ಬೆಂಗಳೂರು; ಹೆಚ್ಚುತ್ತಿರುವ ಸರ್ಕಾರಿ ವೆಚ್ಚಗಳು ಮತ್ತು ಇಳಿಮುಖವಾಗುತ್ತಿರುವ ಸರ್ಕಾರದ ಆದಾಯದೊಂದಿಗೆ ವಿತ್ತೀಯ ಕೊರತೆಯನ್ನು ಕಡಿಮೆ ಮಟ್ಟದಲ್ಲಿ ಇಡುವುದು ಸವಾಲಿನ ಸಂಗತಿಯಾಗಿದೆ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆಯು ಅಭಿಪ್ರಾಯಿಸಿದೆ.
2023-24ನೇ ಸಾಲಿನ ರಾಜ್ಯ ಕಾಂಗ್ರೆಸ್ ಸರ್ಕಾರವು ಮಂಡಿಸಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ರಾಜ್ಯದ ಒಟ್ಟಾರೆ ಆರ್ಥಿಕ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲಿದೆ. ವಿತ್ತೀಯ ಪರಿಸ್ಥಿತಿ, ಬದ್ಧತಾ ವೆಚ್ಚ, ಸಾರ್ವಜನಿಕ ವೆಚ್ಚ ಮತ್ತು ಅದರ ದಕ್ಷತೆ, ಹೊಣೆಗಾರಿಕೆ, ರಾಜಸ್ವ ಹೆಚ್ಚಳ, ಆಂತರಿಕ ಉತ್ಪನ್ನ ಸೇರಿದಂತೆ ಆರ್ಥಿಕ ವಲಯಕ್ಕೆ ಸಂಬಂಧಿಸಿದಂತೆ ಹಲವು ಅಂಶಗಳ ಕುರಿತಾಗಿ ವಿಶ್ಲೇಷಿಸಿದೆ.
ವಿಶೇಷವೆಂದರೇ ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಆರ್ಥಿಕ ಇಲಾಖೆಯು ನೀಡಿದ್ದ ಕಠಿಣ ಅಭಿಪ್ರಾಯದ ಕುರಿತು ಆರ್ಥಿಕ ಸಮೀಕ್ಷೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಬದಲಿಗೆ ಗ್ಯಾರಂಟಿ ಯೋಜನೆಗಳಿಗೆ ನೀಡಿರುವ ಹಣಕಾಸಿನ ವಿವರಗಳನ್ನಷ್ಟೇ ಪುನರುಚ್ಛರಿಸಿದೆ. ಇದರ ಆರ್ಥಿಕ ಪರಿಣಾಮಗಳ ಕುರಿತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯದ ಕುರಿತು ಎಲ್ಲಿಯೂ ಚರ್ಚಿಸಿಲ್ಲ ಮತ್ತು ವಿಶ್ಲೇಷಿಸಿಲ್ಲ.
ಮತ್ತೊಂದು ವಿಶೇಷವೆಂದರೇ ರಾಜ್ಯಕ್ಕೆ ಬರಬೇಕಿದ್ದ ಕೇಂದ್ರದ ತೆರಿಗೆ ಹಂಚಿಕೆ, ಸಹಾಯಾನುದಾನ, ಬಾಕಿ ಉಳಿಸಿಕೊಂಡಿರುವುದರ ಪರಿಣಾಮ ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ವಿವರವಾಗಿ ವಿಶ್ಲೇಷಿಸಿದೆ.
ಅಲ್ಲದೇ ‘ಅಖಿಲ ಭಾರತ ಪ್ರವೃತ್ತಿಗಳಂತೆಯೇ ಕರ್ನಾಟಕ ರಾಜ್ಯವೂ ಸಹ ವಿತ್ತೀಯ ಪರಿಸ್ಥಿತಿ ಒತ್ತಡಕ್ಕೆ ಸಿಲುಕಿದೆ. ವಿತ್ತೀಯ ಕೊರತೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಶೇ.3.5ರಷ್ಟು ದಾಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಬಾಕಿ ಇರುವ ಹೊಣೆಗಾರಿಕೆಗಳಲ್ಲಿನ ಪ್ರವೃತ್ತಿಗಳು ಮತ್ತು ಮಧ್ಯಮಾವಧಿ ವಿತ್ತೀಯ ಅಪಾಯವನ್ನೂ ಸಹ ಎದುರಿಸಬೇಕಿದೆ. ಮುಂಬರುವ ವರ್ಷಗಳಲ್ಲಿ ಇದು ವೆಚ್ಚಗಳ ಗುಣಮಟ್ಟದ ಮೇಲೆ ಒತ್ತಡವನ್ನು ಉಂಟು ಮಾಡಬಹುದು,’ ಎಂದು ಸಮೀಕ್ಷೆಯು ವಿವರಿಸಿದೆ.
‘ಸರ್ಕಾರಿ ವೆಚ್ಚಗಳು ಮತ್ತು ಇಳಿಮುಖವಾಗುತ್ತಿರುವ ಸರ್ಕಾರದ ಆದಾಯದೊಂದಿಗೆ ವಿತ್ತೀಯ ಕೊರತೆಯನ್ನು ಕಡಿಮೆ ಮಟ್ಟದಲ್ಲಿ ಇಡುವುದು ಸವಾಲಿನ ಸಂಗತಿಯಾಗಿದೆ,’ ಎಂದು ಸಮೀಕ್ಷೆಯು ಹೇಳಿದೆ.
ರಾಜ್ಯವು ರಾಜಸ್ವ ಹೆಚ್ಚಳವನ್ನು ಹೊಂದಿದ್ದು ಕೆಲವು ವರ್ಷಗಳಿಂದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಸುಮಾರು ಶೇ. 1ರಷ್ಟು ರಾಜಸ್ವ ಕೊರತೆ ಹೊಂದಿದೆ. ಇದು ವಿತ್ತೀಯ ಹೊಣೆಗಾರಿಕೆ ಶಾಸನಕ್ಕೆ ವಿರುದ್ಧವಾಗಿದೆ. ಆದರೂ ಕೆಲವು ರಾಜಸ್ವ ವೆಚ್ಚಗಳನ್ನು ತರ್ಕಬದ್ಧಗೊಳಿಸಬೇಕು. ಇಂತಹ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಇದು ಮಧ್ಯಮಾವಧಿಯಲ್ಲಿ ಬಾಕಿ ಉಳಿದಿರುವ ಹೊಣೆಗಾರಿಕೆಗಳ ಮೇಲೆ ಪರಿಣಾಮ ಬೀರಬಹುದು ಎಂದಿದೆ.
ರಾಜ್ಯದ ಒಟ್ಟು ಆಂತರಿಕ ಉತ್ಪನ್ನವನ್ನು ಸುದಾರಿಸಲು ರಾಜ್ಯವು ವೆಚ್ಚದ ವಿಚಾರಗಳಲ್ಲಿನ ಕಾರ್ಯವಿಧಾನವನ್ನು ವಿವೇಕಯುತವಾಗಿ ಅಳವಡಿಸಿಕೊಳ್ಳಬೇಕು. ಆಯವ್ಯಯದ ಕಠಿಣಕರ ನಿರ್ಬಂಧಗಳನ್ನು ಪರಿಹರಿಸಲು ಒಂದು ಮಾರ್ಗವೆಂದರೇ ಸಾರ್ವಜನಿಕ ವೆಚ್ಚಗಳ ಗರಿಷ್ಠ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ರಾಜ್ಯವು ಸಾರ್ವಜನಿಕ ವೆಚ್ಚದ ದಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಗಮನ ಹರಿಸಬೇಕು ಎಂದು ಸಲಹೆ ನೀಡಿದೆ.
ಸುಸ್ಥಿರ ಅಭಿವೃದ್ಧಿ ಗುರಿಗಳ ಅಗತ್ಯಗಳು ಸರ್ಕಾರದ ಹಣಕಾಸಿನ ಮೇಲೆ ಒತ್ತಡವನ್ನು ಉಂಟು ಮಾಡುತ್ತಿವೆ. ಸುಸ್ಥಿರ ಅಭಿವೃದ್ದಿ ಗುರಿಗಗಳಿಗೆ ವಿತ್ತೀಯ ಮೂಲಗಳು, ವಿತ್ತೀಯ ಪ್ರಸ್ತುತಿ ಹಾಗೂ ಇತರ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಮೇಲೆ ಅದರ ಪ್ರಭಾವ ಕುರಿತಂತೆ ಯೋಚಿಸುವುದಕ್ಕೆ ಇದು ಅತ್ಯಂತ ಸೂಕ್ತ ಸಮಯ ಎಂದು ಹೇಳಿದೆ.
2022-23ರ ಪರಿಷ್ಕೃತ ಅಂದಾಜಿನಲ್ಲಿ ವಿತ್ತೀಯ ಕೊರತೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನವನ್ನು ಶೇ.2.80ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಇದಲ್ಲದೇ 2023-24ನೇ ಆಯವ್ಯಯ ಅಂದಾಜಿನಲ್ಲಿ ವಿತ್ತೀಯ ಕೊರತೆಯನ್ನು ಶೇ.2.60ಕ್ಕೆ ಗುರಿ ನಿಗದಿಪಡಿಸಿದ್ದು ಇದು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ಅಭಿವೃದ್ಧಿಯೇತರ ವೆಚ್ಚವು 25.50ರಷ್ಟು ಪ್ರತಿಶತದಷ್ಟಿದೆ. ಎಲ್ಲಾ ರಾಜ್ಯಗಳ ಸರಾಸರಿಗಿಂತಲೂ (ಶೇ.27.20) ಉತ್ತಮವಾಗಿದೆ. ಆದರೂ ರಾಜ್ಯದಲ್ಲಿ ಮೂಲಸೌಕರ್ಯ ಹೂಡಿಕೆಗಳನ್ನು ಹೆಚ್ಚಿಸಲು ಕರ್ನಾಟಕ ರಾಜ್ಯದ ಹಣಕಾಸಿನ ಪರಿಸ್ಥಿತಿಯ ಪ್ರಮುಖ ಅಂಶವಾಗಿರುವ ಆದಾಯ ಖಾತೆಗಳಲ್ಲಿನ ಹೆಚ್ಚುವರಿಗಳಿಗೆ ಹಿಂತಿರುಗಿಸುವ ಕಠಿಣ ಕೆಲಸವನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ಲೇಷಿಸಿದೆ.
‘ಇತ್ತೀಚಿನ ರಾಜ್ಯದ ನಿವ್ವಳ ಸಾಲಗಳ ಮಾಹಿತಿ ಪ್ರಕಾರ ದಕ್ಷಿಣ ರಾಜ್ಯಗಳಾದ ಆಂಧ್ರ, ತಮಿಳುನಾಡು, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಕ್ರಮವಾಗಿ 32,117.00 ಕೋಟಿ ರು., 27,332.00 ಕೋಟಿ ರು., 19,583.00 ಕೋಟಿ ರು.ಗಳು ಮತ್ತು 11,600 ಕೋಟಿ ರು.ಗಳ ನಿವ್ವಳ ಮಾರುಕಟ್ಟೆ ಸಾಲ ಹೊಂದಿದೆ. ಕರ್ನಾಟಕವು 2,102.00 ಕೋಟಿ ರು.ಗಳ ನಿವ್ವಳ ಮಾರುಕಟ್ಟೆ ಸಾಲ ಹೊಂದಿದೆ ಎಂದು ಸೂಚಿಸುತ್ತದೆ. ಸಾರ್ವಜನಿಕ ವೆಚ್ಚಗಳ ತರ್ಕಬದ್ಧಗೊಳಿಸುವಿಕೆಯ ಪ್ರಯತ್ನಗಳಿಂದಾಗಿ ಮಾರುಕಟ್ಟೆ ಸಾಲವು ಸ್ವಲ್ಪ ಋಣಾತ್ಮಕವಾಗಿದೆ,’ ಎಂದು ಅಭಿಪ್ರಾಯಿಸಿದೆ.
ರಾಜ್ಯವು ರಾಜಸ್ವ ಕಡೆಯಿಂದ ಕೆಲವು ಸಂಕಷ್ಟಗಳಿದ್ದರೂ ಸಹ ಬಂಡವಾಳ ವೆಚ್ಚಗಳ ಮೇಲಿನ ಗುರಿಯನ್ನು ರಕ್ಷಿಸುತ್ತಿದೆ. ಆಯವ್ಯಯಕ್ಕೆ ಹೋಲಿಸಿದರೇ ರಾಜಸ್ವದ ಕೊರತೆಯಿದ್ದರೂ ಸಹ ಬಂಡವಾಳದ ವೆಚ್ಚಗಳ ಸಂಕೋಚನವನ್ನು ಆಶ್ರಯಿಸದಿರಲು ರಾಜ್ಯವು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.
ಬಂಡವಾಳ ವೆಚ್ಚವು 2018-19ರಲ್ಲಿ 50,229.17 ಕೋಟಿ ರು.ಗಳಿಂದ 2023-24ರಲ್ಲಿ 76,814.12 ಕೋಟಿ ರು.ಗಳಿಗೆ ಹೆಚ್ಚಳವಾಗಿದೆ. ಕಳೆದ 6 ವರ್ಷಗಳಲ್ಲಿ ರಾಜ್ಯದ ಸ್ವಂತ ತೆರಿಗೆ ವಾರ್ಷಿಕ ಸರಾಸರಿ ಪಾಲು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಶೇ.7.12ರಷ್ಟಿದೆ. ಆದರೂ ಕಳವಳಕ್ಕೆ ಗಂಭೀರ ಕಾರಣವೆಂದರೇ ಕೇಂದ್ರದ ತೆರಿಗೆಗಳ ಪಾಲು ಕಡಿಮೆಯಾಗುತ್ತಿರುವುದು. ಇದು 2018-19ರಲ್ಲಿ ಶೇ.2.55ರಿಂದ 2023-24ರಲ್ಲಿ ಶೇ.1.45ಕ್ಕೆ ಕುಸಿದಿದೆ. ಇದೇ ರೀತಿಯಾಗಿ ಕೇಂದ್ರ ಸರ್ಕಾರದಿಂದ ಬರುವ ಅನುದಾನದ ಪ್ರವೃತ್ತಿಯು 2018-19ರಲ್ಲಿ ಶೇ.1.05ರಿಂದ 2023-24ರಲ್ಲಿ ಶೇ. 0.5ಕ್ಕೆ ಇಳಿಕೆಯಾಗಿದೆ ಎಂದು ವಿವರಿಸಿದೆ.
15ನೇ ಹಣಕಾಸು ಆಯೋಗದ ಅವಧಿಯಲ್ಲಿ ಒಂದು ಪ್ರಮುಖ ಮತ್ತು ಗಂಭೀರ ಸವಾಲು ಎಂದರೇ ಕೇಂದ್ರ ತೆರಿಗೆಗಳ ಸಂಗ್ರಹದಲ್ಲಿ ರಾಜ್ಯದ ಪಾಲು ಕುಸಿತವಾಗಿದೆ. ಕರ್ನಾಟಕಕ್ಕೆ ಹಣಕಾಸು ಆಯೋಗದ ಅನುದಾನ ಒಟ್ಟಾರೆ ಪಾಲು ಶೇ.3.7ರಷ್ಟಿದೆ. ಇದು 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಶೇ.4.71ರಷ್ಟಿದೆ. ಇದು ಶೇ.1ರಷ್ಟು ಕಡಿಮೆಯಾಗಿದೆ. ಮುಂದಿನ 5 ವರ್ಷಗಳಲ್ಲಿ ರಾಜ್ಯವನ್ನು ನಿಭಾಯಿಸಲು ತೀವ್ರ ಸವಾಲನ್ನು ಒಡ್ಡಲಿದೆ ಎಂದು ಎಚ್ಚರಿಸಿದೆ.
2022-26ರ ಮಧ್ಯಮ-ಅವಧಿಯ ವಿತ್ತೀಯ ಯೋಜನೆಯಲ್ಲಿ ಹೇಳಿದಂತೆ 2020-21 ಮತ್ತು 2022-23ರ ನಡುವೆ ಬಾಕಿ ಇರುವ ಹೊಣೆಗಾರಿಕೆಗಳು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ.5 ಅಂಕಗಳು ಹೆಚ್ಚಾಗುವ ನಿರೀಕ್ಷೆ ಇದೆ. ಅಂದರೆ 1.14 ಲಕ್ಷ ಕೋಟಿಗಳಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ರಾಜ್ಯವು ವಿತ್ತೀಯ ಕೊರತೆಯ ಗುರಿಗಳನ್ನು ಅನುಸರಿಸಿದರೇ 2025-26ರ ವೇಳೆಗೆ ಹಣಕಾಸು ಆಯೋಗದ ಅವಧಿಯ ಕೊನೆಯ ವರ್ಷದಲ್ಲಿ ಬಾಕಿ ಇರುವ ಹೊಣೆಗಾರಿಕೆಗಳು ಶೇ.27.1 ಎಂದು ಆಯೋಗವು ಅಂದಾಜಿಸಿದೆ. ಇದನ್ನು ಸಾಧಿಸಲು ಸಹ ರಾಜ್ಯವು 2023-26ರ ಅವಧಿಗೆ ವಿತ್ತೀಯ ಕೊರತೆಯನ್ನು ಶೇ.3ಕ್ಕೆ ಇಳಿಸಬೇಕಾಗಿದೆ ಎಂದು ಸಲಹೆ ನೀಡಿದೆ.
ಒಟ್ಟು ರಾಜಸ್ವದಲ್ಲಿ ತೆರಿಗೆಯೇತರ ರಾಜಸ್ವದ ಪಾಲು ಕೆಲವು ವರ್ಷಗಳಿಂದ ಕಡಿಮೆಯಾಗುತ್ತ ಬಂದಿದೆ. ಪ್ರಸ್ತುತ ಶೇ.5.24 ರಷ್ಟಿದೆ. ಸೇವೆಗಳಾದ್ಯಂತ ಹೆಚ್ಚುತ್ತಿರುವ ಬಳಕೆದಾರರಾ ಚೇತರಿಸಿಕೊಳ್ಳದ ಶುಲ್ಕದಲ್ಲಿ ಸಹಾಯಧನ ಹೆಚ್ಚುತ್ತಿರುವುದನ್ನು ಇದು ಸೂಚಿಸುತ್ತದೆ. ಇದು ರಾಜ್ಯದ ವಿತ್ತೀಯ ಬಲವರ್ಧನೆಗೆ ಗಂಭೀರ ಸವಾಲು ಆಗಿರುತ್ತದೆ. ಸಹಾಯ ಧನವನ್ನು ಕಡಿಮೆ ಮಾಡುವ ಯಾವುದೇ ಪ್ರಯತ್ನವು ರಾಜ್ಯದಲ್ಲಿ ಸಾಮಾಜಿಕ ವಲಯದ ವೆಚ್ಚವನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ ಎಂದು ಹೇಳಿದೆ.
ಅದೇ ರೀತಿ 2022-23 ಮತ್ತು 2023-24 ನಡುವೆ ಶೇ.16.37ರಷ್ಟು ಹೆಚ್ಚಾಗುವ ನಿರೀಕ್ಷೆ ಇರುವ ಅಭಿವೃದ್ಧಿಯೇತರ ವೆಚ್ಚದ ಪಾಲು ಮುಂಬರುವ ವರ್ಷಗಳಲ್ಲಿ ಹಣಕಾಸಿನ ಬಲಕ್ಕೆ ಗಮನಾರ್ಹಾ ಸವಾಲು ಒಡ್ಡಬಹುದು ಎಂದು ಎಚ್ಚರಿಸಿದೆ.
ಹಾಗೆಯೇ ಈ ಹೆಚ್ಚಳವು ಹೆಚ್ಚಾಗಿ ಬಡ್ಡಿ ಪಾವತಿಗಳು ಮತ್ತು ವೇತನ, ಪಿಂಚಣಿ ಬಿಲ್‌ಗಳ ಹೆಚ್ಚಳದಿಂದ ಕೊಡುಗೆಯಾಗಿದೆ. ಇದು ಮಧ್ಯಮ ಅವಧಿಯಲ್ಲಿ ದೊಡ್ಡ ಸಾಲದ ಪರಿಸ್ಥಿತಿಯಿಂದಾಗಿ ಹೆಚ್ಚಾಗುವ ನಿರೀಕ್ಷೆ ಇದೆ. 2023-24ರಲ್ಲಿ ಸಾಲದ ಸೇವೆಯು ಶೇ.14.76ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವಿವರಿಸಿದೆ.