ಬೆಂಗಳೂರು; ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯೂ ಸೇರಿದಂತೆ ಆ ನಂತರದ ಅವಧಿಯಲ್ಲಿ ರಾಜ್ಯದ 751 ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ 211.74 ಕೋಟಿ ರು ಮೊತ್ತದ ಬೋಧನಾ ಶುಲ್ಕವನ್ನು ಸಂಚಿತ ನಿಧಿಯಿಂದ ಹೊರಗಿನ ಜಂಟಿ ಖಾತೆಗೆ ಜಮೆಯಾಗಿತ್ತು.
ಅಲ್ಲದೇ ಹಲವು ಕಾಲೇಜುಗಳು ಸಂಗ್ರಹಿಸಿದ್ದ 152.09 ಕೋಟಿ ರು ಬೋಧನಾ ಶುಲ್ಕದ ಒಂದು ಭಾಗವನ್ನು ಜಂಟಿ ಖಾತೆಗೂ ಪಾವತಿಸಿರಲಿಲ್ಲ ಎಂಬ ಸಂಗತಿಯನ್ನು ಮಹಾಲೇಖಪಾಲರು ಬಯಲು ಮಾಡಿದ್ದಾರೆ.
2023ರ ಮಾರ್ಚ್ ಅಂತ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಕುರಿತಾದ ಸಿಎಜಿಯು ವಿಧಾನಮಂಡಲಕ್ಕೆ ಸಲ್ಲಿಸಿರುವ ವರದಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಣಕಾಸಿನ ಅಶಿಸ್ತನ್ನು ಬಹಿರಂಗಗೊಳಿಸಿದೆ.
ರಾಜ್ಯದ ಸಂಚಿತ ನಿಧಿಗೆ ರಾಜಸ್ವ ಸ್ವೀಕೃತಿಗಳನ್ನು (ತೆರಿಗೆಯೇತರ ರಾಜಸ್ವ )ಜಮೆ ಮಾಡಿಲ್ಲ ಎಂದು ಹೇಳಿರುವ ಸಿಎಜಿಯು ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಕಾಲೇಜುಗಳ ವಿದ್ಯಾರ್ಥಿಗಳಿಂದ ಕೋಟ್ಯಂತರ ರುಪಾಯಿಗಳನ್ನು ಸಂಗ್ರಹಿಸಿದ್ದ ಬೋಧನಾ ಶುಲ್ಕವನ್ನು ಸಂಚಿತ ನಿಧಿಗೆ ಜಮೆ ಮಾಡಿಲ್ಲ ಎಂಬುದನ್ನು ಪತ್ತೆ ಹಚ್ಚಿದೆ.
ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಕಾಲೇಜು ಶಿಕ್ಷಣ) ನಿಯಮಗಳು 2003ರ ನಿಯಮ 18(1)ರ ಪ್ರಕಾರ ಅನುದಾನಿತ ಕಾಲೇಜುಗಳ ವ್ಯವಸ್ಥಾಪಕ ಸಮಿತಿಯು ವಿದ್ಯಾರ್ಥಿಗಳಿಂದ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕವನ್ನು ಸಂಗ್ರಹಿಸುತ್ತದೆ. ಸರ್ಕಾರವು ನಿಗದಿಪಡಿಸಿದ ಪ್ರಮಾಣಿತ ದರಕ್ಕಿಂತ ಎರಡು ಪಟ್ಟು ಮೀರದ ದರದಲ್ಲಿ ಸಂಗ್ರಹಿಸಲು ಅಧಿಕಾರವನ್ನು ನೀಡಿದೆ.
ಅಲ್ಲದೇ ನಿಯಮ 18(4)ರ ಪ್ರಕಾರ ವ್ಯವಸ್ಥಾಪಕ ಸಮಿತಿಯು 18(1)ರ ಅಡಿಯಲ್ಲಿ ಸಂಗ್ರಹಿಸಲಾದ ಎಲ್ಲಾ ಶುಲ್ಕಗಳನ್ನು ಜಂಟಿ ಖಾತೆಗೆ ಜಮಾ ಮಾಡಬೇಕು. ಅಲ್ಲದೇ ಸರ್ಕಾರವು (2014) ನಿಯಮ 18(4) ಅನನ್ನು ತಿದ್ದುಪಡಿ ಮಾಡಿತ್ತು. ಸಂಗ್ರಹಿಸಿದ ಬೋಧನಾ ಶುಲ್ಕದ ಒಂದು ದರವನ್ನು ಜಂಟಿ ಖಾತೆಗೆ ಮತ್ತು ಇನ್ನೊಂದು ದರವನ್ನು ಕಾಲೇಜು ಖಾತೆಗೆ ಜಮಾ ಮಾಡಲು ವ್ಯವಸ್ಥಾಪಕ ಸಮಿತಿಗೆ ನಿರ್ದೇಶನ ನೀಡಿತ್ತು.
ಹಾಗೆಯೇ ರಾಜ್ಯ ಸರ್ಕಾರವು ಪಡೆಯುವ ಎಲ್ಲಾ ಆದಾಯಗಳು ಸಂಚಿತ ನಿಧಿಯ ಭಾಗವಾಗಿರುತ್ತದೆ ಎಂದು ಷರತ್ತು ವಿಧಿಸಿ ಹಿಂದಿನ ಸರ್ಕಾರವು ತಂದಿದ್ದ ಈ ತಿದ್ದುಪಡಿಯು ಭಾರತ ಸಂವಿಧಾನದ 266(1) ವಿಧಿಗೆ ವಿರುದ್ಧವಾಗಿ ನಡೆದುಕೊಂಡಿತ್ತು ಎಂಬ ಅಂಶವನ್ನು ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಉನ್ನತ ಶಿಕ್ಷಣದ ಆಡಳಿತಾತ್ಮಕ ನಿಯಂತ್ರಣದಲ್ಲಿ 6 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಈ ಕಚೇರಿ ವ್ಯಾಪ್ತಿಯಲ್ಲಿನ 751 ಕಾಲೇಜುಗಳು ಒದಗಿಸಿದ್ದ ಮಾಹಿತಿ ಪ್ರಕಾರ 2004ರಿಂದ 2023ರ ಅವಧಿಯಲ್ಲಿ 211.74 ಕೋಟಿ ಮೊತ್ತದ ಬೋಧನಾ ಶುಲ್ಕ ಸಂಗ್ರಹಿಸಿತ್ತು. ಆದರೆ ಈ ಮೊತ್ತವನ್ನು ಸಂಚಿತ ನಿಧಿಯಿಂದ ಹೊರಗಿನ ಜಂಟಿ ಖಾತೆಗೆ ಜಮೆ ಮಾಡಿತ್ತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ಹಲವು ಕಾಲೇಜುಗಳು ಈ ಅವಧಿಯಲ್ಲಿ ಸಂಗ್ರಹಿಸಿದ 152.09 ಕೋಟಿ ರು ಬೋಧನಾ ಶುಲ್ಕದ ಒಂದು ಭಾಗವನ್ನು ಜಂಟಿ ಖಾತೆಗೆ ಪಾವತಿಸಿರಲಿಲ್ಲ. ಅಲ್ಲದೆ ಈ ಶುಲ್ಕವನ್ನು ಜಮೆ ಮಾಡಿಸಲು ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಾಲೇಜುಗಳಿಂದ ಜಮೆ ಮಾಡಿದ ಬೋಧನಾ ಶುಲ್ಕ ಮತ್ತು ಕಡಿಮೆ ಜಮಾ ಮಾಡಿದ ಹಣದ ವಿವರಗಳನ್ನು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿವೆ.
2004-2015ರ ಅವಧಿಯಲ್ಲಿ ಬೋಧನಾ ಶುಲ್ಕವನ್ನು ಜಂಟಿ ಖಾತೆಗೆ 106.35 ಕೋಟಿ ರು. ಜಮೆ ಮಾಡಿತ್ತು. 137.27 ಕೋಟಿ ರು ಜಮೆ ಮಾಡಿರಲಿಲ್ಲ. 2015-2022ರ ಅವಧಿಯಲ್ಲಿಯೂ 94.16 ಕೋಟಿ ರು ಜಮೆ ಮಾಡಿತ್ತು. 14.59 ಕೋಟಿ ರು ಜಮೆ ಮಾಡಿರಲಿಲ್ಲ. 2023ರಲ್ಲಿ 11.23 ಕೋಟಿ ರು. ಜಮೆ ಮಾಡಿತ್ತು. 0.23 ಕೋಟಿ ರು ಸೇರಿ ಒಟ್ಟಾರೆ 152.09 ಕೋಟಿ ರು. ಜಮೆ ಮಾಡಿರಲಿಲ್ಲ.
‘ಹೀಗೆ ಭಾರತ ಸಂವಿಧಾನದ 266(1)ನೇ ವಿಧಿಯೊಂದಿಗೆ ಅಸಮಂಜಸವಾಗಿರುವ ನಿಯಮಗಳ ರಚನೆ ಮತ್ತು ಇಲಾಖೆಯ ಕಳಪೆ ಮೇಲ್ವಿಚಾರಣೆಯು 363.83 ಕೋಟಿಗಳಷ್ಟು ತೆರಿಗೆಯೇತರ ಆದಾಯವನ್ನು ಕಡಿಮೆ ಹೇಳುವಲ್ಲಿ ಪರಿಣಿಮಿಸಿತ್ತು,’ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಅಲ್ಲದೇ ಸರ್ಕಾರದ ನಿಧಿಗಳ ಮೇಲೆ ಗಳಿಸಿದ ಬಡ್ಡಿಯನ್ನು ಸಂಚಿತ ನಿಧಿಗೆ ಪಾವತಿಸಲು ಆರ್ಥಿಕ ಇಲಾಖೆಯ ಎಲ್ಲಾ ಇಲಾಖೆಗಳ ನಿರ್ದೇಶನಗಳನ್ನು ನೀಡಿದ ಹೊರತಾಗಿಯೂ 13 ಸಂಸ್ಥೆಗಳು, ಸರ್ಕಾರಿ ಕಂಪನಿಗಳು, ನಿಗಮಗಳು 2020-21ರಿಂದ 2022-23ರ ಅವಧಿಯಲ್ಲಿ ಗಳಿಸಿದ್ದ 198.99 ಕೋಟಿ ರು. ಬಡ್ಡಿಯನ್ನು ಸರ್ಕಾರಿ ಖಾತೆಗೆ ಜಮೆ ಮಾಡಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಈ ಅವಧಿಯಲ್ಲಿ ಬಸವರಾಜ ರಾಯರೆಡ್ಡಿ ಮತ್ತು ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರು ಉನ್ನತ ಶಿಕ್ಷಣ ಇಲಾಖೆಯ ಸಚಿವರಾಗಿದ್ದರು ಎಂಬುದನ್ನು ಸ್ಮರಿಸಬಹುದು.
118 ಕೋಟಿ ರು. ಶುಲ್ಕ ಮನ್ನಾ ; ಖಾಸಗಿ ಕಾಲೇಜುಗಳ ಮುಂದೆ ಮಂಡಿಯೂರಿತೇ ಬಿಜೆಪಿ ಸರ್ಕಾರ?
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ 119 ಕೋಟಿ ರುಪಾಯಿ ಮೊತ್ತವನ್ನು ಮನ್ನಾ ಆಗಿದೆ ಎಂದು ಗೊತ್ತಾಗಿದೆ.