ಕನ್ನಡಿಗರಿಗೆ ಖಾಸಗಿಯಲ್ಲಿ ಕಡ್ಡಾಯ ಉದ್ಯೋಗ; ನಿಯಮಾವಳಿಗೆ ತಿದ್ದುಪಡಿ ತಂದಲ್ಲಿ ಸಂವಿಧಾನದ ಉಲ್ಲಂಘನೆ

ಬೆಂಗಳೂರು; ಸರ್ಕಾರದಿಂದ ಯಾವುದೇ ರಿಯಾಯಿತಿ, ಪ್ರಯೋಜನ, ವಿನಾಯಿತಿ  ಪಡೆಯದ ಖಾಸಗಿ ಕೈಗಾರಿಕೆಗಳಲ್ಲಿಯೂ ಕಡ್ಡಾಯವಾಗಿ ಕನ್ನಡಿಗರನ್ನೇ ನೇಮಕಾತಿ ಮಾಡಿಕೊಳ್ಳಲು ನಿಯಮಗಳಿಗೆ ತಿದ್ದುಪಡಿ ತರುವುದು ಅಷ್ಟು ಸುಲಭವಲ್ಲ. ಒಂದೊಮ್ಮೆ ತಿದ್ದುಪಡಿ ಮಾಡಿದಲ್ಲಿ  ಸಂವಿಧಾನದ ಅನುಚ್ಛೇಧ 19ರ (1) (ಜಿ) ಉಪಬಂಧಗಳನ್ನು ಉಲ್ಲಂಘಿಸಿದಂತಾಗುತ್ತದೆ.

 

ಹೀಗೆಂದು  ಕಾನೂನು ಇಲಾಖೆಯು ಸರ್ಕಾರವನ್ನು ಎಚ್ಚರಿಸಿದೆ.

 

ರಾಜ್ಯದಲ್ಲಿ ಖಾಸಗಿ ವಲಯದಲ್ಲಿ ಕೈಗಾರಿಕೆಗಳು ಆರಂಭಿಸುವ ಮುನ್ನವೇ ಮಾಡಿಕೊಳ್ಳುವ ಮೂಲ ಒಪ್ಪಂದದಲ್ಲಿ ಕನ್ನಡಿಗರು ಮತ್ತು ಅಂಗವಿಕಲರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಎಂಬ ಆದೇಶ ಜಾರಿಯಲ್ಲಿದೆ. ಈ ಆದೇಶಕ್ಕೆ ಬದಲಾವಣೆ ತರಲು ಕಾಂಗ್ರೆಸ್‌ ಸರ್ಕಾರವು ಮುಂದಾಗಿದೆ. ಆದರೆ ಅಷ್ಟು ಸುಲಭವಲ್ಲ ಎಂದು ಕಾನೂನು ಇಲಾಖೆಯು  ಅಭಿಪ್ರಾಯ ನೀಡಿದೆ.

 

ಈ ಕುರಿತು ಕಾರ್ಮಿಕ ಇಲಾಖೆಯು ಸಲ್ಲಿಸಿದ್ದ ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ-1961’ ಕ್ಕೆ ತಿದ್ದುಪಡಿ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಕಾನೂನು ಇಲಾಖೆಯು ಸಂವಿಧಾನ ಉಲ್ಲಂಘನೆ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಟಿಪ್ಪಣಿ ಹಾಳೆಯೊಂದು (ಸಂ ವ್ಯಾ ಶಾ ಇ 16 ಅಶಾರ 2024) ಲಭ್ಯವಾಗಿದೆ.

 

‘ಈಗ ಪ್ರಸ್ತಾಪಿಸಲಾಗಿರುವ ತಿದ್ದುಪಡಿಯಲ್ಲಿ ಸರ್ಕಾರದಿಂದ ಯಾವುದೇ ರಿಯಾಯಿತಿ, ಪ್ರಯೋಜನ, ವಿನಾಯಿತಿ ಪಡೆಯದ ಖಾಸಗಿ ಕೈಗಾರಿಕೆಗಳಲ್ಲಿ ಕಡ್ಡಾಯವಾಗಿ ಕನ್ನಡಿಗರನ್ನೇ ನೇಮಕಾತಿ ಮಾಡಿಕೊಳ್ಳುವ ಉಪಬಂಧವು ಭಾರತ ಸಂವಿಧಾನದ ಅನುಚ್ಛೇಧ 19ರ (1) (ಜಿ) ಉಪಬಂಧಗಳನ್ನು ಉಲ್ಲಂಘಿಸುತ್ತದೆ,’ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಈ ಹಿನ್ನೆಲೆಯಲ್ಲಿ ಕನ್ನಡಿಗ ಪದದ ಪರಿಭಾಷೆ ಹಾಗೂ ಸರ್ಕಾರದಿಂದ ಯಾವುದೇ ರಿಯಾಯಿತಿ, ಪ್ರಯೋಜನ, ವಿನಾಯಿತಿ ಪಡೆಯದ ಖಾಸಗಿ ಕೈಗಾರಿಕೆಗಳಲ್ಲಿ ಕಡ್ಡಾಯವಾಗಿ ಕನ್ನಡಿಗರನ್ನೇ ನೇಮಕಾತಿ ಮಾಡಿಕೊಳ್ಳುವ ಉಪಬಂಧದ ಕಾನೂನಾತ್ಮಕತೆ ಪ್ರಶ್ನೆ ಎದುರಾಗಲಿದೆ ಎಂದೂ ಹೇಳಿರುವುದು ತಿಳಿದು ಬಂದಿದೆ.

 

ಈ ಸಂಬಂಧ ಕಾನೂನು ಇಲಾಖೆ ಮತ್ತು ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ಪಡೆದು ನಂತರ ಕಡತವನ್ನು ಇಲಾಖೆಗೆ ಸಲ್ಲಿಸಬಹುದು ಎಂದು ಅಭಿಪ್ರಾಯಿಸಿದೆ.

 

ಸಂವಿಧಾನದ ಅನುಚ್ಛೇಧ 19 (1) (ಜಿ) ರಲ್ಲೇನಿದೆ?

 

ಯಾವುದೇ ವೃತ್ತಿಯನ್ನು ನಡೆಸುವ ಅಥವಾ ಕಸುಬುನ್ನು, ವ್ಯಾಪಾರವನ್ನು ಅಥವಾ ವ್ಯವಹಾರವನ್ನು  ನಡೆಸಲು ಅವಶ್ಯವಾದ ವ್ಯವಹಾರ/ ವೃತ್ತಿ ಅಥವಾ ತಾಂತ್ರಿಕ ಅರ್ಹತೆಗಳಿಗೆ ಅಥವಾ ಯಾವುದಾದರೂ ವ್ಯಾಪಾರವನ್ನು, ವ್ಯವಹಾರವನ್ನು, ಕೈಗಾರಿಕೆಯನ್ನು ಅಥವಾ ಸೇವೆಯನ್ನು

 

ರಾಜ್ಯವೇ ಆಗಲೀ ಅಥವಾ ರಾಜ್ಯದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ನಿಗಮವೇ ಆಗಲೀ ಪೂರ್ಣವಾಗಿ ಅಥವಾ ಭಾಗಶಃ ನಾಗರೀಕರನ್ನು ಸೇರಿಸಿಕೊಳ್ಳದೇ ಅಥವಾ ಅನ್ಯತಾ ನಡೆಸಿಕೊಂಡು ಬರುವುದಕ್ಕೆ ಸಂಬಂಧಪಡುವಷ್ಟರ ಮಟ್ಟಿಗೆ ಅಸ್ತಿತ್ವದಲ್ಲಿರುವ ಕಾನೂನು ಜಾರಿ ಮೇಲೆ ಅಥವಾ ಅವುಗಳಿಗೆ ಸಂಬಂಧಪಟ್ಟ ಯಾವುದೇ ಕಾನೂನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ ಎಂದು ವಿವರಿಸಿದೆ.

 

ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಮತ್ತು ವಿಶೇಷ ಚೇತನರಿಗೆ ಕಡ್ಡಾಯವಾಗಿ ಉದ್ಯೋಗ ಅವಕಾಶ ಕಲ್ಪಿಸಲು ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ-1961’ ಕ್ಕೆ ತಿದ್ದುಪಡಿ ತರಲು ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌ ಮತ್ತು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರ ಸೂಚನೆ ಮೇರೆಗೆ ಪ್ರಸ್ತಾವಿಸಿತ್ತು.

 

ಈ ಕುರಿತು ಅಡ್ವೋಕೇಟ್‌ ಜನರಲ್‌ ಅವರು 2017ರ ಅಕ್ಟೋಬರ್‍‌ 17ರಂದೇ ಅಭಿಪ್ರಾಯ (ಕಡತ ಸಂಖ್ಯೆ; ಕಾಇ 268 ಎಲ್‌ಇಟಿ 2016) ನೀಡಿದ್ದರು. ಅದರಂತೆ ಕರ್ನಾಟಕ ಕೈಗಾರಿಕೆ ಉದ್ಯೋಗಗಳು (ಜಾರಿಯಲ್ಲಿರುವ ಆದೇಶ) (ತಿದ್ದುಪಡಿ) ನಿಯಮಗಳೂ 2019ಕ್ಕೆ ಅಂತಿಮ ಅಧಿಸೂಚನೆ ಕರಡನ್ನು ಪರಿಷ್ಕರಿಸಲಾಗಿತ್ತು. 2019ರ ಡಿಸೆಂಬರ್‍‌ 7ರಂದೇ ಕರ್ನಾಟಕ ರಾಜ್ಯಪತ್ರದಲ್ಲಿಯೂ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿತ್ತು.

 

ಇದರ ಪ್ರಕಾರ ‘ಸರ್ಕಾರದಿಂದ ಮೂಲಭೂತ ಸೌಲಭ್ಯ ಪಡೆದಿರುವ ಖಾಸಗಿ ವಲಯದ ಉದ್ಯಮ, ಕೈಗಾರಿಕೆ ಸಂಸ್ಥೆಗಳು ಕನಿಷ್ಠ 15 ವರ್ಷ ಕರ್ನಾಟಕದಲ್ಲಿ ವಾಸವಾಗಿ ಕನ್ನಡವನ್ನು ಓದಲು ಬರೆಯಲು ಮತ್ತು ಮಾತನಾಡಲು ಸಮರ್ಥರಾಗಿರುವವ ಭಾರತೀಯ ನಾಗರೀಕರಾಗಿರುವ ಕನ್ನಡರಿಗನ್ನೇ ಮಾತ್ರವೇ ನೇಮಕಾತಿ ಮಾಡಿಕೊಳ್ಳಬೇಕು,’ ಎಂದು ವಿವರಿಸಿದೆ.

 

ಅದೇ ರೀತಿ ‘ಸರ್ಕಾರದಿಂದ ಯಾವುದೇ ಮೂಲಭೂತ ಸೌಲಭ್ಯ ಪಡೆಯದಿರುವ ಖಾಸಗಿ ವಲಯದ ಉದ್ಯಮ, ಕೈಗಾರಿಕೆ ಸಂಸ್ಥೆಗಳು ಕನಿಷ್ಠ 15 ವರ್ಷ ಕನಾfಟಕದಲ್ಲಿ ವಾಸವಾಗಿದ್ದು ಕನ್ನಡವನ್ನು ಓದಲು, ಬರೆಯಲು ಮತ್ತು ಮಾತಾಡಲು ಸಮರ್ಥರಾಗಿರುವ ಭಾರತೀಯ ನಾಗರೀಕರಾಗಿರುವ ಕನ್ನಡಿಗರನ್ನು ಮಾತ್ರವೇ ನೇಮಕಾತಿ ಮಾಡಿಕೊಳ್ಳಲು ಆದ್ಯತೆ ನೀಡಬೇಕು,’ ಎಂದೂ ಹೇಳಿದೆ.

 

ಉದ್ಯಮ ಸ್ಥಾಪನೆ ಮಾಡುವ ಯಾವುದೇ ಉದ್ಯಮಿ ಜೊತೆ ಮಾಡಿಕೊಳ್ಳುವ ಮೂಲ ಒಪ್ಪಂದದಲ್ಲಿಯೇ ಕನ್ನಡಿಗರು ಹಾಗಹೂ ಅಂಗವಿಕಲರಿಗೆ ಕಡ್ಡಾಯವಾಗಿ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಆದೇಶದಲ್ಲಿಯೇ ಬದಲಾವಣೆ ತರಲು ಕಾರ್ಮಿಕ ಇಲಾಖೆ ತೀರ್ಮಾನಿಸಿತ್ತು.

 

ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ, ಭೂಮಿ, ಭೂ ಕಂದಾಯ ವಿನಾಯಿತಿ, ಇಂಧನ ಶುಲ್ಕ ರಿಯಾಯಿತಿ ಸೇರಿದಂತೆ ಯಾವುದೇ ಪರೋಕ್ಷ ಹಾಗೂ ಪ್ರತ್ಯಕ್ಷ ಸಹಾಯ ಪಡೆದ ಕಂಪೆನಿಗಳು ಹುದ್ದೆಗಳ ಲಭ್ಯತೆ ಆಧಾರದ ಮೇಲೆ ಕನ್ನಡಿಗರಿಗೆ ಕಡ್ಡಾಯ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರದ ಅವಧಿಯಲ್ಲಿ ತಿದ್ದುಪಡಿ ತರಲಾಗಿತ್ತು.

 

ಈ ನೀತಿ ಉಲ್ಲಂಘಿಸುವ ಕಂಪೆನಿಗಳ ವಿರುದ್ಧ ದೂರು ನೀಡಲು ‘ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ’ ರಚಿಸಲು ನಿಯಮಗಳಲ್ಲಿ ಪ್ರಸ್ತಾವಿಸಲಾಗಿತ್ತು. ಸಂಸ್ಥೆ​ಯಲ್ಲಿ ಅವಕಾಶವಿದ್ದರೂ ತಮಗೆ ಉದ್ಯೋಗ ನೀಡಿಲ್ಲ ಎಂದು ದೂರು ನೀಡಿದರೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಕಂಪೆನಿಗೆ ಉದ್ಯೋಗ ನೀಡುವಂತೆ ಸೂಚಿಸುತ್ತಾರೆ. ಒಂದು ವೇಳೆ ಸೂಚನೆಯನ್ನು ಉಲ್ಲಂಘಿಸಿದರೆ ಸರ್ಕಾರದಿಂದ ಕಂಪೆನಿಗೆ ನೀಡುತ್ತಿರುವ ಸವಲತ್ತುಗಳನ್ನು ತಡೆ ಹಿಡಿಯಲು ಈ ಕಾಯ್ದೆ ಅಡಿ ಅವ​ಕಾಶ ಕಲ್ಪಿ​ಸ​ಲಾ​ಗಿತ್ತು.

 

‘ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ’ ಅಡಿ ಬರುವ ಕಂಪೆನಿಗಳು ಸರ್ಕಾರದಿಂದ ರಿಯಾಯಿತಿ ಅಥವಾ ಸವಲತ್ತುಗಳನ್ನು ಪಡೆಯುತ್ತಿದ್ದರೆ ಅಂತಹ ಕಂಪೆನಿಗಳಿಗೆ ಇದನ್ನು ಕಡ್ಡಾಯ ಮಾಡಿ ನಿಯಮಾವಳಿಗೆ ತಿದ್ದುಪಡಿ ತರಲಾಗಿತ್ತು.

 

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಖಾಸಗಿ ಕಂಪೆನಿಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ಶಿಫಾರಸುಗಳನ್ನು ನೀಡುವಂತೆ 1983ರಲ್ಲಿ ಡಾ. ಸರೋಜಿನಿ ಮಹಿಷಿ ನೇತೃತ್ವದ ಸಮಿತಿ ರಚಿಸಲಾಗಿತ್ತು. 1986ರಲ್ಲಿ ಡಾ. ಸರೋಜಿನಿ ಮಹಿಷಿ ಅವರು ವರದಿ ನೀಡಿ, 58 ಪ್ರಮುಖ ಶಿಫಾರಸುಗಳನ್ನು ನೀಡಿದ್ದರು. ಇದರಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಶೇ.100 ರಷ್ಟುಹುದ್ದೆಗಳು ಕನ್ನಡಿಗರಿಗೇ ನೀಡುವುದು ಸೇರಿದಂತೆ ಹಲವು 46 ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts