ಬೆಂಗಳೂರು; ಮೊರಾರ್ಜಿದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ಇನ್ನಿತರೆ ವಸತಿ ಶಾಲೆ, ಕಾಲೇಜು ಮತ್ತು ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರೂ ಸೇರಿದಂತೆ ಕೆಳ ಹಂತದ ಸಿಬ್ಬಂದಿಗಳಿಗೆ ಕಳೆದ ವರ್ಷದಲ್ಲಿ ಕನಿಷ್ಠ ವೇತನವೂ ದೊರೆತಿಲ್ಲ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆ, ಕಾಲೇಜು ಮತ್ತು ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಖಾಸಗಿ ಏಜೆನ್ಸಿಯು ಕನಿಷ್ಟ ವೇತನವನ್ನೂ ನೀಡದೇ ವಂಚಿಸಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘವು ಕಲ್ಬುರ್ಗಿ ವಿಭಾಗದಲ್ಲಿ ಆಗಿರುವ ವಂಚನೆಯನ್ನು ಸರ್ಕಾರದ ಗಮನಕ್ಕೆ ತಂದಿದೆ. ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ ಮಣಿವಣ್ಣನ್ ಅವರಿಗೆ 2024ರ ಮೇ 27ರಂದು ದಾಖಲೆ ಸಹಿತ ದೂರು ನೀಡಿದೆ.
ಕನಿಷ್ಟ ವೇತನ ಜಾರಿ ಮಾಡದೇ ವೇತನ ಕೊಡುತ್ತಿರುವ ಬಗ್ಗೆ ಹಾಗೂ ವ್ಯತ್ಯಾಸದ ಹಣವನ್ನು ಅರಿಯರ್ಸ್ ಮೂಲಕ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ವಸತಿ ಶಾಲೆ, ಕಾಲೇಜುಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಜವಾನರು, ಡಿ ವರ್ಗದ ಸಿಬ್ಬಂದಿಗಳಿಗೆ 2023-24ನೇ ಸಾಲಿನಲ್ಲಿ ಕೊಡಬೇಕಾದ ಕನಿಷ್ಟ ವೇತನವನ್ನು ಸಿಬ್ಬಂದಿಗಳಿಗೆ ಕೊಟ್ಟಿಲ್ಲ. 2023ರ ಏಪ್ರಿಲ್‌ನಿಂದ ಇಲ್ಲಿಲಯವರೆಗೂ ಕಡಿಮೆ ಸಂಬಳವನ್ನು ಗುತ್ತಿಗೆದಾರರು ಹೊರಗುತ್ತಿಗೆ ನೌಕರರ ಖಾತೆಗೆ ಜಮಾ ಮಾಡಿದ್ದಾರೆ,’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ದೂರಿನ ಜೊತೆಗೆ ನೌಕರರಿಗೆ ಕಡಿಮೆ ವೇತನ ಪಾವತಿಯಾಗಿರುವ ಸಂಬಂಧ ನೌಕರರವಾರು ಬ್ಯಾಂಕ್ ದಾಖಲೆಯನ್ನೂ ಒದಗಿಸಿದ್ದಾರೆ.
ಕಲ್ಬುರ್ಗಿಯ ಅನ್ಸಾಬಾಯಿ (ಅಡುಗೆಯವರು) ಅವರಿಗೆ 12, 552 ರು ಪಾವತಿಸಲಾಗಿದೆ.
ಬಾಲಮ್ಮ ಅವರಿಗೂ 12,552 ರು ಪಾವತಿಸಲಾಗಿದೆ.
ಗಂಗಮ್ಮ ಅವರಿಗೂ 12,552 ರು ನೀಡಲಾಗಿದೆ.
ಹಸೀನಾ ಬೇಗಂ ಅವರಿಗೆ 12,552 ರು ಪಾವತಿಸಿದೆ.
ಸವಿತಾ ಅವರಿಗೂ 12,552 ರು ನೀಡಲಾಗಿದೆ. ಸರಸ್ವತಿ ಅವರಿಗೆ 11,704,
ಕಮಲಾಬಾಯಿ ಅವರಿಗೆ 11,704, ಮಲ್ಲಿನಾಥ್ ಅವರಿಗೆ 11,704,
ಅಂಬಿಕಾ ಅವರಿಗೆ 13,231 ರು ಪಾವತಿಸಿರುವುದು ವೇತನ ಪಟ್ಟಿಯಿಂದ ತಿಳಿದು ಬಂದಿದೆ.
ವಾಸ್ತವದಲ್ಲಿ ಮುಖ್ಯ ಅಡುಗೆಯವರಿಗೆ 14,758 ರು, ಅಡುಗೆಯವರಿಗೆ 14,386 ರು ಮಾಸಿಕ ಕನಿಷ್ಟ ವೇತನ ನೀಡಬೇಕು. ಸಹಾಯಕರಿಗೆ 11,872 ರು ಪಾವತಿಸಬೇಕು ಎಂದು ನಿಯಮದಲ್ಲಿ ಸೂಚಿಸಲಾಗಿದೆ. ಆದರೆ ಕಲ್ಬುರ್ಗಿ ವಿಭಾಗ ಸೇರಿದಂತೆ ಹಲವೆಡೆ ಈ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಗೊತ್ತಾಗಿದೆ.
ಹೊರಗುತ್ತಿಗೆ ಉದ್ಯೋಗಿಗಳ ಬದುಕು ಲಾಗಾಯ್ತಿನಿಂದಲೂ ಅತಂತ್ರ ಸ್ಥಿತಿಯಲ್ಲೇ ಇದೆ. ಸರ್ಕಾರ ಟೆಂಡರ್ ಕರೆದು ಕೆಲಸಗಾರರನ್ನು ಪೂರೈಸುವ ಏಜೆನ್ಸಿಗಳನ್ನು ಮೊದಲೇ ಗೊತ್ತುಪಡಿಸಿರುತ್ತದೆ. ಟೆಂಡರ್ ಪಡೆಯುವಾಗಲೇ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ವ್ಯವಾಹರಿಕವಾಗಿ ಪೂರ್ವ ನಿರ್ಧರಿತ ಒಪ್ಪಂದಗಳೂ ನಡೆದಿರುತ್ತವೆ.
ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸಫಾಯಿ ಕೆಲಸ, ಕಾವಲು, ಅಡುಗೆ ಮಾಡುವ ಸಿಬ್ಬಂದಿ ಮೇಲೆ ಈಗಲೂ ಶೋಷಣೆ ಮುಂದುವರೆದಿದೆ.
ಇನ್ನು, ನೌಕರರಿಗೆ ಸಂಬಳ ನೀಡುತ್ತಿರುವ ಗುತ್ತಿಗೆದಾರರು ಯಾರು ಎಂಬುದೇ ಗೊತ್ತಿರುವುದಿಲ್ಲ. ಅಲ್ಲದೇ ಗುತ್ತಿಗೆದಾರರು ನೌಕರರಿಗೆ ಗುರುತಿನ ಚೀಟಿ, ನೇಮಕ ಪತ್ರ ನೀಡುವುದಿಲ್ಲ. ಸೂಕ್ತ ಸಂಬಳ ನೀಡದೆ ಸತಾಯಿಸುವುದು ನಿಂತಿಲ್ಲ. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನದಲ್ಲಿ ಕಾನೂನುಬಾಹಿರವಾಗಿ ಕಡಿತ ಮಾಡಿ ಕಡಿಮೆ ಸಂಬಳ ಪಾವತಿಸುತ್ತಾರೆ. ವೇತನ ಚೀಟಿಯನ್ನು ನೀಡುವುದಿಲ್ಲ. ಭವಿಷ್ಯನಿಧಿ ವಂತಿಗೆಯನ್ನು ನೌಕರರ ಖಾತೆಗೆ ಜಮಾ ಮಾಡುವುದಿಲ್ಲ ಎಂದು ಇಲಾಖೆಗೆ ಹಲವು ಬಾರಿ ದೂರು ಸಲ್ಲಿಕೆಯಾದರೂ ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ.
‘ಏಜೆನ್ಸಿಗಳು ನೌಕರರಿಗೆ ಸರಿಯಾಗಿ ಸಂಬಳ ಕೊಡುವುದಿಲ್ಲ. ಕೈಗೆ ಬಂದ ಸಂಬಳದಲ್ಲಿ ಏಜೆನ್ಸಿಗಳಿಗೆ ಪ್ರತಿ ತಿಂಗಳು ಕಮಿಷನ್ ರೂಪದಲ್ಲೇ ನಿಗದಿತ ಹಣ ಕೊಡಬೇಕು. ಸರ್ಕಾರಿ ನೌಕರರು ಮತ್ತು ಅವರಿಗೆ ಸಮಾನವಾಗಿ ಕೆಲಸ ಮಾಡುವ ಗುತ್ತಿಗೆ ನೌಕರರ ಸಂಬಳದ ನಡುವೆ ದೊಡ್ಡ ಪ್ರಮಾಣದ ವ್ಯತ್ಯಾಸ ಇರುತ್ತದೆ. ಉದ್ಯೋಗ ಭದ್ರತೆ ಇಲ್ಲ,’ ಎನ್ನುತ್ತಾರೆ ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು.