ನಕಲಿ ದಾಖಲೆ ಸೃಷ್ಟಿಸಿ ಅನಧಿಕೃತ ಖಾತೆಗಳಿಗೆ 94.73 ಕೋಟಿ ವರ್ಗಾವಣೆ; ನಿಗಮವನ್ನೇ ಕತ್ತಲಲ್ಲಿಟ್ಟಿದ್ದ ಬ್ಯಾಂಕ್‌!

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವನ್ನು ಕತ್ತಲಲ್ಲಿಟ್ಟಿದ್ದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧಿಕಾರಿಗಳು ಓವರ್‍‌ ಡ್ರಾಫ್ಟ್‌ ಸೌಲಭ್ಯ ಮತ್ತು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅನಧಿಕೃತವಾಗಿ ಬೇರೆ ಬೇರೆ ಖಾತೆಗಳಿಗೆ 94.73 ಕೋಟಿ ರುಪಾಯಿ ವರ್ಗಾವಣೆ ಮಾಡಿದ್ದರು.

 

ನಿಗಮದ ಲೆಕ್ಕ ಅಧೀಕ್ಷಕ ಚಂದ್ರಶೇಖರ್‍‌ ಆತ್ಮಹತ್ಯೆ ಪ್ರಕರಣವು ರಾಜಕೀಯಕರಣಗೊಳ್ಳುತ್ತಿದ್ದಂತೆ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್‍‌ ಅವರು ಠಾಣೆಗೆ ನೀಡಿರುವ ದೂರಿನಲ್ಲಿ ಬ್ಯಾಂಕ್‌ನ ಮೋಸದ ಚಟುವಟಿಕೆಗಳನ್ನು ವಿವರಿಸಿದ್ದಾರೆ.

 

ರಾಜಶೇಖರ್‍‌ ಅವರು ನೀಡಿದ್ದ ದೂರಿನ ಆಧಾರದ ಮೇಲ್‌ ಬ್ಯಾಂಕ್‌ನ ಎಂ ಡಿ ಹಾಗೂ ಸಿಇಒ ಮನಿಮೇಖಲೈ ಮತ್ತಿತರರ ವಿರುದ್ಧ ಎಫ್‌ಐಆರ್‍‌ ದಾಖಲಾಗಿದೆ. ಬ್ಯಾಂಕ್‌ನ ಅಧಿಕಾರಿಗಳು ನಿಗಮ ಮತ್ತು ನಿಗಮದ ಅಧಿಕಾರಿಗಳ ಗಮನಕ್ಕೂ ತಾರದೆಯೇ ನಿಗಮಕ್ಕೆ ಸೇರಿದ 94.73 ಕೋಟಿ ರು.ಗಳನ್ನು ಅನಧಿಕೃತವಾಗಿ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು ಎಂದು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಲಾಗಿದೆ.

 

ಎಫ್‌ಐಆರ್‍‌ನಲ್ಲೇನಿದೆ?

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯನ್ನು ( ಖಾತೆ ಸಂಖ್ಯೆ; 520141001659653) ಎಂ ಜಿ ರಸ್ತೆಯಲ್ಲಿರುವ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾತೆಗೆ ವರ್ಗಾಯಿಸಿಕೊಂಡಿತ್ತು. ನಿಗಮದ ಖಾತೆಯನ್ನು ನಿಗಮದ ಪರವಾಗಿ ನಿರ್ವಹಣೆ ಮಾಡಲು 2024ರ ಫೆ.26ರಂದು ಬ್ಯಾಂಕ್‌ನವರು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿಗಳು ಸಹಿ ಪಡೆದುಕೊಂಡು ಹೋಗಿದ್ದರು.

 

ಆ ನಂತರ ಈ ಖಾತೆಯಿಂದ 2024ರ ಮಾರ್ಚ್‌ 4ರಂದು 25 ಕೋಟಿ, ಮಾರ್ಚ್‌ 6ರಂದು 25 ಕೋಟಿ, 21ರಂದು 44 ಕೋಟಿ, 22ರಂದು 33 ಕೋಟಿ, ಮೇ 21ರಂದು 50 ಕೋಟಿ ರು. ಸೇರಿ ಒಟ್ಟು 185.33 ಕೋಟಿ ರು ಬೇರೆ ಬೇರೆ ಬ್ಯಾಂಕ್‌ನಿಂದ ಹಾಗೂ ಸ್ಟೇಟ್‌ ಹುಜುರ್‍‌ ಟ್ರೆಜರಿ ಖಜಾನೆ 2ರಿಂದ ನಿಗಮದ ಖಾತೆಗೆ ಹಣ ಸಂದಾಯವಾಗಿತ್ತು.

 

ಚೆಕ್‌ಬುಕ್‌, ಪಾಸ್‌ ಬುಕ್‌ ನೀಡದ ಬ್ಯಾಂಕ್‌

 

ಈ ಮಧ್ಯೆ ಚುನಾವಣೆ ನೀತಿ ಸಂಹಿತೆ ಇದ್ದದ್ದರಿಂದ ನಿಗಮ ಮತ್ತು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದೊಂದಿಗೆ ಯಾವುದೇ ಮಾತುಕತೆ, ಪತ್ರವ್ಯವಹಾರ ನಡೆದಿರುವುದಿಲ್ಲ. ಸದರಿ ಬ್ಯಾಂಕ್‌ನವರು ನಿಗಮದ ಅಧಿಕೃತ ವಿಳಾಸಕ್ಕೆ ಯಾವುದೇ ಚೆಕ್‌ ಬುಕ್‌ ಹಾಗೂ ಪಾಸ್‌ ಬುಕ್‌ ಕಳಿಸಿರಲಿಲ್ಲ.

 

ದಾಖಲಾತಿಗಳನ್ನೂ ಕಳಿಸಿರಲಿಲ್ಲ

 

2024ರ ಮೇ 22ರಂದು ನಿಗಮದ ಅಧಿಕಾರಿಗಳು ಬ್ಯಾಂಕ್‌ ಗೆ ಹೋಗಿ ಚೆಕ್‌ ಬುಕ್‌ ಮತ್ತು ಪಾಸ್‌ ಬುಕ್‌ ಮತ್ತು ನಿಗಮದ ಖಾತೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ನಿಗಮದ ಅಧಿಕಾರಿಗಳು ಕೇಳಿದ್ದರು. ಆದರೆ ನಿಗಮದ ವಿಳಾಸಕ್ಕೆ ಕಳಿಸಲಾಗಿದೆ ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದರು. ಆದರೆ ವಾಸ್ತವದಲ್ಲಿ ಬ್ಯಾಂಕ್‌ ಯಾವುದೇ ದಾಖಲಾತಿಗಳನ್ನು ನೀಡಿರಲಿಲ್ಲ. ನಿಗಮಕ್ಕೆ ಸಂಬಂಧಪಟ್ಟ ದಾಖಲಾತಿಗಳು, ಆರ್‍‌ಟಿಜಿಎಸ್‌, ಬೋರ್ಡ್‌ ರೆಸ್ಯೂಲೂಷನ್‌ ಜತೆಗೆ ಸಹಿಯನ್ನು ನಕಲು ಮಾಡಿ ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಲಾಗಿತ್ತು ಎಂಬುದು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ.

 

‘ನಿಗಮದ ಖಾತೆಯನ್ನು ನೋಡಲಾಗಿ ಸುಮಾರು 94,73,08,500 ರು.ಗಳು ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುತ್ತದೆ. ಸಂಬಂಧಪಟ್ಟ ಬ್ಯಾಂಕ್‌ನವರು ನಿಗಮದ ನೋಂದಾಯಿತ ಇ-ಮೇಲ್‌ಗೆ ಇದಕ್ಕೆ ಸಂಬಂಧಪಟ್ಟ ಯಾವುದೇ ಸಂದೇಶಗಳನ್ನೂ ಕಳಿಸಿಲ್ಲ. ಮತ್ತು ಯಾವುದೇ ಮೊಬೈಲ್‌ ನಂಬರ್‍‌ಗಳನ್ನೂ ರೆಕಾರ್ಡ್‌ ಮಾಡಿಲ್ಲ. ಹಣ ವರ್ಗಾವಣೆಯಾದ ಬಗ್ಗೆ ಮಾಹಿತಿ ನೀಡಿರುವುದಿಲ್ಲ,’ ಎಂದು ರಾಜಶೇಖರ್‍‌ ಅವರು ದೂರಿನಲ್ಲಿ ವಿವರಿಸಿದ್ದಾರೆ.

 

ಈ ಪ್ರಕರಣ ಬೆಳಕಿಗೆ ಬಂದ ನಂತರ ತಕ್ಷಣವೇ ನಿಗಮದ ಖಾತೆಗೆ 5 ಕೋಟಿ ರು.ಗಳನ್ನು ಬ್ಯಾಂಕ್‌ನವರು ಜಮಾವಣೆ ಮಾಡಿದ್ದಾರೆ. ಹಾಗೂ ಅಕ್ರಮಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್‌ ಸಿಸಿಟಿವಿ ದೃಶ್ಯಗಳು ಒದಗಿಸುವಂತೆ ಕೋರಲಾಗಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಸಿಸಿಟಿವಿ ದೃಶ್ಯಗಳನ್ನು ಒದಗಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಓವರ್‍‌ ಡ್ರಾಫ್ಟ್‌ ಸೌಲಭ್ಯ ಸೃಷ್ಟಿಸಿ ಮತ್ತು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅನಧಿಕೃತವಾಗಿ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಢಿ ಕೃತ್ಯ ಎಸಗಿ ನಿಗಮ, ಮಂಡಳಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.  ಈ ಸಂಬಂಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಎಫ್‌ಐಆರ್‍‌ ದಾಖಲಾಗಿದೆ.

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ ನಾಗೇಂದ್ರ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅನಧಿಕೃತ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದನ್ನು ಒಪ್ಪಿಕೊಂಡಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts