ನೀಟ್‌, ಸಿಇಟಿಗೆ ತರಬೇತಿ; ಹೆಚ್ಚುವರಿ ಶುಲ್ಕ ವಸೂಲಿ, ರಸೀತಿಗಳು ತಾಳೆಯಾಗಿಲ್ಲವೆಂದ ತನಿಖಾ ತಂಡ

ಬೆಂಗಳೂರು; ವೈದ್ಯಕೀಯ, ಇಂಜಿನಿಯರಿಂಗ್‌ ಸೇರಿದಂತೆ ಇನ್ನಿತರೆ ವೃತ್ತಿಪರ ಕೋರ್ಸ್‌ಗಳಿಗಾಗಿ ರಾಷ್ಟ್ರಮಟ್ಟದಲ್ಲಿ ನಡೆಯುವ ನೀಟ್‌ ಮತ್ತು ಸಿಇಟಿ ತರಬೇತಿ ನೀಡಲು ಯಾವುದೇ ಹೆಚ್ಚುವರಿ ಶುಲ್ಕ ಪಡೆಯಲು ಅವಕಾಶವಿಲ್ಲದಿದ್ದರೂ ಆಳ್ವಾಸ್‌ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ವಸೂಲು ಮಾಡಿತ್ತು ಎಂದು ತನಿಖಾ ತಂಡವು ಹೊರಗೆಡವಿದೆ.

 

ತನಿಖಾ ತಂಡವು ನೀಡಿದ್ದ ವರದಿ ಮತ್ತು ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನೂ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ರಾಜ್ಯ ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಕ್ಯಾಪಿಟೇಷನ್‌ ಶುಲ್ಕ ಮತ್ತು ಸ್ಟಡಿ ಮೆಟಿರಿಯಲ್ಸ್‌ಗಳಿಗಾಗಿ ಶುಲ್ಕ ಪಡೆದಿರುವುದನ್ನು ತನಿಖಾ ತಂಡವು ದೃಢಪಡಿಸಿತ್ತು. ಇದೇ ವರದಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಆಳ್ವಾಸ್‌ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ಶುಲ್ಕ ವಸೂಲು ಮಾಡಿತ್ತು ಎಂಬುದನ್ನು ಉಲ್ಲೇಖಿಸಿರುವುದು ಗೊತ್ತಾಗಿದೆ.

 

‘ರಾಷ್ಟ್ರಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಲು ಪ್ರವೇಶ ಪಡೆದ ವಿದ್ಯಾರ್ಥಿಗಳ ಪಾಲಕರ ಒಪ್ಪಿಗೆ ಮೇರೆಗೆ ಹೆಚ್ಚುವರಿ ಶುಲ್ಕವನ್ನು ಪಡೆದಿರುತ್ತಾರೆ. ಇದೂ ಸಹ ಪದವಿಪೂರ್ವ ಇಲಾಖೆಯ ಮಾರ್ಗಸೂಚಿಗಳಲ್ಲಿ ಇರುವುದಿಲ್ಲ. ಒಟ್ಟಾರೆಯಾಗಿ ಹೆಚ್ಚಿನ ಶುಲ್ಕವನ್ನು ಪಡೆದಿರುವುದು ತಪಾಸಣೆ ತಂಡದ ವರದಿಯಿಂದ ದೃಢಪಡುತ್ತದೆ,’ ವರದಿಯಲ್ಲಿ ವಿವರಿಸಲಾಗಿದೆ.

 

ಈ ಬಗ್ಗೆ ಆಳ್ವಾಸ್‌ ಆಡಳಿತ ಮಂಡಳಿಯು ತನಿಖಾ ತಂಡಕ್ಕೆ ಸ್ಪಷ್ಟೀಕರಣ ನೀಡಿತ್ತು. ‘ಐಐಟಿ, ಜೆಇಇ, ಸಿಇಟಿ ಮತ್ತುನೀಟ್‌ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಪ್ರವೇಶ ಪಡೆಯಲು ಯಾವುದೇ ರೀತಿಯ ಒತ್ತಡವನ್ನು ವಿದ್ಯಾರ್ಥಿಗಳ ಮೇಲೆ ಹಾಕಿರುವುದಿಲ್ಲ,’ ಎಂದು ಕಾಲೇಜಿನ ಪ್ರಾಂಶುಪಾಲರು ವಿವರಣೆ ನೀಡಿದ್ದರು ಎಂಬುದು ವರದಿಯಿಂದ ಗೊತ್ತಾಗಿದೆ.

 

ಆಳ್ವಾಸ್‌ ಎಜುಕೇಷನ್‌ ಫೌಂಡೇಷನ್‌ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗಿತ್ತು. ಈ ತರಬೇತಿ ನೀಡಲು ಹೆಚ್ಚುವರಿ ಶುಲ್ಕ ಪಡೆಯಲಾಗಿತ್ತು. ಕಾಲೇಜಿನ ಅವಧಿ ಹೊರತುಪಡಿಸಿ ಬೇರೆ ಅವಧಿಯಲ್ಲಿ ಕಾಲೇಜಿನ ಉಪನ್ಯಾಸಕರನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು ಎಂದು ಪ್ರಾಂಶುಪಾಲರು ತನಿಖಾ ತಂಡದ ಮುಂದೆ ವಿವರಿಸಿದ್ದರು.

 

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್‌, ಸಿಇಟಿ ತರಬೇತಿ ನೀಡಲು ತಲಾ ವಿದ್ಯಾರ್ಥಿಯಿಂದ 13,000 ರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ 19,000 ರು. ಶುಲ್ಕ ಪಡೆಯಲಾಗಿತ್ತು.

 

ನೀಟ್‌ ಮತ್ತು ಸಿಇಟಿ ಕ್ರಾಶ್‌ ಕೋರ್ಸ್‌ಗಳಿಗಾಗಿ ತಲಾ 10,300 ರು. ವಸೂಲು ಮಾಡಿತ್ತು. ಇದರ ರಸೀತಿಗಳನ್ನು ಆಳ್ವಾಸ್‌ಎಜುಕೇಷನ್‌ ಫೌಂಡೇಷನ್‌ ಟ್ರಸ್ಟ್‌ ನಿಂದ ನೀಡಲಾಗಿತ್ತು ಎಂಬುದು ತನಿಖಾ ವರದಿಯಿಂದ ತಿಳಿದು ಬಂದಿದೆ.

 

ಆಳ್ವಾಸ್‌ ಎಜುಕೇಷನ್‌ ಫೌಂಡೇಷನ್‌ ಟ್ರಸ್ಟ್‌ ಹೆಸರಿನಿಂದ ನೀಡುತ್ತಿದ್ದ ರಸೀದಿಗಳು ತಾಳೆಯಾಗಿರುವುದಿಲ್ಲ ಎಂದೂ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಸೀದಿಯಲ್ಲಿ ಒಟ್ಟು ಮೊತ್ತ 13,000 ರು. ಎಂದು ನಮೂದಿಸಿದ್ದರೂ ಕ್ರಮ ಸಂಖ್ಯೆ 01ರಲ್ಲಿ ನಮೂದಿಸುವಾಗ ಶುಲ್ಕ ಮೊತ್ತ 11,304 ಎಂದು ನಮೂದಿಸಲಾಗಿದೆ. ಹೀಗಾಗಿ ರಸೀತಿಯು ತಾಳೆಯಾಗಿರುವುದಿಲ್ಲ ಎಂದು ವಿವರಿಸಲಾಗಿದೆ.

 

ಆಳ್ವಾಸ್‌ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಪಡೆಯಲಾಗುತ್ತಿದೆ ಎಂದು ರಮೇಶ್‌ ಬೆಟ್ಟಯ್ಯ ಎಂಬುವರು ದೂರು ಸಲ್ಲಿಸಿದ್ದರು. ಈ ಕುರಿತು ತನಿಖೆ ನಡೆಸಿದ್ದ ಕುಸುಮಾಕುಮಾರಿ ನೇತೃತ್ವದ ತಂಡವು 2021ರ ಜನವರಿ 27 ಮತ್ತು ಜನವರಿ 29ರಂದು ವಿಚಾಋಣೆ, ತನಿಖೆ ನಡೆಸಿತ್ತು. 2021ರ ಮಾರ್ಚ್‌ 20ರಂದು 18 ಪುಟಗಳ ವರದಿ ಮತ್ತು 403 ಪುಟಗಳ ಪೂರಕ ದಾಖಲೆಗಳನ್ನೊಳಗೊಂಡ ತನಿಖಾ ವರದಿ ಸಲ್ಲಿಸಿತ್ತು.

 

ವಿದ್ಯಾರ್ಥಿಗಳಿಂದ ಕ್ಯಾಪಿಟೇಷನ್‌ ಶುಲ್ಕವೂ ಸೇರಿದಂತೆ ಇನ್ನಿತರೆ ಶುಲ್ಕಗಳನ್ನು ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಪಡೆಯುತ್ತಿರುವ ಆರೋಪವೂ ಸೇರಿದಂತೆ ಇನ್ನಿತರೆ ಉಲ್ಲಂಘನೆಗಳನ್ನು ಸಾಬೀತುಪಡಿಸಿ ತನಿಖಾ ತಂಡವು ನೀಡಿದ್ದ ವರದಿ ಆಧರಿಸಿ ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಆಳ್ವಾಸ್‌ ಪಿಯು ಕಾಲೇಜು ಮಾನ್ಯತೆ ರದ್ದು; ಬಿಜೆಪಿ ಅವಧಿಯಲ್ಲಿ ಕಸದಬುಟ್ಟಿ ಸೇರಿದ್ದ ತನಿಖಾ ವರದಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸರ್ಕಾರವು ನೀಡುತ್ತಿದ್ದ ಶಿಷ್ಯ ವೇತನವನ್ನು ಆಳ್ವಾಸ್‌ ಪದವಿಪೂರ್ವ ಕಾಲೇಜು, ಆಳ್ವಾಸ್‌ ಎಜುಕೇಷನ್‌ ಫೌಂಡೇ‍ಷನ್‌ನ ಖಾತೆಗೆ ಜಮಾ ಮಾಡುತ್ತಿತ್ತು.

ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಶಿಷ್ಯವೇತನ; ಆಳ್ವಾಸ್‌ ಎಜುಕೇಷನ್‌ ಫೌಂಡೇಷನ್‌ಗೆ ನೇರ ಜಮಾ

ಪ್ರಥಮ ಪಿಯುಸಿ ಪ್ರವೇಶ ಶುಲ್ಕ, ಬೋಧನಾ ಶುಲ್ಕ ಸೇರಿದಂತೆ ಇನ್ನಿತರೆ ಶುಲ್ಕಗಳೆಂದು 1,252 ರು. ಎಂದು ಸರ್ಕಾರವು ನಿಗದಿಪಡಿಸಿತ್ತು. ಆದರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಒಟ್ಟಾರೆ 19,900 ರು.ಗಳನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡಿರುವುದನ್ನು ತನಿಖಾ ತಂಡವು ಹೊರಗೆಡವಿತ್ತು. ವರದಿಯಿಂದ ತಿಳಿದು ಬಂದಿದೆ.

ಆಳ್ವಾಸ್‌ ಶಿಕ್ಷಣ ಸಂಸ್ಥೆಯಿಂದ ಕ್ಯಾಪಿಟೇ‍ಷನ್‌ ಶುಲ್ಕ ವಸೂಲಿ ಸಾಬೀತು; ತನಿಖಾ ವರದಿ ಬಹಿರಂಗ

ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಪ್ರಥಮ ಪಿಯುಸಿ ತಲಾ ವಿದ್ಯಾರ್ಥಿಯಿಂದ 18,64 ರು . ವಸೂಲು ಮಾಡಿತ್ತು. ಅಲ್ಲದೇ ಇಲಾಖೆ ನಿಗದಿಪಡಿಸಿರುವ ಶುಲ್ಕಗಳ ಜತೆಯಲ್ಲಿಯೇ ಪ್ರಥಮ ಪಿಯುಸಿ ತಲಾ ವಿದ್ಯಾರ್ಥಿಯಿಂದ 4,000 ರು. ಹೆಚ್ಚುವರಿ ಶುಲ್ಕ ವಸೂಲು ಮಾಡಿರುವುದು ತನಿಖಾ ವರದಿಯು ಬಹಿರಂಗಗೊಳಿಸಿತ್ತು.

 

ದ್ವಿತೀಯ ಪಿಯುಸಿ ತರಗತಿಗಳ ವಿದ್ಯಾರ್ಥಿಗಳಿಗೆ ಸರ್ಕಾರವು 1,252 ರು. ನಿಗದಿಪಡಿಸಿತ್ತು. ಆದರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಒಟ್ಟಾರೆ 49,000 ರು ವಸೂಲಿ ಮಾಡಿತ್ತು. ಪ್ರಥಮ ಪಿಯುಸಿಯಲ್ಲಿ ಕ್ಯಾಪಿಟಲ್‌ ಫೀ ಎಂದು 14,494 ರು.ವಸೂಲು ಮಾಡಿದ್ದರೆ ದ್ವಿತೀಯ ಪಿಯುಸಿಗೆ 15,400 ರು. ವಸೂಲಿ ಮಾಡಿತ್ತು.

SUPPORT THE FILE

Latest News

Related Posts