ಒಳ ಮೀಸಲಾತಿ; ಪ್ರಸ್ತುತವಾಗದ ಸದಾಶಿವ ಆಯೋಗದ ವರದಿ, ಚರ್ಚೆಗೆ ಗ್ರಾಸವಾದ 2 ವರ್ಷದ ಹಿಂದಿನ ಆದೇಶ

ಬೆಂಗಳೂರು; ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಅವರ ನೇತೃತ್ವದ ಆಯೋಗದ ಶಿಫಾರಸ್ಸು ಪ್ರಸ್ತುತವಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವೇ  ಆದೇಶ ಹೊರಡಿಸಿತ್ತು.

 

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ವರದಿಯನ್ನು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸದಾಶಿವ ಆಯೋಗದ ವರದಿ ಶಿಫಾರಸ್ಸುಗಳು ಪ್ರಸ್ತುತವಾಗಿಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವು  ಹೊರಡಿಸಿದ್ದ ಆದೇಶವು ಮುನ್ನೆಲೆಗೆ ಬಂದಿದೆ.

 

ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಬಗ್ಗೆ ಭಾರತ ಸಂವಿಧಾನಕ್ಕೆ ಅನುಚ್ಛೇಧ 341ರಲ್ಲಿ ತಿದ್ದುಪಡಿ ಮೂಲಕ Clasue (3)ನ್ನು ಸೇರಿಸಲು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಂಬಂಧ ತೆರೆದಿರುವ ಕಡತದಲ್ಲಿ ಈ ಆದೇಶದ ಅಂಶವನ್ನು ಉಲ್ಲೇಖಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯು ತೆರೆದಿದ್ದ ಕಡತದ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸದಾಶಿವ ಆಯೋಗದ ವರದಿಯನ್ನು ವಿಧಾನಮಂಡಲಕ್ಕೆ ಮಂಡಿಸುವ ವಿಚಾರದಲ್ಲಿ ರಾಜಕೀಯ ಪಕ್ಷಗಳು ಆರೋಪ, ಪ್ರತ್ಯಾರೋಪಗಳಲ್ಲಿ ಮುಳುಗಿದ್ದವು. ಈಚೆಗಷ್ಟೇ ದಲಿತ ಸಂಘಟನೆಗಳ ಮುಖಂಡರು ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸುಳಿವು ಪಡೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತ ಸಮುದಾಯವನ್ನು ಪ್ರತಿನಿಧಿಸುವ ಸಚಿವರೊಂದಿಗೆ ಮಾತುಕತೆ ನಡೆಸಿದ್ದರು.

 

ಈ ಬೆಳವಣಿಗೆಗಳ ನಡುವೆಯೇ ಸದಾಶಿವ ಆಯೋಗದ ವರದಿಯು ಹೆಚ್ಚು ಪ್ರಸ್ತುತವಾಗಿಲ್ಲ ಎಂಬ ಅಂಶವುಳ್ಳ ಎರಡು ವರ್ಷದ ಹಿಂದಿನ ಸರ್ಕಾರಿ ಆದೇಶವು ಚರ್ಚೆಯನ್ನು ವಿಸ್ತರಿಸಿದಂತಾಗಿದೆ.

 

ಹಿಂದಿನ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರು ಎಜೆ ಸದಾಶಿವ ಆಯೋಗದ ವರದಿಯನ್ನು ಸಹ ಸರ್ಕಾರ ಒಪ್ಪಿಕೊಂಡಿದೆ ಎಂದು ಘೋಷಿಸಿದ್ದರು. ಇದು ಗೊಂದಲಕ್ಕೆ ಕಾರಣವಾಗಿತ್ತಲ್ಲದೇ ಲಂಬಾಣಿಗರು ರಾಜ್ಯಾದ್ಯಂತ ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿತ್ತು. ಅಲ್ಲದೇ ಇದೇ ವಿಚಾರದಿಂದ ಅಸಮಾಧಾನಗೊಂಡಿದ್ದ ಧಾರ್ಮಿಕ ಮುಖಂಡರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು.

 

2022ನೇ ಸಾಲಿನಲ್ಲಿ ಸರ್ಕಾರವು The Karnataka Scheduled castes and scheduled tribes (Reservation of Seats in educational Institutitions and of Appointmoents or posts in the servvices under the state) ಕಾಯ್ದೆ 2022ರಂತೆ ಪರಿಶಿಷ್ಟ ಜಾತಿಗೆ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹೆಚ್ಚಿಸಲಾಗಿತ್ತು.

 

ಉಪ ಸಮಿತಿಯು 2011ರ ಜನಗಣತಿಯಂತೆ ಪರಿಶಿಷ್ಟ ಜಾತಿಗಳ ಜಾತಿವಾರು ಜನಸಂಖ್ಯೆಯನ್ನು ಪರಿಗಣಿಸಿ ಒಟ್ಟು 101 ಜಾತಿಗಳನ್ನು 4 ಗುಂಪುಗಳನ್ನಾಗಿ ವಗೀರ್ಕರಿಸಿ ಒಳ ಮೀಸಲಾತಿಗೆ ಬಗ್ಗೆ ಸಚಿವ ಸಂಪುಟಕ್ಕೆ ಉಪ ಸಮಿತಿಯು ಶಿಫಾರಸ್ಸು ಮಾಡಿತ್ತು. ಈ ಉಪಸಮಿತಿಯ ಶಿಫಾರಸ್ಸುಗಳಂತೆ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ 2023ರ ಮಾರ್ಚ್‌ 24ರಂದು ಮಂಡಿಸಿತ್ತು.

 

‘ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಸ್ಥಿತಿಗತಿಯನ್ನು ಖಚಿತಪಡಿಸಿಕೊಳ್ಳಲು ಜೆ ಸದಾಶಿವ ತನಿಖಾ ಆಯೋಗವನ್ನು ರಚಿಸಲಾಗಿದೆ. ಆದರೆ ಜೆ ಸದಾಶಿವ ಆಯೋಗವು ವ್ಯವಹರಿಸಿದ ಸಮಸ್ಯೆಗಳನ್ನು ಒಳಗೊಂಡಿರುವ ಕಂಡಿಕೆ 1 ರ ಪ್ರಕಾರ ಸಂಪುಟ ಉಪ ಸಮಿತಿಯು ಶಿಫಾರಸು ಮಾಡಿದೆ. ಮತ್ತು ಸಂಪುಟ ಉಪ ಸಮಿತಿ ಶಿಫಾರಸುಗಳನ್ನು ಸಂಪುಟ ಅನುಮೋದಿಸಿದೆ . ಆದ್ದರಿಂದ ಜೆ ಸದಾಶಿವ ಆಯೋಗದ ಶಿಫಾರಸುಗಳು ಹೆಚ್ಚು ಪ್ರಸ್ತುತವಲ್ಲ, ಆದ್ದರಿಂದ ಜೆ ಸದಾಶಿವ ಆಯೋಗದ ವರದಿಯನ್ನು ಮುಕ್ತಾಯಗೊಳಿಸಲಾಗಿದೆ, ‘ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಈ ಕುರಿತು ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಡಾ  ಹೆಚ್‌ ಸಿ ಮಹದೇವಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಸಚಿವ ಸಂಪುಟದ ಅನುಮೋದನೆಯಂತೆ ಸರ್ಕಾರವು 2023ರ ಮಾರ್ಚ್‌ 27ರಂದೇ ಆದೇಶ (SWD/02/SAD/2014 (PART) ಹೊರಡಿಸಿದೆ. ಮತ್ತು ಈ ಆದೇಶದಲ್ಲಿ the recommendations of a j sadahisva commission is no more relevant, therefore hereby the a j sadashiva commission report is closed ಎಂದು ಆದೇಶಿಸಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ಪ್ರಸ್ತಾಪಿಸಿರುವುದು ತಿಳಿದು ಬಂದಿದೆ.

 

 

ಬಂಜಾರ, ಲಂಬಾಣಿ, ಬೋವಿ, ಕೊರಮ ಮತ್ತು ಕೊರಚ ಜಾತಿಗಳನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡಲು ಕೋರಿತ್ತು. ಅದರಂತೆ ರಾಜ್ಯ ಸರ್ಕಾರವು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಈ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿಯೇ ಉಳಿಸಿಕೊಳ್ಳಲು ಹಾಗೂ ಮುಂದುವರೆಸಲು ಪತ್ರ ಮುಖೇನ 2023ರ ಫೆ.16ರಂದೇ ತಿಳಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಸಚಿವ ಸಂಪುಟ ನಿರ್ಣಯದಂತೆ ವರ್ಗೀಕರಣದಬಗ್ಗೆ ಭಾರತ ಈ ಹಿಂದೆ ಸರ್ವೋಚ್ಛ ನ್ಯಾಯಾಲಯವು ಇ ವಿ ಚಿನ್ನಯ್ಯ/ ಆಂಧ್ರಪ್ರದೇಶ ಸರ್ಕಾರ ಮತ್ತು ಇತರರ ಪ್ರಕರಣದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಉಪ ವರ್ಗೀಕರಣದ ಬಗ್ಗೆ ಆಂಧ್ರ ಪ್ರದೇಶ ಸರ್ಕಾರದ ಅಧಿನಿಯಮ 2000ನ್ನು ಸಂವಿಧಾನಿಕವಾಗಿ ಅಸಿಂಧು ಎಂದು 2004ರ ನವೆಂಬರ್‌ 5ರಂದೇ ಆದೇಶಿಸಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

ಅದೇ ರೀತಿ ಪಂಜಾಬ್‌ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿ ಉಪ ವರ್ಗೀಕರಣದ ಬಗ್ಗೆ ಅಧಿನಿಯಮ ಮಾಡಿದೆ. ಈ ಅಧಿನಿಯಮವನ್ನು ಪಂಜಾಬ್‌ ಮತ್ತು ಹರಿಯಾಣ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಇ ವಿ ಚಿನ್ನಯ್ಯ ಪ್ರಕರಣದ ಹಿನ್ನೆಲೆಯಲ್ಲಿ ಈ ಅಧಿನಿಯಮವನ್ನು ಹರಿಯಾಣ ಮತ್ತು ಪಂಜಾಬ್‌ ಉಚ್ಛ ನ್ಯಾಯಾಲಯವು ರದ್ದುಗೊಳಿಸಿ ಆದೇಶಿಸಿದೆ.

 

ಇದರ ವಿರುದ್ಧ ಪಂಜಾಬ್‌ ಸರ್ಕಾರವು ಸರ್ವೋಚ್ಛ ನ್ಯಾಯಾಲಯದಲ್ಲಿ (ಸಿವಿಲ್‌ ಅಪೀಲ್‌ ನಂ 2317/2011) ಪ್ರಶ್ನಿಸಿತ್ತು. ಈ ಪ್ರಕರಣದಲ್ಲಿ 2020ರ ಆಗಸ್ಟ್‌ 27ರಂದು ತೀರ್ಪು ನೀಡಿತ್ತು.

 

ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲೇನಿದೆ?

 

ಎಸ್​ಸಿ, ಎಸ್​ಟಿಗಳ ಯಾವುದೇ ಉಪ ವರ್ಗೀಕರಣವು ಸಂವಿಧಾನದ 14ನೇ ವಿಧಿಯನ್ನು (ಸಮಾನತೆಯ ಹಕ್ಕು) ಉಲ್ಲಂಘಿಸುತ್ತದೆ ಎಂಬ ಇ.ವಿ. ಚಿನ್ನಯ್ಯ ಪ್ರಕರಣದ 2004ರ ತೀರ್ಪನ್ನು ತಳ್ಳಿಹಾಕಿದೆ. ಉಪ ವರ್ಗೀಕರಣವು ಆರ್ಟಿಕಲ್ 14ಅನ್ನು ಉಲ್ಲಂಘಿಸುವುದಿಲ್ಲ. ಏಕೆಂದರೆ ಉಪವರ್ಗಗಳನ್ನು ಪಟ್ಟಿಯಿಂದ ಹೊರಗಿಡಲಾಗಿಲ್ಲ. ಮೀಸಲಾತಿ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿಯ ಉಪ-ವರ್ಗೀಕರಣವನ್ನು ಅನುಮತಿಸಲಾಗಿದೆ.

 

ಸಂವಿಧಾನದ 14ನೇ ವಿಧಿಯು ಒಂದು ವರ್ಗದ ಉಪ-ವರ್ಗೀಕರಣವನ್ನು ಅನುಮತಿಸುತ್ತದೆ. ನ್ಯಾಯಾಲಯವು ಉಪ-ವರ್ಗೀಕರಣದ ಸಿಂಧುತ್ವವನ್ನು ಪರೀಕ್ಷಿಸುವಾಗ, ವರ್ಗವು ಏಕರೂಪವಾಗಿದೆಯೇ ಮತ್ತು ಉಪ ವರ್ಗೀಕರಣದ ಉದ್ದೇಶವನ್ನು ಪೂರೈಸಲು ಒಂದು ಸಮಗ್ರ ವರ್ಗವಾಗಿದೆಯೇ ಎಂಬುದನ್ನು ನಿರ್ಧರಿಸಬೇಕು. ಉದ್ದೇಶಕ್ಕಾಗಿ ಏಕೀಕರಿಸದ ವರ್ಗವನ್ನು ದ್ವಿಮುಖ ಅರ್ಥಗರ್ಭಿತ ವ್ಯತ್ಯಾಸದ ಮಾನದಂಡವನ್ನು ಪೂರೈಸಿದ ನಂತರ ಮತ್ತಷ್ಟು ವರ್ಗೀಕರಿಸಬಹುದು ಎಂದು ತೀರ್ಪು ನೀಡಿತ್ತು.

 

ಈ ತೀರ್ಪಿನಲ್ಲಿ ವಿವರಿಸಿರುವಂತೆ ವರ್ಗೀಕರಣ ವಿಷಯ ಸದ್ಯಕ್ಕೆ ಸಬ್‌ ಜುಡೀಸ್‌ ಆಗಲಿದೆ ಎಂದು ಭಾರತ ಸರ್ಕಾರವು 2023ರ ಜೂನ್‌ 8ರಂದೇ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು ಎಂಬ ಸಂಗತಿಯನ್ನು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿದೆ.

 

ಒಳಮೀಸಲಾತಿಯನ್ನು ಕಲ್ಪಿಸಬೇಕು ಎಂಬ ಕಾರಣಕ್ಕೆ 2005ರಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನ್ಯಾ. ಎ.ಜೆ. ಸದಾಶಿವ ಆಯೋಗವನ್ನು ರಚಿಸಿತ್ತು. ವಿವಿಧ ಕಾರಣಕ್ಕೆ ಆಯೋಗವು ವರದಿ ನೀಡಲು ವಿಳಂಬವಾಗಿತ್ತು. ಕೊನೆಗೆ 2012ರಲ್ಲಿ ಡಿ.ವಿ. ಸದಾನಂದ ಗೌಡ ಸಿಎಂ ಆಗಿದ್ದ ಅವಧಿಯಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿತ್ತು.

 

ವರದಿಯಲ್ಲಿ ಎಡಗೈ ಸಮುದಾಯಕ್ಕೆ ಶೇ 6, ಬಲಗೈ ಸಮುದಾಯಕ್ಕೆ ಶೇ 5, ಸ್ಪೃಶ್ಯ ಸಮುದಾಯಗಳಿಗೆ ಶೇ 3 ಹಾಗೂ ಇತರ ಸಮುದಾಯಗಳಿಗೆ ಶೇ 1 ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು.

the fil favicon

SUPPORT THE FILE

Latest News

Related Posts