ಸಂಚಿತ ನಿಧಿಯಿಂದ ಹೊರಗಿರಿಸಿ 1,494 ಕೋಟಿ ವ್ಯವಹಾರ!; ಸ್ಪಷ್ಟ ಉತ್ತರ ನೀಡದೇ ಸರ್ಕಾರದ ಕಳ್ಳಾಟ

ಬೆಂಗಳೂರು; ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ಖರ್ಚಾಗದೇ  ಉಳಿಕೆ ಮೊತ್ತವಾಗಿರುವ 1,494 ಕೋಟಿ ರು. ಖಜಾನೆಗೆ ಸ್ವೀಕೃತವಾಗಿದೆಯೇ ಇಲ್ಲವೇ ಎಂಬ ಕುರಿತು  ರಾಜ್ಯ ಕಾಂಗ್ರೆಸ್‌ ಸರ್ಕಾರವು  ವಿಧಾನ ಪರಿಷತ್‌ಗೂ ಸ್ಪಷ್ಟ ಉತ್ತರ ನೀಡದೇ ನುಣುಚಿಕೊಂಡಿದೆ.

 

ಖರ್ಚಾಗದೇ ಉಳಿಕೆ ಇರುವ ಮೊತ್ತದ ಕುರಿತು ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಮತ್ತು ಸಿ ಟಿ ರವಿ ಅವರು ಪ್ರಶ್ನೆ ಕೇಳಿದ್ದರು. ಅಲ್ಲದೇ ಡಿ ಎಸ್‌ ಅರುಣ್‌ ಅವರು ಇದೇ ಪ್ರಕರಣದ ಕುರಿತು ಗಮನ ಸೆಳೆಯುವ ಸೂಚನೆಯಲ್ಲಿಯೂ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಪ್ರಶ್ನೆ ಮತ್ತು ಗಮನ ಸೆಳೆಯುವ ಸೂಚನೆಗೆ ಭಿನ್ನ ಉತ್ತರವನ್ನು ನೀಡಿದೆ.  ಸರ್ಕಾರವು  ಸ್ಪಷ್ಟ ಉತ್ತರ ನೀಡದೇ ಇರುವುದು ಈ ಪ್ರಕರಣದಲ್ಲಿ  ಕಳ್ಳಾಟ ನಡೆಸುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಡಿ ಎಸ್‌ ಅರುಣ್‌ ಅವರು ಕೇಳಿದ್ದ ಪ್ರಶ್ನೆಗೆ ನೀಡಿರುವ ಸುದೀರ್ಘವಾದ ಉತ್ತರದಲ್ಲಿ ತಾಲೂಕು ಪಂಚಾಯ್ತಿಗಳಲ್ಲಿ ಖರ್ಚಾಗದೇ ಉಳಿಕೆ ಇರುವ 1,494 ಕೋಟಿ ರು ಎಂದು ನಮೂದಿಸಿದೆ. ಆದರೆ ಡಿ ಎಸ್‌ ಅರುಣ್‌ ಅವರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗಮನಸೆಳೆಯುವ ಸೂಚನೆಯಲ್ಲಿ ಕೇಳಿದ್ದ  ಪ್ರಶ್ನೆಗೆ ಉತ್ತರಿಸಿರುವ ಸರ್ಕಾರವು ತಾ.ಪಂ.ಗಳಲ್ಲಿ ಖರ್ಚಾಗದೇ ಉಳಿಕೆ ಇರುವ 1,494 ಕೋಟಿ ರು.  ಮೊತ್ತದ ಅಂಕಿ ಅಂಶಗಳನ್ನೂ  ನಮೂದಿಸಿಲ್ಲ.

 

ಈ ಉತ್ತರವನ್ನು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್‌ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ. ಇದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2022-23ನೇ 31.03.2023ರ ಅಂತ್ಯಕ್ಕೆ ಆರ್ಥಿಕ ಸಾಲಿನಲ್ಲಿ ಎಲ್ಲಾ ಲೆಕ್ಕ ಶೀರ್ಷಿಕೆಗಳಲ್ಲಿ ಬಳಕೆಯಾಗದ ಅನುದಾವನೆಷ್ಟು, ಬಳಕೆಯಾಗದ ಅನುದಾನದಲ್ಲಿ ಸಂಚಿತ ನಿಧಿಗೆ ಜಮೆಯಾದ ಮೊತ್ತವೆಷ್ಟು, ಇದರಲ್ಲಿ ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡದೇ ಅಮಾನತು ಲೆಕ್ಕ ಶೀರ್ಷಿಕೆ ಮಾಡದೇ ಅಮಾನತು ಲೆಕ್ಕ ಶೀರ್ಷಿಕೆ/ಬೇರೆ ಯಾವುದೇ ಮೂಲದಲ್ಲಿ ಸಂಗ್ರಹವಾದ ಮೊತ್ತವೆಷ್ಟು, ಇದರಲ್ಲಿ ವಿಧಾನಮಂಡಲದ ಅನುಮೋದನೆ ಪಡೆಯದೇ ಬಳಕೆ ಮಾಡಿದ ಮೊತ್ತವೆಷ್ಟು ಎಂದು ಡಿ ಎಸ್‌ ಅರುಣ್‌ ಅವರು ಪ್ರಶ್ನೆ ಕೇಳಿದ್ದರು.

 

ಸರ್ಕಾರದ ಉತ್ತರದಲ್ಲೇನಿದೆ?

 

ಯಾವುದೇ ಆರ್ಥಿಕ ವರ್ಷದಲ್ಲಿ ರಾಜ್ಯವಲಯದಡಿ ಬಿಡುಗಡೆಯಾದ ಮೊತ್ತದಲ್ಲಿ ಲೆಕ್ಕ ಶೀರ್ಷಿಕೆವಾರು ಖರ್ಚಾಗದೇ ಉಳಿದ ಅನುದಾನವನ್ನು ಆಯಾ ವರ್ಷಾಂತ್ಯದಲ್ಲಿ ಇಲಾಖೆಗಳು ಆದ್ಯರ್ಪಣೆ ಮಾಡುವರು. ಆಧ್ಯರ್ಪಣೆ ಮಾಡದೇ ಉಳಿದಿರುವ ಅನುದಾನವು ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇಧ-1 (15) ಹಾಗೂ ಅನುಚ್ಛೇಧ 305ರಂತೆ ಆರ್ಥಿಕ ವರ್ಷಾಂತ್ಯಕ್ಕೆ ವ್ಯಪಗತವಾಗುವುದರಿಂದ ಆ ಮೊತ್ತವನ್ನು ಅಮಾನತು ‍ಶೀರ್ಷಿಕೆ/ಸಂಚಿತ ನಿಧಿಗೆ ವರ್ಗಾಯಿಸಲಾಗುವುದಿಲ್ಲ.

 

2022-23ನೇ ಸಾಲಿಗೆ ಎಲ್ಲಾ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಗಳಡಿ ಇಲಾಖೆಗಳಿಗೆ ಹಂಚಿಕೆಯಾದ ಹಣವನ್ನು ಬಳಕೆಯಾಗದೇ ಉಳಿದ ಅನುದಾನವು ವ್ಯಪಗತವಾಗಿರುತ್ತದೆ. ಮಹಾಲೇಖಪಾಲರು ಈ ರೀತಿ ವ್ಯಪಗತವಾದ ಮೊತ್ತವನ್ನು ಹಣಕಾಸು ಲೆಕ್ಕಗಳಲ್ಲಿ ಉಳಿತಾಯ ಎಂದು ತೋರಿಸಿರುತ್ತಾರೆ. 2022-23ನೇ ಸಾಲಿಗೆ ಹಣಕಾಸು ಧನ ವಿನಿಯೋಗ ಲೆಕ್ಕಗಳಲ್ಲಿ 10,15,51,201 ಉಳಿತಾಯವಾಗಿರುತ್ತದೆ ಎಂದು ತಿಳಿಸಿದೆ.

 

ಮುಂದುವರೆದು ಖಜಾನೆ ಮೂಲಕ ಮಾಡಲಾಗುವ ಇ-ಪಾವತಿಗಳ ಮೊತ್ತದಲ್ಲಿ ವಿಫಲವಾದ ಇ-ಪಾವತಿಗಳ ಮೊತ್ತವು ಖಜಾನೆವಾರು ಅಮಾನತ್ತು ಲೆಕ್ಕ ಶೀರ್ಷಿಕೆಗೆ 8658 ಜಮಾ ಆಗುವುದು. ಕರ್ನಾಟಕ ಆರ್ಥಿಕ ಸಂಹಿತೆ 75ರ ಪ್ರಕಾರ ಈ ರೀತಿ ವಿಫಲವಾದ ಇ-ಪಾವತಿಗಳನ್ನು ಒಂದು ವರ್ಷದೊಳಗೆ ಸಂಬಂಧಪಟ್ಟ ಡಿಡಿಒ ಅವರು ಪುನಃ ಪಾವತಿಸಲು ಅವಕಾಶವಿರುತ್ತದೆ.

 

ಸರ್ಕಾರದ ಆದೇಶ ಸಂಖ್ಯೆ ಆಇ 25 ಟಿಎಆರ್‍‌ 2020 ದಿನಾಂಕ 21.09.2020 ಅನ್ವಯ ಒಂದು ವರ್ಷ ಮೀರಿದ ವಿಫಲ ಇ-ಪಾವತಿಗಳಿಗೆ ಖಜಾನಾಧಿಕಾರಿಗಳು ಲೆಕ್ಕ ಬದಲಾವಣೆ ಪತ್ರ ತಯಾರಿಸಿ ಮಹಾಲೇಖಪಾಲರಿಗೆ ಸಲ್ಲಿಸಲಾಗುತ್ತದೆ.
ಮಹಾಲೇಖಪಾಲರಿಂದ ಲೆಕ್ಕ ಬದಲಾವಣೆ ಅನುಮೋದನೆ ಪಡೆದ ನಂತರ ಕ್ಲೈಮ್‌ಗಳು ಯಾವ ಲೆಕ್ಕ ಶೀರ್ಷಿಕೆಯಿಂದ ಭರಿಸಲಾಗಿದೆಯೋ ಆ ಪ್ರಧಾನ ಲೆಕ್ಕ ಶೀರ್ಷಿಕೆ xxxx-911-0-02 recovery of over pyament of earlier year ರಡಿಗೆ ಜಮಾ ಮಾಡಿ ಲೆಕ್ಕ ಶೀರ್ಷಿಕೆ 8658 ಅಮಾನತು ಲೆಕ್ಕ ಶೀರ್ಷಿಕೆಗೆ ಖರ್ಚು ಹಾಕುವುದು ಎಂಬ ಸೂಚನೆಗಳಿರುತ್ತವೆ ಎಂದು ಪ್ರಕ್ರಿಯೆಗಳ ಕುರಿತು ವಿವರಿಸಿದೆ.

 

2022-23ನೇ ಆರ್ಥಿಕ ವರ್ಷದಲ್ಲಿ ಸಂದಾಯ ಮಾಡಲಾದ ಮೊತ್ತಗಳಲ್ಲಿ ವಿಫಲವಾದ ಇ-ಪಾವತಿಗಳ ಮೊತ್ತವನ್ನು ಖಜಾನೆವಾರು ಅಮಾನತು ಲೆಕ್ಕ ಶೀರ್ಷಿಕೆ 8658 ಗೆ ವರ್ಗಾವಣೆಯಾಗಿದ್ದು ಅದರ ಒಟ್ಟು ಮೊತ್ತವು 596,13,36, 157ಆಗಿರುತ್ತದೆ ಎಂಬ ಮಾಹಿತಿ ಒದಗಿಸಿದೆ.

 

2022-23ನೇ ಆರ್ಥಿಕ ವರ್ಷದಲ್ಲಿ ವಿಫಲವಾದ ಇ-ಪಾವತಿಗಳ ಒಟ್ಟು ಮೊತ್ತದಲ್ಲಿ 2023-24ರಲ್ಲಿ ಈವರೆಗೆ 574, 56, 82,743 ಗಳನ್ನು ಸಂಬಂಧಿಸಿದ ಡಿಡಿಒರವರಿಂದ ಅಮಾನತ್ತು ಲೆಕ್ಕ ಶೀರ್ಷಿಕೆಯಿಂದ ಸೆಳೆದು ಸರಿಯಾದ ಸ್ವೀಕತೃರಾರರಿಗೆ ಸಂದಾಯ ಮಾಡಲಾಗಿದೆ. ಅದರಂತೆ ಸಂದಾಯ ಮಾಡದೇ ಅಮಾನತು ಲೆಕ್ಕ ಶೀರ್ಷಿಕೆಯಲ್ಲೇ ಉಳಿದ ಹಾಗೂ ಒಂದು ವರ್ಷಕ್ಕೂ ಮೀರಿ ಸೆಳೆಯದೇ ಇರುವ 21,56,53,414 ರುಗ.ಳ ಮೊತ್ತಕ್ಕೆ ಲೆಕ್ಕ ಬದಲಾವಣೆ ಪತ್ರಗಳನ್ನು ಆಯಾ ಜಿಲ್ಲಾ ಖಜಾನೆಗಳಿಂದ ಮಹಾಲೇಖಪಾಲರಿಗೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿರುವುದು ಗೊತ್ತಾಗಿದೆ.

 

ಖಜಾನೆ-2ರ ಡಾಟಾ ಬೇಸ್‌ನಂತೆ 2022-3ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್‌ ಲೆಕ್ಕ ಶೀರ್ಷಿಕೆಗಳಿಗೆ ಸಂಬಂಧಿಸಿದಂತೆ ನಿಧಿ ಖಾತೆ 2ರಲ್ಲಿನ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಖರ್ಚಾಗದೇ ಉಳಿದ ಮೊತ್ತವು 459,04,85,254 ರುಗಳು ಮತ್ತು ತಾಲೂಕು ಪಂಚಾಯತ್‌ ಲೆಕ್ಕ ಶೀರ್ಷಿಕೆಗಳಲ್ಲಿ ಖರ್ಚಾಗದೇ ಉಳಿದ ಮೊತ್ತವು 1494,12,40,819 ರು ಗಳು ಇರುತ್ತದೆ ಎಂದು ಹೇಳಿದೆ.

 

ಜಿಪಂ/ತಾಪಂ ಲೆಕ್ಕ ಶೀರ್ಷಿಕೆಗಳಡಿ ನಿಧಿ ಖಾತೆ 2 ರ ವಿವಿಧ ಲೆಕ್ಕ ಶೀರ್ಷಿಕೆಯಡಿ ಖರ್ಚಾಗದೇ ಉಳಿದ ಮೊತ್ತವನ್ನು ಸರ್ಕಾರದ ಅದೇಶ (ಸಂಖ್ಯೆ ಎಫ್‌ಡಿ 437 ವೆಚ್ಚ 6/2016 ದಿನಾಂಕ 22-12-2016) ದಂತೆ ಆರ್ಥಿಕ ಇಲಾಖೆಯು ಸರ್ಕಾರದ ಆದೇಶ ಸಂಖ್ಯೆ ಹೊರಡಿಸುವ ಮೂಲಕ ಮಹಾಲೇಖಪಾಲರ ಪುಸ್ತಕಗಳಲ್ಲಿ ಮುಂದಿನ ವರ್ಷದ ವೆಚ್ಚಗಳನ್ನು ಕಡಿಮೆ ಆಡಲು ಪುಸ್ತಕ ಹೊಂದಾಣಿಕೆ ಮಾಡಲು ಸರ್ಕಾರಿ ಆದೇಶವನ್ನು ಹೊರಡಿಸಬೇಕಾಗಿದೆ ಎಂದು ಉಲ್ಲೇಖಿಸಿದೆ.

 

ಆದರೆ ಮಹಾಲೇಖಪಾಲರು ಜಿಪಂ ತಾಪಂ ನಿಧಿ 2ನಲ್ಲಿ ಬಳಕೆಯಾಗದೇ ಉಳಿದ ಮೊತ್ತಕ್ಕೆ ಸಂಬಂಧಿಸಿದಂತೆ ಈಗ ಆರ್ಥಿಕ ಇಲಾಖೆಯು ಅನುಸರಿಸುತ್ತಿರುವ ಕ್ರಮಕ್ಕೆ ಆಕ್ಷೇಪಿಸಿದ್ದರಿಂದ 2021-22ನೇ ಸಾಲಿನಿಂದ ಬಳಕೆಯಾಗದೇ ಉಳಿದ ಮೊತ್ತಕ್ಕೆ write back ಆದೇಶ ಹೊರಡಿಸಿರುವುದಿಲ್ಲ. ಈ ಸಂಬಂಧ ಮಹಾಲೇಖಪಾಲರೊಂದಿಗೆ ನಡೆದ ENTRY CONFERENCE ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ್ದು ಇತರೆ ರಾಜ್ಯಗಳಲ್ಲಿ ಈ ಬಗ್ಗೆ ಯಾವ ರೀತಿ ಕ್ರಮ ಅನುಸರಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡುವಂತೆ ಮಹಾಲೇಖಪಾಲರನ್ನು ಕೋರಲಾಗಿದೆ ಎಂಬ ಮಾಹಿತಿಯನ್ನು ಒದಗಿಸಿದೆ.

 

ವಿಧಾನಮಂಡಲದ ಅನುಮೋದನೆ ಪಡೆಯದೇ ಯಾವುದೇ ಅನುದಾನವನ್ನು ಬಳಕೆ ಮಾಡಲು ಅವಕಾಶವಿರುವುದಿಲ್ಲ ಎಂದೂ ಹೇಳಿದೆ.

 

ಗಮನ ಸೆಳೆಯುವ ಸೂಚನೆಗೆ ನೀಡಿರುವ ಉತ್ತರವಿದು

 

ಜಿಪಂ ಮತ್ತು ತಾಪಂಗಳ ಲೆಕ್ಕ ಶೀರ್ಷಿಕೆಗಳಡಿ ನಿಧಿ ಖಾತೆ -2ರಲ್ಲಿ ವಿವಿಧ ಲೆಕ್ಕ ಶೀರ್ಷಿಕೆಯಡಿ ಖರ್ಚಾಗದೇ ಉಳಿದ ಮೊತ್ತವನ್ನು ಆಯಾ ವರ್ಷದ ಲೆಕ್ಕ ಪತ್ರಗಳು ಮುಕ್ತಾಯವಾದ ನಂತರದ ವರ್ಷದ ಆಯವ್ಯಯದಲ್ಲಿ ಆಯಾ ಪ್ರಧಾನ ಲೆಕ್ಕ ಶೀರ್ಷಿಕೆಯಡಿ ­deduct recovery of overpayments of previous years ಎಂದು ತೋರಿಸಲಾಗುತ್ತಿದೆ. reduction of expenditure ಮಾಡಲಾಗುತ್ತದೆ ಎಂದು ತಿಳಿಸಿದೆ.

 

ಹಾಗೆಯೇ ಸರ್ಕಾರದ ಆದೇಶ ಸಂಖ್ಯೆ (fd 437 of exp.6/2016 dated 22.12.2016) ತಿಳಿಸಿರುವಂತೆ ಆರ್ಥಿಕ ಇಲಾಖೆಯು ಕಾಲಕಾಲಕ್ಕೆ ಸರ್ಕಾರದ ಆದೇಶ ಹೊರಡಿಸಲಿದೆ. ಈ  ಮೂಲಕ ಮಹಾಲೇಖಪಾಲರ ಪುಸ್ತಕಗಳಲ್ಲಿ ಮುಂದಿನ ವರ್ಷದ ವೆಚ್ಚಗಳನ್ನು ಕಡಿಮೆ ಮಾಡಲು ಪುಸ್ತಕ ಹೊಂದಾಣಿಕೆ ಮಾಡಲಿದೆ. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಉತ್ತರಿಸಿದ್ದಾರೆ.

the fil favicon

SUPPORT THE FILE

Latest News

Related Posts