ಬೋಧಕರ ನೇಮಕಾತಿಯಲ್ಲಿ ಅಕ್ರಮ!; ಅಂಕಪಟ್ಟಿ, ಜಾತಿ ಸಿಂಧುತ್ವ ಪ್ರಮಾಣ ಪತ್ರಗಳ ನೈಜತೆ ಪರಿಶೀಲಿಸದ ಸಮಿತಿ

ಬೆಂಗಳೂರು; ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬೋಧಕ, ಬೋಧಕೇತರ ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳ ಜಾತಿ ಸಿಂಧುತ್ವ, ಶೈಕ್ಷಣಿಕ ಅಂಕಪಟ್ಟಿಗಳ ನೈಜತೆಯನ್ನೇ ಪರಿಶೀಲಿಸಿಲ್ಲ.

 

ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿನ ಹಲವು ಲೋಪಗಳ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನ ತನಿಖಾ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅಂಕಪಟ್ಟಿಗಳ ನೈಜತೆಯನ್ನು ಪರಿಶೀಲಿಸದಿರುವುದೂ ಸೇರಿದಂತೆ ಹಲವು ಲೋಪಗಳನ್ನು ಈ ತನಿಖಾ ಸಮಿತಿಯು ಪತ್ತೆ ಹಚ್ಚಿದೆ.

 

ತನಿಖಾ ಸಮಿತಿಯು ನೀಡಿರುವ ತನಿಖಾ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಬಹುತೇಕ ವೈದ್ಯಕೀಯ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಪೊಲೀಸ್‌ ಪೂರ್ವಾಪರ ವರದಿ ಮತ್ತು ಶೈಕ್ಷಣಿಕ ಅಂಕಪಟ್ಟಿಗಳ ನೈಜತೆ ವರದಿಯನ್ನೇ ಪಡೆದಿಲ್ಲ. ಹಾಗೆಯೇ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ ದಿನಾಂಕದಂದೇ ನೇಮಕಾತಿ ಆದೇಶ ನೀಡಿರುವುದನ್ನು ತನಿಖಾ ಸಮಿತಿಯು ಹೊರಗೆಡವಿದೆ.

 

10 ವೈದ್ಯಕೀಯಕಾಲೇಜುಗಳ ನೇಮಕಾತಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಎಲ್ಲಾ ದಾಖಲೆಗಳನ್ನು ತನಿಖಾ ಸಮಿತಿಯು ಪರಿಶೀಲಿಸಿದೆ. ಎಲ್ಲಾ ಕಾಲೇಜುಗಳನ್ನೊಳಗೊಂಡಂತೆ 419 ಹುದ್ದೆಗಳಿಗೆ ನೇರ ನೇಮಕಾತಿಗೆ ಸಂದರ್ಶನ ನಡೆಸಿತ್ತು. ಈ ಪೈಕಿ 296 ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆಯ್ಕೆಯಾದ ಈ ಅಭ್ಯರ್ಥಿಗಳಿಗೆ 2023ರ ಏಪ್ರಿಲ್‌ 30ರ ನಂತರ ಹಂತ ಹಂತವಾಗಿ ನೇಮಕಾತಿ ಆದೇಶ ನೀಡಿರುವುದು ತನಿಖಾ ವರದಿಯಿಂದ ಗೊತ್ತಾಗಿದೆ.

 

ಇನ್ನುಳಿದ 05 ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ 02 ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ಸರ್ಕಾರದ ಅನುಮೋದನೆ ಸಲ್ಲಿಸಿತ್ತು. ಆದರೆ ಈ ಹುದ್ದೆಗಳಿಗೆ ಸರ್ಕಾರದ ಅನುಮೋದನೆ ದೊರೆಯದ ಕಾರಣ ನೇಮಕಾತಿ ಆದೇಶ ಹೊರಡಿಸಿಲ್ಲ. ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯ್ಕೆಯಾದ ಒಬ್ಬ ಅಭ್ಯರ್ಥಿಯು ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿರುವುದು ತಿಳಿದು ಬಂದಿದೆ.

 

ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಒಬ್ಬ ಅಭ್ಯರ್ಥಿಯು ಗ್ರಾಮೀಣ ಮೀಸಲಾತಿ ಪ್ಮರಾಣ ಪತ್ರವನ್ನು ಸಲ್ಲಿಸಿಲು ಸಾಧ್ಯವಾಗಿಲ್ಲ ಎಂದು ತಿಳಿಸಿತ್ತು. ಹೀಗಾಗಿ ನೇಮಕಾತಿ ಆದೇಶ ಹೊರಡಿಸಿಲ್ಲ. ಉಳಿದಂತೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಒಬ್ಬ ಅಭ್ಯರ್ಥಿಯು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ನೇಮಕಾತಿ ಆದೇಶ ಹೊರಡಿಸಿಲ್ಲ. ಆಯ್ಕೆಯಾದ 296 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

‘ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿದ ನಂತರ ಶೈಕ್ಷಣಿಕ ಅಂಕಪಟ್ಟಿಗಳ ನೈಜತೆ, ಸಿಂಧುತ್ವ ಪ್ರಮಾಣ ಪತ್ರ ಮತ್ತು ಪೂರ್ವಾಪರ ಚಾರಿತ್ರದ ಪೊಲೀಸ್‌ ವರದಿ ಖಚಿತಪಡಿಸಿಕೊಳ್ಳುವ ಸಲುವಾಗಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಕಳಿಸುವುದನ್ನು ವಾಡಿಕೆ ಮಾಡಿಕೊಂಡಿರುತ್ತಾರೆ,’ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಅದೇ ರೀತಿ ಎಲ್ಲಾ 10 ವೈದ್ಯಕೀಯ ಕಾಲೇಜುಗಳ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರದ ಸೂಚನೆಯಂತೆ ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಸಂಬಂಧ ಅಭ್ಯರ್ಥಿವಾರು ಪ್ರತ್ಯೇಕ ಕಡತಗಳಲ್ಲಿ ಅನುಮೋದನೆಗೆ ಮಂಡಿಸಿರುವುದನ್ನೂ ಪತ್ತೆ ಹಚ್ಚಿದೆ.

 

ಯಾವುದೇ ಸರ್ಕಾರದ ಸಂಸ್ಥೆ ಅಥವಾ ನೇಮಕಾತಿ ಸಮಿತಿ ಮೂಲಕ ಆಯ್ಕೆ ಹೊಂದಿ ಅಭ್ಯರ್ಥಿಗಳ ಪೂರ್ವಪರ ಚರಿತ್ರೆಯ ಪೊಲೀಸ್‌ ವರದಿ, ಜಾತಿ ಸಿಂಧುತ್ವ, ಶೈಕ್ಷಣಿಕ ಅಂಕಪಟ್ಟಿಗಳ ನೈಜತೆ ಪಡೆದ ನಂತರ ನೇಮಕಾತಿ ಆದೇಶ ಹೊರಡಿಸಬೇಕು ಎಂದು 2018ರ ಫೆ.15ರಂದೇ ಸುತ್ತೋಲೆ ಹೊರಡಿಸಿದೆ. ಆದರೆ ಈ ಸುತ್ತೋಲೆಯನ್ನು ಈ 9 ದ್ಯಕೀಯ ಕಾಲೇಜುಗಳು ಪಾಲಿಸಿಲ್ಲ. ಬದಲಿಗೆ ಉಲ್ಲಂಘಿಸಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

 

ಶಿವಮೊಗ್ಗ ವೈದ್ಯಕೀಯ ಸಂಸ್ಥೆ ಹೊರತುಪಡಿಸಿ ಉಳಿದ 09 ವೈದ್ಯಕೀಯ ಕಾಲೇಜುಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಪೂರ್ವಪರ ಚರಿತ್ರೆಯ ಪೊಲೀಸ್‌ ವರದಿ, ಜಾತಿ ಸಿಂಧುತ್ವ, ಶೈಕ್ಷಣಿಕ ಅಂಕಪಟ್ಟಿಗಳ ನೈಜತೆ ಪಡೆದಿಲ್ಲ. ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಪಡೆಯುವ ಷರತ್ತಿಗೊಳಪಟ್ಟು ನೇಮಕಾತಿ ಆದೇಶವನ್ನು ಹೊರಡಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

ಶಿವಮೊಗ್ಗ ವೈದ್ಯಕೀಯ ಸಂಸ್ಥೆಯಲ್ಲಿ ಸಾಮಾನ್ಯ ವರ್ಗದಡಿ ಆಯ್ಕೆಯಾಗಿರುವ 04 ಅಭ್ಯರ್ಥಿಗಳಿಗೆ ಪೊಲೀಸ್‌ ಪೂರ್ವಾಪರ ವರದಿ ಮತ್ತು ಶೈಕ್ಷಣಿಕ ಅಂಕಪಟ್ಟಿಗಳ ನೈಜತೆ ವರದಿಯನ್ನು ಪಡೆದಿಲ್ಲ. ಬದಲಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ ದಿನದಂದೇ ನೇಮಕಾತಿ ಆದೇಶವನ್ನು ನೀಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ಸಿಂಧುತ್ವ ವರದಿ ಬಂದ ನಂತರ ನೇಮಕಾತಿ ಆದೇಶ ನೀಡಿರುವುದನ್ನು ಸಮಿತಿಯು ಪತ್ತೆ ಹಚ್ಚಿದೆ.

 

 

ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಡಾ ಹರಿಣಿ ಆರ್‍‌ ಎಂಬುವರು ಸಹ- ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ ಇವರಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

‘ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಹಂತಹಂತವಾಗಿ ನೀಡಲಾಗಿದೆ. ಡಿಪಿಎಆರ್‍‌ ಮಾರ್ಗಸುಚಿಗಳ ಅನ್ವಯ ನೇಮಕಾತಿ ಆದೇಶ ನೀಡುವ ಮೊದಲು ಅಭ್ಯರ್ಥಿಘಳ ಪೂರ್ವಾಪರ ಚರಿತ್ರೆಯ ಪೊಲೀಸ್‌ ವರದಿ, ಜಾತಿ ಸಿಂಧುತ್ವ, ಶೈಕ್ಷಣಿಕ ಅಂಕಪಟ್ಟಿಗಳ ನೈಜತೆಯನ್ನು ಪರಿಶೀಲಿಸಿಲ್ಲ. ಮತ್ತು ಈ ಸಮಿತಿಯು ಸಮಯಾವಕಾಶದ ಅಭಾವದಿಂದ ವಿವಿಧ ವೈದ್ಯಕೀಯ ಕಾಲೇಜುಗಳ ನೇಮಕಾತಿಗೆ ಸಂಬಂಧಿಸಿದಂತೆ ರೋಸ್ಟರ್‍‌ ಬಿಂದುವನ್ನು ಪರಿಶೀಲಿಸಿಲ್ಲ,’ ಎಂದು ತನಿಖಾ ಸಮಿತಿಯು ವರದಿಯಲ್ಲಿ ತನ್ನ ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

 

ವೈದ್ಯಕೀಯ ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ನಡೆದ ಸಂದರ್ಭದಲ್ಲಿ ಸಂಸದ ಡಾ ಕೆ ಸುಧಾಕರ್‌ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts