ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಹಣಕಾಸಿನ ನಷ್ಟವನ್ನು ಹೆಚ್ಚಿಸುತ್ತಿದೆ ಎಂಬುದಕ್ಕೆ ಮತ್ತೊಂದು ಬಲವಾದ ಪುರಾವೆಯೊಂದು ಮುನ್ನೆಲೆಗೆ ಬಂದಿದೆ.
ತೆರಿಗೆ ವಿಧಿಸುವಿಕೆ, ಹಣಕಾಸು, ಅಪೀಲು ಸ್ಥಾಯಿ ಸಮಿತಿ ಸಭೆಗಳಲ್ಲಿ ಭಾಗವಹಿಸಿದ್ದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರೇ ಶಕ್ತಿ ಯೋಜನೆಯಿಂದ ಬಿಎಂಟಿಸಿಗೆ ಹಣಕಾಸಿನ ನಷ್ಟವುಂಟಾಗುತ್ತಿದೆ ಎಂದು ಹೇಳಿದ್ದಾರೆ. 2024ರ ಜೂನ್ 13ರಂದು ನಡೆದಿದ್ದ ಸಭೆಯ ನಡವಳಿಗಳಲ್ಲಿ ಈ ಅಂಶವೂ ದಾಖಲಾಗಿದೆ. ಈ ಸಂಬಂಧ ‘ದಿ ಫೈಲ್’ಗೆ ಸಭೆಯ ನಡವಳಿಗಳೂ ಸೇರಿದಂತೆ ಮತ್ತಿತರ ದಾಖಲೆಗಳೂ ಲಭ್ಯವಾಗಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಉಚಿತ ಪ್ರಯಾಣದ ಶಕ್ತಿ ಯೋಜನೆಯು ರಾಜ್ಯದಲ್ಲಿ 5,481 ಕೋಟಿ ರೂ. ಆದಾಯ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಆದಿಯಾಗಿ ಇಡೀ ಸರ್ಕಾರವೇ ಬೆನ್ನು ತಟ್ಟಿಕೊಂಡಿತ್ತು.
ಅಲ್ಲದೇ ಯಾವುದೇ ಕಾರಣಕ್ಕೂ ಶಕ್ತಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದೂ ಹೇಳಿಕೆ ನೀಡಿದ್ದರು. ಆದರೀಗ ಶಕ್ತಿ ಯೋಜನೆಯಿಂದ ಬಿಎಂಟಿಸಿಗೆ ಹಣಕಾಸಿನ ನಷ್ಟವುಂಟಾಗುತ್ತಿದೆ ಎಂದು ಖುದ್ದು ವ್ಯವಸ್ಥಾಪಕ ನಿರ್ದೇಶಕರು ಹೇಳಿರುವುದು ಶಕ್ತಿ ಯೋಜನೆಯ ಮತ್ತೊಂದು ಮುಖವನ್ನು ತೆರೆದಿಟ್ಟಂತಾಗಿದೆ.
‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರಿನ ಸುತ್ತಲೂ ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ಪ್ರಸ್ತುತ ತುಂಬಾ ನಷ್ಟದಲ್ಲಿದೆ. ಮುಂದುವರೆದಂತೆ ಕರ್ನಾಟಕ ಸರ್ಕಾರವು ಕರ್ನಾಟಕ ಮಹಿಳೆಯರಿಗೆ ಸ್ತ್ರೀ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಸಂಚಾರವನ್ನು ಕಲ್ಪಿಸಲಾಗಿದೆ. ಇದರಿಂದ ಹೆಚ್ಚಿನ ನಷ್ಟವುಂಟಾಗುತ್ತಿರುತ್ತದೆ,’ ಎಂದು 2024ರ ಜೂನ್ 13ರಂದು ನಡೆದಿದ್ದ ಸಭೆಯಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಹೇಳಿರುವುದು ನಡವಳಿಯಿಂದ ಗೊತ್ತಾಗಿದೆ.
2023ರ ಜೂನ್ 11ರಿಂದ 2024ರ ಸೆ.20ರವರೆಗೆ ಒಟ್ಟು 293,83,21,785 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಇದೇ ಅವಧಿಯಲ್ಲಿ ಒಟ್ಟು 7088,72,87,806 ರು ಟಿಕೆಟ್ ಮೌಲ್ಯ ಎಂದು ಸಾರಿಗೆ ಇಲಾಖೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಅನುಷ್ಠಾನಗೊಳಿಸಿದಲ್ಲಿ ನಗದು ಹರಿವಿನಲ್ಲಿ ಕೋಟ್ಯಂತರ ರುಪಾಯಿ ಕೊರತೆ, ಸಾರಿಗೆ ನಿಗಮಗಳಿಗೆ ಚಾಲ್ತಿಯಲ್ಲಿರುವ ಆದಾಯ ಖೋತಾದಂತಹ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನ ಪಾವತಿಗೂ ಅಡಚಣೆಯಾಗಲಿದೆ ಎಂದು ‘ದಿ ಫೈಲ್’ ಆರಂಭದಲ್ಲೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಉಚಿತ ಪ್ರಯಾಣದ ‘ಶಕ್ತಿ’; ಆದಾಯ ಖೋತಾ, ಸಿಬ್ಬಂದಿ ವೇತನಕ್ಕೆ ಅಡಚಣೆ, ಪ್ರಯಾಣ ದರ ಪರಿಷ್ಕರಣೆ?
ಅದೇ ರೀತಿ ಡೀಸೆಲ್ ದರ, ಸಿಬ್ಬಂದಿಗೆ ಪಾವತಿಸುವ ತುಟ್ಟಿಭತ್ಯೆ ಹೆಚ್ಚಳ, ವೇತನ ಪರಿಷ್ಕರಣೆಯಿಂದಾಗಿ ವೆಚ್ಚದಲ್ಲಿ ತೀವ್ರ ಏರಿಕೆಯಾಗುವುದಲ್ಲದೇ ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವ ಅನಿವಾರ್ಯತೆಗೂ ಸರ್ಕಾರವು ಸಿಲುಕಲಿದೆ ಎಂದೂ ಹೇಳಿತ್ತು.
ಇದಕ್ಕಾಗಿ 4,028 ಹೊಸ ವಾಹನಗಳು ಮತ್ತು 13,793 ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಬೇಕಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದಲ್ಲಿ ಸಾರಿಗೆ ಸೇವಾ ವರ್ಗವಾರು, ನಿಗಮವಾರು ಉಂಟಾಗುವ ಆರ್ಥಿಕ ವೆಚ್ಚವನ್ನು ಪ್ರಸ್ತಕ ಆದಾಯದ ಶೇ.50ರಂತೆ ಅಂದಾಜಿಸಿರುವ (ಏಪ್ರಿಲ್ 2023ರಲ್ಲಿದ್ದಂತೆ) ನಿಗಮವು ವಾರ್ಷಿಕವಾಗಿ ಒಟ್ಟಾರೆ 4,220.88 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ ಎಂದು ಎಂದು ಸಾರಿಗೆ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿತ್ತು.
ವಿಧಾನಸಭೆ ಚುನಾವಣೆ ವೇಳೆಯಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆಯ ಭಾಗವಾಗಿ ಗ್ಯಾರಂಟಿ ಕಾರ್ಡ್ ವಿತರಿಸಿದ್ದ ಕಾಂಗ್ರೆಸ್ ಇದೀಗ ಸಾರಿಗೆ ನಿಗಮಗಳು ಈಗಾಗಲೇ ಅನುಭವಿಸುತ್ತಿರುವ ನಷ್ಟ ಮತ್ತು ಉಚಿತ ಪ್ರಯಾಣದ ಶಕ್ತಿ ಯೋಜನೆ ಅನುಷ್ಠಾನದಿಂದ ಹೊಸ ಬಸ್‌ಗಳ ಖರೀದಿ, ಸಿಬ್ಬಂದಿ ನೇಮಕಾತಿ, ವೇತನ, ಇನ್ನಿತರೆ ಸೌಲಭ್ಯಗಳಿಗೂ ಹಣ ಹೊಂದಿಸಲು ಈಗಲೂ ಏದುಸಿರು ಬಿಡುತ್ತಿದೆ.
ಕೆಎಸ್‌ಆರ್‍ಟಿಸಿಗೆ ವಾರ್ಷಿಕವಾಗಿ 1,608.24 ಕೋಟಿ ರು., ಬಿಎಂಟಿಸಿಗೆ 770.16 ಕೋಟಿ ರು., ವಾಯುವ್ಯ ಕರ್ನಾಟಕಕ್ಕೆ 954.12 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 888.36 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 1,823, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1,445, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 760 ಸೇರಿದಂತೆ ಒಟ್ಟು 4,028 ಹೊಸ ವಾಹನಗಳನ್ನು ಖರೀದಿಸಬೇಕು. ಅದೇ ರೀತಿ ಕರ್ನಾಟಕ ಸಾರಿಗೆ ನಿಗಮಕ್ಕೆ 5,178, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 2,415, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2,425, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 3,775 ಸೇರಿ ಒಟ್ಟಾರೆ 13,793 ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಮುಂದೆ ಕೈಯೊಡ್ಡಿದೆ.
ಅದೇ ರೀತಿ ವಾಹನಗಳ ಕಾರ್ಯಾಚರಣೆಗೆ ಅಗತ್ಯವಿರುವ ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ಮತ್ತು ಮುಂಬರುವ ದಿನಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿತರಿಸಲಿರುವ ಸ್ಮಾರ್ಟ್ ಕಾರ್ಡ್‌ಗಳಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಒದಗಿಸಬೇಕು ಎಂದು ನಿಗಮಗಳು ಪ್ರಸ್ತಾವನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಶಕ್ತಿ ಯೋಜನೆ ಅಳವಡಿಸಿದ್ದಲ್ಲಿ ಸಾಮಾನ್ಯ, ನಗರ, ವೇಗದೂತ ಸೇವೆಗಳಲ್ಲಿ ಮತ್ತು ವಿವಿಧ ರಿಯಾಯಿತಿ ಪಾಸುಗಳ ಬಾಬ್ತು ನಿಗಮಗಳಿಗೆ ಸಂದಾಯವಾಗುವ ಆದಾಯಗಳಲ್ಲಿ 351.74 ಕೋಟಿ ರು. ಕಡಿಮೆಯಾಗಲಿದೆ. ನಿಗಮಗಳು ಪ್ರತಿ ಮಾಹೆ ಒಂದನೇ ದಿನಾಂಕದಂದು ಸಿಬ್ಬಂದಿಗಳಿಗೆ ವೇತನ ಪಾವತಿ ಮಾಡುತ್ತಿದೆ. ಶಕ್ತಿ ಯೋಜನೆ ಅನುಷ್ಠಾನವಾದಲ್ಲಿ ನಗದು ಹರಿವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರತೆಯುಂಟಾಗಿ ವೇತನ ಪಾವತಿಗೆ ಅಡಚಣೆಯುಂಟಾಗಿದೆ.
ಕರ್ನಾಟಕ ಸಾರಿಗೆ ನಿಗಮ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಸದ್ಯ 1,079.82 ಕೋಟಿ ರು. ಪಾವತಿಯಾಗುತ್ತಿದೆ. ಶಕ್ತಿ ಯೋಜನೆ ಅನುಷ್ಠಾನದಿಂದಾಗಿ ಈ ಮೊತ್ತದಲ್ಲಿ 702.88 ಕೋಟಿ ರು. ಕೊರತೆಯಾಗಲಿದೆ.
ಕೆಎಸ್‌ಆರ್‍ಟಿಸಿಯಲ್ಲಿ ಪಾವತಿಯಾಗುತ್ತಿರುವ 386.77 ಕೋಟಿ ರು.ನಲ್ಲಿ 221.79 ಕೋಟಿ ರು. ಕೊರತೆಯಾಗಲಿದೆ. ಬಿಎಂಟಿಸಿಯಲ್ಲಿ 287.81 ಕೋಟಿ ರು.ನಲ್ಲಿ 206.31 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ನಿಗಮದಲ್ಲಿ 213.04 ಕೋಟಿ ರು.ನಲ್ಲಿ 146.55 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 192.2 ಕೋಟಿ ರು.ನಲ್ಲಿ 128.23 ಕೋಟಿ ರು ಸೇರಿ ಒಟ್ಟಾರೆ 702.88 ಕೋಟಿ ರು. ಕೊರತೆಯಾಗಲಿದೆ ಎಂದು ಪ್ರಸ್ತಾವನೆಯಲ್ಲೇ ವಿವರಿಸಿತ್ತು.
ಮಾಸಿಕ- ವಾರ್ಷಿಕ ವೆಚ್ಚವೆಷ್ಟು?
ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದಲ್ಲಿ ಸಾರಿಗೆ ವರ್ಗವಾರು, ನಿಗಮವಾರು ಉಂಟಾಗುವ ಆರ್ಥಿಕ ವೆಚ್ಚವನ್ನು ಪ್ರಸಕ್ತ ಆದಾಯದ ಶೇ. 50ರಂತೆ ಅಂದಾಜಿಸಿದೆ. ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳಲ್ಲಿ ನಗರ ಸೇವಾ ವರ್ಗದಲ್ಲಿ 4.83 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ ಎಂದು ಹೇಳಿತ್ತು. ಆದರೀಗ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೂ ಹೆಚ್ಚಿದೆ. ಹೀಗಾಗಿ ಆರ್ಥಿಕ ವೆಚ್ಚವೂ ಏರಿಕೆ ಆಗಿದೆ ಎಂದು ಗೊತ್ತಾಗಿದೆ.
ಬಿಎಂಟಿಸಿಯಲ್ಲಿ 55.50 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮದಲ್ಲಿ 5.77 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 0.93 ಕೋಟಿ ರು. ಸೇರಿ ಮಾಸಿಕ ಒಟ್ಟಾರೆ 67.03 ಕೋಟಿ ರು. ವೆಚ್ಚವಾಗಲಿದೆ. ಸಾಮಾನ್ಯ ವರ್ಗದಲ್ಲಿ ಕೆಎಸ್‌ಆರ್‍ಟಿಸಿಗೆ 31.45 ಕೋಟಿ, ಬಿಎಂಟಿಸಿಗೆ 0.00, ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ 22.69 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗ ನಿಗಮದಲ್ಲಿ 17.17 ಕೋಟಿ ರು., ಸೇರಿ ಒಟ್ಟು 71.31 ಕೋಟಿ ರು. ವೆಚ್ಚವಾಗಲಿದೆ.
ರಿಯಾಯಿತಿ ಪಾಸ್‌ಗಳ ವರ್ಗದಲ್ಲಿ ಕೆಎಸ್‌ಆರ್‍ಟಿಸಿಗೆ 19.35 ಕೋಟಿ ರು., ಬಿಎಂಟಿಸಿಯಲ್ಲಿ 8.68 ಕೋಟಿ, ವಾಯುವ್ಯ ಕರ್ನಾಟಕದಲ್ಲಿ 15.32 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 10.94 ಕೋಟಿ ರು. ಸೇರಿ ಒಟ್ಟು 54.29 ಕೋಟಿ ರು. ಆಗಲಿದೆ. ಈ ಮೂರೂ ವರ್ಗಗಳಲ್ಲಿ ಕೆಎಸ್‌ಆರ್‍ಟಿಸಿಗೆ ಮಾಸಿಕ 55.63 ಕೋಟಿ ರು., ಬಿಎಂಟಿಸಿಗೆ 64.18 ಕೋಟಿ, ವಾಯುವ್ಯ ಕರ್ನಾಟಕಕ್ಕೆ 43.78 ಕೋಟಿ, ಕಲ್ಯಾಣ ಕರ್ನಾಟಕಕ್ಕೆ 29.04 ಕೋಟಿ ಸೇರಿ ಒಟ್ಟಾರೆ 192.63 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು.
ಇದೇ ವಾರ್ಷಿಕವಾಗಿ ಈ ಮೂರು ವರ್ಗಗಳಿಗೆ ಲೆಕ್ಕ ಹಾಕಿದರೆ ಕೆಎಸ್‌ಆರ್‍ಟಿಸಿಗೆ 667.56 ಕೋಟಿ ರು., ಬಿಎಂಟಿಸಿಗೆ 770.16 ಕೋಟಿ ರು., ವಾಯುವ್ಯ ಕರ್ನಾಟಕಕ್ಕೆ 525.36 ಕೋಟಿ ರು., ಕಲ್ಯಾಣ ಕರ್ನಾಟಕಕ್ಕೆ 348.48 ಕೋಟಿ ರು. ಸೇರಿ ಒಟ್ಟಾರೆ ವಾರ್ಷಿಕವಾಗಿ 2,311.56 ಕೋಟಿ ರು. ವೆಚ್ಚವಾಗಲಿದೆ ಎಂದು ಹೇಳಿತ್ತು.