ಚುರುಕುಗೊಳ್ಳದ ಇ-ಆಡಳಿತ; 41 ಇಲಾಖೆಗಳಲ್ಲಿ 65,159 ಕಡತಗಳಿಗಿಲ್ಲ ಮುಕ್ತಿ ಭಾಗ್ಯ, ಆಡಳಿತವೇ ನಿಷ್ಕ್ರೀಯ?

ಬೆಂಗಳೂರು; ಕಡತಗಳ ವಿಲೇವಾರಿಯನ್ನು ಚುರುಕುಗೊಳಿಸಲು ಇ-ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರೂ ಸಹ 2024ರ ಮೇ 16ರ ಅಂತ್ಯಕ್ಕೆ 41 ಇಲಾಖೆಗಳಲ್ಲಿ 1.10 ಲಕ್ಷ ಕಡತಗಳ ಪೈಕಿ 65,159 ಕಡತಗಳು ತ್ರಿಶಂಕು ಸ್ಥಿತಿಯಲ್ಲಿವೆ.

 

ಅಲ್ಲದೇ ಇಲಾಖೆಗಳಲ್ಲಿ ಅನಗತ್ಯವಾಗಿ ಕಡತಗಳನ್ನು ತೆರೆಯಲಾಗಿದೆ. ಹಾಗೂ ದೀರ್ಘ ಕಾಲದಿಂದಲೂ ಕಡತಗಳನ್ನು ಚಲನವಲನಗೊಳಿಸಿಲ್ಲ. ಹೀಗಾಗಿ ಬಾಕಿ ಉಳಿಯುತ್ತಿರುವ ಕಡತಗಳ ಸಂಖ್ಯೆ ಬೆಟ್ಟದಷ್ಟು ಏರುತ್ತಿದೆ. ಹಾಗೆಯೇ ಕಡತ ನಿರ್ವಹಣೆಯಲ್ಲಿ ಅದಕ್ಷತೆ ಎದ್ದು ಕಾಣುತ್ತಿದೆ.

 

ಕಡತ ನಿರ್ವಹಣೆ, ವಿಷಯಗಳ ವರ್ಗೀಕರಣಕ್ಕೆ ಸೂಕ್ತ ಮಾರ್ಗಸೂಚಿ ಮತ್ತು ವಿಶೇಷ ಕ್ರಮಗಳನ್ನು ಜಾರಿಗೊಳಿಸಿದ್ದರೂ 65,159 ಕಡತಗಳಿಗೆ ಮುಕ್ತಿ ಭಾಗ್ಯ ಕರುಣಿಸಿಲ್ಲ. ವಿಶೇಷವೆಂದರೇ ಇ-ಆಡಳಿತ ಇಲಾಖೆಯೊಂದರಲ್ಲೇ 2,922 ಕಡತಗಳು ಬಾಕಿ ಇವೆ.

 

ಬಾಕಿ ಉಳಿದಿರುವ ಕಡತಗಳಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳು/ ಅರ್ಜಿ/ ದೂರು ಹಾಗೂ ತೆಗೆದುಕೊಂಡ ಕ್ರಮಗಳ ಬಗೆಗಿನ ಕಡತಗಳೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಇವೆ ಎಂದು ಗೊತ್ತಾಗಿದೆ.

 

ಇ-ಕಚೇರಿ ತಂತ್ರಾಂಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಡತಗಳು ಬಾಕಿ ಉಳಿಯುತ್ತಿರುವ ಕುರಿತು ಇ-ಆಡಳಿತದ ಸರ್ಕಾರದ ಕಾರ್ಯದರ್ಶಿ ಉಜ್ವಲ್‌ ಕುಮಾರ್‍‌ ಘೋಷ್‌ ಅವರು ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ,ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. 2024ರ ಮೇ 16ರಂದು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕರ್ನಾಟಕ ಸರ್ಕಾರದ ಸಚಿವಾಲಯದ ಇಲಾಖೆಗಳಲ್ಲಿ ಅನಗತ್ಯವಾಗಿ ಕಡತಗಳನ್ನು ಸೃಜಿಸಿ ದೀರ್ಘ ಕಾಲದಿಂದ ಚಲನವಲನಗೊಳಿಸದೇ ಇರುವುದು ಕಂಡು ಬಂದಿರುತ್ತದೆ. ಇದರಿಂದ ಬಾಕಿ ಉಳಿಯುತ್ತಿರುವ ಕಡತಗಳ ಸಂಖ್ಯೆಯು ಹೆಚ್ಚಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಸದರಿ ಕಡತಗಳು ಅವಶ್ಯವಿದ್ದಲ್ಲಿ ಚಲನವಲನಗೊಳಿಸಲು ಹಾಗೂ ಅವಶ್ಯವಿಲ್ಲದಿದ್ದಲ್ಲಿ ಮುಕ್ತಾಯಗೊಳಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಕಡತಗಳನ್ನು ತೆರೆಯಲು ನಿರ್ದೇಶನ ನೀಡಬೇಕು,’ ಎಂದು ಪತ್ರದಲ್ಲಿ ಸೂಚಿಸಿರುವುದು ಗೊತ್ತಾಗಿದೆ.

 

ಸರ್ಕಾರದ ಎಲ್ಲಾ ಸಚಿವಾಲಯಗಳಲ್ಲಿ ಒಟ್ಟಾರೆ 1,10,000 ಕಡತಗಳಿವೆ. ಅದರಲ್ಲಿ 45,000 ಕಡತಗಳು ಚಲಾವಣೆಯಲ್ಲಿವೆ. ಇನ್ನುಳಿದ 65,000 ಕಡತಗಳ ಮೇಲೆ ಯಾವುದೇ ಕ್ರಮವಹಿಸಿಲ್ಲ. ಹೀಗಾಗಿ ಈ ಕಡತಗಳು ಇದ್ದಲ್ಲೇ ಇವೆ. 65,000 ಕಡತಗಳ ಪೈಕಿ 54,000 ಕಡತಗಳು 2 ತಿಂಗಳ ಅವಧಿಗೂ ಒಂದೇ ಕಡೆ ಧೂಳು ತಿನ್ನುತ್ತಿವೆ.

 

ನಗರಾಭಿವೃದ್ಧಿಯಲ್ಲಿ 6,652, ವಾಣಿಜ್ಯ, ಕೈಗಾರಿಕೆ ಇಲಾಖೆಯಲ್ಲಿ 4,883, ಕಂದಾಯದಲ್ಲಿ 4,883, ಗೃಹ ಇಲಾಖೆಯಲ್ಲಿ 4,622, ಜಲ ಸಂಪನ್ಮೂಲದಲ್ಲಿ 3,667, ಡಿಪಿಎಆರ್‍‌ನಲ್ಲಿ 3,343, ಪ್ರಾಥಮಿಕ, ಪ್ರೌಢಶಿಕ್ಷಣದಲ್ಲಿ 3,337, ಇ-ಆಡಳಿತದಲ್ಲಿ 2,922, ಆರ್ಥಿಕ ಇಲಾಖೆಯಲ್ಲಿ 2,541, ಅರಣ್ಯ ಇಲಾಖೆಯಲ್ಲಿ 2,262, ಆರೋಗ್ಯ ಮತ್ತು ಕುಟುಂಬ ಕಲ್ಯಾಣದಲ್ಲಿ 2,257 ಕಡತಗಳು ಬಾಕಿ ಇರುವುದು ಪತ್ರದಿಂದ ಗೊತ್ತಾಗಿದೆ.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ನಲ್ಲಿ 2,143, ಲೋಕೋಪಯೋಗಿಯಲ್ಲಿ 1,973, ಉನ್ನತ ಶಿಕ್ಷಣದಲ್ಲಿ 1,858, ಮಹಿಳಾ ಮತ್ತು ಮಕ್ಕಳ ಕಲ್ಯಾಣದಲ್ಲಿ 1,748, ವೈದ್ಯಕೀಯ ಶಿಕ್ಷಣದಲ್ಲಿ 1,737, ಕೌಶಲ್ಯಾಭಿವೃದ್ಧಿಯಲ್ಲಿ 1,487, ಕಾನೂನು ಇಲಾಖೆಯಲ್ಲಿ 1,448, ಸಹಕಾರದಲ್ಲಿ 1,389, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ 1,183, ಕೃಷಿಯಲ್ಲಿ 1,003, ಯೋಜನೆ ಇಲಾಖೆಯಲ್ಲಿ 976 ಕಡತಗಳು ಬಾಕಿ ಇರುವುದು ತಿಳಿದು ಬಂದಿದೆ.

 

ಕಾರ್ಮಿಕ ಇಲಾಖೆಯಲ್ಲಿ 893, ತೋಟಗಾರಿಕೆಯಲ್ಲಿ 857, ಪ್ರವಾಸೋದ್ಯಮದಲ್ಲಿ 714, ರೇಷ್ಮೆಯಲ್ಲಿ 633, ಆಹಾರ, ನಾಗರಿಕ ಸರಬರಾಜು ಇಲಾಖೆಯಲ್ಲಿ 604, ಯುವಜನಸೇವೆಯಲ್ಲಿ 604, ಸಮಾಜ ಕಲ್ಯಾಣದಲ್ಲಿ 550, ಹಿಂದುಳಿದ ವರ್ಗ ಇಲಾಖೆಯಲ್ಲಿ 549, ಇಂಧನದಲ್ಲಿ 531, ಸಾರಿಗೆಯಲ್ಲಿ 502, ವಸತಿಯಲ್ಲಿ 442 ಕಡತಗಳು ವಿಲೇವಾರಿಗೆ ಬಾಕಿ ಇವೆ.

 

ಮೂಲ ಸೌಕರ್ಯದಲ್ಲಿ 429, ಪಶು ಸಂಗೋಪನೆ ಮೀನುಗಾರಿಕೆಯಲ್ಲಿ 407, ಐಟಿಬಿಟಿಯಲ್ಲಿ 291, ಡಿಪಿಎಆರ್‍‌ ಸುಧಾರಣೆಯಲ್ಲಿ 282, ಸಣ್ಣ ನೀರಾವರಿಯಲ್ಲಿ 171, ಸಂಸದೀಯ ವ್ಯವಹಾರಗಳಲ್ಲಿ 169, ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯದಲ್ಲಿ 133, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 98 ಕಡತಗಳು ಸೇರಿ ಒಟ್ಟಾರೆ 65,159 ಕಡತಗಳು ಬಾಕಿ ಇರುವುದು ಗೊತ್ತಾಗಿದೆ.

 

2024ರ ಫೆ.12ರ ಅಂತ್ಯಕ್ಕೆ ಇವೇ 41 ಇಲಾಖೆಗಳಲ್ಲಿ 12,838 ಕಡತಗಳು ಬಾಕಿ ಉಳಿದಿದ್ದವು. ಕೇವಲ ಮೂರೇ ಮೂರು ತಿಂಗಳಲ್ಲಿ ಕಡತಗಳು ಬಾಕಿ ಉಳಿದಿರುವ ಸಂಖ್ಯೆಯು 52,321ಕ್ಕೇರಿದೆ.

 

ಕಡತಗಳ ವಿಲೇವಾರಿಯನ್ನು ಚುರುಕುಗೊಳಿಸಲು ಇ-ಆಡಳಿತ ವ್ಯವಸ್ಥೆ ಜಾರಿಗೊಳಿಸಿದ್ದ ಸರ್ಕಾರವು ಇ-ಆಡಳಿತದಲ್ಲಿ ಹೇಗೆ ಕಡತ ವಿಲೇವಾರಿ ಮಾಡಬೇಕು ಎಂದು 10 ವಿಭಾಗ ಮಾಡಿ, ಹಲವು ಸೂಚನೆಗಳನ್ನು ನೀಡಿತ್ತು.

 

ಇಲಾಖೆ/ ನಿಗಮ/ ಮಂಡಳಿ/ ಸ್ವಾಯತ್ತ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಇ-ಕಛೇರಿ ತಂತ್ರಾಂಶದಲ್ಲಿನ ಕಡತ ನಿರ್ವಹಣೆಯಲ್ಲಿ ದಕ್ಷತೆ ಇರಲಿಲ್ಲ. ಅಲ್ಲದೇ ಆದ್ಯತೆ ಅನುಸಾರವಾಗಿ ಕಡತದ ವಿಷಯಗಳು ವರ್ಗೀಕರಣವಾಗಿರಲಿಲ್ಲ.

8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿಗೆ ಬಾಕಿ; 21,009 ಕಡತಗಳಿಗೆ ತ್ರಿಶಂಕು ಭಾಗ್ಯ

ವಿಧಾನಸಭೆ, ವಿಧಾನಪರಿಷತ್ತು, ಶಾಸನಬದ್ಧವಾಗಿ ರಚನೆಗೊಂಡಿರುವ ಸಮಿತಿಗಳು, ನ್ಯಾಯಾಲಯದ ಪ್ರಕರಣಗಳು ಮತ್ತು ಈ ಸಂಬಂಧದ ಪತ್ರವ್ಯವಹಾರಗಳು, ಲೋಕಾಯುಕ್ತ, ಸಿಬ್ಬಂದಿ ದಾಳಿ, ಇಲಾಖೆ ವಿಚಾರಣೆ, ಸೇವಾ ವಿಷಯಗಳು, ಪ್ರಮುಖ ನೀತಿ, ನಿರ್ಧಾರಗಳು, ಕಾಯಿದೆ ಮತ್ತು ನಿಯಮಗಳನ್ನು ರೂಪಿಸುವ, ತಿದ್ದುಪಡಿ ಮಾಡುವ ಪ್ರಸ್ತಾವನೆಗಳಿಗೆ ಸಂಬಂಧಿಸಿದ ಕಡತಗಳೆಂದು ವರ್ಗೀಕರಿಸಲಾಗಿತ್ತು.

 

ಯೋಜನೆಗಳು/ ಕಾಮಗಾರಿಗಳು/ ನಿರ್ವಹಣೆ. ರಾಜ್ಯ ಸರ್ಕಾರದ ಆಯವ್ಯಯಕ್ಕೆ ಅನುಗುಣವಾಗಿ ಮತ್ತು ಕೇಂದ್ರ ಸರ್ಕಾರದಿಂದ ಕಾಲಕಾಲಕ್ಕೆ ಬಿಡುಗಡೆ ಮಾಡಲ್ಪಟ್ಟ ಯೋಜನೆಗಳನ್ನು ಅನುಷ್ಟಾನಗೊಳಿಸಲು ಮುಖ್ಯಮಂತ್ರಿಗಳ/ ಇಲಾಖಾ ಸಚಿವರ/ ಇಲಾಖಾ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಧಾರ ಮತ್ತು ಅನುದಾನ ಬಿಡುಗಡೆ ಹಾಗೂ ಆಡಳಿತಾತ್ಮಕ ನಿರ್ದೇಶನಗಳು ಮಾಹಿತಿ ಹಕ್ಕು. ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಸುವ ಅರ್ಜಿಗಳ/ ಮೇಲ್ಮನವಿಗಳ ವಿಲೇವಾರಿಗೆ ಸಂಬಂಧಿಸಿದ ಕಡತಗಳು ಬಾಕಿ ಇವೆ.

SUPPORT THE FILE

Latest News

Related Posts