ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ಕೊಟ್ಟ ಸರ್ಕಾರ

ಬೆಂಗಳೂರು; ಸುಳ್ಳು ಸುದ್ದಿಗಳನ್ನು ತಡೆಗಟ್ಟುವುದು ಮತ್ತು ಸರ್ಕಾರದ ಎಲ್ಲಾ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು  7.20 ಕೋಟಿ ರು. ವೆಚ್ಚ ಮಾಡಲಿದೆ.  ಕೆಎಸ್‌ಎಮ್‌ಸಿಎ ಮೂಲಕ ‘ದ ಪಾಲಿಸಿ ಫ್ರಂಟ್‌’ ನ ಸೇವೆ ಪಡೆಯಲು ರಾಜ್ಯ ಕಾಂಗ್ರೆಸ್‌ ಸರ್ಕಾರವು 4(ಜಿ) ವಿನಾಯಿತಿ ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.

 

ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವ ಸಂಬಂಧ ಮುಕ್ತ  ಟೆಂಡರ್‍‌ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್‌’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಸಲ್ಲಿಸಿದ್ದ ಪ್ರಸ್ತಾವನೆಗೆ 4(ಜಿ) ವಿನಾಯಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ವಿಶೇಷವೆಂದರೇ ‘ದ ಪಾಲಿಸಿ ಫ್ರಂಟ್‌‘ ಎಂಬುದು ಭಾರತ ಸರ್ಕಾರದ ಕಂಪನಿ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಣಿಯೇ ಆಗಿಲ್ಲ ಎಂದು ತಿಳಿದು ಬಂದಿದೆ. ಆದರೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಎಂಸಿ ಅಂಡ್‌ ಎ ಮೂಲಕ ‘ದ ಪಾಲಿಸಿ ಫ್ರಂಟ್‌’ ನ ಸೇವೆಯನ್ನು ಒಂದು ವರ್ಷದ ಅವಧಿಯವರೆಗೆ 7.20 ಕೋಟಿ ರು.ಗಳನ್ನು ವೆಚ್ಚದಲ್ಲಿ ಪಡೆದಿರುವುದು ಶಂಕೆಗೆ ಕಾರಣವಾಗಿದೆ.

 

ಮತ್ತೊಂದು ವಿಶೇಷವೆಂದರೇ ಇದೇ ಕೆಎಸ್‌ಎಂಸಿಎ ಮೂಲಕ ‘ದ ಪಾಲಿಸಿ ಫ್ರಂಟ್‌’ನ ಸೇವೆಯನ್ನು 2026ರ ಮಾರ್ಚ್‌ವರೆಗೆ 35.68 ಕೋಟಿ ರು. ವೆಚ್ಚದಲ್ಲಿ (ತಿಂಗಳಿಗೆ 99.12 ಲಕ್ಷ ರು. ) ಪಡೆಯಲು ಪ್ರಸ್ತಾವನೆ ಸಲ್ಲಿಸಿತ್ತು. ಕಡೆಯಲ್ಲಿ ಆರ್ಥಿಕ ಇಲಾಖೆಯು ಪ್ರತಿ ತಿಂಗಳ ವೆಚ್ಚವನ್ನು 60.00 ಲಕ್ಷ  ರು ಕ್ಕಿಳಿಸಿದೆಯಲ್ಲದೇ ಸೇವೆಯನ್ನು ಒಂದು ವರ್ಷದ ಅವಧಿಯವರೆಗೆ ಮಾತ್ರ ನಿಗದಿಪಡಿಸಿರುವುದು ಗೊತ್ತಾಗಿದೆ.

 

ಈ ಹಿಂದಿನ ವರ್ಷಗಳಿಗಿಂತಲೂ ರಾಜ್ಯದಲ್ಲಿ ಈ ಬಾರಿ ಅತೀ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಅಲ್ಲದೇ ಬರಪೀಡಿತವಾಗಿರುವ ಬಹುತೇಕ ತಾಲೂಕುಗಳಿಗೆ ಸರಿಯಾಗಿ ಬರ ಪರಿಹಾರವೂ ತಲುಪಿಲ್ಲ. ಈ ಮಧ್ಯೆ ಸುಳ್ಳು ಸುದ್ದಿಗಳನ್ನು ತಡೆಯುವುದು ಮತ್ತು ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು 1  ವರ್ಷದ ಅವಧಿವರೆಗೆ 7.20 ಕೋಟಿ ರು. ವೆಚ್ಚ ಮಾಡಲು ಮುಂದಾಗಿರುವುದು ಸಾರ್ವಜನಿಕವಾಗಿ ಟೀಕೆಗೆ ಒಳಗಾಗಿದೆ.

 

ನಿಗೂಢ

 

ವಿಶೇಷವೆಂದರೇ ಆಡಳಿತ ಇಲಾಖೆಯಾದ ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸ್ತಾಪಿಸಿರುವ ‘ದ ಪಾಲಿಸಿ ಫ್ರಂಟ್‌’ ಹೆಸರು ಕೂಡ ನಿಗೂಢವಾಗಿದೆ. ‘ದ ಪಾಲಿಸಿ ಫ್ರಂಟ್‌’ ಎಂಬುದು ಪ್ರೈವೈಟ್‌ ಲಿಮಿಟೆಡ್ಡೋ, ಸಾರ್ವಜನಿಕ ಸ್ವಾಮ್ಯದ ಕಂಪನಿಯೋ, ಪಾಲುದಾರಿಕೆ ಕಂಪನಿಯೋ, ಎಲ್‌ಎಲ್‌ಪಿಯೋ, ಸರ್ಕಾರೇತರ ಸಂಸ್ಥೆಯೋ, ಇದು ಯಾರಿಗೆ ಸೇರಿದೆ, ಇದರ ಯೋಜನಾ ನಿರ್ದೇಶಕರು ಯಾರು, ಕಂಪನಿಯೇ ಆಗಿದ್ದಲ್ಲಿ ಇದರ ಮಾಲೀಕರು ಯಾರು, ನಿರ್ದಿಷ್ಟವಾಗಿ ಇದಕ್ಕೇ ಗುತ್ತಿಗೆ ನೀಡಬೇಕು ಎಂದು ಶಿಫಾರಸ್ಸು ಮಾಡಿದವರು ಯಾರು, ಇದರ ಪೂರ್ವಾಪರವೇನು, ಈ ಹಿಂದೆ ಸರ್ಕಾರದ ಯೋಜನೆಗಳು, ಸಾಧನೆಗಳ ಪ್ರಚಾರ,  ಸುಳ್ಳು ಸುದ್ದಿಗಳನ್ನು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸಿತ್ತೇ  ಎಂಬುದನ್ನು ಟಿಪ್ಪಣಿ ಹಾಳೆಯಲ್ಲಿ ಎಲ್ಲಿಯೂ ಉಲ್ಲೇಖಿಸದೇ ರಹಸ್ಯವಾಗಿರಿಸಿದೆ.

 

‘ದ ಪಾಲಿಸಿ ಫ್ರಂಟ್‌’ ಕುರಿತು ವಿವರಗಳನ್ನು ಪಡೆಯಲು ಭಾರತ ಸರ್ಕಾರದ ಕಂಪನಿಗಳ ವ್ಯವಹಾರ ಸಚಿವಾಲಯದ ಅಧಿಕೃತ ಜಾಲತಾಣದಲ್ಲಿ ನುರಿತ ಲೆಕ್ಕ ಪರಿಶೋಧಕರ ನೆರವಿನೊಂದಿಗೆ ‘ದಿ ಫೈಲ್‌’ ಶೋಧಿಸಿತು.  ಕಂಪನಿಗಳ ಸಚಿವಾಲಯ ಜಾಲತಾಣದಲ್ಲಿ ಯಾವುದೇ ದಾಖಲೆಗಳು ಲಭ್ಯವಾಗಲಿಲ್ಲ. ಹೀಗಾಗಿ  ‘ದ ಪಾಲಿಸಿ ಫ್ರಂಟ್‌’ ಎಂಬುದು ಕಂಪನಿಗಳ ಸಚಿವಾಲಯದಲ್ಲಿ ನೋಂದಣಿಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಈ ಕುರಿತು ‘ದಿ ಫೈಲ್‌’ ಇಲಾಖೆಯ ಉನ್ನತ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿತು. ಅವರಿಗೂ ಇದು ಕಂಪನಿಯೋ, ಪ್ರೈವೈಟ್‌ ಲಿಮಿಟೆಡ್‌, ನೋಂದಾಯಿತ ಏಜೆನ್ಸಿಯೋ, ಸರ್ಕಾರೇತರ ಸಂಸ್ಥೆಯೋ ಎಂಬ ಬಗ್ಗೆ ಕನಿಷ್ಠ ಮಾಹಿತಿಯೂ ಅವರ ಬಳಿ ಇರಲಿಲ್ಲ. ಹೀಗಾಗಿ ಇದೊಂದು ನಿಗೂಢ ಕಂಪನಿಯೊಂದಿಗಿನ ವ್ಯವಹಾರವಾಗಿರಬಹುದು ಎಂದು ಇಲಾಖೆಯ ಉನ್ನತ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

 

ಮತ್ತೊಂದು ವಿಶೇಷವೆಂದರೇ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಬಗ್ಗೆ 2023-24ನೇ ಸಾಲಿನಲ್ಲಿ ಪ್ರತ್ಯೇಕ ಅನುದಾನವನ್ನೇ ವಾರ್ತಾ ಇಲಾಖೆಯು ನಿಗದಿಪಡಿಸಿಕೊಂಡಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

‘ಇಲಾಖೆಯ 2023-24ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸಾಮಾಜಿಕ ಜಾಲತಾಣಗಳ್ನು ಬಳಸಿಕೊಂಡು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗ ತಲುಪಿಸುವ ಬಗ್ಗೆ ಪ್ರತ್ಯೇಕ ಅನುದಾವನ್ನು ನಿಗದಿಪಡಿಸಿರುವುದಿಲ್ಲ ಎಂದು ಆಡಳಿತ ಇಲಾಖೆಯು ಪ್ರಸ್ತಾಪಿಸಿದೆ,’ ಎಂದು ಆರ್ಥಿಕ ಇಲಾಖೆಯು ತನ್ನ ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಟಿಪ್ಪಣಿ ಹಾಳೆಯಲ್ಲಿ ಪ್ರಸ್ತಾವಿಸಿರುವ ಪ್ರಕಾರ 2023-24ನೇ ಸಾಲಿನ ಆಯವ್ಯಯದಲ್ಲಿ (ಲೆಕ್ಕ ಶೀರ್ಷಿಕೆ 2220-60-106-0-05-059) ಅಡಿಯಲ್ಲಿ ಒದಗಿಸಿರುವ 37.95 ಕೋಟಿ ರು.ಗಳ ಪೈಕಿ ಈಗಾಗಲೇ 18.50 ಕೋಟಿ ರು. ಮೊತ್ತದ ಜಾಹೀರಾತು ಬಿಡುಗಡೆಯಾಗಿದೆ. ಹೀಗಾಗಿ ಈ ಲೆಕ್ಕ ಶೀರ್ಷಿಕೆಯಲ್ಲಿ 19.45 ಕೋಟಿ ರು ಮಾತ್ರ ಲಭ್ಯವಿದೆ ಎಂಬ ಸಂಗತಿಯು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಸರ್ಕಾರದ ಸೇವೆಗಳನ್ನು, ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು 38.00 ಕೋಟಿ ರು ಹೆಚ್ಚುವರಿ ಅನುದಾನ ಒದಗಿಸಬೇಕು. ಹಾಗೂ ಈ ಮೊತ್ತವನ್ನು ವೆಚ್ಚ ಮಾಡಲು ಕೆಟಿಪಿಪಿ ಕಾಯ್ದೆಯಿಂದ ವಿನಾಯಿತಿ ನೀಡಲು ಅರ್ಥಿಕ ಇಲಾಖೆಯ ಸಹಮತಿಯನ್ನು ಕೋರಿರುವುದು ಗೊತ್ತಾಗಿದೆ.

 

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಸಾಮಾಜಿಕ ಜಾಲತಾಣಗಳನ್ನು (ಆರ್ಥಿಕ ಇಲಾಖೆ ಕಡತ ಸಂಖ್ಯೆ ; FD 746/EXP-7/2023) ಬಳಸಿಕೊಂಡು ಸರ್ಕಾರದ ಯೋಜನೆಗಳ ಪ್ರತಿ ದಿನದ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಜಾಹೀರಾತು/ಸುದ್ದಿಗಳನ್ನು ಪ್ರಕಟಿಸಲು ಮೆ; The Policy Front ಬೆಂಗಳೂರು ಇವರ ಸೇವೆಯನ್ನು 2023-24ನೇ ಆಗಸ್ಟ್‌ ತಿಂಗಳಿನಿಂದ ಮಾರ್ಚ್‌ 2026ರವರೆಗೆ ಪಡೆಯಲು ಕೆಟಿಪಿಪಿ ಕಾಯ್ದೆ ಕಲಂ 4(ಜಿ) ವಿನಾಯಿತಿ ನೀಡಲು ಮತ್ತು 2023-24ನೇ ಸಾಲಿನ ಆರ್ಥಿಕ ವರ್ಷದ ಆಗಸ್ಟ್‌ ತಿಂಗಳಿನಿಂದ ಮಾರ್ಚ್‌ ತಿಂಗಳವರೆಗೆ ಅವಶ್ಯವಿರುವ 14.86 ಕೋಟಿ ರು.ಗಳನ್ನು (ಲೆಕ್ಕ ಶೀರ್ಷಿಕೆ 2220-60-106-0-05-059) ಹೆಚ್ಚುವರಿಯಾಗಿ ಒದಗಿಸಲು ಆಡಳಿತ ಇಲಾಖೆಯು ಕೋರಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಆರಂಭದಲ್ಲಿ ಇದ್ದಿದ್ದು 35.68 ಕೋಟಿ ವೆಚ್ಚದ ಪ್ರಸ್ತಾವನೆ

 

ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 2026ರವರೆಗೆ ಪ್ರಚಾರ ಮಾಡಲು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು 2023ರ ಆಗಸ್ಟ್‌ 28ರಂದು ಪ್ರಸ್ತಾವವನ್ನು ಸಲ್ಲಿಸಿದ್ದರು.

 

 

ಅಲ್ಲದೇ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶವನ್ನೂ ಇದೇ ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು.

 

 

 

ಈ ಉದ್ದೇಶಕ್ಕಾಗಿ   ತಿಂಗಳಿಗೆ 99.12 ಲಕ್ಷ ರು. ಅನುದಾನ ಒದಗಿಸಬೇಕು ಮತ್ತು  ಈ  ಪ್ರಸ್ತಾವಕ್ಕೆ ಕರ್ನಾಟಕ ಪಾರದರ್ಶಕ ಕಾಯ್ದೆಯ 4(ಜಿ) ವಿನಾಯಿತಿ ನೀಡಬೇಕು ಎಂದು ಆಯುಕ್ತ ಹೇಮಂತ್‌ ನಿಂಬಾಳ್ಕರ್‍‌ ಅವರು   ಕೋರಿದ್ದರು.

 

ಒಂದೊಮ್ಮೆ ಈ ಪ್ರಸ್ತಾವವನ್ನು ಆರ್ಥಿಕ ಇಲಾಖೆಯು ಒಪ್ಪಿದ್ದಲ್ಲಿ  35.68 ಕೋಟಿ ರು. ವೆಚ್ಚ ಆಗುತ್ತಿತ್ತು.

 

ಈ ಪ್ರಸ್ತಾವವನ್ನು ಪರಿಗಣಿಸಿದ್ದ ಆರ್ಥಿಕ ಇಲಾಖೆಯು ಮೂಲ ಅಂದಾಜಿನಲ್ಲಿದ್ದ 99.12 ಲಕ್ಷ ರು.ನ್ನು 60.00 ಲಕ್ಷ ರು.ಗಿಳಿಸಿ (ಜಿಎಸ್‌ಟಿಯೂ ಒಳಗೊಂಡಂತೆ) ಒಂದು ವರ್ಷದ ಅವಧಿಯವರೆಗೆ ಮಾತ್ರ ಎಂದು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಅನುಮೋದಿಸಿದ್ದರು.

 

ಮುಖ್ಯಮಂತ್ರಿಯ ಅನುಮೋದನೆ ದೊರಕಿದ ನಂತರ ಆರ್ಥಿಕ ಇಲಾಖೆಯು 2023ರ ಸೆ.11ರಂದು ಅಧಿಸೂಚನೆ ಹೊರಡಿಸಿತ್ತು.

 

 

ಗ್ಯಾರಂಟಿಗಳ ಸಮೀಕ್ಷೆಗೆ ಎಂ2ಎಂ ಕಂಪನಿಗೆ ಒಂದು ಕೋಟಿ ರು. ಅನುದಾನವನ್ನು ನೀಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts