ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರ ಅಧಿಕಾರ ಮೊಟಕು; ಕೇಂದ್ರದ ಕಾಯ್ದೆಗೇ ತಡೆಯೊಡ್ಡಿದ ಸುತ್ತೋಲೆ

ಬೆಂಗಳೂರು; ರಾಜ್ಯದ ವಿವಿಧೆಡೆ ಅವ್ಯಾಹತವಾಗಿ ನಡೆಯುತ್ತಿರುವ ಭ್ರೂಣ ಹತ್ಯೆ, ವಸತಿ ಶಾಲೆಯೂ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕೋಚಿಂಗ್‌ ಸೆಂಟರ್‍‌ಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಅಧಿಕಾರವನ್ನೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮೊಟಕುಗೊಳಿಸಿದೆ.

 

ಕೇಂದ್ರ ಕಾಯ್ದೆಯೊಂದರ ಫಲವಾಗಿ ರಚನೆಯಾಗಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕೆಲಸ ಕಾರ್ಯಗಳಿಗೆ ರಾಜ್ಯ ಸರ್ಕಾರವು ಕಡಿವಾಣ ಹಾಕಲು ಹೊರಟಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ. ರಾಜ್ಯ ಸರ್ಕಾರದ ಮಹಿಳಾ ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಹೆಸರಿನಲ್ಲಿ ಹೊರಡಿಸಿರುವ ಈ ಸುತ್ತೋಲೆಯು ಕೇಂದ್ರ ಕಾಯ್ದೆಗೆ  ತಡೆಯೊಡ್ಡಿದಂತಾಗಿದೆ.

 

ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಮಕ್ಕಳ ಹಕ್ಕುಗಳ ಆಯೋಗದ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ನೀಡಿದ್ದ ಮೌಖಿಕ ಆದೇಶವು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಆಯೋಗದ ಸದಸ್ಯರ ಅಧಿಕಾರ ಮೊಟಕುಗೊಳಿಸಲು ಹೊರಡಿಸಿರುವ ಸುತ್ತೋಲೆಯು ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಂತಾಗಿದೆ.

 

ಆಯೋಗ ಹೇಗೆ ಕೆಲಸ ಮಾಡಬೇಕು, ಏನು ಕೆಲಸ ಮಾಡಬೇಕು, ಯಾರ ಜವಾಬ್ದಾರಿ ಹಾಗೂ ಅಧಿಕಾರಗಳೇನು ಎಂಬುದಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಾಯಿದೆ ಮತ್ತು ನಿಯಮಾವಳಿಗಳಿವೆ. ಆದರೀಗ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಯಾವುದರ ಉಲ್ಲೇಖವೂ ಇಲ್ಲ.

 

ಅದೇ ರೀತಿ ಈಗ ಹೊರಡಿಸಿರುವ ಸುತ್ತೋಲೆಯಲ್ಲಿ ‘ಆಯೋಗದ ಸದಸ್ಯರು ನೀಡುತ್ತಿರುವ ಮೌಖಿಕ ಅದೇಶಗಳು ಹಲವು ಗೊಂದಲಗಳಿಗೆ ಕಾರಣವಾಗಿದೆ,’ ಎಂದು ಆರೋಪಿಸಲಾಗಿದೆ. ಈ ಆರೋಪದ ಸತ್ಯಾಸತ್ಯತೆಯನ್ನು ತಿಳಿಯಲು ಯಾವ ಸದಸ್ಯರು ಎಲ್ಲಿ ಮೌಖಿಕ ಅದೇಶ ನೀಡಿದ್ದಾರೆ, ಅದು ನಿಯಮಬಾಹಿರವೇ ಎಂಬುದನ್ನೂ ಉಲ್ಲೇಖಿಸಿಲ್ಲ.

 

ಇತ್ತೀಚಿನ ದಿನಗಳಲ್ಲಿ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭ್ರೂಣ ಹತ್ಯೆ ಪ್ರಕರಣಗಳನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಪತ್ತೆ ಹಚ್ಚಿತ್ತು. ಆಯೋಗದ ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಹೊರಗೆಡವಿದ್ದರು. ಇದರಿಂದ ಕಾಂಗ್ರೆಸ್‌ ಸರ್ಕಾರವನ್ನು ತೀವ್ರ ಮುಜುಗರದಲ್ಲಿ ಸಿಲುಕಿಸಿತ್ತು. ಅಲ್ಲದೇ ಪ್ರತಿಪಕ್ಷಗಳಿಗೆ ಅಸ್ತ್ರವನ್ನು ನೀಡಿದಂತಾಗಿತ್ತು.

 

ಇದರಿಂದಾಗಿಯೇ ಕಾಂಗ್ರೆಸ್‌ ಸರ್ಕಾರವು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿದೆ. ಅಲ್ಲದೇ ಸಂವಿಧಾನ ಬದ್ಧವಾಗಿ ಸ್ವಾಯತ್ತೆ ಸಂಸ್ಥೆಯಾಗಿರುವ ಈ ಆಯೋಗವನ್ನು ಹತ್ತಿಕ್ಕಿದೆ.

 

ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆಯು 2024ರ ಸೆ.20ರಂದು ಹೊರಡಿಸಿರುವ ಸುತ್ತೋಲೆಯೇ ಇದಕ್ಕೆ ಜ್ವಲಂತ ನಿದರ್ಶನವಾಗಿದೆ. ಈ ಸುತ್ತೋಲೆಗೆ ಆಯೋಗದ ಬಹುತೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸುವ ಹುನ್ನಾರವಿದು ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

 

ವಿಶೇಷವೆಂದರೇ 2013ರ ಏಪ್ರಿಲ್‌ 5ರಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನು ಇದೇ ಕಾಂಗ್ರೆಸ್‌ ಸರ್ಕಾರವು 2023ರ ನವಂಬರ್‍‌ 17ರಂದು ಹಿಂಪಡೆದಿತ್ತು. ಆದರೀಗ 2013ರ ಸುತ್ತೋಲೆಯನ್ನೇ ಪುನರ್‍‌ ಸ್ಥಾಪಿಸಿದೆ.

 

ಸುತ್ತೋಲೆಯಲ್ಲೇನಿದೆ?

 

ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಒಳಗೊಂಡಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಸದಸ್ಯರು ಪ್ರಗತಿ ಪರಿಶೀಲನಾ ಸಭೆಯನ್ನು ನೇರವಾಗಿ ಕರೆಯದೇ ಆಯೋಗದ ಅಧ್ಯಕ್ಷರ ಉಪಸ್ಥಿತಿಯಲ್ಲಿಯೇ ಸಭೆಯನ್ನು ಕರೆಯಲು ಸೂಚಿಸಲಾಗಿತ್ತು. ನಂತರ  2023ರ ನವೆಂಬರ್‍‌ 17ರಂದು 2013ರ ಸುತ್ತೋಲೆಯನ್ನು ಹಿಂಪಡೆಯಲಾಗಿತ್ತು.

 

ಪ್ರಸ್ತುತ ಆಯೋಗದ ಸದಸ್ಯರು ಜಿಲ್ಲಾ ಮಟ್ಟದಲ್ಲಿ ನೇರವಾಗಿ ಸಭೆ ಕರೆಯುವ ಸಂದರ್ಭದಲ್ಲಿ ಹಾಗೂ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಕಂಡು ಬಂದ ಅಂಶಗಳಿಗೆ ನ್ಯೂನತೆಗಳಿಗೆ ನೀಡುತ್ತಿರುವ ಸಲಹೆ, ಸೂಚನೆಗಳು ಹಾಗೂ ಮೌಖಿಕ ಆದೇಶಗಳು ಸಾಕಷ್ಟು ಗೊಂದಲಕ್ಕೀಡು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

 

 

ಆದ್ದರಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಉಪಸ್ಥಿತಿಯಲ್ಲಿಯೇ ಸಭೆಗಳನ್ನು ಕರೆಯಲು ಈ ಮೂಲಕ ಸೂಚಿಸಿದೆ. ಜಿಲ್ಲೆಗಳಿಗೆ ಕ್ಷೇತ್ರ ಭೇಟಿ ನೀಡುವ ಸಂದರ್ಭದಲ್ಲಿ ಕನಿಷ್ಟ ಇಬ್ಬರು ಸದಸ್ಯರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಲು ಹಾಗೂ ಅಲ್ಲಿ ಕಂಡು ಬಂದ ಅಂಶಗಳು, ನ್ಯೂನತೆಗಳನ್ನು ಸರಿಪಡಿಸಲು ವರದಿಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಿಗೆ ಸಲ್ಲಿಸಬೇಕು ಎಂದು ಸೂಚಿಸಿದೆ.

 

ನಂತರ ಆಯೋಗದ ಕಚೇರಿಯಿಂದಲೇ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಸಲಹೆ ಮತ್ತು ಶಿಫಾರಸ್ಸುಗಳನ್ನು ಕಳಿಸಲು ಕೊಡಬೇಕು ಎಂದು 2024ರ ಸೆ.20ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ರಾಜ್ಯದ ಜಿಲ್ಲಾಧಿಕಾರಿಗಳು, ಜಿಪಂನ ಸಿಇಒ ಮತ್ತು ನಮಹಿಳಾ ಮತ್ತು ಮಕ್ಕಳಾ ಅಭಿವೃದ್ದಿ ಇಲಾಖೆಯ ನಿರ್ದೇಶಕರಿಗೆ ಸೂಚಿಸಿರುವುದು ಗೊತ್ತಾಗಿದೆ.

 

ಸುತ್ತೋಲೆ ಹೊರಡಿಸುವ ಮುನ್ನ ಅಧಿಕಾರಿಗಳು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರೊಂದಿಗೆ ಚರ್ಚಿಸಿದ್ದಾರೆ ಮತ್ತು ಇದಕ್ಕೆ ಅವರು ಅನುಮೋದನೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಆಯೋಗದ ಧ್ವನಿ ಅಡಗಿಸಲಿದೆಯೇ?

 

 

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯಿದೆ 2005ರಡಿಯಲ್ಲಿ ಸ್ಥಾಪಿತವಾಗಿರುವ ಸಂವಿಧಾನ ಬದ್ಧ ಸ್ವಾಯತ್ತ ಸಂಸ್ಥೆಯಾಗಿದೆ. ಇದು ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ಮಹತ್ತರ ಜವಾಬ್ದಾರಿ ಹೊಂದಿದೆ. ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಮಕ್ಕಳ ಸಂಬಂಧಿತ ಯಾವುದೇ ಕಾನೂನಿನ ಮೂಲಕ ಮತ್ತು ಕಾನೂನಿನ ಮೇರೆಗೆ ಒದಗಿಸಲಾದ ಮಕ್ಕಳ ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸುವ ಮತ್ತು ಆ ಸಂಬಂಧ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ನೀಡುವ, ಅಧ್ಯಯನ ನಡೆಸುವ ಅಧಿಕಾರ ಹೊಂದಿದೆ.

 

 

ಜೊತೆಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ದೂರು ಸ್ವೀಕರಿಸುವ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ, ವಿಚಾರಣೆ ನಡೆಸುವ ಅಧಿಕಾರವನ್ನು ಹೊಂದಿದೆ. ಇಂತಹ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡದ ಅಧಿಕಾರಿಶಾಹಿ ವರ್ಗವು ವಿವಿಧ ರೀತಿಯಲ್ಲಿ ಹತ್ತಿಕ್ಕುತ್ತಲೇ ಬಂದಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ರಾಜ್ಯದಾದ್ಯಂತ ಸುತ್ತಿ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ಅಲ್ಲಿನ ಅವ್ಯವಸ್ಥೆಗಳನ್ನು ಪ್ರಶ್ನಿಸುತ್ತಿರುವುದು ಅಧಿಕಾರಿಗಳು ಹಾಗೂ ಪಟ್ಟಭದ್ರರ ಕಣ್ಣು ಕೆಂಪಾಗಿಸಿದೆ ಎಂದು ಗೊತ್ತಾಗಿದೆ.

 

 

ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಅನಧಿಕೃತ ಕೋಚಿಂಗ್ ಸೆಂಟರ್ ಗಳನ್ನು ಪರಿಶೀಲಿಸಿದ್ದು ಅಲ್ಲಿ ಮಕ್ಕಳ ಹಕ್ಕುಗಳ ಹರಣವಾಗುತ್ತಿರುವ ಬಗ್ಗೆ ಸದಸ್ಯರು ಪ್ರಶ್ನಿಸಿದ್ದರು. ಅಲ್ಲದೇ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದರು. ಇದು ಅಲ್ಲಿನ ಕೋಚಿಂಗ್‌ ಮಾಫಿಯಾಗಳಿಗೆ ಸಹಿಸಲಾಗುತ್ತಿಲ್ಲ ಎಂದು ತಿಳಿದು ಬಂದಿದೆ.

 

 

ಪಟ್ಟಭದ್ರರು ಆಯೋಗದ ಬಗ್ಗೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್‍‌ ಅವರಿಗೆ ದೂರು ನೀಡಿದ್ದರು. ಆದರೂ ಆಯೋಗದ ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಭ್ರೂಣಹತ್ಯೆ ಪ್ರಕರಣಗಳಿಗೆ ಕಡಿವಾಣ ಹಾಕಲು ಆಯೋಗದ ಸದಸ್ಯರು ಮುಂದಾಗಿದ್ದರು. ಈ ಸಂಬಂಧ ಖಾಸಗೀ ಆಸ್ಪತ್ರೆಗಳ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ದಿಢೀರ್‍‌ ಭೇಟಿ ನೀಡಿದ್ದರು. ಅಲ್ಲಿನ ಲೋಪದೋಷಗಳನ್ನು ಪತ್ತೆ ಹಚ್ಚಿದ್ದರು. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

 

 

ವಸತಿ ನಿಲಯಗಳು, ಶಾಲೆಗಳು, ಆಸ್ಪತ್ರೆಗಳಲ್ಲಿ ಸಾಲು ಸಾಲು ಆವ್ಯವಸ್ಥೆಗಳನ್ನು ಆಯೋಗದ ಸದಸ್ಯರು ಪ್ರಶ್ನಿಸಿದ್ದರು. ಇದರ ಪರಿಣಾಮದಿಂದಾಗಿ ಸರ್ಕಾರವು ಇದೀಗ ಸ್ವಾಯತ್ತ ಸಂಸ್ಥೆಯಾಗಿರುವ ಆಯೋಗದ ಅಧಿಕಾರವನ್ನೇ ಮೊಟಕುಗೊಳಿಸಲು ಹೊರಟಿದೆ ಎಂಬ ಆರೋಪವೂ ಕೇಳಿ ಬಂದಿದೆ.

 

 

‘ಪಟ್ಟಭದ್ರ ಶಕ್ತಿ ಮತ್ತು ಅಧಿಕಾರಶಾಹಿಗಳಿಗೆ ಮಣಿದಿರುವ ಸರ್ಕಾರವು ಆಯೋಗದ ಸದಸ್ಯರು ಏಕ ವ್ಯಕ್ತಿಯಾಗಿ ಪರಿಶೀಲನಾ ಭೇಟಿ ಮಾಡಬಾರದು, ಇಬ್ಬರು ಸದಸ್ಯರು ಭೇಟಿ ಮಾಡಬೇಕು, ವರದಿ ತಂದು ಆಯೋಗಕ್ಕೆ ನೀಡಬೇಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯಬಾರದು ಎಂಬಿತ್ಯಾದಿ ಸೂಚನೆಗಳನ್ನು ನೀಡಿ ಸುತ್ತೋಲೆ ಹೊರಡಿಸಿದ್ದಾರೆ,’ ಎನ್ನುತ್ತಾರೆ ಆಯೋಗದ ಸದಸ್ಯರೊಬ್ಬರು.

 

 

ಕೇಂದ್ರ ಕಾಯ್ದೆಯೊಂದರ ಫಲವಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಚನೆಯಾಗಿದೆ. ರಚಿತವಾದ ಸ್ವಾಯತ್ತ ಆಯೋಗದ ಕೆಲಸ ಕಾರ್ಯಗಳನ್ನು ರಾಜ್ಯ ಸರ್ಕಾರದ ಇಲಾಖೆಯೊಂದರ ಪ್ರಧಾನ ಕಾರ್ಯದರ್ಶಿ ಒಂದು ಸುತ್ತೋಲೆ ನೀಡಿ ತಡೆಯೊಡ್ಡಬಹುದೇ, ಈ ಸುತ್ತೋಲೆ ನೀಡಲು ಯಾವ ಕಾಯ್ದೆಯಲ್ಲಿ ಇವರಿಗೆ ಅವಕಾಶವಿದೆ ಅಥವಾ ಅಧಿಕಾರವಿದೆಯೇ ಎಂಬ ಪ್ರಶ್ನೆಗಳು ಕೇಳಿ ಬಂದಿದೆ.

 

 

‘ರಾಜ್ಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭಿಣಿಯರಾಗುತ್ತಿದ್ದಾರೆ. ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿವೆ. ವಸತಿ ಶಾಲೆಗಳಲ್ಲಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಯೋಗವನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಆಯೋಗ ನೀಡಿದ ಶಿಫಾರಸ್ಸುಗಳನ್ನು ಅನುಷ್ಟಾನಕ್ಕೆ ತರದೆ ಮಕ್ಕಳ ಹಕ್ಕುಗಳ ನಿರ್ಲಕ್ಷ ಮಾಡುತ್ತಿರುವ ಅಧಿಕಾರಿ ವರ್ಗವನ್ನು ಪ್ರಶ್ನಿವವರು ಯಾರು,’ ಎನ್ನುತ್ತಾರೆ ಆಯೋಗದ ಸದಸ್ಯರೊಬ್ಬರು.

SUPPORT THE FILE

Latest News

Related Posts