ಅಂತರ್ಜಲ ಬತ್ತಿದ್ದರೂ ಕೊಳವೆ ಬಾವಿ ಕೊರೆಯಲು 131 ಕೋಟಿ ರು ವೆಚ್ಚ; ವಿಫಲವಾಗಲಿದೆಯೇ ಬಿಬಿಎಂಪಿ?

ಬೆಂಗಳೂರು: ಕೊಳವೆ ನೀರು ಸರಬರಾಜು ಅಲಭ್ಯತೆ, ಕೆರೆಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಮತ್ತು ಮಲಿನ ನೀರು ಶುದ್ಧೀಕರಣ ಘಟಕಗಳ ಅಸಮರ್ಪಕ ನಿರ್ವಹಣೆಯಿಂದಾಗಿಯೇ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ತೀವ್ರ ಕೊರತೆಗೆ ಕಾರಣ ಎಂದು ಸಂಶೋಧನಾ ಸಂಸ್ಥೆ ವೆಲ್ ಲ್ಯಾಬ್ಸ್‌ ವರದಿಯು ಬಹಿರಂಗಪಡಿಸಿದೆ.

 

ನಗರ ಮೂಲದ ಸಂಶೋಧನಾ ಸಂಸ್ಥೆ ವೆಲ್ ಲ್ಯಾಬ್ಸ್‌ ಬಿಡುಗಡೆ ಮಾಡಿರುವ ಸಂಶೋಧನಾ ವರದಿಯು ಬೆಂಗಳೂರು ನಗರದ ಹಲವೆಡೆಗಳಲ್ಲಿ ಉದ್ಭವವಾಗಿರುವ ಕುಡಿಯುವ ನೀರಿನ ಕೊರತೆ ಹಿಂದಿನ ಹಲವು ಪ್ರಮುಖ ಅಂಶಗಳನ್ನು ಬಿಚ್ಚಿಟ್ಟಿದೆ.

 

ಅಂತರ್ಜಲ ಬತ್ತಿದೆ ಎಂಬುದು ಹಲವು ಸಂಶೋಧನಾ ವರದಿಗಳು ಕಣ್ಣು ಮುಂದಿದ್ದರೂ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು 131 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈಗಾಗಲೆ ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆ ಬಾವಿಗಳನ್ನು ಕೊರೆದಿರುವುದರಿಂದ ಬಿಬಿಎಂಪಿಯ ಈ ಪ್ರಯತ್ನವೂ ವಿಫಲವಾಗಬಹುದು. ದೂರದೃಷ್ಟಿಯಿಂದ ಹೇಳುವುದಾದರೆ ಇಂತಹ ಕ್ರಮಗಳು ಸೂಕ್ತವಲ್ಲ ಎಂದು ವೆಲ್ ಲ್ಯಾಬ್ಸ್‌ ವರದಿ ತಿಳಿಸಿದೆ.

 

ವೆಲ್‌ ಲ್ಯಾಬ್ಸ್‌ ನೀಡಿರುವ ವರದಿ ಕುರಿತು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್‍‌ ಕೂಡ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಇದನ್ನಾಧರಿಸಿ ಬೆಂಗಳೂರು ನಗರ ನೀರು ಸರಬರಾಜು ವ್ಯವಸ್ಥೆ, ನಿರ್ವಹಣೆಯಲ್ಲಿನ ವ್ಯತ್ಯಯ, ಕೊರತೆಗಳಿಗೆ ಸಂಬಂಧಿಸಿದಂತೆ ಇಂಡಿಯಾ ಸ್ಪೆಂಡ್‌ ಕೂಡ ವಿಶ್ಲೇಷಿಸಿ ವರದಿ ಪ್ರಕಟಿಸಿದೆ.

 

ನಗರದಲ್ಲಿ ಕೊಳವೆ ಬಾವಿಗಳು ಬತ್ತುತ್ತಿವೆ. ಹಲವು ಪ್ರದೇಶಗಳು ನೀರಿನ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ 257 ಸ್ಥಳಗಳು ನೀರಿನ ತೀವ್ರ ಸಂಕಷ್ಟದಲ್ಲಿ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೂಡ ವಾಹನ, ಉದ್ಯಾನವನ ಮತ್ತು ನಿರ್ಮಾಣ ಚಟುವಟಿಕೆಗಳಿಗೆ ನೀರಿನ ಬಳಕೆ ನಿಷೇಧಿಸಿ ಆದೇಶ ಹೊರಡಿಸಿದೆ.

 

ಇಂತಹ ಹಲವು ಕಾರಣಗಳಿಂದ ಬೆಂಗಳೂರು ನಗರದಲ್ಲಿ ನೀರಿನ ಕೊರತೆಯ ಸನ್ನಿವೇಶ ಸೃಷ್ಟಿಯಾಗಿದೆ. ಬೆಂಗಳೂರು ನಗರ ನೀರು ಸರಬರಾಜು ಮಂಡಳಿಯು ಅಂತರ್ಜಲದ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಕೊಳವೆ ನೀರು ಸರಬರಾಜು ಅಲಭ್ಯತೆ, ಕೆರೆಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಮತ್ತು ಮಲಿನ ನೀರು ಶುದ್ಧೀಕರಣ ಘಟಕಗಳ ಅಸಮರ್ಪಕ ನಿರ್ವಹಣೆಯಿಂದಾಗಿಯೇ ಕುಡಿಯುವ ನೀರಿನ ಸರಬರಾಜಿನಲ್ಲಿ ತೀವ್ರ ಕೊರತೆಗೆ ಕಾರಣವಾಗಿದೆ ಎಂದು ಹೇಳಿದೆ.

 

ಪ್ರಸಕ್ತ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಗೃಹ ಸಮುಚ್ಚಯಗಳು 12000 ಲೀಟರ್ ನೀರಿನ ಟ್ಯಾಂಕರ್‌ಗೆ 2,850 ರೂ. ಪಾವತಿಸುತ್ತಿವೆ. ಬೆಂಗಳೂರು ನಗರದ ಹೆಚ್ಚಿನ ಪ್ರದೇಶಕ್ಕೆ ಕಾವೇರಿ ನೀರು ಸರಬರಾಜು ಮಾಡದಿರುವುದು ನೀರಿನ ತೀವ್ರ ಕೊರತೆಗೆ ಕಾರಣವಾಗಿದೆ ಎಂದು ವೆಲ್‌ ಲ್ಯಾಬ್ಸ್‌ ತನ್ನ ಸಂಶೋಧನಾ ವರದಿಯಲ್ಲಿ ವಿವರಿಸಿದೆ.

 

ನಗರದ ಒಳಗೆ ಕಾವೇರಿ ನದಿ ನೀರು ಸರಬರಾಜಾದರೆ ಹೊರ ವಲಯಗಳು ಅಂತರ್ಜಲದ ಮೇಲೆ ಅವಲಂಬಿತವಾಗಿದೆ. ವೆಲ್ ಲ್ಯಾಬ್ಸ್‌ನ ಅಂಕಿಅಂಶಗಳ ಅನುಸಾರ ದಿನವೊಂದಕ್ಕೆ ನಗರಕ್ಕೆ 2,632 ದಶಲಕ್ಷ ಲೀಟರ್ (ಎಂಎಲ್‌ಡಿ) ನೀರು ಅಗತ್ಯವಿದೆ. ಈ ಪೈಕಿ 1,460 ಎಂಎಲ್‌ಡಿ ನೀರು ಕಾವೇರಿ ನದಿಯಿಂದ ಪೂರೈಕೆಯಾದರೆ ಉಳಿದ ನೀರಿಗಾಗಿ ಅಂತರ್ಜಲದ ಮೇಲೆ ಅವಲಂಬಿತವಾಗಿದೆ ಎಂದು ವರದಿ ವಿವರಿಸಿದೆ.

 

ನಗರದಲ್ಲಿ 12.6 ದಶಲಕ್ಷ ಜನಸಂಖ್ಯೆ ಇದ್ದು ಪ್ರತಿದಿನ ಒಬ್ಬರು ಸರಾಸರಿ 150 ಲೀಟರ್ ನೀರು ಬಳಕೆ ಮಾಡುತ್ತಾರೆ. ಇದರಂತೆ ಮನೆ ಬಳಕೆಗೆ ಒಟ್ಟಾರೆ 1890 ಎಂಎಲ್‌ಡಿ ನೀರು ಬೇಕಾಗಲಿದೆ. ಇದರಿಂದಾಗಿ ಹೊರ ವಲಯದಲ್ಲಿ ನೆಲೆಸಿರುವವರು ಅಂತರ್ಜಲದ ಮೇಲೆ ಅವಲಂಬಿತರಾಗಿದ್ದಾರೆ ಎಂದು ವರದಿ ಹೇಳಿದೆ.

 

ಬಿಡಬ್ಲ್ಯುಎಸ್‌ಎಸ್‌ಬಿ ಆದ್ಯತೆ ಕೇವಲ ನಗರದ ಮಧ್ಯ ಭಾಗದ ಮೇಲೆ ಮಾತ್ರ ಇದೆ. ಹೊರ ವಲಯದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗಿಂತಲೂ ಈ ಮಧ್ಯ ಭಾಗದಲ್ಲಿ ನೆಲೆಸಿರುವವರ ಜನಸಂಖ್ಯೆ ಕಡಿಮೆ. ಹೊರ ವಲಯದಲ್ಲಿ ಮೂಲಸೌಕರ್ಯವೂ ಕಡಿಮೆ ಇರುವುದರಿಂದ ದೊಡ್ಡ ದೊಡ್ಡ ಕಂಪನಿಗಳು ಸೇರಿದಂತೆ ಗ್ರಾಹಕರು ಅಂತರ್ಜಲದ ಮೇಲೆ ಅವಲಂಬಿತರಾಗಿದ್ದಾರೆ. ಸರ್ಕಾರಿ ಸಂಸ್ಥೆಗಳ ಕೊರತೆಯಿಂದಾಗಿ ನಗರದಲ್ಲಿ ಎಷ್ಟು ಕೊಳವೆ ಬಾವಿಗಳು ಇವೆ ಎಂಬುದನ್ನು ಹೇಳಲೂ ಸಾಧ್ಯವಾಗದಂತಹ ಪರಿಸ್ಥಿತಿ ಇದೆ ಎಂಬುದನ್ನು ವರದಿ ಹೊರಗೆಡವಿದೆ.

 

ಕೇಂದ್ರ ಅಂತರ್ಜಲ ಪ್ರಾಧಿಕಾರದ 2023ರ ಅಂಕಿಅಂಶಗಳ ಪ್ರಕಾರ ಎಲ್ಲಾ ಆರು ಮೇಲ್ವಿಚಾರಣಾ ವಲಯಗಳು ಅಂದರೆ ಬೆಂಗಳೂರು ನಗರ, ಆನೇಕಲ್, ಯಲಹಂಕ, ಬೆಂಗಳೂರು ಪೂರ್ವ, ಬೆಂಗಳೂರು-ಉತ್ತರ ಮತ್ತು ಬೆಂಗಳೂರು ದಕ್ಷಿಣದಲ್ಲಿ ಅಂತರ್ಜಲವನ್ನು ವಿಪರೀತವಾಗಿ ಹೊರತೆಗೆಯಲಾಗಿದೆ. ವೇಗವಾದ ನಗರೀಕರಣ ಹಸಿರನ್ನು ಆಪೋಷಣೆ ತೆಗೆದುಕೊಳ್ಳುತ್ತಿದೆ. 2010ರಲ್ಲಿ ಶೇ.28ರಷ್ಟಿದ್ದ ನಗರದ ಹಸಿರು, 2023ಕ್ಕೆ ಶೇ.2.9ಕ್ಕೆ ಕುಸಿದಿದೆ ಎಂದು ವರದಿ ಹೇಳಿದೆ.

 

‘ಪರಿಸ್ಥಿತಿ ಹೀಗಿದ್ದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು 131 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈಗಾಗಲೆ ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆ ಬಾವಿಗಳನ್ನು ಕೊರೆದಿರುವುದರಿಂದ ಬಿಬಿಎಂಪಿಯ ಈ ಪ್ರಯತ್ನವೂ ವಿಫಲವಾಗಬಹುದು. ದೂರದೃಷ್ಟಿಯಿಂದ ಹೇಳುವುದಾದರೆ ಇಂತಹ ಕ್ರಮಗಳು ಸೂಕ್ತವಲ್ಲ,’ ಎಂದು ವರದಿ ತಿಳಿಸಿದೆ.

 

ಈ ವರ್ಷದಲ್ಲಿ ರಾಜ್ಯದಲ್ಲಿ ಮಳೆ ಕೊರತೆಯಾಗಿರುವುದೂ ಸಹ ಅಂತರ್ಜಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು “ವೆಲ್ ಲ್ಯಾಬ್ಸ್” ಹೇಳಿದೆ. ಬಿಬಿಎಂಪಿ ವ್ಯಾಪ್ತಿಯೊಳಗೆ 173 ಕೆರೆಗಳು ಮೂರು ಕಣಿವೆಗಳಾಗಿ ಸಂಪರ್ಕ ಹೊಂದಿವೆ. ಈ ಕೆರೆಗಳು ಒಂದಕ್ಕೊಂದು ಸರಪಣಿಗಳಂತೆ ಇರುವುದೇ ನಗರದ ಪರಿಸರ ವಿಕೋಪ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೆಚ್ಚುವರಿ ನೀರನ್ನು ನಿರ್ವಹಿಸಲು ಸಾಧ್ಯವಾಗಿದೆ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿದು ಆಗಬಹುದಾದ ಜಲ ವಿಕೋಪಗಳನ್ನು ಕಡಿಮೆ ಮಾಡುತ್ತಿವೆ.

 

ಆರಂಭದಲ್ಲಿ ಮುಂಗಾರಿನಲ್ಲಿ ತುಂಬುತ್ತಿದ್ದ ಈ ಋತುಕಾಲದ ಕೆರೆಗಳು ಭಾರಿ ಮಳೆ ಸಂದರ್ಭಗಳಲ್ಲಿ ಜಲಪ್ರಳಯ ನಿಯಂತ್ರಕಗಳಾಗಿದ್ದವು. ನಗರೀಕರಣ ಇವೆಲ್ಲವನ್ನು ಆಪೋಷಣೆ ತೆಗೆದುಕೊಂಡಿತು. ಈಗ ಕೆರೆಗಳಲ್ಲಿ ತುಂಬುವ ಅರ್ಧದಷ್ಟು ನೀರು ಮಲಿನ ನೀರಾಗಿದೆ. ಇವುಗಳನ್ನು ಕೆಲವೊಮ್ಮೆ ಶುದ್ಧೀಕರಿಸಿದರೆ ಮತ್ತೊಮ್ಮೆ ಇಲ್ಲ. ಹೀಗಾಗಿ ಮಳೆ ಕಾಲಕ್ಕೆ ಕೆರೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಯುವುದಿಲ್ಲ. ಇದು ನಗರ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ನೆರೆಗೆ ಕಾರಣವಾಗಿದೆ ಎಂಬ ಸಂಗತಿಯು ವರದಿಯಿಂದ ತಿಳಿದು ಬಂದಿದೆ.

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆರೆ ಪುನರುಜ್ಜೀವನಗೊಳಿಸಲಿದ್ದು, ನಿರ್ವಹಣೆ ಜವಾಬ್ದಾರಿಯನ್ನು ಬಿಬಿಎಂಪಿಗೆ ವರ್ಗಾಯಿಸಿದೆ. ಇಲ್ಲಿ ಹಣದ ಲಭ್ಯತೆ ಇದ್ದರೂ ಇದನ್ನು ವೆಚ್ಚ ಮಾಡುವುದರಲ್ಲಿ ಪಾರದರ್ಶಕತೆ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಕೆರೆಗಳಲ್ಲಿನ ಹೂಳನ್ನು ಆಗಿಂದಾಗ್ಗೆ ತೆಗೆಯಬೇಕು, ಕೆರೆಗಳ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಬೇಕು ಮತ್ತು ಮೇಲ್ವಿಚಾರಣೆ ಕೊರತೆ ಇದೆ.

 

ಬೆಂಗಳೂರಿನ ನೀರಿನ ಕೊಳವೆ ವ್ಯಾಪ್ತಿ 6,000 ಕಿಲೋ ಮೀಟರ್‌ಗಳಿವೆ. 60 ಬೂಸ್ಟರ್ ಪಂಪ್‌ಗಳು, 84 ನೆಲಮಟ್ಟದ ಬೃಹತ್ ಟ್ಯಾಂಕ್‌ಗಳು ಮತ್ತು 52 ಭೂಮಿ ಮೇಲಿನ ಟ್ಯಾಂಕ್‌ಗಳಿವೆ. ಇವು ಪ್ರತಿದಿನ 1,520 ಎಂಎಲ್‌ಡಿ ನೀರನ್ನು ಪಂಪ್ ಮಾಡುತ್ತವೆ. ಬೆಂಗಳೂರು ನೀರು ಸರಬರಾಜಿನಲ್ಲಿ ಆದಾಯೇತರ ನಗರವಾಗಿತ್ತು. ಈ ನಷ್ಟವನ್ನು ಈ ಕೂಡಲೆ ಭರಿಸಲು ಸಾಧ್ಯವಿಲ್ಲ, ಇದಕ್ಕೆ ಸಮಗ್ರ ಮೂಲಸೌಕರ್ಯವನ್ನೇ ರೂಪಿಸಬೇಕಾಗಿದೆ. ಮನೆ, ವಾಹನಗಳನ್ನು ತೊಳೆಯುವಂತಹ ಕೆಲಸ ಕಾರ್ಯಗಳಿಗೆ ಶುದ್ಧವಾದ ನೀರಿನ ಬದಲಿಗೆ ಶುದ್ಧೀಕರಿಸಿದ ನೀರನ್ನು ಬಳಕೆ ಮಾಡುವುದು ಉತ್ತಮ ಅಭ್ಯಾಸವಾಗಿದೆ ಎಂದು ವರದಿ ವಿಶ್ಲೇಷಿಸಿದೆ.

 

ಸದ್ಯದ ಗಂಭೀರ ಪರಿಸ್ಥಿತಿಯನ್ನು ಮನಗಂಡಿರುವ ರಾಜ್ಯ ಸರ್ಕಾರ ನೀರಿನ ಟ್ಯಾಂಕರ್‌ಗಳ ಮೇಲೆ ನಿಯಂತ್ರಣ ಸಾಧಿಸಲು ಯೋಜನೆಗಳನ್ನು ಪ್ರಕಟಿಸಿದೆ ಮತ್ತು ದುಬಾರಿ ದರಗಳನ್ನು ಹೇರದಂತೆ ನಿಯಂತ್ರಣ ಹೇರಿದೆ. ಹಾಗಿದ್ದರೂ ಈ ಕ್ರಮಗಳು ಏನೇನೂ ಸಾಲದು ಎನ್ನುತ್ತಾರೆ ನಗರ ತಜ್ಞರು.

SUPPORT THE FILE

Latest News

Related Posts