ಬಳಸಿದ್ದು 0.38 ಗುಂಟೆ, ಪ್ರಾಧಿಕಾರ ನೀಡಿದ್ದು 5 ನಿವೇಶನ; ಬೇಕಾಬಿಟ್ಟಿ ನಿರ್ಧಾರ, ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ

ಬೆಂಗಳೂರು; ರಸ್ತೆ, ಚರಂಡಿ, ಯುಜಿಡಿಯನ್ನು ಅಭಿವೃದ್ಧಿಪಡಿಸಿದ್ದ ರಸ್ತೆ ಪ್ರದೇಶಕ್ಕೆ ಬದಲಿಯಾಗಿ ನಿಯಮಬಾಹಿರವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 05 ನಿವೇಶನಗಳನ್ನು ಮಂಜೂರು ಮಾಡಿತ್ತು. ಇದರಿಂದ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ.

 

ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರು ತಳಕು ಹಾಕಿಕೊಂಡಿರುವ ಬೆನ್ನಲ್ಲೇ 0-38 ಗುಂಟೆ ಬದಲಾಗಿ  5 ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ತಾಂತ್ರಿಕ ಸಮಿತಿಯು ನೀಡಿರುವ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

0-38 ಗುಂಟೆ ಬದಲಾಗಿ ಶೇ 50ರಷ್ಟು ಅಭಿವೃದ್ಧಿ ಪಡಿಸಿದ್ದ 11380 ಚದರ ಅಡಿ ವಿಸ್ತೀರ್ಣದ ನಿವೇಶನಗಳನ್ನು ಅರ್ಜಿದಾರರೊಬ್ಬರಿಗೆ ಹಂಚಿಕೆ ಮಾಡಿರುವುದನ್ನು ತಾಂತ್ರಿಕ ಸಮಿತಿಯು ದೃಢಪಡಿಸಿದೆ.

 

ಪ್ರಕರಣದ ವಿವರ

 

ಮೈಸೂರು ತಾಲೂಕು ದಟ್ಟಗಳ್ಳಿ ಗ್ರಾಮದ ಸರ್ವೆ ನಂಬರ್ 168, 169/1, 183/3ರಲ್ಲಿ ಒಟ್ಟು ವಿಸ್ತೀರ್ಣದ ಪೈಕಿ 1 ಎಕರೆ 33 ಗುಂಟೆ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿತ್ತು. ಬದಲಿ ಜಮೀನು ನೀಡಿ ವಿನ್ಯಾಸ ನಕ್ಷೆ ಅನುಮೋದನೆ ನೀಡಬೇಕು ಎಂದು ಶಿವಮ್ಮ ಮತ್ತು ಇತರರ ಪರವಾಗಿ 2013ರ ಅಕ್ಟೋಬರ್‍‌ 28ರಂದು ನೋಂದಾಯಿಸಲಾಗಿದ್ದ ಜಿಪಿಎ ಪಾಲುದಾರರಾದ ಎನ್‌ ಮಂಜುನಾಥ್‌ ಅವರು ಪ್ರಾಧಿಕಾರದ ಅಧ್ಯಕ್ಷರಿಗೆ 2021ರ ಏಪ್ರಿಲ್‌ 9ರಂದು ಅರ್ಜಿ ಸಲ್ಲಿಸಿದ್ದರು.

 

ಈ ಬಗ್ಗೆ 2020ರ ನವೆಂಬರ್‍‌ 6 ಮತ್ತು ನವೆಂಬರ್‍‌ 20ರಂದು ಪ್ರಾಧಿಕಾರದ ಸಭೆಯಲ್ಲಿ ವಿಷಯ ಸಂಖ್ಯೆ 07ರಲ್ಲಿ ಮಂಡಿಸಲಾಗಿತ್ತು. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿತ್ತು. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಕಲಂ 17(ಸಿ ಅಡಿ ಪ್ರಕರಣವನ್ನು ಪರಿಗಣಿಸಲಾಗಿತ್ತು. ತಾತ್ಕಾಲಿಕವಾಗಿ ನಕ್ಷೆ ಅನುಮೋದಿಸಲಾಗಿತ್ತು.

 

ನಿಯಮಾನುಸಾರ ಶೇ 40ರಷ್ಟು ನಿವೇಶನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿತ್ತು. ಅಲ್ಲದೇ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರೆಸಬಾರದು ಎಂದು ಸೂಕ್ತ ಕ್ರಮ ವಹಿಸಬೇಕು ಎಂದು ಪ್ರಾಧಿಕಾರದ ಸಭೆಯಲ್ಲಿ ನಿರ್ಣಯಿಸಲಾಗಿತ್ತು.

 

ಹಾಗೆಯೇ ಸರ್ವೋಚ್ಛ ನ್ಯಾಯಾಯವು ಮೆರಿಟ್‌ ಮೇಲೆ ಪ್ರಕರಣವನ್ನು ಉಚ್ಛ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಈ ಪ್ರಕರಣವು ಇತ್ಯರ್ಥಕ್ಕೆ ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ವಾಪಸ್‌ ಪಡೆಯುವ ಸಂಬಂಧ ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ಆಧರಿಸಿ ಕ್ರಮವಹಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದರು.

 

ಈ ನಿರ್ಣಯದ ನಂತರ 2021ರ ಮಾರ್ಚ್‌ 20ರಂದು ಪ್ರಾಧಿಕಾರದ ಸಭೆ ನಡೆದಿತ್ತು. ವಿಷಯ ಸಂಖ್ಯೆ 7ರ ಪ್ರಕರಣದ ಜಮೀನುಗಳ ಕುರಿತು ಉಚ್ಛ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ ಪ್ರಕರಣಗಳಲ್ಲಿ ಪ್ರಾಧಿಕಾರವು ಮುಂದುವರೆಯಬಾರದೆಂದು ತೀರ್ಮಾನವಾಗಿತ್ತು. ಪ್ರಾಧಿಕಾರವು 2020ರ ನವೆಂಬರ್‍‌ 6 ಮತ್ತು 20ರಂದು ನಿರ್ಣಯವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. 2020ರ ಡಿಸೆಂಬರ್‍‌ 15ರಂದು ಹೊರಡಿಸಿರುವ ಆದೇಶದಲ್ಲಿ ಪ್ರಕರಣವನ್ನು ವಜಾಮಾಡಿ ಆದೇಶಿಸಿದೆ ಎಂದು ವಕೀಲರು ತಿಳಿಸಿದ್ದರು.

 

ಇದನ್ನು ಆಯುಕ್ತರು ಸಭೆಯ ಗಮನಕ್ಕೆ ತಂದಿದ್ದರು. ಅದರಂತೆ ದಟ್ಟಗಳ್ಳಿ ಗ್ರಾಮದ ಸರ್ವೆ ನಂಬರ್‍‌ 168, 169/1, 176, 183 ಮತ್ತು 185ರ ಒಟ್ಟು 20-36 ಎಕರೆ ಜಮೀನಿಗೆ ನಿರಾಕ್ಷೇಪಣ ಪತ್ರ ನೀಡಲು ಸಭೆಯು ತೀರ್ಮಾನಿಸಿತ್ತು.
ಈ ತೀರ್ಮಾನದಂತೆ 2021ರ ಏಪ್ರಿಲ್‌ 12ರಂದು ಹಿಂಬರಹ ನೀಡಲಾಗಿತ್ತು. ದಟ್ಟಗಳ್ಳಿ ಗ್ರಾಮದ ಸರ್ವೆ ನಂಬರ್‍‌ 168, 169/1, 176, 183, 1854 ಒಟ್ಟು 20-36 ಎಕರೆ ವಿಸ್ತೀರ್ಣದಲ್ಲಿರುವ ಸ್ವತ್ತುಗಳಿಗೆ ಸಂಬಂಧಿಸಿದಂತೆ ಜಮೀನುಗಳನ್ನು ಭೂ ಸ್ವಾಧೀನದಿಂದ ಹೊರತುಪಡಿಸಲಾಗಿದೆ ಎಂದು ಜಿಪಿಎ ದಾರ ಎನ್‌ ಮಂಜುನಾಥ್‌ ಅವರಿಗೆ ಹಿಂಬರಹ ನೀಡಿತ್ತು.

 

ತಾಂತ್ರಿಕ ಸಮಿತಿಯ ಅಭಿಪ್ರಾಯವೇನು?

 

2021ರ ಜೂನ್‌ 8ರಂದು ಅಧಿಕೃತ ಜ್ಞಾಪನ ಪತ್ರದಲ್ಲಿ 0-38 ಗುಂಟೆ ಬದಲಾಗಿ ಶೇ. 50ರಷ್ಟು ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಅಂದರೆ 11380 ಚ ಅ ವಿಸ್ತೀರ್ಣದ ನಿವೇಶನಗಳನ್ನು ಹಂಚಿಕೆ ಮಾಡಿ ಹಂಚಿಕೆ ಪತ್ರ ನೀಡುವ ಸಂಬಂಧ ಕ್ರಮಕೈಗೊಳ್ಳಲು ಆದೇಶಿಸಿರುವುದು ನಿಯಮಬಾಹಿರವಾಗಿದೆ ಎಂದು ತಾಂತ್ರಿಕ ಸಮಿತಿಯು ತನ್ನ ವರದಿಯಲ್ಲಿ ಅಭಿಪ್ರಾಯಿಸಿದೆ.

 

ಪ್ರಾಧಿಕಾರದ 2022ರ ಆಗಸ್ಟ್‌ 10ರ ಪತ್ರದಲ್ಲಿ ದಟ್ಟಗಳ್ಳಿ ಗ್ರಾಮ ಸರ್ವೆ ನಂಬರ್‍‌ 168 ಮತ್ತು 169/1ರಲ್ಲಿ ಒಟ್ಟು ವಿಸ್ತೀರ್ಣ 03 ಎಕರೆ 08 ಗುಂಟೆ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿ ನಕ್ಷೆಯಂತೆ ಜಾಗವನ್ನು ಯಥವತ್ತಾಗಿ ಗುರುತಿಸಲು ನಕ್ಷೆಯನ್ನು ತಾಂತ್ರಿಕ ಶಾಖೆಗೆ ಕಳಿಸಿತ್ತು.

 

ಈ ವಿನ್ಯಾಸದ ಮಧ್ಯದಲ್ಲಿ ಹಾದುಹೋಗಿರುವ ರಸ್ತೆ ಪ್ರದೇಶವನ್ನು ಭೂ ಸ್ವಾಧೀನದಿಂದ ಕೈಬಿಟ್ಟಿತ್ತು. ರಸ್ತೆ ಪ್ರದೇಶವನ್ನು ಒಳಗೊಂಡಂತೆ ವಿನ್ಯಾಸ ಅನುಮೋದನೆ ನೀಡಿದ್ದಲ್ಲಿ ಕೆಟಿಪಿಸಿ ಕಾಯ್ದೆ ಕಲಂ 17 (2-ಬಿ) ರಂತೆ ಯಾವುದೇ ಪರಿಹಾರ ಕೋರದೇ ಮುಫತ್ತಾಗಿ ಪರಿತ್ಯಜನಾ ಪತ್ರದ ಮೂಲಕ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕು. ಆದರೆ ಕಾಯ್ದೆಯನ್ವಯ ಕ್ರಮವಹಿಸಿಲ್ಲ ಎಂದು ತಾಂತ್ರಿಕ ಸಮಿತಿಯು ಹೇಳಿದೆ.

 

‘ಪ್ರಾಧಿಕಾರದಿಂದ ವೆಚ್ಚ ಮಾಡಿ ರಸ್ತೆ, ಚರಂಡಿ, ಯುಜಿಡಿಯನ್ನು ಅಭಿವೃದ್ಧಿಪಡಿಸಿದ್ದರೂ ರಸ್ತೆ ಪ್ರದೇಶಕ್ಕೆ ಬದಲಿಯಾಗಿ ಪ್ರಾಧಿಕಾರಕ್ಕೆ ಒಟ್ಟು 05 ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿ ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಿರುವುದು ಕಂಡುಬಂದಿರುತ್ತದೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

 

ಅಲ್ಲದೇ ಪ್ರಾಧಿಕಾರದ ವಶದಲ್ಲಿರುವ ಜಮೀನಿಗೆ ಬದಲಿಯಾಗಿ ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿನ ಜಾಗೆಯನ್ನು ನೀಡುವ ಬಗ್ಗೆ ಪ್ರಾಧಿಕಾರದ ಸಭೆಗೆ ಮಂಡಿಸಿದ್ದರು. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987 ಹಾಗೂ 1991ರ ನಿಯಮಗಳಡಿಯಲ್ಲಿ ಅವಕಾಶವಿರುವುದಿಲ್ಲ. ಮತ್ತು ಈಗಾಗಲೇ ಅಭಿವೃದ್ಧಿಪಡಿಸಿದ ಬಡಾವಣೆಗೆ ಶೇ.50;50ರ ಅನುಪಾತದ ನಿಯಮಗಳು ಅನ್ವಯವಾಗುವುದಿಲ್ಲ. ಆದ್ದರಿಂದ ಪ್ರಾಧಿಕಾರದಿಂದ ಕೈಗೊಳ್ಳುವ ಅಂತಹ ಯಾವುದೇ ಕ್ರಮವು ನಿಯಮಬಾಹಿರವಾಗುತ್ತದೆ ಎಂದೂ ಅಭಿಪ್ರಾಯಿಸಿದೆ.

the fil favicon

SUPPORT THE FILE

Latest News

Related Posts