ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಾನೂನುಬಾಹಿರವಾಗಿ ಆಸ್ತಿಗಳ ಹಂಚಿಕೆ, ಇದರಿಂದ ಸಂಭವಿಸಿರುವ ಆರ್ಥಿಕ ನಷ್ಟದ ಕುರಿತು ಉನ್ನತ ಮಟ್ಟದ ತನಿಖಾ ತಂಡದ ರಚನೆ, ಪ್ರತಿ ಆರೋಪಗಳ ಕುರಿತು ಸಮಗ್ರವಾಗಿ ತನಿಖೆ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವಿಚಾರದಲ್ಲಿ ಮೈಸೂರು ಜಿಲ್ಲಾಧಿಕಾರಿ 7 ತಿಂಗಳ ಹಿಂದೆಯೇ ಪತ್ರ ಮತ್ತು ವಿಚಾರಣೆ ವರದಿ ಸಲ್ಲಿಸಿದ್ದರು.
ಬದಲಿ ನಿವೇಶನ, ತುಂಡು ಜಾಗ ಮಂಜೂರಾತಿ, 50;50 ಅನುಪಾತದಡಿಯಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ವಿವಿಧ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಬರೆದಿದ್ದ ಪತ್ರ ಮತ್ತು ನೀಡಿದ್ದ ವಿಚಾರಣೆ ವರದಿಯನ್ನು ನಗರಾಭಿವೃದ್ಧಿ ಇಲಾಖೆಯು ಕಸದ ಬುಟ್ಟಿಗೆ ಎಸೆದಿತ್ತು.
ಮೂಡಾದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಸಚಿವ ಬೈರತಿ ಸುರೇಶ್ ಅವರು ಒಂದಷ್ಟು ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ಸೂಚನೆ ನೀಡಿರುವ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿ ಕಳೆದ 7 ತಿಂಗಳ ಹಿಂದೆಯೇ ಬರೆದಿದ್ದ ಪತ್ರವು ಮುನ್ನೆಲೆಗೆ ಬಂದಿದೆ. ಮೈಸೂರು ಜಿಲ್ಲಾಧಿಕಾರಿ ಬರೆದಿದ್ದ ಪತ್ರವು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಪ್ರಾಧಿಕಾರದ ಆಯುಕ್ತರ ವಿರುದ್ಧ ಮಾಡಲಾಗಿರುವ ಪ್ರತಿ ಆರೋಪಗಳ ಕುರಿತು ವಿಚಾರಣೆ ಮತ್ತು ಪರಿಶೀಲನೆ ಅತ್ಯವಶ್ಯಕ. ಪ್ರತಿ ಆರೋಪಗಳನ್ನು ಪರಾಮರ್ಶಿಸಲು ಮತ್ತು ಉಂಟಾಗಿರುವ ನಷ್ಟದ ಸಂಬಂಧ ಕ್ರಮ ಕೈಗೊಳ್ಳಲು ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿ ಪ್ರತಿ ಆರೋಪಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಸೂಕ್ತ,’ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯಿಸಿದ್ದರು. ಆದರೆ 7 ತಿಂಗಳವರೆಗೂ ನಗರಾಭಿವೃದ್ಧಿ ಇಲಾಖೆಯು ಈ ಪತ್ರದ ಮೇಲೆ ಕಠಿಣ ಕ್ರಮ ಕೈಗೊಂಡಿರಲಿಲ್ಲ.
ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆಯೇ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆಯೇ ಇರುವ ಪ್ರಕರಣಗಳಲ್ಲಿ ಪ್ರಾಧಿಕಾರವು ಭೂ ಮಾಲೀಕರಿಗೆ 50;50 ರ ಅನುಪಾತದಲ್ಲಿ ಪರಿಹಾರವನ್ನು ನೀಡುವ ಸಲುವಾಗಿ ಮೂಡಾ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯದ ಮೇಲೆ ಭೂ ಮಾಲೀಕರಿಗೆ ಪರಿಹಾರವನ್ನು ನೀಡುವ ಸಲುವಾಗಿ ಕ್ರಮ ಜರುಗಿಸಿತ್ತು. ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ ನಿಯಮ 13(2ಎ) ನಿರ್ಣಯವನ್ನು ಕಾರ್ಯಗತಗೊಳಿಸಬೇಕಾಗಿರುತ್ತದೆ ಎಂದು ಆಯುಕ್ತರು ಸಮಜಾಯಿಷಿ ನೀಡಿದ್ದರು.
ಮೂಡಾ ಅಕ್ರಮಗಳ ಕುರಿತು ಸಲ್ಲಿಕೆಯಾಗಿದ್ದ ಹಲವು ದೂರುಗಳ ಕುರಿತು ಮೈಸೂರು ಜಿಲ್ಲಾಧಿಕಾರಿ ಅವರು ಅಂದಿನ ಆಯುಕ್ತರುಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದರು. ಈ ನೋಟೀಸ್‌ಗಳಿಗೆ ಆಯುಕ್ತರುಗಳು ಉತ್ತರ, ವಿವರಣೆ ನೀಡಿದ್ದಾರದಾರೂ ಹಲವು ಅಂಶಗಳ ಕುರಿತು ಸ್ಪಷ್ಟತೆಯೇ ಇರಲಿಲ್ಲ ಎಂಬುದು ಜಿಲ್ಲಾಧಿಕಾರಿ ಪತ್ರದಿಂದ ಗೊತ್ತಾಗಿದೆ.
ಆದರೆ ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ ನಿಯಮ 13(2ಎ)ರಂತೆ ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಅನುಷ್ಠಾನಗೊಳಿಸುವ ಪೂರ್ವದಲ್ಲಿ ಸರ್ಕಾರದ ಅನುಮೋದನೆ ಪಡೆದು ಕಾರ್ಯಗತಗೊಳಿಸಬೇಕಾಗಿತ್ತು. ಆದರೆ ಆಯುಕ್ತರು ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಸರ್ಕಾರದಿಂದ ಅನುಮೋದನೆ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.
‘ಪ್ರಾಧಿಕಾರವು ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರದ ಅನುಮೋದನೆ ಪಡೆದು ಆಯುಕ್ತರು ನಿರ್ಣಯಗಳನ್ನು ಜಾರಿಗೆ ತರಲು ಮಾತ್ರ ಕಾಯ್ದೆಯಲ್ಲಿ ಅವಕಾಶವಿದೆ. ಪರಿಹಾರಕ್ಕೆ ಆಯುಕ್ತರು ನಿರ್ಧರಿಸಿರುವ ಪ್ರಕರಣಗಳಲ್ಲಿ ಪ್ರಾಧಿಕಾರದ ಅನುಮೋದನೆ ಪಡೆಯದೇ ಕ್ರಮ ವಹಿಸಿರುವುದು ಕಂಡು ಬಂದಿದ್ದು ಇದು ನಿಯಮಬದ್ಧವಾಗಿರುವುದಿಲ್ಲ,’ ಎಂದು ಜಿಲ್ಲಾಧಿಕಾರಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದೇ ರೀತಿಯ ಪ್ರಕಣಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಳವಡಿಸಿಕೊಳ್ಳಲಾದ ಮಾನದಂಡಗಳ ಅನ್ವಯ ಅಂದಿನ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಅದೇ ಮಾನದಂಡಗಳ ಆಧಾರದ ಮೇಲೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯವರ ವರದಿ, ತಾಂತ್ರಿಕ ವರದಿ ಹಾಗೂ ಸರ್ವೆ ವರದಿ ಆಧಾರದ ಮೇಲೆ ಕ್ರಮ ಜರುಗಿಸಿದೆ ಎಂದು ಮೂಡಾ ಆಯುಕ್ತರು ತಿಳಿಸಿದ್ದರು.
ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೈಗೊಂಡ ನಿಯಮಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅನ್ವಯ ಮಾಡಿಕೊಳ್ಳಲು ಆಯುಕ್ತರಿಗೆ ಇರುವ ಅಧಿಕಾರದ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಿರುವುದಿಲ್ಲ ಎಂಬುದು ಜಿಲ್ಲಾಧಿಕಾರಿ ಪತ್ರದಿಂದ ತಿಳಿದು ಬಂದಿದೆ.
ನ್ಯಾಯಾಲಯಗಳು ಭವಿಷ್ಯದಲ್ಲಿ ಆದೇಶ ಹೊರಡಿಸಬಹುದೆಂದು ಅಂದಾಜಿಸಿ ಪ್ರಾಧಿಕಾರಕ್ಕೆ ಮುಂದೆ ನಷ್ಟ ಉಂಟಾಗದಂತೆ ಕ್ರಮವಹಿಸಿರುವುದಾಗಿ ಎಂದು ಆಯಕ್ತರು ತಿಳಿಸಿದ್ದರು. ನ್ಯಾಯಾಲಯದ ಆದೇಶಗಳನ್ನು ಒಪ್ಪಲು ಬರದೇ ಇದ್ದ ಸಂದರ್ಭಗಳಲ್ಲಿ ಅದನ್ನು ಪ್ರಶ್ನಿಸಲು ಅವಕಾಶಗಳಿದ್ದವು. ಆದರೆ ಅದರ ಬಗ್ಗೆ ಪರಾಮರ್ಶಿಸದೇ ಕ್ರಮ ವಹಿಸಲಾಗಿದೆ ಎಂಬುದನ್ನು ಮೈಸೂರು ಜಿಲ್ಲಾಧಿಕಾರಿ ಗಮನಿಸಿರುವುದು ಗೊತ್ತಾಗಿದೆ.
ಸರ್ಕಾರವು (ಪತ್ರ ಸಂಖ್ಯೆ ;ವಾಇ 71 ಮೈಅಪ್ರಾ 2023(ಇ) ದಿನಾಂಕ 14.03.2023) ಬದಲಿ ನಿವೇಶನ ಮಂಜೂರಾತಿ ಹಾಗೂ ತುಂಡು ಜಾಗ ಹಂಚಿಕೆ ಮತ್ತು ಭೂ ಪರಿಹಾರವಾಗಿ ಜಾಗ ನೀಡುವುದನ್ನು ತಕ್ಷಣದಿಂದಲೇ ನಿಲ್ಲಿಸಲು ಸೂಚಿಸಿ ನಿರ್ದೇಶನ ನೀಡಿತ್ತು. ಈ ನಿರ್ದೇಶನದ ನಂತರವೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸಿ ಬದಲಿ ನಿವೇಶನ ಮಂಜೂರಾತಿ, ತುಂಡು ಜಾಗ ಹಂಚಿಕೆ ಮತ್ತು ಭೂ ಪರಿಹಾರವಾಗಿ ಜಾಗಗಳನ್ನು ನೀಡಲಾಗಿತ್ತು. ಈ ಆರೋಪಕ್ಕೆ ಆಯುಕ್ತರು ಯಾವುದೇ ವಿವರಣೆಯನ್ನು ಮೈಸೂರು ಜಿಲ್ಲಾಧಿಕಾರಿಗೆ ನೀಡಿಲ್ಲ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ 2009ರ ನಿಯಮಗಳು 2015ರ ಫೆ.11ರಂದೇ ಜಾರಿಗೆ ಬಂದಿದೆ. ಹೊಸದಾಗಿ ಕೈಗೊಳ್ಳುವ ವಸತಿ ಯೋಜನೆಗಳಿಗೆ ಸದರಿ ನಿಯಮಗಳನ್ನು ಪೂರ್ವಾನ್ವಯವಾಗುವಂತೆ ಅಳವಡಿಸಿಕೊಳ್ಳಲು ಅವಕಾಶವಿರುವ ಬಗ್ಗೆ ಪರಿಶೀಲಿಸಬೇಕಿತ್ತು.
‘ಈ ಹಿಂದೆ ಭೂ ಸ್ವಾಧೀನವಾಗಿರುವ ಪ್ರಕರಣಗಳಲ್ಲಿ ಈಗ ಪರಿಹಾರ ನೀಡುತ್ತಿರುವುದರ ಬಗ್ಗೆ ಮತ್ತು ಬದಲಿ ನಿವೇಶನ, ತುಂಡು ಜಾಗ ಮಂಜೂರಾತಿ ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಸ್ವೀಕೃತವಾಗಿದ್ದವು. ಇಂತಹ ಪ್ರಕರಣಗಳನ್ನು ಪ್ರಾಧಿಕಾರದ ಅನುಮೋದನೆ ಪಡೆಯದೇ ಆಯುಕ್ತರು ಕ್ರಮ ವಹಿಸಿದ್ದಾರೆ. ಇದರಿಂದ ಪ್ರೊಸಿಜರ್ ಲ್ಯಾಪ್ಸ್ ಆಗಿರುವುದು ಅಲ್ಲದೇ ಆರ್ಥಿಕ ನಷ್ಟ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ,’ ಎಂದು ವಿವರಿಸಿರುವುದು ಗೊತ್ತಾಗಿದೆ.