ಟೆಂಡರ್‌ ಬಿಡ್‌ ರಿಗ್ಗಿಂಗ್; ನಿವೃತ್ತ ನಿರ್ದೇಶಕ ಗಿರೀಶ್‌ ಸೇರಿ ಮೂವರ ವಿರುದ್ಧ ಆರೋಪಪಟ್ಟಿ ಜಾರಿ

ಬೆಂಗಳೂರು;  ವೈದ್ಯಕೀಯ ಕಾಲೇಜುಗಳು ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್‌ ಮತ್ತು ಎನ್‌ 95 ಮಾಸ್ಕ್‌ಗಳ ಖರೀದಿ ಪ್ರಕ್ರಿಯೆಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಹಿಂದಿನ ನಿರ್ದೇಶಕ ಪಿ ಜಿ ಗಿರೀಶ್‌ ಸೇರಿದಂತೆ ಮೂವರು ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಪ ಪಟ್ಟಿಯನ್ನು  ಜಾರಿಗೊಳಿಸಿದೆ.

 

ಪಿಪಿಇ ಕಿಟ್‌ ಮತ್ತು ಎನ್‌ 95 ಮಾಸ್ಕ್‌ಗಳ ಖರೀದಿಗೆ ಸಂಬಂಧಿಸಿದಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ತನಿಖಾ ಸಮಿತಿಯು ಡಿಸೆಂಬರ್‌ 2023ರಲ್ಲಿ ಸಲ್ಲಿಸಿದ್ದ ವರದಿ ಆಧರಿಸಿ ಅಧಿಕಾರಿಗಳಿಗೆ ನೋಟೀಸ್‌ ಜಾರಿಗೊಳಿಸಿದೆ. ನೋಟೀಸ್‌ನ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಹಿಂದಿನ ನಿರ್ದೇಶಕ ಪಿ ಜಿ ಗಿರೀಶ್‌ ಅವರನ್ನು ಮೊದಲ ಆಪಾದಿತ ಎಂದು ಗುರುತಿಸಲಾಗಿದೆ. ಅದೇ ರೀತಿ ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕ ರಘು ಜೆ ಪಿ (ಎರಡನೇ ಆಪಾದಿತ) ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಲಕರಣಾಧಿಕಾರಿ ಮುನಿರಾಜು ಎನ್‌  (ಮೂರನೇ ಆಪಾದಿತ) ಅವರ ಪಾತ್ರವೂ ಸಹ ಈ ಪ್ರಕ್ರಿಯೆಗಳಲ್ಲಿ ಇದೆ ಎಂದು ತನಿಖಾ ಸಮಿತಿಯು ದೃಢಪಡಿಸಿರುವುದು ವರದಿಯಿಂದ  ಗೊತ್ತಾಗಿದೆ.

 

ಈ ಮೂವರು ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪ, ದುರ್ನಡತೆ ಮತ್ತು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿಯ ನಿಯಮಗಳ ಉಲ್ಲಂಘನೆ ಆರೋಪ ಹೊರಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಈ ಎಲ್ಲಾ ಅಧಿಕಾರಿಗಳಿಗೂ  ಆರೋಪ ಪಟ್ಟಿಯನ್ನೂ ಹೊರಡಿಸಿರುವುದು ತಿಳಿದು ಬಂದಿದೆ.

 

ಪಿ ಜಿ ಗಿರೀಶ್‌ ವಿರುದ್ಧ ಆರೋಪ ಪಟ್ಟಿಯಲ್ಲೇನಿದೆ?

 

ವೈದ್ಯಕೀಯ ಶಿಕ್ಷಣ  ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿ  ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಪಿಪಿಇ ಕಿಟ್‌ ಮತ್ತು ಎನ್‌ 95 ಮಾಸ್ಕ್‌ ಖರೀದಿಗೆ 2020ರ ಆಗಸ್ಟ್‌ 26ರಂದು ಇ-ಪೋರ್ಟಲ್‌ನಲ್ಲಿ ಟೆಂಡರ್‌ ಆಹ್ವಾನಿಸಿದ್ದರು. ಈ ಟೆಂಡರ್‌ನಲ್ಲಿ ಲಾಜ್‌ ಎಕ್ಸ್‌ಪೋರ್ಟ್, ಎಲ್‌ಇಎಲ್‌ ಇಂಟರ್‌ ನ್ಯಾಷನಲ್‌, ಸಚ್‌ ಎಕ್ಸ್‌ಪೋರ್ಟ್ಸ್‌ ಬಿಡ್ ಮಾಡಿದ್ದವು. ಈ ಎಲ್ಲಾ ಟೆಂಡರ್‌ಗಳ ತಾಂತ್ರಿಕ ಮತ್ತು ಆರ್ಥಿಕ ಬಿಡ್‌ಗಳನ್ನು ತೆರೆದು ಅತಿ ಕಡಿಮೆ ಬಿಡ್‌ ಸಲ್ಲಿಸಿದ್ದ ಲಾಜ್‌ ಎಕ್ಸ್‌ಪೋರ್ಟ್ಸ್‌ ತಾಂತ್ರಿಕ ಅರ್ಹತೆ ಹೊಂದದೇ ಇದ್ದರೂ ಸಹ ತಾಂತ್ರಿಕವಾಗಿ ಅರ್ಹರು ಎಂದು ಟೆಂಡರ್‌ನ್ನು ಅಂತಿಮಗೊಳಿಸಿದ್ದರು ಎಂದು ತನಿಖೆ ವೇಳೆಯಲ್ಲಿ ದೃಢಪಡಿಸಿರುವುದು ಗೊತ್ತಾಗಿದೆ.

 

ಟೆಂಡರ್‌ ನಿಯಮಗಳ ಪ್ರಕಾರ ಸರಬರಾಜುದಾರರು ಟೆಂಡರ್‌ನಲ್ಲಿ ಭಾಗವಹಿಸಲು ಸಲ್ಲಿಸಬೇಕಾದ ಕನಿಷ್ಟ ಮಾನದಂಡಗಳ (ಅಂದರೆ ಸರಾಸರಿ ವಾರ್ಷಿಕ ವಹಿವಾಟು ಟೆಂಡರ್‌ ಮಾನದಂಡಗಳ ಪ್ರಕಾರ ಇರುವುದಿಲ್ಲ) ಪ್ರಕಾರ ದಾಖಲೆಗಳನ್ನು ಸಲ್ಲಿಸದೇ ಇದ್ದರೂ ಅವಿರಗೆ ಕಾರ್ಯಾದೇಶ ನೀಡಲಾಗಿತ್ತು. ಈ ಸಂಬಂಧ ಬಿಲ್‌ಗಳನ್ನು ಪಾವತಿಸುವ ಮುನ್ನ ಈ ಅಂಶವನ್ನು ಪರಿಶೀಲಿಸಿರಲಿಲ್ಲ. ಇದು ಕರ್ತವ್ಯ ಲೋಪ ಮತ್ತು ದುರ್ನಡತೆ ಆಗಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಹಾಗೆಯೇ ಆರೋಗ್ಯ ಸಲಕರಣಾಧಿಕಾರಿ ಮುನಿರಾಜು ಅವರ ವಿರುದ್ಧವೂ ಹೊರಿಸಿರುವ ಆರೋಪ ಪಟ್ಟಿಯಲ್ಲಿಯೂ ಪಿ ಜಿ ಗಿರೀಶ್‌ ಅವರನ್ನೂ ಸೇರಿಸಲಾಗಿದೆ.

 

‘ಪಿಪಿಇ ಕಿಟ್‌ ಮತ್ತು ಎನ್‌ 95 ಮಾಸ್ಕ್‌ ಖರೀದಿಸಿರುವ ಇ-ಟೆಂಡರ್‌ ಪ್ರಕರಣಗಳಲ್ಲಿ ಎಲ್‌ಇಎಲ್‌ ಇಂಟರ್‌ ನ್ಯಾಷನಲ್‌ ಪ್ರೈವೈಟ್‌ ಲಿಮಿಟೆಡ್‌ ಮತ್ತು ಲಾಜ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆಗಳ ಮಾಲೀಕರು ಒಬ್ಬರೇ ಆಗಿರುತ್ತಾರೆ. ಅವರ ಅಧಾರ್‌ ಸಂಖ್ಯೆ (60222251859) ಒಂದೇ ಆಗಿದ್ದರೂ ಅದನ್ನು ಸರಿಯಾಗಿ ಪರಿಶೀಲಿಸಿಕೊಳ್ಳದೇ ಬಿಡ್‌ ರಿಗ್ಗಿಂಗ್‌ ಮಾಡಿ ಸಚ್‌ ಎಕ್ಸ್‌ಪೋರ್ಟ್‌ಗೆ ಕಾರ್ಯಾದೇಶ ನೀಡಿ ಕರ್ತವ್ಯ ಲೋಪ ಹಾಗೂ ದುರ್ನಡತೆ ಎಸಗಿದ್ದಾರೆ,’ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕ ಜಿ ಪಿ ರಘು ಅವರ ವಿರುದ್ಧವೂ ಹೊರಿಸಿರುವ ಆರೋಪ ಪಟ್ಟಿಯಲ್ಲಿ ಮುನಿರಾಜು ಅವರ ಹೆಸರನ್ನೂ ಸೇರಿಸಲಾಗಿದೆ. ಅತಿ ಕಡಿಮೆ ಬಿಡ್‌ ಸಲ್ಲಿಸಿ  ಲಾಜ್‌ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ ಅವರು ಎಲ್‌ 1 ಆಗಿದ್ದ ಆಗಿದ್ದರೂ ಕರಾರು ಒಪ್ಪಂದದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ. ಪಿಪಿಇ ಕಿಟ್‌ಗಳ ಸರಬರಾಜು ಮತ್ತು ಬಿಲ್‌ಗಳ ಪಾವತಿಗಾಗಿ   ಪ್ರೊಡೆಂಟ್‌ ಸಲ್ಯೂಷನ್ಸ್‌ ಗೆ ಅಧಿಕಾರ ನೀಡಿರುವುದು ಕೆಟಿಪಿಪಿ ನಿಯಮಗಳ ಉಲ್ಲಂಘನೆ ಆಗಿದೆ. ಅದರಂತೆ ಉಪ ಗುತ್ತಿಗೆ ನೀಡಲು ಟೆಂಡರ್‌ ನಿಯಮಗಳಲ್ಲಿ ಅವಕಾಶ ಇಲ್ಲದಿದ್ದರೂ ಉಪ ಗುತ್ತಿಗೆ ನೀಡಿ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಿರುವುದು ತಿಳಿದು ಬಂದಿದೆ.

 

ಪಿಪಿಇ ಕಿಟ್‌ ಮತ್ತು ಎನ್‌ 95 ಮಾಸ್ಕ್‌ಗಳನ್ನು ಖರೀದಿಸುವ ವಿಷಯದಲ್ಲಿ ಒಟ್ಟು 2,59,263 ಪಿಪಿಇ ಕಿಟ್‌ಗಳನ್ನು ಮಾತ್ರ ಖರೀದಿಸಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಅದರಂತೆ 2,59,263 ಪಿಪಿಇ ಕಿಟ್‌ ಖರೀದಿಸಲು ಟೆಂಡರ್‌ ಕರೆಯಲಾಗಿತ್ತು. ಆದರೆ ಪಿ ಜಿ ಗಿರೀಶ್‌ ಸೇರಿದಂತೆ ಇನ್ನಿತರೆ ಇಬ್ಬರು ಆಪಾದಿತರು 19, 30,613 ಪಿಪಿಇ ಕಿಟ್‌ಗಳನ್ನು ಖರೀದಿಗೆ ಸರಬರಾಜು ಆದೇಶ ನೀಡಿದ್ದರು. ಇದರಲ್ಲಿ ಟೆಂಡರ್‌ ನಿಯಮಗಳು ಉಲ್ಲಂಘನೆ ಆಗಿವೆ. ಕರ್ತವ್ಯ ಲೋಪ ಮತ್ತು ದುರ್ನಡತೆ ಎಸಗಿದ್ದಾರೆ ಎಂದೂ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

 

ಕೋವಿಡ್‌ ಎರಡನೇ ಅಲೆಗೆ ಸಂಬಂಧಿಸಿದಂತೆ ಪಿಪಿಇ ಕಿಟ್‌ ಖರೀದಿಗೆ ಆಡಳಿತಾತ್ಮಕ ಅನುಮೋದನೆ ಪಡೆದಿರಲಿಲ್ಲ. ಪ್ರತ್ಯೇಕವಾಗಿ ಟೆಂಡರ್‌ ಕರೆಯಲಾಗಿತ್ತು. 2021ನೇ ಸಾಲಿನಲ್ಲಿ ಆಗಿದ್ದ ಬೆಲೆ ಕುಸಿತ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ.

 

ಟೆಂಡರ್‌ನಲ್ಲಿ ಪಿಪಿಇ ಕಿಟ್‌ಗಳ ದರಗಳನ್ನು 1,312 ರು ಎಂದು ನಿಗದಿಪಡಿಸಲಾಗಿತ್ತು. ಆದರೆ ಇದೇ ಅವಧಿಯಲ್ಲಿ (2021ರ ಜೂನ್‌ 30) ಕೇವಲ 400 ರು. ಗಳಿಗೆ ಪಿಪಿಇ ಕಿಟ್‌ಗೆ ದರವಿತ್ತು. ಇದೇ ದರದಲ್ಲಿ ಕೆಎಸ್‌ಎಂಎಸ್‌ಸಿಎಲ್‌ ಖರೀದಿಸಿತ್ತು. ಬೆಲೆ ಕುಸಿತದ ಅಂಶವನ್ನು ಪರಿಗಣಿಸದೇ ಸರ್ಕಾರಕ್ಕೆ ಆರ್ಥಿಕ ನಷ್ಟವಾಗಿದೆ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಈ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೇ, ಡಾ ಕೆ ಸುಧಾಕರ್‌ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts