ರಂಗ ಚಟುವಟಿಕೆಗಳಿಗೆ ಅಂದಾಜು 4.20 ಕೋಟಿ ವೆಚ್ಚ; ಪ್ರಕಾಶ್‌ ರೈ ‘ನಿರ್ದಿಗಂತ’ಕ್ಕೆ ಸಿಂಹಪಾಲು!

ಬೆಂಗಳೂರು; ರಾಜ್ಯದಲ್ಲಿ ರಂಗಭೂಮಿ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುತ್ತಿರುವ ರಂಗಾಯಣಗಳನ್ನು ಬದಿಗೊತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು  ನಟ ಪ್ರಕಾಶ್‌ ರೈ ಅವರು  ಈಚೆಗಷ್ಟೇ ಸ್ಥಾಪಿಸಿರುವ ‘ನಿರ್ದಿಗಂತ’ಕ್ಕೆ  ರತ್ನಗಂಬಳಿ ಹಾಸಿರುವುದು ಇದೀಗ ಬಹಿರಂಗವಾಗಿದೆ.

 

ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಸಾಂಸ್ಕೃತಿಕ ಮತ್ತು ರಂಗಭೂಮಿ ಚಟುವಟಿಕೆಗಳನ್ನು ಕೈಗೊಳ್ಳಲು ಸರ್ಕಾರವು ಉದ್ದೇಶಿಸಿದೆ. ಇದಕ್ಕಾಗಿ  ನಿರ್ದಿಗಂತ ಸಂಸ್ಥೆಯೂ ಸೇರಿದಂತೆ ಇನ್ನಿತರೆ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು  ಅಧಿಕೃತ ಜ್ಞಾಪನ ಪತ್ರದಲ್ಲೇ  ನಿರ್ದಿಷ್ಟವಾಗಿ  ಸೂಚಿಸಿದೆ. ಸರ್ಕಾರದ ಈ ನಡೆಯು  ರಂಗಕರ್ಮಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

ಸಾಂಸ್ಕೃತಿಕ ಮತ್ತು ರಂಗಭೂಮಿ ಚಟುವಟಿಕೆಗಳಿಗಾಗಿ ಅಂದಾಜು 4.20 ಕೋಟಿ ರು. ವೆಚ್ಚವಾಗಲಿದೆ.  ಅನುದಾನದ ಕೊರತೆ ಮತ್ತು ನಿರ್ವಹಣಾ ವೆಚ್ಚದಲ್ಲಿನ ಇಳಿಕೆಯಿಂದಾಗಿ ದೈನಂದಿನ ಆಡಳಿತವನ್ನು ನಡೆಸಲು ಏದುಸಿರು ಬಿಡುತ್ತಿವೆ. ಇಂತಹ ಹೊತ್ತಿನಲ್ಲೇ ಕಾರ್ಯನಿರ್ವಾಹಕ ನಿರ್ದೇಶಕರು ನೀಡಿರುವ  ಸೂಚನೆಯಿಂದಾಗಿ  ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜುಗಳಿಗೆ 4.20 ಕೋಟಿ ರು ಅಧಿಕ ಹೊರೆ ಹೊರಿಸಿದಂತಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ವಿಶೇಷವೆಂದರೇ  ವಸತಿ ಶಾಲೆಗಳಲ್ಲಿ ಈ  ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಿರುವ ಖಾಸಗಿ ಸಂಸ್ಥೆಗಳ ಪೈಕಿ ನಟ ಪ್ರಕಾಶ್‌ ರೈ ಅವರು ಸ್ಥಾಪಿಸಿರುವ ನಿರ್ದಿಗಂತ ಸಂಸ್ಥೆಯು ಸಿಂಹಪಾಲು ಪಡೆಯಲಿದೆ ಎಂದು ಗೊತ್ತಾಗಿದೆ. ಈಗಾಗಲೇ ಮೈಸೂರು ಜಿಲ್ಲೆಯ ಕೆಲವೆಡೆ ನಿರ್ದಿಗಂತ ಸಂಸ್ಥೆಯು ರಂಗ ಪ್ರದರ್ಶನ ನೀಡಿದೆ ಎಂದು ತಿಳಿದು ಬಂದಿದೆ. ಇದೇ ಜೂನ್‌ನಿಂದ ಆರಂಭವಾಗಲಿರುವ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಿರ್ದಿಗಂತದೊಂದಿಗೆ ವಸತಿ ಶಾಲೆ, ಕಾಲೇಜುಗಳು ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆಗಳಿಗೆ ಚಾಲನೆ ಸಿಗಲಿದೆ ಎಂದು ಗೊತ್ತಾಗಿದೆ.

 

ಆಡಳಿತ ಮಂಡಳಿ ತೀರ್ಮಾನವೇನು?

 

ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಓದಿನ ಜೊತೆಗೆ ಸಾಂಸ್ಕೃತಿಕ ಮತ್ತು ರಂಗಭೂಮಿ ಕಾರ್ಯಚಟುವಟಿಕೆಗಳನ್ನು ವಸತಿ ಶಾಲೆಯ ಪ್ರಾಂಶುಪಾಲರುಗಳ ಹಂತದಲ್ಲಿಯೇ ಅನುಷ್ಠಾನಗೊಳಿಸಲು ತೀರ್ಮಾನಿಸಲಾಯಿತು. ಪ್ರತಿಷ್ಠಿತ ಸಂಸ್ಥೆಗಳಾದ ನಿರ್ದಿಗಂತ ಅಥವಾ ಇದೇ ರೀತಿಯ ಇತರೆ ಖಾಸಗಿ ಸಂಸ್ಥೆಗಳ ಮೂಲಕ ಆಯಾ ವಸತಿ ಶಾಲೆ, ಕಾಲೇಜು ಪ್ರಾಂಶುಪಾಲರು ಎಂಒಯು ಮಾಡಿಕೊಂಡು 50,000 ರು.ಗಳಿಗೆ ಮೀರದಂತೆ ಸ್ಥಳೀಯವಾಗಿ ಕ್ರಮವಹಿಸಬೇಕು ಎಂದು ತೀರ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಸಂಘದ ನಿರ್ವಹಣಾ ವೆಚ್ಚದಲ್ಲಿ ಭರಿಸಲು ತೀರ್ಮಾನಿಸಿರುವುದು ಅಧಿಕೃತ ಜ್ಞಾಪನ ಪತ್ರದಿಂದ ತಿಳಿದು ಬಂದಿದೆ.

 

ಅಧಿಕೃತ ಜ್ಞಾಪನ ಪತ್ರದಲ್ಲಿ 50,000 ರು.ಗಳಿಗೆ ಮೀರದಂತೆ ಎಂದು ಹೇಳಲಾಗಿದೆಯಾದರೂ 40,000 ರು.ಗಳನ್ನು ನೀಡಬೇಕು ಎಂದು ನಿರ್ದಿಗಂತ ಸಂಸ್ಥೆಯೇ ಆಡಳಿತ ಮಂಡಳಿ ಮುಂದೆ ಬೇಡಿಕೆ ಇರಿಸಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರೂ ಸಹ ಸಮ್ಮತಿಸಿದ್ದಾರೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

 

ನಿರ್ದಿಗಂತವೇ ಏಕೆ?

 

ರಾಜ್ಯದಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ರಾಜ್ಯದಲ್ಲಿ ರಂಗಾಯಣಗಳನ್ನು ಸ್ಥಾಪಿಸಿದೆ. ಈ ಚಟುವಟಿಕೆಗಳನ್ನು ವಸತಿ ಶಾಲೆ, ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲು ರಂಗಾಯಣಗಳನ್ನೇ ಬಳಸಿಕೊಳ್ಳಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಅದರಲ್ಲೂ ಮುಖ್ಯವಾಗಿ ಮೈಸೂರಿನ ರಂಗಾಯಣವು ಈ ಹಿಂದೆ ಸ್ವೀಡನ್‌ ಸಹಯೋಗದಲ್ಲಿ ಚಿಲ್ಡ್ರನ್ಸ್‌ ರೆಪರ್ಟಿ ಕೂಡ ಮಾಡಿತ್ತು.

 

‘ಮೈಸೂರು ರಂಗಾಯಣವನ್ನು ಕೂಡ ಸೇರಿಸಿಕೊಂಡು ಮತ್ತು ಅದರ ಮಾರ್ಗದರ್ಶನದಲ್ಲಿ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಿತ್ತು. ಆದರೆ ಕೇವಲ ನಿರ್ದಿಗಂತ ಸಂಸ್ಥೆ ಹೆಸರನ್ನೇ ಅಧಿಕೃತ ಜ್ಞಾಪನ ಪತ್ರದಲ್ಲಿ ಉಲ್ಲೇಖಿಸಿರುವುದು ಏಕೆ,’  ಎಂದು ಪ್ರಶ್ನಿಸುತ್ತಾರೆ ರಂಗಕರ್ಮಿಯೊಬ್ಬರು.

 

ನಟ ಪ್ರಕಾಶ್‌ ರೈ ಅವರು ಆರಂಭಿಸಿರುವ ನಿರ್ದಿಗಂತ ಸಂಸ್ಥೆ ಆರಂಭವಾಗಿ ಇನ್ನೂ ಒಂದು ವರ್ಷವೂ ಕಳೆದಿಲ್ಲ. ಸರ್ಕಾರವು ನಡೆಸುತ್ತಿರುವ ರಂಗಾಯಣಗಳನ್ನು ಬಳಸಿಕೊಳ್ಳದೇ ಖಾಸಗಿ ಸಂಸ್ಥೆಯಾಗಿರುವ ನಿರ್ದಿಗಂತಕ್ಕೆ ಮಣೆ ಹಾಕಿದ್ದಾದರೂ ಏಕೆ, ಇದರಲ್ಲಿ ಲಾಭ ಉದ್ದೇಶವೂ ಇರಬಹುದು ಎಂಬ ಮಾತುಗಳು ರಂಗಕರ್ಮಿಗಳ ವಲಯದಲ್ಲಿ ಕೇಳಿ ಬಂದಿವೆ.

 

ಕರ್ನಾಟಕದಲ್ಲಿ ಸ್ಥಳೀಯ ಹಂತಗಳಲ್ಲೂ ಹಲವಾರು ರಂಗ ತಂಡಗಳು ರಂಗ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಡೆಸಿಕೊಂಡು ಬರುತ್ತಿವೆ. ನೀನಾಸಂ, ಶಿವಸಂಚಾರ, ಎನ್‌ಎಸ್‌ಡಿಯಂತಹ ಸಂಸ್ಥೆಯೂ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಹಲವೆಡೆ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಮತ್ತು  ತಂಡಗಳನ್ನೂ ಬದಿಗೊತ್ತಿ ನಿರ್ದಿಷ್ಟವಾಗಿ ನಿರ್ದಿಂಗತಕ್ಕೇ ಇದರ ಜವಾಬ್ದಾರಿಯನ್ನು  ನೀಡಿರುವುದು ಸರಿಯಾದ ಕ್ರಮವಲ್ಲ ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ.

 

‘ಅಧಿಕೃತ ಜ್ಞಾಪನದಲ್ಲಿ ಪ್ರತಿಷ್ಠಿತ ಸಂಸ್ಥೆಗಳಾದ ನಿರ್ದಿಗಂತ ಅಥವಾ ಇದೇ ರೀತಿಯ ಇತರೆ ಖಾಸಗಿ ಸಂಸ್ಥೆಗಳು ಎಂದು ಉಲ್ಲೇಖಿಸಲಾಗಿದೆ. ಆದರೆ ವಾಸ್ತವದಲ್ಲಿ ಪ್ರಾಂಶುಪಾಲರುಗಳಿಗೆ ಮೌಖಿಕವಾಗಿ ನಿರ್ದಿಗಂತದೊಂದಿಗೇ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಇದೇ ರೀತಿಯ ಇತರೆ ಖಾಸಗಿ ಸಂಸ್ಥೆಗಳು ಎಂದು ಉಲ್ಲೇಖಿಸಿರುವುದು ಕೇವಲ ನಾಮಕಾವಾಸ್ತೆಯಷ್ಟೇ,’ ಎನ್ನುತ್ತಾರೆ ರಂಗಕರ್ಮಿಯೊಬ್ಬರು.

 

ಇನ್ನು, ವಸತಿ ಶಾಲೆ ಮತ್ತು ಕಾಲೇಜುಗಳಿಗೆ ನೀಡುತ್ತಿದ್ದ ನಿರ್ವಹಣ ವೆಚ್ಚವನ್ನು ಏರಿಕೆ ಮಾಡದೆಯೇ ಇರುವ ಅಲ್ಪ ಹಣದಲ್ಲಿಯೇ ರಂಗ ಸಂಸ್ಥೆಗಳಿಗೆ ನೀಡುವ ಬಗ್ಗೆಯೂ ಪ್ರಾಂಶುಪಾಲರುಗಳು ತಕರಾರು ತೆಗೆದಿದ್ದಾರೆ.

ಆರ್ಥಿಕ ಕ್ಲಿಷ್ಟ ಪರಿಸ್ಥಿತಿ; ವಸತಿ ಶಾಲೆಗಳಿಗೆ ಶೇ.10 ಪ್ರವೇಶ ಹೆಚ್ಚಳಕ್ಕೆ 11.29 ಕೋಟಿ ರು. ಹಣವಿಲ್ಲ, ಕೈ ಚೆಲ್ಲಿದ ಇಲಾಖೆ

ಪ್ರಾಂಶುಪಾಲರೊಬ್ಬರು ನೀಡಿರುವ ಮಾಹಿತಿ ಪ್ರಕಾರ ವಸತಿ ಶಾಲೆ, ಕಾಲೇಜುಗಳಲ್ಲಿ ಈ ಮೊದಲು ನಿರ್ವಹಣಾ ವೆಚ್ಚವೆಂದು ವರ್ಷಕ್ಕೆ 1 ಲಕ್ಷ ರು. ಒದಗಿಸಲಾಗುತ್ತಿತ್ತು. ಇದರಲ್ಲಿ ಶಾಲಾ ಕಟ್ಟಡ ದುರಸ್ತಿ, ಬೋರ್‍‌ವೆಲ್‌, ಮೋಟಾರ್‍‌ ರಿಪೇರಿ, ವಾಟರ್‍‌ ಫಿಲ್ಟರ್‍‌, ವಸತಿ ನಿಲಯದ ಬೀದಿ ದೀಪಗಳ ರಿಪೇರಿ, ಸ್ವಿಚ್‌ ಬೋರ್ಡ್‌, ಶೌಚಾಲಯ ನಿರ್ವಹಣೆ, ಡೆಸ್ಕ್‌, ಕುರ್ಚಿ, ಫ್ಯಾನ್‌, ಕಿಟಕಿ ಗಾಜು, ಸೋಲಾರ್‍‌ ದೀಪ ರಿಪೇರಿ, ಕಂಪ್ಯೂಟರ್‍‌ ರಿಪೇರಿ, ಬೋಧಕ, ಬೋಧಕೇತರ ವಸತಿಗಳ ನಿರ್ವಹಣೆ ಮಾಡಲಾಗುತ್ತಿತ್ತು.

 

ಅಲ್ಲದೇ ಶಾಲೆ ಸ್ವಚ್ಛತೆಗೆ ತಿಂಗಳಿಗೆ 2 ಸಾವಿರ ರು ಗಳಂತೆ ವರ್ಷಕ್ಕೆ 20 ಸಾವಿರ ರು ನೀಡಲಾಗುತ್ತಿತ್ತು. 250 ಮಕ್ಕಳು ಇರುವ 28 ಕೊಠಡಿ, 20 ಬಾತ್‌ರೂಂ, 20 ಶೌಚ ಗೃಹ, ಅಡುಗೆ ಮನೆ, ಡೈನಿಂಗ್‌ ಹಾಲ್‌, ಡೈನಿಂಗ್‌ ಟೇಬಲ್‌, ಪಾತ್ರೆ ತೊಳೆಯುವ ಸೋಪ್‌, ಸೋಪಿನ ಪುಡಿ, ಫಿನಾಯಿಲ್‌, ಬ್ಲೀಚಿಂಗ್‌ ಪೌಡರ್‍‌, ಪೊರಕೆ, ನೆಲ ಒರೆಸುವ ಮಾಪು, ಪ್ರತಿ ರೂಂಗಳಿಗೆ ಕಸದ ಬುಟ್ಟಿ ಸೇರಿದಂತೆ ಎಲ್ಲವನ್ನೂ ಇದೇ ನಿರ್ವಹಣಾ ಅನುದಾನದಿಂದಲೇ ಭರಿಸಬೇಕು.

 

ಆದರೆ ಕೋವಿಡ್‌ ಸಂದರ್ಭದಲ್ಲಿ 1.00 ಲಕ್ಷ ರು.ಗಳನ್ನು 40,000 ರು.ಗಳಿಗೆ ಇಳಿಕೆ ಮಾಡಲಾಗಿದೆ. ‘ಲಭ್ಯವಿರುವ 40,000 ರು.ಗಳಲ್ಲಿ ನಿರ್ವಹಣೆ ಮಾಡಲು ಕಷ್ಟಸಾಧ್ಯ. ಇಂತಹದರಲ್ಲಿ ನಿರ್ದಿಗಂತ ಸೇರಿ ಇನ್ನಿತರೆ ಖಾಸಗಿ ಸಂಸ್ಥೆಗಳಿಗೆ ಹಣ ಹೊಂದಿಸುವುದು ಹೇಗೆ,’ ಎಂದು ಪ್ರಶ್ನಿಸುತ್ತಾರೆ ಹೆಸರು ಹೇಳಲಿಚ್ಛಿಸದ ಪ್ರಾಂಶುಪಾಲರೊಬ್ಬರು.

SUPPORT THE FILE

Latest News

Related Posts