌ ತಂತ್ರಾಂಶವನ್ನು ಕಡತ ವಿಲೇವಾರಿಗೆ ಬಳಸಿ ಮೇಲುಸ್ತುವಾರಿಯನ್ನೇ ಮಾಡದಿದ್ದರೇ ಅಗುವ ಅನಾಹುತ ಇದು. ಮೊದಲು ಭೌತಿಕ ಕಡತಗಳ ರಾಶಿ ಯಾರ ಮುಂದಾದರೂ ಇದ್ದರೇ ಉಳಿದವರ ಕಣ್ಣಿಗೆ ಬೀಳುತ್ತಿತ್ತು. ಈಗ ಯಾರ ಹತ್ತಿರ ಎಷ್ಟು ಕಡತ ಪೆಂಡಿಂಗ್‌ ಇದೆ, ಎಷ್ಟು  ಮನವಿಗಳ ಬಗ್ಗೆ ಕಡತ ತೆರೆಯಲು ಬಾಕಿ ಇದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಒಂದು ಕಡತ ಬಾಕಿ ಇರುವವನ ಕಂಪ್ಯೂಟರ್‍‌ ಮತ್ತು ಸಾವಿರ ಕಡತ ಬಾಕಿ ಇರುವವನ ಕಂಪ್ಯೂಟರ್‍‌ ಎರಡೂ ಒಂದೇ  ತರಹ ಕಾಣುತ್ತದೆ,’ ಎನ್ನುತ್ತಾರೆ ಅಧಿಕಾರಿಯೊಬ್ಬರು.

SUPPORT THE FILE

Latest News

Related Posts