ಬೆಂಗಳೂರು; ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಿಮಿನ್ ಸಿ (ಜಗಿಯುವ) ಮಾತ್ರೆಗಳನ್ನು 44.00 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಮುಂದಾಗಿರುವ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ನಿರ್ದಿಷ್ಟ ಕಂಪನಿಗೇ ಅವಕಾಶ ಕಲ್ಪಿಸಲು ಮರು ಟೆಂಡರ್ ಕರೆಯದೇ ಸಿಂಗಲ್ ಟೆಂಡರ್ ನಡೆಸಿರುವುದು ಇದೀಗ ಬಹಿರಂಗವಾಗಿದೆ.
ಹಾಗೆಯೇ ಬಜಾಜ್ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿಗಷ್ಟೇ ಸರಿ ಹೊಂದುವಂತೆ ಟೆಂಡರ್ ಷರತ್ತುಗಳನ್ನು ರೂಪಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಟೆಂಡರ್‌ನಲ್ಲಿ ಅಂದಾಜು ಬೆಲೆಯನ್ನು ಹೆಚ್ಚಿಸುವ ಮೂಲಕ ದರವನ್ನೂ ಹೆಚ್ಚಳಗೊಳಿಸಿದೆ ಎಂದು ಗೊತ್ತಾಗಿದೆ. ಅಲ್ಲದೇ ಈ ಕಂಪನಿಯು ನಮೂದಿಸಿರುವ ದರವನ್ನು ಕೆಎಸ್‌ಎಂಎಸ್‌ಸಿಎಲ್, ನೆರೆರಾಜ್ಯಗಳ ದರದೊಂದಿಗೆ ಹೋಲಿಸಿಲ್ಲ. ದರಗಳ ಕುರಿತು ಸಚಿವ ದಿನೇಶ್ ಗುಂಡೂರಾವ್ ಅವರನ್ನೂ ನಿಗಮದ ಅಧಿಕಾರಿಗಳು ಕತ್ತಲಲ್ಲಿ ಇರಿಸಿದ್ದಾರೆ.
ಒಂದೊಮ್ಮೆ ಇದೇ ಕಂಪನಿಯು ನಮೂದಿಸಿರುವ ದರವನ್ನೇನಾದರೂ ಒಪ್ಪಿದಲ್ಲಿ ಸರ್ಕಾರಕ್ಕೆ ಬಹು ಕೋಟಿಯಷ್ಟು ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಈ ಕುರಿತು ‘ದಿ ಫೈಲ್’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.
ಟೆಂಡರ್‌ನಲ್ಲಿ ಭಾಗವಹಿಸುವ ಕಂಪನಿಗಳು/ ಸರಬರಾಜು ಸಂಸ್ಥೆಗಳು ಔಷಧ ಉತ್ಪನ್ನಗಳ ಮಾದರಿಗಳನ್ನು ಸಲ್ಲಿಸುವ ಷರತ್ತನ್ನು ತೆಗೆದು ಹಾಕಿರುವ ಕಾರಣ ವಿಟಮಿನ್ ಸಿ ಮಾತ್ರೆಗಳನ್ನು ಬಿಡ್‌ದಾರರಿಂದ ಮಾದರಿಯನ್ನೂ ಸಹ ತೆಗೆದುಕೊಂಡಿಲ್ಲ. ಹೀಗಾಗಿ ಇಡೀ ಪ್ರಕ್ರಿಯೆಯು ನಿರ್ದಿಷ್ಟ ಕಂಪನಿ/ಸರಬರಾಜು ಸಂಸ್ಥೆಯ ಜತೆ ಪೂರ್ವ ನಿರ್ಧರಿತ ಒಪ್ಪಂದ ಮಾಡಿಕೊಂಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ವಿಟಮಿನ್ ಸಿ ಜಗಿಯಬಹುದಾದ (500 ಮಿ ಗ್ರಾಂ) 66,90,68,400 ಪ್ರಮಾಣದಲ್ಲಿ ಮಾತ್ರೆಗಳನ್ನು ಖರೀದಿಸಲು 2024ರ ಜನವರಿ 12ರಂದು ಟೆಂಡರ್ ಆಹ್ವಾನಿಸಿತ್ತು.
ನಂತರ ಟೆಂಡರ್ ಅವಧಿಯನ್ನು 5 ಬಾರಿ ವಿಸ್ತರಿಸಲಾಗಿತ್ತು. ಬಜಾಜ್ ಹೆಲ್ತ್ ಕೇರ್ ಹೊರತುಪಡಿಸಿ ಬೇರೆ ಯಾವ ಕಂಪನಿಗಳು ಭಾಗವಹಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಇಂತಹ ಸಂದರ್ಭದಲ್ಲಿ ಟೆಂಡರ್ ಷರತ್ತುಗಳನ್ನು ಸಡಿಲಗೊಳಿಸಿ ಮರು ಟೆಂಡರ್ ಕರೆಯಬೇಕಾಗಿತ್ತು. ಆದರೆ ನಿಗಮವು ಈ ಪ್ರಕ್ರಿಯೆಯನ್ನು ಮಾಡಿಲ್ಲ. ಹೀಗಾಗಿ ಸಿಂಗಲ್ ಟೆಂಡರ್ ಆಗಿತ್ತು.
ಬಜಾಜ್ ಹೆಲ್ತ್ ಕೇರ್ ಕಂಪನಿಯು ಪ್ರತಿ ಯೂನಿಟ್‌ಗೆ 69 ರು.ನಂತೆ ಅಂದಾಜು ದರವನ್ನು ನಮೂದಿಸಿದೆ. ಕೇರಳ ಮೆಡಿಕಲ್ ಸರ್ವಿಸ್ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿ ಭಾಗವಹಿಸಿದ್ದ ಟೆಂಡರ್‌ನಲ್ಲೂ ಇದೇ ಕಂಪನಿಯು ವಿಟಮಿನ್ ಸಿ ಪ್ರತಿ ಮಾತ್ರೆಗೆ 43 ಪೈಸೆಯಂತೆ 100 ಮಾತ್ರೆಗಳ ಘಟಕವೊಂದಕ್ಕೆ 42.56 ರು.ಗಳನ್ನು (ಎಲ್ಲಾ ತೆರಿಗೆಗಳನ್ನೂ ಒಳಗೊಂಡಂತೆ) ದರ ನಮೂದಿಸಿದೆ.
ಇದರ ಪ್ರಕಾರ ಕರ್ನಾಟಕದಲ್ಲಿ ಈ ಕಂಪನಿಯು ನಮೂದಿಸಿರುವ ದರವನ್ನು ಕೇರಳದಲ್ಲಿ ನಮೂದಿಸಿರುವ ದರಕ್ಕೆ ಹೋಲಿಸಿದರೆ ಪ್ರತಿ ಯೂನಿಟ್‌ಗೆ 26.44 ರು ವ್ಯತ್ಯಾಸವಿದೆ. ಇದು ರಾಜ್ಯದ ಬೊಕ್ಕಸಕ್ಕೆ ಅಂದಾಜು 17.69 ಕೋಟಿಯಷ್ಟು ನಷ್ಟವಾಗಲಿದೆ ಎಂದು ಗೊತ್ತಾಗಿದೆ.
ಇನ್ನು ಇದೇ ವಿಟಮಿನ್ ಸಿ ಮಾತ್ರೆ (500 ಮಿ ಗ್ರಾಂ)ಗಳಿಗೆ ಉತ್ತರ ಪ್ರದೇಶ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿರುವ ದರಗಳೊಂದಿಗೆ ಹೋಲಿಸಿ ನೋಡಿದರೂ ಅಪಾರ ಪ್ರಮಾಣದಲ್ಲಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗುವ ಸಾಧ್ಯತೆಗಳೇ ಹೆಚ್ಚಿವೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದಲ್ಲಿ ಇದೇ ಮಾತ್ರೆಗೆ 29 ಪೈಸೆ ಇದೆ. ಈ ದರವು ಕರ್ನಾಟಕದ ದರಕ್ಕಿಂತ ಪ್ರತಿ ಯೂನಿಟ್ ಗೆ 40.00 ರು.ನಷ್ಟು ಕಡಿಮೆ ಇದೆ. ಇದರ ಪ್ರಕಾರ ರಾಜ್ಯದ ಬೊಕ್ಕಸಕ್ಕೆ ಅಂದಾಜು 26.76 ಕೋಟಿಯಷ್ಟು ನಷ್ಟವಾಗಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ರಾಜಸ್ಥಾನದಲ್ಲಿ ಇದೇ ಮಾತ್ರೆಯ ದರವು ಪ್ರತಿ ಯೂನಿಟ್‌ಗೆ 41.93 ರು.ನಷ್ಟಿದೆ. ಕರ್ನಾಟಕದಲ್ಲಿ ಅನುಮೋದಿಸಿರುವ ದರಕ್ಕೆ ಹೋಲಿಸಿದರೆ ಪ್ರತಿ ಯೂನಿಟ್‌ಗೆ 27.03 ರು.ನಷ್ಟು ಕಡಿಮೆ ಇದೆ. ಇದರ ಪ್ರಕಾರ 18.11 ಕೋಟಿಯಷ್ಟು ನಷ್ಟವಾಗಲಿದೆ.
ಒರಿಸ್ಸಾದಲ್ಲಿ ಇದರ ದರವು ಪ್ರತಿ ಯೂನಿಟ್‌ಗೆ 39 ರು ಇದೆ. ಈ ದರವು ಕರ್ನಾಟಕದ ದರಕ್ಕಿಂತ ಪ್ರತಿ ಯೂನಿಟ್‌ಗೆ 30 ರೂ.ಗಳಷ್ಟು ಕಡಿಮೆಯಾಗಿದೆ. ಇದರ ಪ್ರಕಾರ ಬೊಕ್ಕಸಕ್ಕೆ 20.07 ಕೋಟಿಯಷ್ಟು ನಷ್ಟವಾಗಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇದರ ದರವು ಪ್ರತಿ ಯೂನಿಟ್‌ಗೆ 47 ರು. ಇದೆ. ಈ ದರವು ಕರ್ನಾಟಕದ ದರಕ್ಕೆ ಹೋಲಿಸಿದರೆ 20 ರು ಕಡಿಮೆಯಾಗಿದೆ. ಇದರ ಪ್ರಕಾರ 14.71 ಕೋಟಿ ರು ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಲಿದೆ.
ವಿಶೇಷವೆಂದರೇ ವಿಟಮಿನ್ ಸಿ 500 ಮಿ. ಗ್ರಾಂ ಮಾತ್ರೆಯನ್ನೂ ಒಳಗೊಂಡಂತೆ ಇನ್ನಿತರೆ ಔಷಧ ಸಾಮಗ್ರಿಗಳ ಖರೀದಿಗೆ 2023ರ ಮೇ 25ರಂದು ನಿಗಮವು ಟೆಂಡರ್ ಕರೆದಿತ್ತು. ಆ ವೇಳೆಯಲ್ಲಿ ಇದೇ ಮಾತ್ರೆಗೆ ಪ್ರತಿ ಯೂನಿಟ್‌ಗೆ ಅಂದಾಜು 52.25 ರು.ಗಳನ್ನು ನಿಗದಿಪಡಿಸಿತ್ತು. 8 ತಿಂಗಳ ನಂತರ ಮತ್ತೊಮ್ಮೆ ಕರೆದಿದ್ದ ಟೆಂಡರ್‌ನಲ್ಲಿ ಇದೇ ಮಾತ್ರೆಗೆ ಪ್ರತಿ ಯೂನಿಟ್‌ಗೆ 67.00 ರು.ಗಳನ್ನು ನಮೂದಿಸಿದೆ. ಈ ಅವಧಿಯಲ್ಲಿ 14.75 ರು. ವ್ಯತ್ಯಾಸವಿದೆ.
ಇನ್ನು ಬಿಡ್‌ದಾರರು ಇಎಂಡಿ ಮೊತ್ತವನ್ನು ಬ್ಯಾಂಕ್ ಗ್ಯಾರಂಟಿ ಮತ್ತು ಆನ್‌ಲೈನ್ ಮೂಲಕ ಪಾವತಿಸಬಹುದು ಎಂದು ಟೆಂಡರ್‌ನಲ್ಲಿ ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಈ ಟೆಂಡರ್ ಪ್ರಕ್ರಿಯೆಯಲ್ಲಿ ಆನ್‌ಲೈನ್ ವ್ಯವಸ್ಥೆಗಷ್ಟೇ ಅವಕಾಶ ಕಲ್ಪಿಸಿ ಬ್ಯಾಂಕ್ ಗ್ಯಾರಂಟಿ ಅವಕಾಶ ನೀಡಿಲ್ಲ. ಇದರಿಂದ ಸ್ಪರ್ಧಾತ್ಮಕತೆಗೆ ಅವಕಾಶವಿಲ್ಲದಂತಾಗುತ್ತದೆ.
ಇದಕ್ಕೆ ಸಂಬಂಧಿಸಿದಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಹಣಕಾಸಿನ ಬಿಡ್‌ನ್ನಷ್ಟೇ ತೆರೆಯಲಾಗಿದೆ. ಇನ್ನೂ ಈ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಅಂದಾಜು ಮೊತ್ತ ಮತ್ತು ತಾಂತ್ರಿಕ ನಿರ್ದಿಷ್ಟತೆಯನ್ನು ತಾಂತ್ರಿಕ ಸಮಿತಿಯು ನಿರ್ಧರಿಸುತ್ತದೆ. ರೇಟ್ ಕಾಂಟ್ರಾಕ್ಟ್ ಪದ್ಧತಿಯು ನಮ್ಮ ರಾಜ್ಯದಲ್ಲಿ ಇಲ್ಲ. ನಮ್ಮ ರಾಜ್ಯದಲ್ಲಿ ಕೆಟಿಪಿಪಿ ಕಾಯ್ದೆ ಮಾತ್ರ ಚಾಲ್ತಿಯಲ್ಲಿದೆ. ಹೀಗಾಗಿ ದರಗಳಲ್ಲಿ ಭಿನ್ನತೆ ಇರಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.