ದಲಿತ ವಿದ್ಯಾರ್ಥಿಗಳಿಗೆ ‘ವಿಶ್ವಾಸ ಕಿರಣ’ವಿಲ್ಲ!; ಬಜೆಟ್‌ನಲ್ಲಿ ಲ್ಯಾಪ್‌ಟಾಪ್‌ ಯೋಜನೆ ಪ್ರಸ್ತಾವವಿಲ್ಲ

ಬೆಂಗಳೂರು; ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನಲ್ಲಿ ಉಚಿತವಾಗಿ ಲ್ಯಾಪ್‌ಟಾಪ್‌ ವಿತರಣೆ ಮಾಡುವ ಸಂಬಂಧ ಪದವಿಪೂರ್ವ ಶಿಕ್ಷಣ ಮಂಡಳಿಯ ಮುಂದುವರೆದ  ಯೋಜನೆಯ ಕುರಿತಾಗಿ  ಬಜೆಟ್‌ನಲ್ಲಿ ಪ್ರಸ್ತಾವಿಸಿಲ್ಲ.

 

ವಿಶ್ವಾಸ ಕಿರಣ ಹೆಸರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ವಿತರಿಸುವ ಸಂಬಂಧ 9 ಕೋಟಿ ರು. ಅಂದಾಜು ವೆಚ್ಚದ ಪ್ರಸ್ತಾವನೆಯನ್ನು  ಪದವಿಪೂರ್ವ ಶಿಕ್ಷಣ ಮಂಡಳಿಯ ಉಪನಿರ್ದೇಶಕರು (ಶೈಕ್ಷಣಿಕ) ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2024ರ ಜನವರಿ 16ರಂದೇ ಪ್ರಸ್ತಾವನೆ ಸಲ್ಲಿಸಿದ್ದರು.

 

2024-25ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಗೆ ಅನುದಾನ ಲಭ್ಯವಾಗಲಿದೆ  ಎಂದು ಮಂಡಳಿಯು ಎದುರು ನೋಡಿತ್ತು. ಆದರೀಗ ಬಜೆಟ್‌ನಲ್ಲಿ ಉಚಿತ ಲ್ಯಾಪ್‌ಟಾಪ್‌ ವಿತರಣೆ ಯೋಜನೆ ಬಗ್ಗೆ ಪ್ರಸ್ತಾವಿಸಿಲ್ಲ.

 

2023-24ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ  ಪರಿಶಿಷ್ಟ ಜಾತಿ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪೈಕಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ವಿಶ್ವಾಸ ಕಿರಣ ಹೆಸರಿನಲ್ಲಿ ಲ್ಯಾಪ್‌ಟಾಪ್‌ ವಿತರಣೆ ಯೋಜನೆ ಹಮ್ಮಿಕೊಂಡಿತ್ತು.

 

ಪ.ಜಾತಿಯ ಪ್ರತಿ ವಿಭಾಗದ 5 ವಿದ್ಯಾರ್ಥಿಗಳಿಗೆ 15 ಹಾಗೂ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಪರಿಶಿಷ್ಟ ಪಂಗಡದ ಪ್ರತಿ ವಿಭಾಗದ 3 ವಿದ್ಯಾರ್ಥಿಗಳಿಗೆ ಒಟ್ಟು 09 ಲ್ಯಾಪ್‌ಟಾಪ್‌ಗಳನ್ನು ಬಹುಮಾನವಾಗಿ ನೀಡಲಿತ್ತು.  ಇದಕ್ಕಾಗಿ ಪಿಯು  ಮಂಡಳಿಯು ಕ್ರಿಯಾ ಯೋಜನೆ ರೂಪಿಸಿತ್ತು.

 

ಒಟ್ಟು 32 ಶೈಕ್ಷಣಿಕ ಜಿಲ್ಲೆಗಳಲ್ಲಿ 2023-24ನೇ ಸಾಲಿಗೆ   768 ಲ್ಯಾಪ್‌ಟಾಪ್‌ ಖರೀದಿಸಲು ಪ್ರಸ್ತಾವಿಸಿದೆ. ಪ್ರತಿ ಲ್ಯಾಪ್‌ಟಾಪ್‌ಗೆ  60,000 ರು.ನಂತೆ ಎಸ್‌ಸಿಪಿ ಅಡಿಯಲ್ಲಿ 480 ಲ್ಯಾಪ್‌ಟಾಪ್‌ಗಳಿಗೆ 2.88 ಕೋಟಿ ರು., ಟಿಎಸ್‌ಪಿ ಅಡಿಯಲ್ಲಿ 288 ಲ್ಯಾಪ್‌ಟಾಪ್‌ಗಳಿಗೆ 1.72 ಕೋಟಿ ರು. ಒಟ್ಟಾರೆ 4.60 ಕೋಟಿ ರು. ಅನುದಾನ ಕೋರಿತ್ತು.

768 ಲ್ಯಾಪ್‌ಟಾಪ್‌ ಖರೀದಿ; ಪ್ರಸ್ತಾವದಲ್ಲೇ ತಲಾ 60,000 ರು. ನಿಗದಿಗೊಳಿಸಿದ ಪಿಯು ಮಂಡಳಿ

ಅದೇ ರೀತಿ 2024-25ನೇ ಸಾಲಿಗೆ ವಿಶ್ವಾಸ  ಕಿರಣ ಯೋಜನೆಯಡಿಯಲ್ಲಿ  4.06 ಕೋಟಿ ರು, ಲ್ಯಾಪ್‌ಟಾಪ್‌ ಯೋಜನೆಯಡಿಯಲ್ಲಿ 2.88 ಕೋಟಿ ರು., ಸೇರಿ 6.98 ಕೋಟಿ ರು.,  (ಎಸ್‌ಸಿಪಿ), ಟಿಎಸ್‌ಪಿ ಅಡಿಯಲ್ಲಿ ವಿಶ್ವಾಸ ಕಿರಣ ಯೋಜನೆಯಡಿಯಲ್ಲಿ 1.08 ಕೋಟಿ ರು., ಲ್ಯಾಪ್‌ಟಾಪ್‌ ಯೋಜನೆಯಡಿಯಲ್ಲಿ 1.72 ಕೋಟಿ ರು. ಸೇರಿ ಒಟ್ಟಾರೆ 9.76 ಕೋಟಿ ರು. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

 

ಪದವಿಪೂರ್ವ ಶಿಕ್ಷಣ ಮಂಡಳಿಯು ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 60,000 ರು. ದರ ಎಂದು ನಿಗದಿಪಡಿಸಿರುವುದು ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ದುಪ್ಪಟ್ಟಾಗಿತ್ತು.  ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮದಡಿಯಲ್ಲಿ ಪಿಯುಸಿ 2024ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವ ಯೋಜನೆಯ ಭಾಗವಾಗಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

 

ಘೋಷಣೆಯಾಗಿರುವುದೇನು?

 

ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಶೌಚಾಲಯ ಸೇರಿದಂತೆ ಇನ್ನಿತರೆ  ಮೂಲಭೂತ ಸೌಕರ್ಯಗಳನ್ನು ಒದಗಿಸಲು 850 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಹೊಸದಾಗಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳನ್ನು ಆರಂಭಿಸಲಿದೆ. ರಾಜ್ಯದಲ್ಲಿರುವ 74 ಆದರ್ಶ ವಿದ್ಯಾಲಯಗಳನ್ನು ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

 

ವಿದ್ಯಾರ್ಥಿಗಳ ಸಂಖ್ಯಾಬಲ ಹೆಚ್ಚಿರುವ ಆಯ್ದ 100 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 10 ಕೋಟಿ ರು ವೆಚ್ಚದಲ್ಲಿ ಗಣಕ ವಿಜ್ಙಾನ ಸಂಯೋಜನೆ ಆರಂಭಿಸಲಿದೆ. ವಿಜ್ಞಾನ ವಿಷಯಗಳಲ್ಲಿ 400ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿಜ್ಙಾನ ಪ್ರಯೋಗಾಲಯಗಳ್ನು ಉನ್ನತೀಕರಿಸಲು ತಲಾ 10 ಲಕ್ಷ ರು.ನಂತೆ ಅನುದಾನ ಒದಗಿಸಲಿದೆ.

 

ಅದೇ ರೀತಿ ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿಜ್ಙಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 20,000 ವಿದ್ಯಾರ್ಥಿಗಳೀಗೆ ನೀಟ್, ಜೆಇಇ, ಸಿಇಟಿ ತರಬೇತಿ ಕಾರ್ಯಕ್ರಮಗಳಿಗಾಗಿ 10 ಕೋಟಿ ರು. ನೀಡಲಾಗುವುದು ಎಂದು ಘೋಷಿಸಿದ್ದಾರೆ. ಹಾಗೆಯೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಉಚಿತ ವಿದ್ಯುತ್‌ ಮತ್ತು  ನೀರಿನ ಸೌಲಭ್ಯವನ್ನು ಒದಗಿಸಲು 25 ಕೋಟಿ ರು. ವೆಚ್ಚವಾಗಲಿದೆ ಎಂದು ಹೇಳಿದೆ.

SUPPORT THE FILE

Latest News

Related Posts