ಮಾಹಿತಿ, ದಾಖಲೆ ನೀಡಿಕೆಗೆ ನಿರ್ಬಂಧ; ರಾಜ್ಯಪಾಲರ ವಿರುದ್ಧ ನಿರ್ಣಯ, ಸಾಕ್ಷ್ಯ ನಾಶಕ್ಕೆ ಮುನ್ನುಡಿಯೇ?

ಬೆಂಗಳೂರು; ರಾಜಭವನದಿಂದ ಬರುವ ಪತ್ರಗಳ ವಿಷಯಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಬೇಕು ಮತ್ತು ಅಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನಷ್ಟೆ ರಾಜ್ಯಪಾಲರಿಗೆ ಮುಖ್ಯ ಕಾರ್ಯದರ್ಶಿಯು ಉತ್ತರವಾಗಿ ನೀಡಬೇಕು ಎಂದು ಕೈಗೊಂಡಿರುವ ನಿರ್ಣಯವು ಅಧಿಕಾರಿ ಶಾಹಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

ಅಲ್ಲದೇ ಈ ಮೂಲಕ   ರಾಜ್ಯಪಾಲರಿಗೇ  ದಾಖಲೆ ಮತ್ತು ಮಾಹಿತಿ ಸಿಗದಂತೆ ನೋಡಿಕೊಳ್ಳಬೇಕು ಎಂದು ಪರೋಕ್ಷವಾಗಿ  ಸೂಚಿಸಿದಂತಿರುವ  ರಾಜ್ಯ ಕಾಂಗ್ರೆಸ್‌ ಸರ್ಕಾರದ ಈ  ನಡೆಯು ತನ್ನ ಹಂತದಲ್ಲೇ ಸಾಕ್ಷ್ಯ ನಾಶಕ್ಕೆ ಮುನ್ನುಡಿ ಬರೆದಿದೆ.

 

ರಾಜ್ಯಪಾಲರಿಗೆ ಮಾಹಿತಿ ನೀಡುವ ಮುನ್ನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲೇಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಕಟ್ಟಪ್ಪಣೆ ಮಾಡಿರುವ ಸಚಿವ ಸಂಪುಟವು ಸಂವಿಧಾನದ ಬಗ್ಗೆ ತಾತ್ಸಾರ ಹೊಂದಿದೆಯೇ ಎಂಬ ಅಭಿಪ್ರಾಯ ಮೂಡಲು ದಾರಿ ಮಾಡಿಕೊಟ್ಟಂತಾಗಿದೆ.

 

 

ರಾಜ್ಯಪಾಲರಿಗೇ ದಾಖಲೆ ಮತ್ತು ಮಾಹಿತಿ ಸಿಗದ ಹಾಗೆ ಮಾಡುವುದು ನಡೆದಿರಬಹುದಾದ ಅವ್ಯವಹಾರದ ಸಾಕ್ಷ್ಯ ಹೊರಬರದಂತೆ ಸರ್ಕಾರವೇ ನೇರವಾಗಿ ಹುನ್ನಾರ ಮಾಡುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೇ ಸಚಿವ ಸಂಪುಟವು ಕೈಗೊಂಡಿರುವ ಈ ನಿರ್ಣಯವು ತಾಂತ್ರಿಕವಾಗಿ ಜಾರಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗಳು ಅಧಿಕಾರಿಶಾಹಿ ವಲಯದಲ್ಲಿ ಮೂಡಿ ಬಂದಿವೆ.

 

 

ರಾಜ್ಯಪಾಲರು ವಿವರಣೆ, ಮಾಹಿತಿ ಕೇಳಿ ರಾಜ್ಯಪಾಲರಿಂದ ಬರುವ ಯಾವುದೇ ಪತ್ರಕ್ಕೂ ಮುಖ್ಯ ಕಾರ್ಯದರ್ಶಿ ಯಾವುದೇ ನೇರ ಉತ್ತರ ಕೊಡುವಂತಿಲ್ಲ ಎಂದು ತೀರ್ಮಾನಿಸಿರುವ ಸಚಿವ ಸಂಪುಟವು ಮನಬಂದಂತೆ ನಿರ್ಣಯ ಕೈಗೊಂಡಿರುವುದು ಸರಿಯಲ್ಲ ಎಂಬ ವಾದಗಳೂ ಅಧಿಕಾರಿಶಾಹಿ ವಲಯದಲ್ಲಿ ಕೇಳಿ ಬಂದಿವೆ.

 

 

‘ಭಾರತದ ಸಂವಿಧಾನದ 154ನೇ ವಿಧಿ ಅಡಿಯಲ್ಲಿ ರಾಜ್ಯಪಾಲರು ರಾಜ್ಯ ಕಾರ್ಯಾಂಗದ ಮುಖ್ಯಸ್ಥರಾಗಿದ್ದಾರೆ. ಸಂವಿಧಾನದ 166(1) ನೇ ವಿಧಿ ಅಡಿಯಲ್ಲಿ ಸರ್ಕಾರದ ಎಲ್ಲ ಅಧಿಸೂಚನೆಗಳು, ಆದೇಶಗಳು ಇತ್ಯಾದಿ ರಾಜ್ಯಪಾಲರ ಅಂಕಿತದಲ್ಲಿ ಹೊರಡಿಸಲಾಗುತ್ತದೆ. ಹೀಗಿರುವಾಗ ರಾಜ್ಯಪಾಲರಿಗೆ ಮಾಹಿತಿ ನೀಡುವುದನ್ನು ಪ್ರತಿಬಂಧಿಸುವ ಸಚಿವ ಸಂಪುಟದ ನಿರ್ಣಯವು ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ರಾಜ್ಯಪಾಲರ ಹೆಸರಿನಲ್ಲೇ ಆದೇಶಿಸಲ್ಪಡುತ್ತದೆಯೇ,’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

 

 

ಯಾವ ಅಧಿಕಾರಿ ಸಹಿ ಮಾಡಲಿದ್ದಾರೆ?

 

 

ರಾಜ್ಯಪಾಲರ ವಿರುದ್ಧದ ಆದೇಶ ರಾಜ್ಯಪಾಲರ ಹೆಸರಿನಲ್ಲೇ ಆದೇಶಿಸಲ್ಪಟ್ಟರೆ ಆ ನಿರ್ಣಯಕ್ಕೆ ಯಾವ ಅಧಿಕಾರಿ ಸಹಿ ಮಾಡುತ್ತಾರೆ, ಸಚಿವ ಸಂಪುಟದ ಅಸಾಧಾರಣ ನಿರ್ಣಯವನ್ನು ಅಧಿಸೂಚನೆ ರೂಪದಲ್ಲಿ ಹೊರಡಿಸದಿದ್ದರೆ ಈ ನಿರ್ಣಯವನ್ನು ಮುಖ್ಯ ಕಾರ್ಯದರ್ಶಿ ಒಪ್ಪಲು ಮತ್ತು ಜಾರಿಗೊಳಿಸಲು ಸಾಧ್ಯವೇ, ಸಂಪುಟವು ಕೈಗೊಂಡಿರುವ ಈ ನಿರ್ಣಯವನ್ನು ತಾಂತ್ರಿಕವಾಗಿ ಹೇಗೆ ಜಾರಿ ಮಾಡಲು ಸಾಧ್ಯ ಹೀಗೆ ಹತ್ತಾರು ಪ್ರಶ್ನೆಗಳು ಅಧಿಕಾರಿಶಾಹಿ ವಲಯದಲ್ಲಿ ಕೇಳಿ ಬಂದಿವೆ.

 

 

ಮನಬಂದಂತೆ ನಿರ್ಣಯ ಕೈಗೊಳ್ಳಲು ಅಧಿಕಾರವಿದೆಯೇ?

 

 

ಸಚಿವ ಸಂಪುಟಕ್ಕೆ ಮನಬಂದಂತೆ ಯಾವುದೇ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮ 1977ರ ಷೆಡ್ಯೂಲ್ 1ರಲ್ಲಿ ಸಚಿವ ಸಂಪುಟದ ಅಧಿಕಾರ ವ್ಯಾಪ್ತಿಗೆ ಒಳಪಡುವ ವಿಷಯಗಳ ಪಟ್ಟಿ ಇದೆ. ಈ ಈ ಪೈಕಿ ರಾಜ್ಯಪಾಲರ ವಿಷಯಕ್ಕೆ ಸಂಬಂಧಪಟ್ಟಂತೆ ನಿರ್ಣಯಿಸುವ ಅಧಿಕಾರ ಸಚಿವ ಸಂಪುಟಕ್ಕೆ ನೀಡಿಲ್ಲ.

 

 

ಈ ಹಿನ್ನೆಲೆಯಲ್ಲಿ ಯಾವ ಕಾಯ್ದೆಯ ಯಾವ ಕಲಂ ಮೇರೆಗೆ ಈ ಮೇಲಿನ ನಿರ್ಣಯಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ, ಅಲ್ಲದೇ ಮುಖ್ಯಕಾರ್ಯದರ್ಶಿಯಿಂದ ರಾಜ್ಯಪಾಲರು ಯಾವುದೇ ಅಭಿಪ್ರಾಯ/ಶಿಫಾರಸು ಕೇಳುತ್ತಿಲ್ಲ. ಕೇವಲ ಮಾಹಿತಿ/ದಾಖಲೆ ಕೇಳುತ್ತಿದ್ದಾರೆ. ರಾಜ್ಯಪಾಲರಿಗೆ ಮಾಹಿತಿ ನೀಡುವುದನ್ನೇ ಪ್ರತಿಬಂಧಿಸಿದರೆ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿದೆ ಎಂದು ರಾಜ್ಯಪಾಲರು ಕೇಂದ್ರಕ್ಕೆ ವರದಿ ಮಾಡಲು ದಾರಿ ಮಾಡಿಕೊಟ್ಟಂತಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

 

 

ಸಂವಿಧಾನಬದ್ಧವಾಗಿಯೇ ರಾಜ್ಯದ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಮುಖ್ಯಕಾರ್ಯದರ್ಶಿಗಳಿಂದ ಮಾಹಿತಿ ಕೋರಿದಾಗ ಅಂತಹ ಮಾಹಿತಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸದೇ ನೀಡುವಂತಿಲ್ಲ ಎಂದು ನಿರ್ಣಯಿಸುವುದು ಸಹ ಸಮರ್ಥನೀಯವಲ್ಲ.

 

 

‘ಮಾಹಿತಿಯೇ ಹಕ್ಕಾಗಿರುವ ಈ ಕಾಲಘಟ್ಟದಲ್ಲಿ ಯಾವುದೇ ಸರ್ಕಾರಿ ಮಾಹಿತಿಯನ್ನು ತಿದ್ದುವ ಅಧಿಕಾರ ಅಥವಾ ಸರ್ಕಾರಿ ಮಾಹಿತಿ ಪ್ರಸರಣವನ್ನು ತಡೆಹಿಡಿಯುವ ಅಧಿಕಾರ ಸಚಿವ ಸಂಪುಟಕ್ಕೆ ಇದೆಯೇ,  ಇದಕ್ಕಾಗಿ ರಾಜ್ಯಪಾಲರು ಮಾಹಿತಿ ಒಂದು ದಿನದಲ್ಲಿ ಕೇಳುತ್ತಾರೆ, ಎರಡು ದಿನದಲ್ಲಿ ಕೇಳುತ್ತಾರೆ ಎಂದು ಪಿಳ್ಳೆ ನೆಪ ಹೇಳುವುದು ಶೋಭೆ ತರುವ ವಿಚಾರವೂ ಅಲ್ಲ,’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

 

 

ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲೇ ವ್ಯಕ್ತಿಗಳ ಪ್ರಾಣ ಮತ್ತು ಸ್ವಾತಂತ್ರ್ಯಗಳಿಗೆ ಸಂಬಂಧಿಸಿ ಮಾಹಿತಿಯನ್ನು 48 ಘಂಟೆಗಳಲ್ಲಿ ಕೇಳುವ ಅಧಿಕಾರ ಸಾಮಾನ್ಯರಿಗೂ ಇದೆ. ಹೀಗಿರುವಾಗ ರಾಜ್ಯಪಾಲರು ಮುಖ್ಯಕಾರ್ಯದರ್ಶಿಗಳಿಂದ ಎರಡು ದಿನದಲ್ಲಿ ಮಾಹಿತಿ ಕೇಳಿದರೆ ಯಾವ ಅನಾಹುತ ಆಗುತ್ತದೆ ಎಂಬ ಪ್ರಶ್ನೆಗಳೂ ಕೇಳಿ ಬಂದಿವೆ.

 

 

ಮುಖ್ಯ ಕಾರ್ಯದರ್ಶಿಯು ರಾಜ್ಯ ಆಡಳಿತ ಶಾಖೆಯ ಮುಖ್ಯಸ್ಥ ಮತ್ತು ರಾಜ್ಯ ಸರ್ಕಾರದ ಅತ್ಯುನ್ನತ ಕಾರ್ಯಾಂಗ ಅಧಿಕಾರಿ. ಎಲ್ಲಾ ಸಚಿವಾಲಯದ ಇಲಾಖೆಗಳೂ ಮುಖ್ಯ ಕಾರ್ಯದರ್ಶಿಯ ಅಡಿಯಲ್ಲಿವೆ. ಆಡಳಿತ ಯಂತ್ರವನ್ನು ಮುನ್ನಡೆಸುವುದು ಮತ್ತು ನಿಯಂತ್ರಿಸುವುದು ಅವರ ಜವಾಬ್ದಾರಿಗಳಾಗಿವೆ.

 

 

‘ರಾಜ್ಯದ ಆಡಳಿತದ ಎಲ್ಲಾ ವಿಷಯಗಳಲ್ಲಿ ಮುಖ್ಯ ಕಾರ್ಯದರ್ಶಿಯು ಮುಖ್ಯಮಂತ್ರಿಯ ಪ್ರಧಾನ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಾರೆ. ಹೀಗಿರುವಾಗ ಸಂವಿಧಾನದತ್ತವಾಗಿ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರ ಆದೇಶವನ್ನು ಅತ್ಯುನ್ನತ ಕಾರ್ಯಾಂಗ ಅಧಿಕಾರಿಯೇ ಕಡೆಗಣಿಸುವಂತೆ ಸೂಚಿಸುವುದು ಸಚಿವ ಸಂಪುಟ ಸಂವಿಧಾನದ ಬಗ್ಗೆ ಹೊಂದಿರುವ ತಾತ್ಸಾರವನ್ನು ಎತ್ತಿ ತೋರಿಸುತ್ತಿದೆ,’ ಎನ್ನುತ್ತಾರೆ ಮತ್ತೊಬ್ಬ ಅಧಿಕಾರಿ.

 

 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆ ಮಾಡಲು ಆದೇಶಿಸುವ ಅಧಿಕಾರವು ರಾಜ್ಯಪಾಲರಿಗೆ ಇದೆ ಎಂದು ಉಚ್ಛ ನ್ಯಾಯಾಲವಯೇ ಘೋಷಿಸಿದೆ. ಹೀಗಿರುವಾಗ ರಾಜ್ಯಪಾಲರಿಗೇ ದಾಖಲೆ ಮತ್ತು ಮಾಹಿತಿ ಸಿಗದ ಹಾಗೆ ಮಾಡುವುದು ನಡೆದಿರಬಹುದಾದ ಅವ್ಯವಹಾರದ ಸಾಕ್ಷ್ಯ ಹೊರಬರದ ಹಾಗೆ ಸರ್ಕಾರ ಮಾಡುತ್ತಿರುವ ಹುನ್ನಾರ ಎಂದು ಮೇಲ್ನೋಟಕ್ಕೇ ಸಾಬೀತಾಗುವುದಿಲ್ಲವೇ, ಇದು ಸಾಕ್ಷ್ಯನಾಶದ ಇನ್ನೊಂದು ರೂಪವಲ್ಲವೇ ಎಂಬ ಪ್ರಶ್ನೆಗಳೂ ಸಹ ಅಧಿಕಾರಿಶಾಹಿ ವಲಯದಲ್ಲಿ ಮೂಡಿವೆ.

 

 

‘ಮನೆಯಲ್ಲಿ ತಂದೆಯ ಹತ್ತಿರ ಯಾವುದೇ ವಿಷಯ ಹಂಚಿಕೊಳ್ಳಲು ತನ್ನ ಅನುಮತಿ ಅಗತ್ಯ ಎಂದು ತಾಯಿ ಕಟ್ಟಪ್ಪಣೆ ಮಾಡಿದರೆ ಮಕ್ಕಳು ಏನು ಮಾಡಬೇಕು? ರಾಜ್ಯಪಾಲರ ಸಂವಿಧಾನದತ್ತ ಅಧಿಕಾರ ಮತ್ತು ಮುಖ್ಯಮಂತ್ರಿಗಳ ಸೂಚನೆ ಮಧ್ಯೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಇತರ ಅಧಿಕಾರಿ ವರ್ಗವನ್ನು ಸಂದಿಗ್ಧದಲ್ಲಿ ಸಿಲುಕಿಸುವ ಪೂರ್ವದಲ್ಲಿ ಸಚಿವ ಸಂಪುಟವು ತನಗೆ ಆ ಅಧಿಕಾರ ಯಾವ ಕಾನೂನಿಂತೆ ಇದೆ ಎಂದು ಅವಲೋಕಿಸಿದೆಯೇ,’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

 

 

ಸಿದ್ಥಾರ್ಥ ವಿಹಾರ್‍‌ ಟ್ರಸ್ಟ್‌ಗೆ ಸಿ ಎ ನಿವೇಶನ ಹಂಚಿಕೆ, ಅರ್ಕಾವತಿ ರಿ- ಡೂ ಪ್ರಕರಣದ ಬಗೆಗಿನ ಕೆಂಪಣ್ಣ ಆಯೋಗದ ವರದಿ ಹೀಗೆ ವಿವಿಧ ವಿಷಯಗಳ ಕುರಿತು ರಾಜ್ಯಪಾಲರು ಪತ್ರ ಬರೆದು ಮಾಹಿತಿ ಕೋರಿದ್ದರು. ಈ ಮಾಹಿತಿಗೆ ಉತ್ತರ ನೀಡಿದಲ್ಲಿ ಸಂಕಷ್ಟಕ್ಕೆ ಸಿಲುಕಬಹುದು ಎಂಬ ಸುಳಿವಿನ ಹಿನ್ನೆಲೆಯಲ್ಲಿಯೇ ರಾಜ್ಯಪಾಲರ ಯಾವುದೇ ಪತ್ರಕ್ಕೂ ಮಾಹಿತಿ ನೀಡುವ ಮುನ್ನ ಸಚಿವ ಸಂಪುಟವು ಈ ನಿರ್ಣಯ ಕೈಗೊಂಡಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts