ಬೆಂಗಳೂರು; ಮಾನವೀಯತೆ ದೃಷ್ಟಿ ಹೆಸರಿನಲ್ಲಿ ಬಾಕಿ ಹಣ ಮತ್ತು ಬಡ್ಡಿ ಸಹಿತ ಪಾವತಿಸಿಕೊಂಡು ಸುಮಾರು 300-350 ಪ್ರಕರಣಗಳನ್ನು ರದ್ದುಪಡಿಸಿದ್ದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ನಿಯಮಗಳಲ್ಲಿ ಅವಕಾಶವಿರದಿದ್ದರೂ ನಿಗದಿತ ಅವಧಿ ನಂತರವೂ ಹಣ ಪಾವತಿಸಿಕೊಂಡಿತ್ತು.
ಅಲ್ಲದೇ ಅನಧಿಕೃತ ಜಮೀನುಗಳಲ್ಲಿನ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿತ್ತು. ಮಾನದಂಡಗಳನ್ನು ಬದಿಗೊತ್ತಿ ಏಕ ನಿವೇಶನ ವಿನ್ಯಾಸಕ್ಕೆ ಅನುಮತಿ ಕೊಟ್ಟಿತ್ತು. ಸಿಎ ನಿವೇಶನಗಳ ಪ್ರಕರಣಗಳಲ್ಲಿಯೂ ಅವಕಾಶವಿರದಿದ್ದರೂ ಪ್ರಾರಂಭಿಕ ಠೇವಣಿಗಳನ್ನು ಹಿಂದಿರುಗಿಸಿತ್ತು. ನಿಗದಿತ ಅವಧಿಯ ನಂತರ ಮೊತ್ತ ಪಾವತಿಸಿಕೊಂಡು ಹಲವು ಪ್ರಕರಣಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬದಲಿ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಅವರೂ ಸೇರಿದಂತೆ ಹಲವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವ ಬೆನ್ನಲ್ಲೇ ಮೂಡಾದ 2021ರ ಮಾರ್ಚ್ 20ರಂದು ನಡೆದಿದ್ದ ಸಭೆ ನಡವಳಿಗಳ ಕುರಿತು ನಗರಾಭಿವೃದ್ಧಿ ಇಲಾಖೆಯು ಮಾಹಿತಿ, ಸ್ಪಷ್ಟೀಕರಣ ಕೋರಿದ್ದ ಪತ್ರವು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ 2022ರ ಆಗಸ್ಟ್ 24ರಂದು ಮೂಡಾ ಆಯುಕ್ತರಿಗೆ ಬರೆದಿದ್ದ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮೂಡಾ ವ್ಯಾಪ್ತಿಯಲ್ಲಿ ಐದು ಸಾವಿರ ಕೋಟಿಗೂ ಅಧಿಕ ಮೊತ್ತದ ಹಗರಣ ನಡೆದಿದೆ ಎಂದು ಆರೋಪಿಸಿರುವ ಪ್ರತಿಪಕ್ಷವು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಸಜ್ಜಾಗಿರುವ ನಡುವೆಯೇ 2 ವರ್ಷಗಳ ಹಿಂದೆ ನಗರಾಭಿವೃದ್ದಿ ಇಲಾಖೆಯು ಮೂಡಾಕ್ಕೆ ಬರೆದಿದ್ದ ಪತ್ರವು ಮುನ್ನೆಲೆಗೆ ಬಂದಿದೆ.
ಈ ಪತ್ರದ ಕುರಿತುಅಧಿಕಾರಿಗಳು ಸಚಿವ ಬೈರತಿ ಸುರೇಶ್ ಅವರ ಗಮನಕ್ಕೂ ತಂದಿದ್ದರು ಎಂದು ತಿಳಿದು ಬಂದಿದೆ.
ಪತ್ರದಲ್ಲೇನಿದೆ?
ವಿಷಯ ಸಂಖ್ಯೆ 4(3)ರಲ್ಲಿ ಸಿ ಎ ನಿವೇಶನಗಳ ಪ್ರಕರಣಗಳ ಕಟ್ಟಡ ನಿರ್ಮಿಸದೇ ಇರುವಂತಹ ನಿವೇಶನಗಳನ್ನು ರದ್ದುಪಡಿಸಲು ಮತ್ತು ಉಳಿದ ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ ಬಗ್ಗೆ ಪ್ರಕರಣವಾರು ಪರಿಶೀಲಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರಾರಂಭಿಕ ಠೇವಣಿಯನ್ನು ಸಂಸ್ಥೆಗೆ ಹಿಂದಿರುಗಿಸಲು ನಿರ್ಣಯಿಸಲಾಗಿರುತ್ತದೆ. ಆದರೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ಸಿಎ ನಿವೇಶನಗಳ ಹಂಚಿಕೆ) ನಿಯಮಗಳು 1991ರಲ್ಲಿ ಪ್ರಾರಂಭಿಕ ಠೇವಣಿಗಳನ್ನು ಹಿಂದಿರುಗಿಸಲು ಅವಕಾಶವಿರುವುದಿಲ್ಲ ಎಂದು ಪತ್ರದಲ್ಲಿ ಸರ್ಕಾರದ ಕಾರ್ಯದರ್ಶಿ ಅವರು ಸ್ಪಷ್ಟೀಕರಿಸಿರುವುದು ಗೊತ್ತಾಗಿದೆ.
ವಿಷಯ ಸಂಖ್ಯೆ ರಲ್ಲಿ ಅರ್ಜಿದಾರರಿಗೆ 1988ನೇ ಇಸವಿಯಲ್ಲಿ ನಿವೇಶನ ಮಂಜೂರು ಮಾಡಲಾಗಿದ್ದು ನಿವೇಶನದ ಬೆಲೆ 20,000 ರು. ಎಂದು ತಿಳಿಸಿದೆ. ಒಟ್ಟು ಮೊತ್ತದಲ್ಲಿ 500 ರು.ಗಳಿಗೆ ಮಾತ್ರ ಬಾಕಿದಾರರು ಆಗಿರುವುದರಿಂಂದ ಮಾನವೀಯತೆ ದೃಷ್ಟಿಯಿಂದ ಬಾಕಿ ಹಣ ಬಡ್ಡಿ ಸಹಿತ ಪಾವತಿಸಿಕೊಂಡು ಕ್ರಮ ವಹಿಸಲು ತೀರ್ಮಾನಿಸಲಾಗಿರುತ್ತದೆ. ಇದೇ ತರಹದ 300-350 ಪ್ರಕರಣಗಳನ್ನು ರದ್ದುಪಡಿಸಿದ್ದು ನಿಗದಿತ ಅವಧಿಯ ನಂತರ ಮೊತ್ತ ಪಾವತಿಸಿಕೊಂಡು ಹಂಚಿಕೆ ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ವಿಷಯ ಸಂಖ್ಯೆ 12ರಲ್ಲಿ 1984ನೇ ಇಸವಿಯಲ್ಲಿ ಹಂಚಿಕೆ ಮಾಡಿರುವ ನಿವೇಶನದ ಮೊತ್ತವನ್ನು ಪಾವತಿಸದೇ ಇರುವುದರಿಂದ 1998ರಲ್ಲಿ ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಉಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮತ್ತು ಮಾನವೀಯತೆ ದೃಷ್ಟಿಯಲ್ಲಿ ಪ್ರಸ್ತುತ ಮಾರ್ಗಸೂಚಿ ಬೆಲೆ ಬಾಕಿ ಹಣ ಪಾವತಿಸಿಕೊಂಡು ನಿವೇಶನ ಹಂಚಿಕೆ ರದ್ದತಿಯನ್ನು ವಾಪಸ್ಸು ಪಡೆಯಲು, ಮಂಜೂರಾತಿ ಆದೇಶ ಊರ್ಜಿತಗೊಳಿಸಲು ಮತ್ತು ಹಣ ಪಾವತಿಸಿಕೊಂಡು ಗುತ್ತಿಗೆ ಒಪ್ಪಂದ ಪತ್ರ ನೀಡಲು ನಿರ್ಣಯಿಸಲಾಗಿದೆ. ನಿಗದಿತ ಅವಧಿಯ ನಂತರ ಮೊತ್ತ ಪಾವತಿಸಿಕೊಂಡು ಹಂಚಿಕೆ ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ವಿಷಯ ಸಂಖ್ಯೆ; 32, 33, 34, 35, 36,37,38,39, 40, 41, 42, 43, 44,45,46,47,48,49,50, 51, 52, 53, 54, 55, 57 ಮತ್ತು 58ರಲ್ಲಿ ನಿವೇಶನ ಬಿಡುಗಡೆ ಪ್ರಕರಣಗಳಲ್ಲಿ ಶೇ.20, ಶೆ.10 ಮತ್ತು ಎ.60, ಶೆ.5ರಂತೆ ನಿವೇಶನಗಳನ್ನು ಬಿಡುಗಡೆ ಮಾಡಲು ತೀಮಾfನಿಸಲಾಗಿದ್ದು ಯಾವ ಕಾಯದೆ, ನಿಯಮ, ಸುತ್ತೋಲೆಗಳನ್ವಯ ಕ್ರಮ ಜರುಗಿಸಲಾಗಿದೆ ಎಂಬ ಬಗ್ಗೆ ಮಾಹಿತಿ, ಸ್ಪಷ್ಟೀಕರಣ ಒದಗಿಸಬೇಕು ಎಂದು ನಿರ್ದೇಶಿಸಿದೆ.
ವಿಷಯ ಸಂಖ್ಯೆ 62ರಲ್ಲಿ ಅನಧಿಕೃತ ವಿಭಜನೆಯಾದ ಪ್ರದೇಶದಲ್ಲಿ ಕನಿಷ್ಟ 14 ಗಂಟೆಪ್ರದೇಶ ಹೊಂದಿದ್ದಲ್ಲಿ ನಿಯಮಾನುಸಾರ ಬಡಾವಣೆ/ಅಭಿವೃದ್ದಿಗೆ ಅನುಮೋದನೆ ನೀಡುವುದು ಸೂಕ್ತವೆಂದು ಅಭಿಪ್ರಾಯಿಸಿತ್ತು.
ಅದರಂತೆ ಅನುಮೋದನೆಗೆ ನಿಯಮಾನುಸಾರ ಪರಿಶೀಲಿಸಿ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಲು ತೀರ್ಮಾನಿಸಿತ್ತು. ಭೂ ಪರಿವರ್ತನೆಯಾದ ನಂತರ ಪ್ರಾಧಿಕಾರದ ಅನುಮೋದನೆಯಿಲ್ಲದೇ ವಿಭಜನೆಯಾಗಿರುವ ಜಮೀನುಗಳು ಅನಧಿಕೃತವಾಗಿರುವುದರಿಂದ ಇವುಗಳಿಗೆ ವಿನ್ಯಾಸ ನಕ್ಷೆ ಅನುಮೋದನೆ ನೀಡಲು ಅವಕಾಶವಿರುವುದಿಲ್ಲ ಎಂದು ವಿವರಿಸಿರುವುದು ಗೊತ್ತಾಗಿದೆ.
ವಿಷಯ ಸಂಖ್ಯೆ 65ರಲ್ಲಿ ಶೇ.2ರಷ್ಟು ಶುಲ್ಕವನ್ನ ಪಾವತಿಸಿಕೊಳ್ಳಲು ಮತ್ತು ಸದರಿ ಶುಲ್ಕದ ಶೆ. 50ರಷ್ಟು ಅರಣ್ಯ ಅಭಿವೃದ್ಧಿಗಾಗಿ ಹಾಗೂ ಉಳಿದ ಶೇ.50ರಷ್ಟನ್ನು ಹಸರೀಕರಣಕ್ಕಾಗಿ ಬಳಕೆ ಮಾಡಲು ತೀಮಾfನಿಸಲಾಗಿರುತ್ತದೆ. ಹಸರೀಕರಣ ಶುಲ್ಕಪಾವತಿಸಿಕೊಳ್ಳಲು ಅವಕಾಶವಿರುವುದಿಲ್ಲ.
ವಿಷಯ ಸಂಖ್ಯೆ 68ರಲ್ಲಿ ಮಹಾನಗರಪಾಲಿಕೆಯಲ್ಲಿ ದುಪ್ಪಟ್ಟು ಕರ ವಿಧಿಸಿ, ಕಟ್ಟಡ ವಾಸ ಯೋಗ್ಯ ದೃಢೀಕರಣ ಪತ್ರ ನೀಡಲು ಕ್ರಮ ವಹಿಸಲು ಸೂಕ್ತವೆಂದು ಅನುಮೋದನೆ ನೀಡಲಾಗಿರುತ್ತದೆ. ಈ ರೀತಿಯ ದುಪ್ಪಟ್ಟು ಕರ ವಿಧಿಸಲು ಯಾವ ಕಾಯ್ದೆಯಡಿ ಅವಕಾಶವಿರುತ್ತದೆ ಎಂಬ ಬಗ್ಗೆ ಮಾಹಿತಿ, ಸ್ಪಷ್ಟೀಕರಣ ಒದಗಿಸಬೇಕು ಎಂದು ಸೂಚಿಸಿರುವುದು ತಿಳಿದು ಬಂದಿದೆ.
ವಿಷಯ ಸಂಖ್ಯೆ 84ರಲ್ಲಿ ಏಕ ನಿವೇಶನ ವಿನ್ಯಾಸ ಅನುಮೋದನೆಗೆ ತನ್ನದೇ ಆದ ಮಾನದಂಡಗಳನ್ನು ರೂಪಿಸಿದ್ದು ಅದನ್ನು ಅನುಸರಿಸಲು ತೀರ್ಮಾನಿಸಲಾಗಿರುತ್ತದೆ. ಸದರಿ ಅಅಂಶಗಳನ್ನು ನಿಯಮಾವಳಿಗಳಲ್ಲಿ ಅವಳಡಿಸದೇ ಅನುಸರಿಸಲು ಅವಕಾಶವಿರುವುದಿಲ್ಲ ಎಂದು ವಿವರಿಸಿರುವುದು ಗೊತ್ತಾಗಿದೆ.