ಸೆಕ್ಯೂರಿಟಿ, ಡಿಟೆಕ್ವಿವ್‌ ಏಜೆನ್ಸಿ ಮೂಲಕ ಶಿಕ್ಷಕರ ಸರಬರಾಜು; ಟೀಕೆಗೊಳಗಾದ ಬಿಬಿಎಂಪಿ ಅನುಮೋದನೆ

ಬೆಂಗಳೂರು; ಬಿಬಿಎಂಪಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಲು ನೇಮಿಸಿಕೊಂಡಿರುವ ಶಿಕ್ಷಕರ ಪೈಕಿ ಹಲವರು ನಿಗದಿತ ವಿದ್ಯಾರ್ಹತೆಯನ್ನೇ ಪಡೆದಿಲ್ಲ ಎಂಬ ಆರೋಪಗಳು ಕೇಳಿ ಬಂದಿರುವ ನಡುವೆಯೇ ಇದೀಗ ಡಿಟೆಕ್ವಿವ್‌ ಅಂಡ್‌ ಸೆಕ್ಯೂರಿಟಿ ಕಂಪನಿ ಮೂಲಕ ಶಿಕ್ಷಕರ ಸರಬರಾಜು ಮಾಡಲು ಮುಂದಾಗಿದೆ.

 

ಸೆಕ್ಯೂರಿಟಿ ಮತ್ತು ಡಿಟೆಕ್ವಿವ್‌ ಏಜೆನ್ಸಿ ಮೂಲಕ ಶಿಕ್ಷಕರ ಸರಬರಾಜು ಮಾಡಲು ಮುಂದಾಗಿರುವವ ಬಿಬಿಎಂಪಿ ಕ್ರಮಕ್ಕೆ ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಹಾಗೂ ಹಾಲಿ ಶಾಸಕ ಎಸ್‌ ಸುರೇಶ್‌ ಕುಮಾರ್‍‌ ಅವರು ಇದನ್ನು ಟೀಕಿಸಿದ್ದಾರೆ.

 

ಬಿಬಿಎಂಪಿ ವ್ಯಾಪ್ತಿಯ ಶಾಲೆ ಮತ್ತು ಕಾಲೇಜುಗಳಿಗೆ ಶಿಕ್ಷಕರ ನೇಮಕಾತಿ ಸಂಬಂಧ ಕರೆದಿದ್ದ ಟೆಂಡರ್‍‌ನಲ್ಲಿ ಭಾಗವಹಿಸಿದ್ದ ಅಪ್ಪು ಡಿಟೆಕ್ವಿಟ್‌ ಸೆಕ್ಯೂರಿಟಿ ಸರ್ವೀಸ್‌ ಎಲ್‌ 1 ಆಗಿತ್ತು. ಟೆಂಡರ್‍‌ ಅನುಮೋದಿತ ದರವಾದ 3,40,48,611 ರು. ಮೊತ್ತದಲ್ಲಿ ಶಿಕ್ಷಕರ ಸರಬರಾಜು ಸೇವೆ ಒದಗಿಸಲು ಬಿಬಿಎಂಪಿ ಆಡಳಿತಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಇದನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಸಹ ಅನುಮತಿ ನೀಡಿದ್ದಾರೆ ಎಂದು ಗೊತ್ತಾಗಿದೆ.

 

ಅನುಮೋದಿತ ದರಗಳಿಗೆ ಬ್ಯಾಂಕ್‌ ಗ್ಯಾರಂಟಿ ಮತ್ತು ಇ -ಸ್ಟಾಂಪ್‌ ಪೇಪರ್‍‌ ಸಲ್ಇಸಲು ಬಿಬಿಎಂಪಿಯ ದಕ್ಷಿಣ ವಲಯದ ಕಾರ್ಯಪಾಲಕ ಅಭಿಯಂತರರು 2023ರ ನವೆಂಬರ್‍‌ 6ರಂದೇ ಹೊರಗುತ್ತಿಗೆ ಕಂಪನಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶಿಕ್ಷಕರು ಮತ್ತು ಮಕ್ಕಳ ಜೊತೆಯಲ್ಲಿ ಬಿಬಿಎಂಪಿ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‍‌ ಅವರು ಟೀಕಿಸಿದ್ದಾರೆ. ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ಹೊಸ ಶಿಕ್ಷಕರನ್ನು ನೀಡುವ ಗುತ್ತಿಗೆಯನ್ನು ಬದಲಾಯಿಸುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದ್ದಾರೆ.
ಹೊಸದಾಗಿ ಶಿಕ್ಷಕರು, ಉಪನ್ಯಾಸಕರನ್ನು ನೇಮಿಸಿದರೆ ಕಳೆದ 15 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಗತಿ, ಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿರುವ ಸುರೇಶ್‌ಕುಮಾರ್‍‌ ಅವರು ಮಧ್ಯಂತರ ವಾರ್ಷಿಕ ಪರೀಕ್ಷೆ ನಡೆಯುವ ಸಂದರ್ಭದಲ್ಲೇ ಶಿಕ್ಷಕರ ಸೇವೆಯನ್ನು ರದ್ದುಪಡಿಸಿ, ಹೊಸದಾಗಿ ನೇಮಕಗೊಳ್ಳುವ ಶಿಕ್ಷಕರಿಗೆ ಎಷ್ಟು ಪಠ್ಯ ಮಾಡಬೇಕು ಹಾಗೂ ಏನು ತಯಾರಿ ನಡೆಸಬೇಕು ಎಂಬ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೊಸದಾಗಿ ಗುತ್ತಿಗೆ ಪಡೆಯುತ್ತಿರುವ ಟೆಂಡರ್‍‌ದಾರರ ಬಳಿ ನುರಿತ, ಅನುಭವಿ ಶಿಕ್ಷಕರು, ಉಪನ್ಯಾಸಕರು ಲಭ್ಯವಿರುತ್ತಾರೆಯೇ ಎಂಬ ಖಾತರಿ ಸಹ ಅಧಿಕಾರಿಗಳು ಪಡೆದುಕೊಂಡಿಲ್ಲ. ಹೊಸದಾಗಿ ಟೆಂಡರ್‍‌ ಪಡೆದವರು ಶಿಕ್ಷಕರ ಸರಬರಾಜು ಮಾಡಬೇಕು, ಇದು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಇಷ್ಟೆಲ್ಲಾ ಗೊಂದಲ ನಡುವೆ ಪಶ್ಚಿಮ, ಪೂರ್ವ ವಲಯ ಟೆಂಡರ್‍‌ ಅನುಮೋದನೆಯಾಗಿ ಅಲ್ಲೂ ಹೊಸ ಗುತ್ತಿಗೆದಾರರ ನೇಮಕಗೊಳ್ಳಲಿದ್ದಾರೆ. ಈಗ ಪಾಠ ಮಾಡುತ್ತಿರುವ ಶಿಕ್ಷಕರು, ಉಪನ್ಯಾಸಕರು, ಪಿಹೆಚ್‌ಡಿ ಮತ್ತು ಡಾಕ್ಟರೇಟ್‌ ಪದವಿ ಪಡೆದವರಿದ್ದಾರೆ. 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ಏಕಾಏಕೀ ಕೆಲಸದಿಂದ ತೆಗೆದು ಹಾಕುವುದು ನ್ಯಾಯಸಮ್ಮತವಲ್ಲ. ಈಗ ಇರುವ ಶಿಕ್ಷಕರು, ಉಪನ್ಯಾಸಕರನ್ನು ಮುಂದುವರೆಸಲು ಸಾಧ್ಯವೇ. ಇಲ್ಲಿಂದ ಗೊಂದಲ ಉಂಟು ಮಾಡಲು ಬಿಬಿಎಂಪಿಯಲ್ಲಿ ಕಾಣದ ಕೈಗಳು ಆಟವಾಡುತ್ತಿದೆ ಎಂದಿದ್ದಾರೆ.

ಬಿಬಿಎಂಪಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಲು ನೇಮಿಸಿಕೊಂಡಿರುವ ಶಿಕ್ಷಕರ ಪೈಕಿ ಹಲವರು ನಿಗದಿತ ವಿದ್ಯಾರ್ಹತೆಯನ್ನೇ ಪಡೆಯದಿರುವುದು ಬೆಳಕಿಗೆ ಬಂದಿದೆ. ಶಿಕ್ಷಕರ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ಪರಿಶೀಲಿಸದೆಯೇ, ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಅಕ್ರಮ ನಡೆಸಲಾಗಿದೆ ಎಂಬ ಆಪಾದನೆ ಕೇಳಿ ಬಂದಿತ್ತು.

 

ಬೆಂಗಳೂರು ನಗರದಲ್ಲಿ 164 ಶಾಲಾ-ಕಾಲೇಜುಗಳು ಬಿಬಿಎಂಪಿ ಅಧೀನದಲ್ಲಿವೆ. 171 ಮಂದಿ ಕಾಯಂ ಶಿಕ್ಷಕರು, ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ 741 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಪೈಕಿ ಹಲವರು ಸರಕಾರದ ಮಾರ್ಗಸೂಚಿಯಂತೆ ಶೈಕ್ಷಣಿಕ ಅರ್ಹತೆ ಪಡೆದಿಲ್ಲ ಎಂದು ತನಿಖೆಯಿಂದ ದೃಢಪಟ್ಟಿತ್ತು.

 

ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೆ 250 ಕೋಟಿ ರೂ. ಕೋರಿತ್ತಲ್ಲದೇ 5 ಹೊಸ ಶಾಲೆಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ಹೊರಗುತ್ತಿಗೆ ಪದ್ಧತಿ ಮೂಲಕವೇ ಬಿಬಿಎಪಿಯಲ್ಲಿ ಹಲವು ವರ್ಷಗಳಿಂದಲೂ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಕ್ರಿಸ್ಟಲ್‌ ಎಂಬ ಸಂಸ್ಥೆಯು ಶಿಕ್ಷಕರನ್ನು ಪೂರೈಸುವ ಗುತ್ತಿಗೆ ಪಡೆದಿತ್ತು. ಆದರೆ, ಈ ಗುತ್ತಿಗೆ ಸಂಸ್ಥೆಯು ವೃಂದ ಮತ್ತು ನೇಮಕಾತಿ ನಿಯಮಾವಳಿ, ಸರಕಾರದ ಮಾರ್ಗಸೂಚಿಯಂತೆ ಅರ್ಹ, ನಿಗದಿತ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಒದಗಿಸಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

 

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಪಾಲಿಕೆಯ ಶಾಲಾ-ಕಾಲೇಜುಗಳು ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ಶಿಕ್ಷಕರ ವಿದ್ಯಾರ್ಹತೆ ಪರಿಶೀಲಿಸಲು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶಿಸಿದ್ದರು. ಅದರಂತೆ ನಿವೃತ್ತ ಡಿಡಿಪಿಐ ಅಧಿಕಾರಿಗಳನ್ನೊಳಗೊಂಡ ಸಲಹಾ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು 181 ಮಂದಿ ನಿಗದಿತ ವಿದ್ಯಾರ್ಹತೆ ಪಡೆಯದಿರುವುದನ್ನು ಪತ್ತೆ ಮಾಡಿ ವರದಿ ಸಲ್ಲಿಸಿತ್ತು.

 

ಶಿಶುವಿಹಾರದ ಮಕ್ಕಳಿಗೆ ಬೋಧಿಸಲು ಪಿಯುಸಿ, ಎನ್‌ಟಿಟಿ ವಿದ್ಯಾರ್ಹತೆ ನಿಗದಿಪಡಿಸಲಾಗಿತ್ತು. ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಪಿಯುಸಿ, ಟಿಇಟಿ ಅಥವಾ ಡಿ.ಇಡಿ, ಪ್ರೌಢಶಾಲಾ ಶಿಕ್ಷಕರಿಗೆ ಪದವಿ, ಬಿ.ಇಡಿ, ಪದವಿಪೂರ್ವ ಶಿಕ್ಷಕರಿಗೆ ಪಿಯುಸಿ, ಬಿ.ಇಡಿ, ಪದವಿ ಉಪನ್ಯಾಸಕರು ಎಂಎ, ಕೆಸೆಟ್‌ ಅಥವಾ ನೆಟ್‌ ವಿದ್ಯಾರ್ಹತೆ ಪಡೆದಿರಬೇಕು. ಆದರೆ, ಕೇವಲ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿಉತ್ತೀರ್ಣರಾಗಿದ್ದವರನ್ನೂ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು.

 

ಪಾಲಿಕೆ ಅಧೀನದಲ್ಲಿ 33 ಪ್ರೌಢಶಾಲೆಗಳಿದ್ದು, 2022-23ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ನಿರೀಕ್ಷಿಸಿದಷ್ಟು ಫಲಿತಾಂಶ ಬಂದಿಲ್ಲ. 2021-22ಕ್ಕೆ ಹೋಲಿಸಿದರೆ (ಶೇ 71.37), ಕಡಿಮೆ ಫಲಿತಾಂಶ ಬಂದಿದೆ. 2022-23ರಲ್ಲಿ ಶೇ 67.53ರಷ್ಟು ಫಲಿತಾಂಶವಷ್ಟೇ ಬಂದಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದ 2270 ವಿದ್ಯಾರ್ಥಿಗಳ ಪೈಕಿ 1533 ಮಂದಿಯಷ್ಟೇ ಉತ್ತೀರ್ಣರಾಗಿದ್ದು, 737 ಮಂದಿ ಅನುತ್ತೀರ್ಣರಾಗಿದ್ದಾರೆ. ಬಹುತೇಕ ಶಾಲೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ಈ ಕಳಪೆ ಫಲಿತಾಂಶಕ್ಕೆ ಅನರ್ಹ ಶಿಕ್ಷಕರ ನೇಮಕಾತಿಯೇ ಕಾರಣ ಎಂಬ ದೂರು ಸಹ ಕೇಳಿ ಬಂದಿತ್ತು.

 

ಶೈಕ್ಷಣಿಕ ಅರ್ಹತೆ ಹೊಂದಿಲ್ಲದ ಶಿಕ್ಷಕರನ್ನು ಪೂರೈಸಿರುವ ಗುತ್ತಿಗೆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಗುತ್ತಿಗೆ ಸಂಸ್ಥೆ ವಿಧಿರುಧಿದ್ಧ ಕಠಿಣ ಕ್ರಮ ಜರುಗಿಸದೆ, ಅನರ್ಹ ಶಿಕ್ಷಕರನ್ನು ಬದಲಾಯಿಸಿ, ಅರ್ಹರನ್ನು ನೇಮಿಸುವಂತೆ ಸೂಚನೆ ನೀಡಲಾಗಿತ್ತು.

 

ನಿಗದಿತ ವಿದ್ಯಾರ್ಹತೆ ಹೊಂದಿಲ್ಲದವರನ್ನು ತಕ್ಷಣವೇ ಸೇವೆಯಿಂದ ತೆಗೆದು, ಅರ್ಹರನ್ನು ನೇಮಕ ಮಾಡುವಂತೆ ಸೂಚಿಸಲಾಗಿತ್ತು. ಶಿಕ್ಷಕರ ಪೂರೈಕೆಯ ಗುತ್ತಿಗೆ ಷರತ್ತುಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಲಾಗಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts