3,289 ಕೋಟಿ ರು ಅನಿಲ ಹಗರಣ; ಕಾಂಗ್ರೆಸ್‌ ಸರ್ಕಾರದ ನೂತನ ನೀತಿ, ಅದಾನಿ ಮತ್ತಿತರರಿಗೆ ಲಾಭವಾಯಿತೇ?

ಬೆಂಗಳೂರು; ನಗರ ಅನಿಲ ವಿತರಣಾ ಜಾಲದ ಅಭಿವೃದ್ದಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ರೂಪಿಸಿರುವ ನೀತಿಯಿಂದಾಗಿ ಅದಾನಿ ಸೇರಿದಂತೆ ಮತ್ತಿತರ ಅನಿಲ ಆಧಾರಿತ ಕಂಪನಿಗಳಿಗೆ ಅಂದಾಜು 3,289.20 ಕೋಟಿ ರು.ನಷ್ಟು ಆರ್ಥಿಕ ಲಾಭ ಮಾಡಿಕೊಟ್ಟಿರುವುದನ್ನು ದಿ ಫೈಲ್‌’ ಇದೀಗ ಬಹಿರಂಗಗೊಳಿಸುತ್ತಿದೆ.

 

ಅದಾನಿ ಕಂಪನಿ ಮತ್ತು ಅದರ ಆರ್ಥಿಕ ಚಟುವಟಿಕೆಗಳ ಕುರಿತು ರಾಹುಲ್‌ ಗಾಂಧಿ ಮತ್ತು ಎಐಸಿಸಿ ಧುರೀಣರು ದೇಶಾದ್ಯಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಕಲ್ಲಿದ್ದಲು ಆಮದು ದರ ಕೃತಕವಾಗಿ ಹೆಚ್ಚಿಸಿ ಅದಾನಿ ಕಂಪನಿಯು ವಿದ್ಯುತ್ ಸರಬರಾಜು ಯುನಿಟ್ ದರ ಹೆಚ್ಚಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

 

ಇದರ ನಡುವೆಯೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ನೈಸರ್ಗಿಕ ಅನಿಲ ಸರಬರಾಜು ಮಾಡಲು ಪೈಪ್ ಅಳವಡಿಕೆ ಈ ಮೊದಲು ನಿಗದಿಪಡಿಸಿದ್ದ ಶುಲ್ಕವನ್ನು ಅತ್ಯಂತ ಕನಿಷ್ಟಕ್ಕಿಳಿಸಿದೆ. ಇದು  ಅದಾನಿ ಮತ್ತಿತರೆ ಕಂಪನಿಗಳಿಗೆ ಬಹುದೊಡ್ಡ ಆರ್ಥಿಕ ಲಾಭವನ್ನು ತಂದುಕೊಟ್ಟಿದೆ.

 

ಮತ್ತೊಂದು ಆಘಾತಕಾರಿ ಅಂಶವೆಂದರೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ರೂಪಿಸಿರುವ ಅನಿಲ ವಿತರಣಾ ಜಾಲ ಅಭಿವೃದ್ಧಿ ನೀತಿಯಿಂದಾಗಿ ರಾಜ್ಯದಲ್ಲಿ ಹನ್ನೊಂದು ಸ್ಥಳಗಳಲ್ಲಿ ಅನಿಲ ಸರಬರಾಜು ಗುತ್ತಿಗೆ ಪಡೆದುಕೊಂಡಿರುವ ಅದಾನಿ ಕಂಪನಿಯೊಂದಕ್ಕೇ ಅಂದಾಜು 387 ಕೋಟಿ ರು.ಗೂ ಅಧಿಕ ಮೊತ್ತದ ಲಾಭ ಮಾಡಿಕೊಟ್ಟಂತಾಗಿದೆ. ನೂತನ ನೀತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಬೃಹತ್‌ ಪ್ರಮಾಣದ ಆದಾಯವೂ ತಪ್ಪಿ ಹೋದಂತಾಗಿದೆ.

 

ಈ ನೀತಿಯು ರಾಜ್ಯಕ್ಕೆ ಸಂಬಂಧಿಸಿದ ಕೆಲವು ತಿದ್ದುಪಡಿಗಳೊಂದಿಗೆ ಕೇಂದ್ರದ ಕಾನೂನಿನ ರೂಪಾಂತರವಾಗಿದೆ ಎಂದು ಕಾಂಗ್ರೆಸ್‌ ಸರ್ಕಾರವು ಹೇಳುತ್ತಿದೆ. ಆದರೆ ಹಿಂದಿನ ಬಿಜೆಪಿ ಸರ್ಕಾರವು ಈ ನೀತಿಯತ್ತ ಕಣ್ಣೆತ್ತಿಯೂ ನೋಡಿರಲಿಲ್ಲ. ಆದರೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 6 ತಿಂಗಳು ಪೂರ್ಣಗೊಳಿಸುವ ಮುನ್ನವೇ ಖಾಸಗಿ ಕಂಪನಿಗಳಿಗೆ 3,289 ಕೋಟಿಯಷ್ಟು ಲಾಭ ಮಾಡಿಕೊಟ್ಟಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ. ಇದು ರಾಜ್ಯದಲ್ಲಿ  ಅನಿಲ ಹಗರಣಕ್ಕೆ ಮುನ್ನುಡಿಯಂತಾಗಿದೆ.

 

ಸರ್ಕಾರವು ರೂಪಿಸಿರುವ ನೀತಿಯಲ್ಲೇನಿದೆ?

 

ಗ್ಯಾಸ್‌ ಪೈಪ್‌ಲೈನ್‌ ಹಾಕಲು ಅನುಮತಿಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಅಗತ್ಯವಿದೆ. ರಸ್ತೆಗಳ ಉದ್ದಕ್ಕೂ ಗ್ಯಾಸ್‌ ಪೈಪ್‌ಲೈನ್‌ ಹಾಕಲು ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕಗಳು ಪ್ರತಿ ಕಿ ಮೀ ಗೆ 1,000 ಆಗಿರಬೇಕು.

 

ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕಗಳು ಲೋಕೋಪಯೋಗಿ ಇಲಾಖೆ ಪ್ರದೇಶಗಳು, ಮಹಾನಗರಪಾಲಿಕೆ ಪ್ರದೇಶಗಳು, ನಗರ ಮುನ್ಸಿಪಲ್‌ ಕಾರ್ಪೋರೇಷನ್‌ ಪ್ರದೇಶಗಳು, ನಗರಾಭಿವೃದ್ದಿ ಪ್ರಾಧಿಕಾರ ಪ್ರದೇಶಗಳು, ಪಮಚಾಯತ್‌ ಪ್ರದೇಶಗಳು, ಜಲಸಂಪನ್ಮೂಲ ಇಲಾಖೆ ಪ್ರದೇಶ (ಜಲಮೂಲ ಕ್ರಾಸಿಂಗ್‌ ಸೇರಿದಂತೆ), ಕೆಎಐಡಿಬಿ ಮತ್ತಿತರೆ ಕೈಗಾರಿಕೆ ಪ್ರದೇಶಗಳು ಇತ್ಯಾದಿ ವ್ಯಾಪ್ತಿಯ ಎಲ್ಲಾ ರಸ್ತೆಗಳಿಗೆ ಏಕರೂಪವಾಗಿ ಅನ್ವಯಿಸುತ್ತದೆ ಎಂದು ರಾಜ್ಯದಾದ್ಯಂತ ಅನುಮತಿ ಶುಲ್ಕಗಳನ್ನು ನಿಗದಿಗೊಳಿಸಿದೆ.

 

ಮೀಟರ್‌ ಶುಲ್ಕದಲ್ಲಿ ಕಡಿಮೆಗೊಳಿಸಿದ್ದೇಕೆ?

 

ನೈಸರ್ಗಿಕ ಅನಿಲ ಸರಬರಾಜು ಮಾಡಲು ಪೈಪ್ ಅಳವಡಿಕೆಗೆ ಈ ಮೊದಲು ಬೆಂಗಳೂರು ವ್ಯಾಪ್ತಿಯಲ್ಲಿ ಪ್ರತಿ ಮೀಟರ್‌ಗೆ 1,900 ರು ಶುಲ್ಕವಿತ್ತು. ಮತ್ತು ರಾಜ್ಯದ ಇತರೆ ಭಾಗಗಳಲ್ಲಿ 1,857 ರು. ಇತ್ತು. ಆದರೀಗ ಕಾಂಗ್ರೆಸ್‌ ಸರ್ಕಾರವು ರೂಪಿಸಿರುವ ನೀತಿಯು ಅದನ್ನು ಮೀಟರ್‌ಗೆ 1 ರುಪಾಯಿ ಕಡಿಮೆಗೊಳಿಸಿದೆ. ಅಂದರೆ ಪ್ರತಿ ಕಿ ಮೀಗೆ 18.57 ಲಕ್ಷ ರು.ಗಳಿಂದ ಕೇವಲ 1,000 ರೂಪಾಯಿ ಆಗಲಿದೆ.

 

ಇದರ ಪ್ರಕಾರ ಅದಾನಿ ಕಂಪನಿಯೂ ಸೇರಿದಂತೆ ಇನ್ನಿತರೆ ಕಂಪನಿಗಳಿಗೆ 3,289.20 ಕೋಟಿ ರು.ನಷ್ಟು ಆರ್ಥಿಕ ಲಾಭವನ್ನು ಹರಿವಾಣದಲ್ಲಿಟ್ಟು ಕೊಟ್ಟಂತಾಗಿದೆ.

 

ಕಂಪನಿಗಳಿಗೆ ಸಂಭಾವ್ಯ ಆರ್ಥಿಕ ಲಾಭದ ಪಟ್ಟಿ

 

ಬಾಗಲಕೋಟೆ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ 1,979 ಕಿ ಮೀಗಳಲ್ಲಿ ಅನಿಲ ವ ಅನಿಲ ವಿತರಣಾ ಜಾಲ ಅಭಿವೃದ್ಧಿಪಡಿಸಲು ಎಜಿ ಮತ್ತು ಪಿ ಎಲ್‌ಎನ್‌ಜಿ ಮಾರ್ಕೇಟಿಂಗ್‌ ಪ್ರೈವೈಟ್‌ ಲಿಮಿಟೆಡ್‌ ಗುತ್ತಿಗೆ ಪಡೆದುಕೊಂಡಿದೆ. ನೂತನ ನೀತಿಯಿಂದಾಗಿ 367.30 ಯಷ್ಟು ಲಾಭ ಆಗಿರುವುದು ಗೊತ್ತಾಗಿದೆ.

 

ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಎಜಿ ಮತ್ತು ಪಿ ಎಲ್‌ಎನ್‌ಜಿ ಮಾರ್ಕೇಟಿಂಗ್‌ ಪ್ರೈವೈಟ್‌ ಲಿಮಿಟೆಡ್‌ 1, 187 ಕಿ ಮೀ ಗೆ 220.30 ಕೋಟಿ ರು., ಕಲ್ಬಗುಇF ಮತ್ತು ವಿಜಯಪುರ ಜಿಲ್ಲೆಯಲ್ಲಿ (ಎಜಿ ಅಂಡ್‌ ಪಿ, ಅಟ್ಲಾಂಟಿಕ್‌ ಗಲ್ಫ್‌ ಅನದ ಫೆಸಿಫಿಕ್‌ ಕಂಪನಿ ಮನಿಲಾ) 1,395 ಕಿ ಮೀ ಗೆ 258.91 ಕೋಟಿ ರು., ಮೈಸೂರುಕ ಮಂಡ್ಯ,ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ (ಎಜಿ ಅಂಡ್‌ ಪಿ, ಅಟ್ಲಾಂಟಿಕ್‌ ಗಲ್ಫ್‌ ಅನದ ಫೆಸಿಫಿಕ್‌ ಕಂಪನಿ ಮನಿಲಾ) 1,293 ಕಿ ಮೀ ಗೆ 239.98 ಕೋಟಿ ರು. , ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ (ಎಜಿ ಅಂಡ್‌ ಪಿ, ಅಟ್ಲಾಂಟಿಕ್‌ ಗಲ್ಫ್‌ ಅನದ ಫೆಸಿಫಿಕ್‌ ಕಂಪನಿ ಮನಿಲಾ) 1,993 ಕಿ ಮೀ ಗೆ 369.90 ಕೋಟಿ ರು. ಗಳಷ್ಟು ಆರ್ಥಿಕ ಲಾಭವಾಗಿರುವುದು ತಿಳಿದು ಬಂದಿದೆ.

 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) 999 ಕಿ ಮೀ ಗೆ 185.41 ಕೋಟಿ ರು., ತುಮಕೂರು (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) ಜಿಲ್ಲೆಯಲ್ಲಿ 1,800 ಕಿ ಮೀ ಗೆ 334.08 ಕೋಟಿ ರು., ಧಾರವಾಡ ಜಿಲ್ಲೆಯಲ್ಲಿ ( ಇಂಡಿಯನ್‌ ಆಯಿಲ್‌ ಅದಾನಿ ಗ್ಯಾಸ್‌ ಲಿಮಿಟೆಡ್‌)1,520 ಕಿ ಮೀ ಗೆ 282.11 ಕೋಟಿ ರು., ಬೆಳಗಾವಿ ಜಿಲ್ಲೆಯಲ್ಲಿ (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) 1,800 ಕಿ ಮೀ ಗೆ 334.08 ಕೋಟಿ ರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ 75 ಕಿ ಮೀ ಗೆ (ಯುನಿಸನ್‌ ಎನ್ವಾರ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌) 13.92 ಕೋಟಿ ರು. ಆರ್ಥಿಕ ಲಾಭವು ಕಂಪನಿಗಳಿಗೆ ತಂದುಕೊಟ್ಟಿರುವುದು ಗೊತ್ತಾಗಿದೆ.

 

ಉಡುಪಿ ಜಿಲ್ಲೆಯಲ್ಲಿ (ಅದಾನಿ ಗ್ಯಾಸ್‌ ಲಿಮಿಟೆಡ್‌) 569 ಕಿ ಮೀ ಗೆ 105.60 ಕೋಟಿ ರು., ಬಳ್ಳಾರಿ ಮತ್ತು ಗದಗ್‌ ಜಿಲ್ಲೆಯಲ್ಲಿ (ಭಾರತ್‌ ಗ್ಯಾಸ್‌ ರಿಸೋರ್ಸ್‌ ಲಿಮಿಟೆಡ್‌) 1,365 ಕಿ ಮೀ ಗೆ 253.34 ಕೋಟಿ ರು., ಬೀದರ್‌ ಜಿಲ್ಲೆಯಲ್ಲಿ (ಭಾರತ್‌ ಗ್ಯಾಸ್‌ ರಿಸೋರ್ಸ್‌ 143 ಕಿ ಮೀ ಗೆ 26.54 ಕೋಟಿ ರು., ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಗೈಲ್‌ ಗ್ಯಾಸ್‌ ಇಂಡಿಯಾ ಲಿಮಿಟೆಡ್‌) 1,250 ಕಿ ಮೀ ಗೆ 232.00 ಕೋಟಿ ರು., ರಾಮನಗರ ಜಿಲ್ಲೆಯಲ್ಲಿ (ಮಹಾರಾಷ್ಟ್ರ ನ್ಯಾಚುರಲ್‌ ಗ್ಯಾಸ್‌ ಲಿಮಿಟೆಡ್‌) 354 ಕಿ ಮೀ ಗೆ 65.70 ಕೋಟಿ ರು ಸೇರಿದಂತೆ ಒಟ್ಟಾರೆ 3,289.20 ಕೋಟಿಯಷ್ಟು ಲಾಭವು ಅನಾಯಸವಾಗಿ ಕಂಪನಿಗಳ ಬೊಕ್ಕಸ ಸೇರಲಿದೆ.

 

‘ಸರ್ಕಾರ ಪ್ರತಿ ಕಿ.ಮೀ ರಸ್ತೆ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಕನಿಷ್ಟ 1.5 ರಿಂದ 3 ಕೋಟಿ ವ್ಯಯಿಸುತ್ತಿದೆ. ಅಂದರೆ ಪ್ರತಿ ಮೀಟರಿಗೆ ರಸ್ತೆ ನಿರ್ಮಾಣಕ್ಕೆ 15,000 ದಿಂದ 30,000 ರೂಪಾಯಿ ವೆಚ್ಚವಾಗುತ್ತದೆ. ಆದರೆ ಅದರ ಕೆಳಗೆ ಪೈಪ್ ಅಳವಡಿಸಲು ಮೀಟರಿಗೆ ಕೇವಲ ಒಂದು ರೂಪಾಯಿ. ಬಿಬಿಎಂಪಿಯ ಸ್ಥಳ ಗುತ್ತಿಗೆ ಪಡೆಯಲು ಮಾರ್ಗದರ್ಶಿ ದರದ ಶೇ 10ರಷ್ಟು ಪ್ರತಿ ವರ್ಷ ನೀಡಬೇಕು. ಹೀಗಿರುವಾಗ ಒಂದು ರೂಪಾಯಿ ಶುಲ್ಕ ಇಡುವ ಅಗತ್ಯ ಏನಿತ್ತು? ನಿಶುಲ್ಕ ಮಾಡಬಹುದಿತ್ತಲ್ಲ,’ ಎನ್ನುತ್ತಾರೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

 

ಯಾವುದೇ ಸರ್ಕಾರಿ ನೀತಿಯನ್ನು ಗುತ್ತಿಗೆದಾರರಿಗೆ ಗುತ್ತಿಗೆ ನೀಡಿದ ಮೇಲೆ ಅವರ ಹೂಡಿಕೆಯಲ್ಲಿ ಉಳಿತಾಯವಾಗಿ ಅವರಿಗೆ ಆರ್ಥಿಕ ಅನುಕೂಲವಾಗುವಂತೆ ಪರಿಷ್ಕರಿಸುವುದಿಲ್ಲ. ಅದು ಕಾನೂನು ಬಾಹಿರ. ಗುತ್ತಿಗೆದಾರರು ಯೋಜನೆಯ ಒಟ್ಟೂ ಮೊತ್ತವನ್ನು ಎಲ್ಲಾ ಖರ್ಚುಗಳನ್ನು ಪರಿಗಣಿಸಿಯೇ ಮಾಡಿದ್ದಾರೆ. ಸಾರ್ವಜನಿಕರಿಗೆ ಅನಿಲ ಸರಬರಾಜು ದರ ಕೂಡ ಈ ಮೊತ್ತದ ಮೇಲೆಯ ಆಧಾರಿತವಾಗಿರುತ್ತದೆ.

 

ಪೈಪ್ಡ್ ಗ್ಯಾಸ್ ಸರಬರಾಜು ಯೋಜನೆಯನ್ನು ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ನೀತಿಯ ಅವಶ್ಯಕತೆಯಿದೆ. ನೀತಿಯು ಸಾರಿಗೆ ವಾಹನಗಳಲ್ಲಿ ಶುದ್ಧ ಇಂಧನ ಮತ್ತು ಸಿಎನ್‌ಜಿ ಬಳಕೆಯನ್ನು ಉತ್ತೇಜಿಸುತ್ತದೆ ಮತ್ತು ಉತ್ತೇಜಿಸುತ್ತದೆ ಎಂದು ಸರ್ಕಾರವು ಇದನ್ನು ಸಮರ್ಥಿಸಿಕೊಂಡಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts