ಹೊರಗುತ್ತಿಗೆಯಲ್ಲಿ ನಿಯಮಬಾಹಿರ ಮೀಸಲಾತಿ; ಮುನ್ನೆಲೆಗೆ ಬಂದ ಸಹಕಾರ ಸಂಘಗಳ ನಿಬಂಧಕರ ಪತ್ರ

ಬೆಂಗಳೂರು; ಹೊರಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಶೇಕಡವಾರು ಮೀಸಲಾತಿ ಕಲ್ಪಿಸಿ ನಿಯಮಬಾಹಿರವಾಗಿ ಉಪ ನಿಯಮ ಅನುಮೋದನೆ ಮಾಡಿರುವ ಅಧಿಕಾರಿಗಳ ಪಟ್ಟಿಯು ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯ ಸರ್ಕಾರದ ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲು ಜಾರಿ ಸಂಬಂಧ ಅಧಿಕೃತ ಸುತ್ತೋಲೆ  ಹೊರಡಿಸಿದ್ದ ಸರ್ಕಾರವು  ಹೆಮ್ಮೆಯಿಂದ ಬೀಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಇದೊಂದು ಕಾಂಗ್ರೆಸ್‌ ಸರ್ಕಾರದ ಮಹತ್ವದ ಹೆಜ್ಜೆ ಎಂದು ಹೇಳಿದ್ದರು.

 

ಇದರ ಬೆನ್ನಲ್ಲೇ ಸಹಕಾರ ಇಲಾಖೆ ವ್ಯಾಪ್ತಿಯ ಹಾಲು ಜಿಲ್ಲಾ ಒಕ್ಕೂಟಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ನೇರ ನೇಮಕಾತಿಯಲ್ಲಿ ನಿಯಮಬಾಹಿರವಾಗಿ ಮೀಸಲಾತಿ ಕಲ್ಪಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ಸಹಕಾರ ಸಂಘಗಳ ನಿಬಂಧಕರು 2023ರ ನವೆಂಬರ್‍‌ 28ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ರಾಜ್ಯದ ಹಲವಾರು ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕರ್ನಾಟಕ ಸಹಕಾರ ಸಂಘಗಳ ನಿಯಮ 1960-ನಿಯಮ 17 ಮತ್ತು ನಿಯಮ 18ನ್ನು ಉಲ್ಲಂಘಿಸಿ ನಿಯಮಬಾಹಿರವಾಗಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ನೇರ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಿ ಅವಕಾಶ ಮಾಡಿಕೊಡಲಾಗಿದೆ.

 

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ನಿಯಮ 1960ರಲ್ಲಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ರೀತಿಯ ಮೀಸಲಾತಿಯನ್ನು ಅವಕಾಶ ಕಲ್ಪಿಸಿರುವುದಿಲ್ಲ. ಆದರೆ ಹಾಲು ಒಕ್ಕೂಟಗಳ ಉಪ ನಿಯಮ ಅನುಮೋದಿಸಿದ ಸಂದರ್ಭದಲ್ಲಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಶೇಕಡವಾರು ಮೀಸಲಾತಿ ಕಲ್ಪಿಸಿ ನಿಯಮಬಾಹಿರವಾಗಿ ಉಪ ನಿಯಮ ಅನುಮೋದನೆ ಮಾಡಲಾಗಿದೆ.

 

ಈ ರೀತಿ ನಿಯಮಬಾಹಿರವಾಗಿ ಉಪ ನಿಯಮವನ್ನು ಅನುಮೋದನೆ ಮಾಡಲಾಗಿರುವ ಅಧಿಕಾರಿಗಳ ಪಟ್ಟಿಯನ್ನು ಸೂಕ್ತ ಕ್ರಮಕ್ಕಾಗಿ ಸಲ್ಲಿಸಲಾಗಿದೆ ಎಂದು ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟರ್‍‌ ಡಾ ಕೆ ರಾಜೇಂದ್ರ ಅವರು 2023ರ ನವೆಂಬರ್‍‌ 28ರಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಕಳಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಡಾಟಾ ಎಂಟ್ರಿ ಆಪರೇಟರ್‌, ವಾಹನ ಚಾಲಕರು, ಗ್ರೂಪ್‌ -ಡಿ ಹಾಗೂ ಸ್ವಚ್ಛತಾ ಸಿಬ್ಬಂದಿ ಒಳಗೊಂಡು ಎಲ್ಲಇಲಾಖೆಗಳ ಹೊರಗುತ್ತಿಗೆ ನೇಮಕಾತಿಯಲ್ಲಿಇನ್ನು ಮುಂದೆ ಕಡ್ಡಾಯವಾಗಿ ಮೀಸಲು ನಿಯಮ ಪಾಲಿಸಬೇಕಿದೆ.

 

ಕಳೆದ ಡಿ.21 ರಂದು ಸಚಿವ ಸಂಪುಟ ಸಭೆ ಕೈಗೊಂಡಿದ್ದ ನಿರ್ಣಯ ಆಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಈ ಮೀಸಲು ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕಡ್ಡಾಯವಾಗಿದೆ. ಎಲ್ಲಇಲಾಖೆಗಳು, ಸ್ವಾಯತ್ತ ಸಂಸ್ಥೆ, ನಿಗಮ, ಮಂಡಳಿ, ವಿಶ್ವವಿದ್ಯಾಲಯಗಳಿಗೂ ಇದು ಅನ್ವಯವಾಗಲಿದೆ ಎಂದು ಆದೇಶದಲ್ಲಿ ಹೇಳಿದೆ.

 

ಸರ್ಕಾರಿ ಕಚೇರಿಗಳಲ್ಲಿ ಕೆಲ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕಾತಿಯು ಇತ್ತೀಚೆಗೆ ಸರ್ಕಾರದ ಅಧಿಕೃತ ಕಾರ್ಯನೀತಿಯಾಗಿರುವ ಹಿನ್ನೆಲೆಯಲ್ಲಿ ಮೀಸಲು ನೀತಿಯನ್ನು ಕಡ್ಡಾಯ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಮೀಸಲು ನಿಯಮದಂತೆ ಅವಕಾಶ ಕಲ್ಪಿಸುವುದು ಕಡ್ಡಾಯ. ಇದರಲ್ಲಿ ಮಹಿಳೆಯರಿಗೆ ಶೇ.33 ಮಹಿಳೆಯರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

 

ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಈ ಮೀಸಲು ನೀತಿ ಅನ್ವಯ ಆಗಲಿದೆ. ಆದರೆ, 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗೆ ಇದು ಅನ್ವಯವಾಗುವುದಿಲ್ಲ.

 

ಪ್ರತಿ ವರ್ಷ ಕೆಟಿಪಿಪಿ ಕಾಯಿದೆಯಡಿ ಹೊರಗುತ್ತಿಗೆ ಏಜೆನ್ಸಿಗಳಿಗೆ ಟೆಂಡರ್‌ ನೀಡುವಾಗ ಈ ಮೀಸಲು ಷರತ್ತು ಪಾಲನೆಯಾಗಬೇಕು. ಏಜೆನ್ಸಿ ಅಂತಿಮಗೊಳಿಸಿದ ಸಿಬ್ಬಂದಿ ಪಟ್ಟಿಯು ಮೀಸಲು ನಿಯಮದಂತಿರುವ ಬಗ್ಗೆ ಖಚಿತ ಮಾಡಿಕೊಂಡ ಬಳಿಕವಷ್ಟೇ ಕಾರ್ಯಾದೇಶ ನೀಡಬೇಕು ಎಂದು ನಿರ್ದೇಶಿಸಲಾಗಿದೆ.

 

ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋಗಾವಕಾಶ ಒದಗಿಸುವ ದೃಷ್ಟಿಯಿಂದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲು ವ್ಯವಸ್ಥೆ ಜಾರಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಲು ಪರಿಗಣಿಸಬಾರದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

SUPPORT THE FILE

Latest News

Related Posts