ವರ್ಗಾವಣೆಯಲ್ಲಿ ಸಿಎಂ ಹಸ್ತಕ್ಷೇಪ, ನಿಯಮ ಉಲ್ಲಂಘನೆ; ಸಚಿವ ಪಾಟೀಲ್‌, ಅಧ್ಯಕ್ಷ ಸತೀಶ್‌ ಸೈಲ್‌ ಮುನಿಸು

ಬೆಂಗಳೂರು; ಕರ್ನಾಟಕ ಸ್ಟೇಟ್‌ ಮಾರ್ಕೆಟಿಂಗ್‌ ಕಮ್ಯುನಿಕೇಷನ್‌ ಅಂಡ್‌ ಅಡ್ವರ್ಟೈಸಿಂಗ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವರ್ಗಾವಣೆ  ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ಹಸ್ತಕ್ಷೇಪ ಮಾಡಿರುವುದು ಮತ್ತು ನಿಯಮ ಉಲ್ಲಂಘಿಸಿರುವುದು  ಇದೀಗ ಬಹಿರಂಗವಾಗಿದೆ.

 

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅವಕಾಶಗಳಿಲ್ಲದಿದ್ದರೂ ಸಹ ಸಚಿವಾಲಯದ ಉಪ ಕಾರ್ಯದರ್ಶಿ ಮಹಿಬೂಬ ಸಾಬ ಅವರನ್ನು ಎಂಸಿ ಅಂಡ್‌ ಎ ಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ಹೊರಡಿಸಿರುವ ಅಧಿಸೂಚನೆಯು ಸಚಿವ ಎಂ ಬಿ ಪಾಟೀಲ್‌ ಮತ್ತು ಎಂಸಿ ಅಂಡ್‌ ಎ ನ ನೂತನ ಅಧ್ಯಕ್ಷ ಸತೀಶ್‌ ಸೈಲ್‌  ಅವರ ಮುನಿಸಿಗೂ ಕಾರಣರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಎಂಸಿ ಅಂಡ್‌ ಎ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಲಿಂಗಪ್ಪ ಪೂಜಾರಿ ಅವರನ್ನು ಎತ್ತಂಗಡಿ ಮಾಡುವ ಮುನ್ನ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್‌ ಅವರ ಗಮನಕ್ಕೂ ತಂದಿಲ್ಲ ಎಂದು ಗೊತ್ತಾಗಿದೆ.

 

ಹೀಗಾಗಿ ಸಚಿವ ಎಂ ಬಿ ಪಾಟೀಲ್‌ ಅವರು ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಬರೆದಿರುವ ಟಿಪ್ಪಣಿ ಪತ್ರಗಳು ಚರ್ಚೆಗೆ ಗ್ರಾಸವಾಗಿವೆ.

 

ಈ ಮೂರೂ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸ್ಥಳ ನಿರೀಕ್ಷಣೆಯಲ್ಲಿದ್ದ ಸಚಿವಾಲಯದ ಉಪ ಕಾರ್ಯದರ್ಶಿ ಮಹಿಬೂಬ ಸಾಬ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ಹೊರಡಿಸಿರುವ ಅಧಿಸೂಚನೆಗೆ ಬೃಹತ್‌, ಮಧ್ಯಮ ಕೈಗಾರಿಕೆ ಸಚಿವರ ಸಮ್ಮತಿ ಇರಲಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯನ್ನೂ ಹೊತ್ತಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮತ್ತು ಅನುಮೋದನೆ ಮೇರೆಗೇ ಈ ನೇಮಕಾತಿ ನಡೆದಿದೆ ಎಂದು ತಿಳಿದು ಬಂದಿದೆ.

 

ಸಿದ್ದಲಿಂಗಪ್ಪ ಪೂಜಾರಿ ಅವರನ್ನು ಎತ್ತಂಗಡಿಗೊಳಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಈ ಜಾಗಕ್ಕೆ ಮಹಿಬೂಬ ಸಾಬ ಅವರನ್ನು ನೇಮಿಸಿ  2024ರ ಫೆ.28ರಂದು ಅಧಿಸೂಚನೆ ಹೊರಡಿಸಿದೆ.

 

ನಿಯಮ ಉಲ್ಲಂಘಿಸಿದರೇ ಸಿಎಂ?

 

ಕರ್ನಾಟಕ ಸ್ಟೇಟ್‌ ಮಾರ್ಕೆಟಿಂಗ್‌ ಕಮ್ಯುನಿಕೇಷನ್‌ ಅಂಡ್‌ ಅಡ್ವರ್ಟೈಸಿಂಗ್‌ ಲಿಮಿಟೆಡ್‌ನ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ತುಂಬುವ ಎಕ್ಸ್‌ ಕೇಡರ್‍‌ ಹುದ್ದೆಯಾಗಿರುತ್ತದೆ. ಹಾಗಾಗಿ ಸಚಿವಾಲಯದ ಉಪ ಕಾರ್ಯದರ್ಶಿ ವೃಂದದ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಿಸಿರುವುದು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಗುಣವಾಗಿರುವುದಿಲ್ಲ ಎಂದು ಎಂ ಬಿ ಪಾಟೀಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2024ರ ಫೆ.29ರಂದು ಬರೆದಿರುವ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

 

‘ಈ ಹುದ್ದೆಗೆ ಇತರೆ ಇಲಾಖೆಗಳ ಅಧಿಕಾರಿಗಳನ್ನು ನೇಮಿಸಿದರೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವೃಂದಬಲಕ್ಕೆ ಅನುಗುಣವಾಗಿ ಹಿರಿಯ ಅಧಿಕಾರಿಗಳನ್ನು ಸ್ಥಳ ನಿಯುಕ್ತಿಗೊಳಿಸಲು ಆಡಳಿತಾತ್ಮಕ ಮತ್ತು ತಾಂತ್ರಿಕವಾಗಿ ತೊಡಕಾಗುತ್ತದೆ. ಈ ಹಿನ್ನೆಲೆಯಲ್ಲಿ 2024ರ ಫೆ.28ರಂದು ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಖುದ್ದು ಸಚಿವ ಎಂ ಬಿ ಪಾಟೀಲ್‌ ಅವರು ಕೋರಿದ್ದಾರೆ.

 

ಇದೇ ದಿನದಂದು ಮುಖ್ಯ ಕಾರ್ಯದರ್ಶಿಗೂ ಟಿಪ್ಪಣಿ ಪತ್ರ ಬರೆದು ಸಚಿವ ಎಂ ಬಿ ಪಾಟೀಲ್‌ ಅವರು  ಗಮನಸೆಳೆದಿದ್ದಾರೆ.

 

ಅದೇ ರೀತಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿಯೂ ಈ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಕೋರಿದ್ದಾರೆ.

 

ಈ ವರ್ಗಾವಣೆ ಹಿಂದೆ ಮುಖ್ಯಮಂತ್ರಿಗಳ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಅತ್ಯಾಸಕ್ತಿ ವಹಿಸಿದ್ದರು. ಅವರ ಸಲಹೆಯಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರ್ಗಾವಣೆಗೆ ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts