ವಿವಾದಿತ ವಿಡಿಯೋ; ಅಂಬೇಡ್ಕರ್‌ ಪ್ರಚಾರ ಸಮಿತಿಯ ಸದಸ್ಯನ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ಅನುಮತಿ

ಬೆಂಗಳೂರು; ಕೋಮು ಗಲಭೆ ಮತ್ತು ಎರಡು ಕೋಮುಗಳ ನಡುವೆ ದ್ವೇಷ ಸೃಷ್ಟಿಸುವಂತಹ ವಿವಾದಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಎಂಬ ಆರೋಪಕ್ಕೆ ಗುರಿಯಾಗಿರುವ ಅಂಬೇಡ್ಕರ್‌ ಪ್ರಚಾರ ಸಮಿತಿ ವಾಟ್ಸಾಪ್‌ ಗ್ರೂಪಿನ ಸದಸ್ಯರೊಬ್ಬರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಪೂರ್ವಾನುಮತಿ ನೀಡಿದೆ.

 

ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ 2019ರಲ್ಲಿ ಮೊಕದ್ದಮೆ (209/2019) ದಾಖಲಾಗಿತ್ತು. ಈ ಸಂಬಂಧ ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸ್‌ ಮಹಾನಿರ್ದೇಶಕರು ಸರ್ಕಾರದ ಪೂರ್ವಾನುಮತಿ ಕೋರಿದ್ದರು. ಇದನ್ನು ಪರಿಶೀಲಿಸಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು  ಅನುಮತಿ ನೀಡಿರುವುದು ಗೊತ್ತಾಗಿದೆ.

 

ಪೂರ್ವಾನುಮತಿ ನೀಡಿ ಹೊರಡಿಸಿರುವ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿವಾದಿತ ವಿಡಿಯೋವನ್ನು ಹಂಚಿಕೊಂಡಿದ್ದರ ಬಗ್ಗೆ ಸೈಯದ್‌ ಜಹೀರುದ್ದೀನ್‌ ಬರೀದ್‌ ಎಂಬುವರು 2019ರ ಜೂನ್‌ 16ರಂದು ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರನ್ನಾಧರಿಸಿ ತನಿಖೆ ನಡೆಸಿದ್ದ ತನಿಖಾಧಿಕಾರಿ ಆರೋಪಿತನ ಕೃತ್ಯವನ್ನು ದೃಢಪಡಿಸಿದ್ದರು.

 

ಪ್ರಕರಣದ ವಿವರ

 

ಮಾಡಿಕೆರೆ ಗ್ರಾಮದ ನಿವಾಸಿ ಅರುಣ್‌ ಎಂಬುವರು ಅಂಬೇಡ್ಕರ್‌ ಪ್ರಚಾರ ಸಮಿತಿ ಹೆಸರಿನ ವಾಟ್ಸಾಪ್‌ ಗ್ರೂಪ್‌ನ ಸದಸ್ಯನಾಗಿದ್ದ. ಈತ ಒಂದು ಸಂದೇಶ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದ. ಈ ವಿಡಿಯೋದಲ್ಲಿ ‘ಮುಸ್ಲೀಮರು ಏನು ಮಾಡಿದ್ದಾರೆ ಅನ್ನುವರ ಗಮನಕ್ಕೆ . ನಿಮ್ಮ ಶಾಂತಿ ಪ್ರಿಯರು ನೋಡಿ ಶಿವಮೊಗ್ಗದಲ್ಲಿ ಯಾವ ರೀತಿ ಹೇಳಿದ್ದಾರೆ, ಗೋವನ್ನು ತಿನ್ನುವವೆವು, ತಾಕತ್ತಿದ್ರೆ ತಡೆಯಲು ಬನ್ನಿ ನಾಯಿಗಳೇ ಅಂತ ಬೀದಿಯಲ್ಲಿ ಘೋಷಣೆ ಕೂಗುತ್ತಿರುವ ಶಿವಮೊಗ್ಗ ಜಿಲ್ಲೆಯ ಜಿಹಾದಿಗಳ ಗುಂಪು’ ಈ ಸಂದೇಶವಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು ಎಂಬುದು ಆದೇಶದ ಪ್ರತಿಯಿಂದ ಗೊತ್ತಾಗಿದೆ.

 

‘ಈ ಸಂದೇಶ ಮತ್ತು ವಿಡಿಯೋವನ್ನು ಹಂಚಿಕೊಂಡು ಎರಡೂ ಕೋಮುಗಳ ಮಧ್ಯೆ ಗಲಭೆ ಸೃಷ್ಟಿ ಮಾಡಿಸುವ ಉದ್ದೇಶ ಹಾಗೂ ಒಂದು ಸಮುದಾಯದ ವಿರುದ್ಧ ದ್ವೇಷ ಸೃಷ್ಟಿಸಿ ಅವರ ವಿರುದ್ಧ ಸಾಮಾನ್ಯ ಜನರಲ್ಲಿ ಕೀಳು ಭಾವನೆ ಹುಟ್ಟಿಸಿರುವ ಸಲುವಾಗಿ ಒಂದು ಸಂಘಟನೆ ವಿರುದ್ಧ ಅದರ ಧ್ವಜವನ್ನು ವಿಡಿಯೋದಲ್ಲಿ ತೋರಿಸಿ ಆ ಸಂಘಟನೆಯ ವಿರುದ್ಧ ಯಾವುದೋ ಒಂದು ಜಿಲ್ಲೆಯ ಎಲ್ಲಾ ಮುಸ್ಲಿಂ ಸಮುದಾಯವನ್ನು ಜಿಹಾದಿಗಳು ಎಂದು ಕರೆದಿರುತ್ತಾರೆ,’ ಎಂದು ದೂರಿನಲ್ಲಿ ವಿವರಿಸಿದ್ದರು.

 

ತನಿಖಾಧಿಕಾರಿಗಳು ಆರೋಪಿ ಬಳಸಿದ್ದ ಮೊಬೈಲ್‌ ಪೋನ್‌ ಮತ್ತು ಪೆನ್‌ ಡ್ರೈವ್‌ನ್ನು ವಶಕ್ಕೆ ಪಡೆದಿದ್ದರು. ಅಲ್ಲದೇ ಆರೋಪಿಯಿಂದ ಸ್ವ ಇಚ್ಚಾ ಹೇಳಿಕೆಯನ್ನು ಪಡೆದಿದ್ದರು.

 

ಸ್ವ ಇಚ್ಚಾ ಹೇಳಿಕೆಯಲ್ಲೇನಿತ್ತು?

 

ಆಲ್‌ ಇಂಡಿಯಾ ಅಂಬೇಡ್ಕರ್‌ ಪ್ರಚಾರ ಸಮಿತಿ ವಾಟ್ಸಾಪ್‌ ಗ್ರೂಪ್‌ನ ಸದಸ್ಯನಾಗಿದ್ದು 2019ರ ಜೂನ್‌ 11ರಂದು ನಾನು ಗೋಮಾಂಸವನ್ನು ನಾವು ತಿನ್ನುತ್ತೇವೆ, ತಾಕತ್ತಿದ್ದರೇ ತಡೆಯಲು ಬನ್ನಿ, ಆರ್‌ಎಸ್‌ಎಸ್‌ನ ನಾಯಿಗಳೇ, ಶಿವಮೊಗ್ಗದ ಗಲ್ಲಿಗಳಲ್ಲಿ ಇರುತ್ತೇವೆ ಎಂದು ಎಸ್‌ಡಿಪಿಐ ಸಂಘಟನೆಯವರು ಆರ್‌ಎಸ್‌ಎಸ್‌ ಮತ್ತು ಹಿಂದೂ ಸಂಘಟನೆಗಳನ್ನು ಬೈದಿದ್ದರು.

 

ಇದರ ಕೆಳಭಾಗದಲ್ಲಿ ಮುಸ್ಲೀಮರು ಏನು ಮಾಡಿದ್ದಾರೆ ಅನ್ನುವವರ ಗಮನಕ್ಕೆ , ನಿಮ್ಮ ಶಾಂತಿಪ್ರಿಯರು ನೋಡಿ ಶಿವಮೊಗ್ಗದಲ್ಲಿ ಯಾವ ರೀತಿ ಹೇಳಿದ್ದಾರೆ, ಗೋವನ್ನು ತಿನ್ನುವೆವು, ತಾಕತ್ತಿದ್ದರೇ ತಡೆಯಲು ಬನ್ನಿ, ಭಾರತ ದೇಶದ ನಾಯಿಗಳೇ ಅಂತ ಬೀದಿಯಲ್ಲಿ ಘೋಷಣೆ ಕೂಗುತ್ತಿರುವ ಶಿವಮೊಗ್ಗ ಜಿಲ್ಲೆಯ ಜಿಹಾದಿಗಳ ಗುಂಪು ಎಂಬ ಕ್ಯಾಪ್ಷನ್‌ ಇದ್ದು ಇದನ್ನು ತಾನು ಆಲ್‌ ಇಂಡಿಯಾ ಅಂಬೇಡ್ಕರ್‌ ಪ್ರಚಾರ ಸಮಿತಿಯ ವಾಟ್ಸಾಪ್‌ ಗ್ರೂಪ್‌ಗೆ ಹಂಚಿಕೊಂಡಿದ್ದೆ ಎಂದು ಒಪ್ಪಿಕೊಂಡಿದ್ದ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 

ತನಿಖಾಧಿಕಾರಿಗಳು ಆರೋಪಿತನ ಮೊಬೈಲ್‌ ಫೋನ್‌ನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳಿಸಿದ್ದರು. ಈ ವರದಿಯಲ್ಲಿ ಆರೋಪಿತನ ಮೊಬೈಲ್‌ನಲ್ಲಿ ವಿವಾದಿತ ಸ್ಕ್ರೀನ್‌ ಶಾಟ್‌ ಭಾಗಶಃ ಇರುವುದು ಕಂಡುಬಂದಿದೆ ಎಂದು ಹೇಳಲಾಗಿತ್ತು.

 

‘ಆರೋಪಿತನು ಕೃತ್ಯವೆಸಗಿರುವುದು ದೃಢಪಟ್ಟಿರುವುದರಿಂದ ಆರೋಪಿತನ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಹಾಗೂ ವಿಚಾರಣೆಗೊಳಪಡಿಸಲು ಪೂರ್ವಾನುಮತಿ ನೀಡಬೇಕು,’ ಎಂದು ಪೊಲಿಸ್‌ ಮಹಾನಿರ್ದೇಶಕರು ಕೋರಿದ್ದರು ಎಂಬುದು ಆದೇಶದಿಂದ ತಿಳಿದು ಬಂದಿದೆ.

 

ಹಾವೇರಿಯ ಸವಣೂರಿನಲ್ಲಿ ನಡೆದಿದ್ದ ಪ್ರತಿಭಟನೆ ವೇಳೆಯಲ್ಲಿ ಆರ್‌ಎಸ್‌ಎಸ್‌ ವಿರೋಧಿ ಘೋಷಣೆ ಕೂಗಿರುವುದು ಮತ್ತು ಸೌಹಾರ್ದತೆಗೆ ಘಾತಕವಾಗುವ ಕೃತ್ಯಗಳನ್ನು ಎಸಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ 22 ಮಂದಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಪೂರ್ವಾನುಮತಿ ನೀಡಿತ್ತು.

ಆರ್‌ಎಸ್‌ಎಸ್‌ ವಿರೋಧಿ ಘೋಷಣೆ; 22 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಪೂರ್ವಾನುಮತಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್‌ ಸುರೇಶಪ್ಪ ಕೇಲೂರ ಅವರು ಆರ್‌ಎಸ್‌ಎಸ್‌ ವಿರೋಧಿ ಘೋಷಣೆಗಳನ್ನು ಕೂಗಿರುವ ಕುರಿತು ವಾಟ್ಸಾಪ್‌ಗಳಲ್ಲಿ ಹರಿದಾಡಿದ್ದ ವಿವಾದಿತ ವಿಡಿಯೋ ಮತ್ತು ಆಡಿಯೋ ಸಿಡಿ ಮತ್ತು ಭಾವಚಿತ್ರ ಹಾಗೂ ಅವರು ಪ್ರತಿಭಟನೆಯ ಚಿತ್ರೀಕರಣ ಮಾಡಿದ್ದ ವಿಡಿಯೋವನ್ನು ಪುರಾವೆಯನ್ನಾಗಿ ಒದಗಿಸಿದ್ದರು.

 

ಈ ಎಲ್ಲಾ ಸಾಕ್ಷ್ಯ ಮತ್ತು ಪುರಾವೆಗಳನ್ನಾಧರಿಸಿ ತನಿಖೆ ನಡೆಸಿದ್ದ ಪೊಲೀಸ್‌ ಅಧಿಕಾರಿಗಳು ಆರೋಪಿತರು ಐಪಿಸಿ 153 (ಎ), 295 (ಎ) 505 (2) ಅಡಿಯಲ್ಲಿ ಆರೋಪಿತರು ಕೃತ್ಯವೆಸಗಿ ಶಿಕ್ಷಾರ್ಹ ಅಪರಾಧ ಎಸಗಿರುವುದನ್ನು ದೃಢಪಡಿಸಿದ್ದರು. ಈ ಹಿನ್ನಲೆಯಲ್ಲಿ ಆರೋಪಿತರ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು 2023ರ ಸೆ.1ರಂದು ಸರ್ಕಾರದ ಪೂರ್ವಾನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts