ಮೈಸೂರ್‍‌ ಸ್ಯಾಂಡಲ್‌ ಉತ್ಪನ್ನಗಳ ನೇರ ಸರಬರಾಜಿಗಿಲ್ಲ ಅನುಮತಿ; ಖಾಸಗಿ ಲಾಬಿಗೆ ಮಣಿದ ಸರ್ಕಾರ

ಬೆಂಗಳೂರು; ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಿಎಂಟಿಸಿಯೂ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳು, ನಿಗಮ ಮತ್ತು ಮಂಡಳಿಗಳು ಮೈಸೂರ್‍‌ ಸ್ಯಾಂಡಲ್‌ ಸೋಪ್‌ ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ನೇರವಾಗಿ ಕೆಎಸ್‌ಡಿಎಲ್‌ನಿಂದ ಖರೀದಿಸಲು ಉತ್ಸುಕವಾಗಿದ್ದರೂ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದಕ್ಕೆ ಅವಕಾಶ ನೀಡದೇ ಇರುವುದಕ್ಕೆ ಸೂಕ್ತ ಸಮರ್ಥನೆ ನೀಡದೇ ಇರುವುದು  ಇದೀಗ ಬಹಿರಂಗವಾಗಿದೆ.

 

ಕೆಎಸ್‌ಡಿಎಲ್‌ ಸಂಸ್ಥೆಯು ಉತ್ಪಾದಿಸುತ್ತಿರುವ ಉತ್ಪನ್ನಗಳು ಉತ್ತಮ ಗುಣಮಟ್ಟ ಹೊಂದಿದೆ. ಹೀಗಾಗಿಯೇ ಐಎಸ್‌ಓ 9001-2015 ಪ್ರಮಾಣಪತ್ರ ಹಾಗೂ ಪರಿಸರ ನೀತಿಗಾಗಿ 14001-2015 ಪ್ರಮಾಣ ಪತ್ರ ಹಾಗೂ 2017-18 ಹಾಗೂ 2018-19ರಲ್ಲಿ ಮುಖ್ಯಮಂತ್ರಿಯ ವಾರ್ಷಿಕ ರತ್ನ ಪ್ರಶಸ್ತಿಗೆ ಭಾಜನವಾಗಿರುವ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್‌ ಲಿಮಿಟೆಡ್‌ಗೆ 4(ಜಿ) ವಿನಾಯಿತಿ ನೀಡದೇ ಇರುವುದರ ಹಿಂದೆ ಖಾಸಗಿ ಕಂಪನಿಗಳ ಲಾಬಿ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಲ್ಯಾವೆಂಡರ್, ಬೇವು, ಗುಲಾಬಿ, ಅರಿಶಿಣ ಸೇರಿದಂತೆ ವಿಧದ ರೀತಿಯ ಸಾಬೂನು ಸೇರಿದಂತೆ ಇನ್ನಿತರೆ ಉತ್ಪನ್ನಗಳ ಸರಬರಾಜು ಮಾಡಲು ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್‌)ಕ್ಕೆ 4(ಜಿ) ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ತಿರಸ್ಕರಿಸಿದ್ದರ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಕಡತದ ದಾಖಲೆಗಳು ಮುನ್ನೆಲೆಗೆ ಬಂದಿವೆ.

 

ಕೆಎಸ್‌ಡಿಎಲ್‌ ಸಂಸ್ಥೆಗೆ ಸಂಪೂರ್ಣ ಹೊಸ ರೂಪ ನೀಡಿ ಕಾರ್ಪೊರೇಟ್ ಶೈಲಿಯಲ್ಲಿ ಅದರ ಚಟುವಟಿಕೆಗಳು ಇರುವ ಹಾಗೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹೇಳಿಕೆ ನೀಡಿದ್ದರು. ಆದರೀಗ ಕೆಎಸ್‌ಡಿಎಲ್‌ ಗೆ  4 (ಜಿ) ವಿನಾಯಿತಿ ಪ್ರಸ್ತಾಪವನ್ನು ಆರ್ಥಿಕ ಇಲಾಖೆಯು  ತಿರಸ್ಕೃತಗೊಳಿಸಿರುವುದು ಸಾರ್ವಜನಿಕ ಉದ್ಯಮಗಳಿಗೆ ಬೆಂಬಲ ನೀಡುವುದಾಗಿ ಹೇಳಿದ್ದ ಸಚಿವರ ಮಾತು ಕೇವಲ ಕಾಗದದ ಮೇಲಷ್ಟೆ ಉಳಿದಂತಾಗಿದೆ.

 

ಮೈಸೂರ್‍‌ ಸ್ಯಾಂಡಲ್‌ ಹರ್ಬಲ್‌ ಕೇರ್‍‌ ಸೋಪ್‌, ಮೈಸೂರ್‍‌ ಕಾರ್ಬಾಲಿಕ್‌ ಸೋಪ್‌, ವಾಷಿಂಗ್‌ ಹಾಫ್‌ ಬಾರ್‍‌ ಸೋಪ್‌, ಮೈಸೂರ್‍‌ ಡಿಟರ್ಜೆಂಟ್‌ ಪೌಡರ್‍‌, ಮೈಸೂರ್‍‌ ಸ್ಯಾಂಡಲ್‌ ಕೊಬ್ಬರಿ ಎಣ್ಣೆ, ಮೈಸೂರು ಸ್ಯಾಂಡಲ್‌ ಟಾಲ್ಕಂ ಪೌಡರ್‍‌, ಫ್ರೆಷ್‌ ನಾಲ್‌ (ಪೆನಾಯಿಲ್‌), ಹ್ಯಾಂಡ್‌ ವಾಷ್‌, ಹ್ಯಾಂಡ್‌ ಸ್ಯಾನಿಟೈಜರ್‍‌, ರೂಮ್‌ ಫ್ರೆಶ್ನರ್‍‌, ಕ್ಲೀನಾಲ್‌ (ಬಹು ಉಪಯೋಗಿ ಲಿಕ್ವಿಡ್‌ ಡಿಟರ್ಜೆಂಟ್‌) ಹಾಗೂ ಇತರೆ ಉತ್ಪನ್ನಗಳನ್ನು ಕರ್ನಾಟಕ ಸರ್ಕಾರದ ಇತರೆ ಇಲಾಖೆಗಳಿಗೆ ಹಾಗೂ ನಿಗಮ ಮಂಡಳಿಗಳಿಗೆ ಸರಬರಾಜು ಮಾಡಲು ಸಿದ್ಧವಿತ್ತು.

 

 

ಆರೋಗ್ಯ, ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಗರಾಭಿವೃದ್ಧಿ, ಪೌರಾಡಳಿತ, ಕರ್ನಾಟಕ ಸರ್ಕಾರದ ಸಚಿವಾಲಯ, ಕೆಎಸ್‌ಆರ್‍‌ಟಿಸಿ, ಬಿಎಂಟಿಸಿ, ಕೆಎಂಎಫ್‌, ಬಿಡಬ್ಲ್ಯುಎಸ್‌ಎಸ್‌ಬಿ, ಬಿಬಿಎಂಪಿ ಹಾಗೂ ಇತರೆ ಸಂಘ ಸಂಸ್ಥೆಗಳು ಸಹ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ ಲಿಮಿಟೆಡ್‌ನ ಉತ್ಪನ್ನಗಳನ್ನು ಖರೀದಿಸಲು ಉತ್ಸುಕವಾಗಿದ್ದವು. ಹೀಗಾಗಿಯೇ ನಿಗಮವು 4(ಜಿ) ವಿನಾಯಿತಿ ಕೋರಿತ್ತು ಎಂಬುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

‘ಸರ್ಕಾರದ ಇತರೆ ಸಂಸ್ಥೆಗಳಾದ ಎಂ ಸಿ ಅಂಡ್‌ ಎ ಮತ್ತು ಕಿಯೋನಿಕ್ಸ್‌ ಮತ್ತು ಇತರೆ ಸಂಸ್ಥೆಗಳಿಗೆ ನೀಡಿರುವಂತೆ ಕೆಎಸ್‌ಡಿಎಲ್‌ ಸಂಸ್ಥೆಯು ಉತ್ಪಾದಿಸುತ್ತಿರುವ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಿಗೆ ಹಾಗೂ ನಿಗಮ, ಮಂಡಳಿಗಳಿಗೆ ಪ್ರತಿ ಸರಬರಾಜು ಆದೇಶಕ್ಕೆ 50 ಲಕ್ಷ ರು.ಗಳಿಗೆ ನೇರವಾಗಿ ಸರಬರಾಜು ಮಾಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 4(ಜಿ) ವಿನಾಯಿತಿ ನೀಡಿ ನೇರವಾಗಿ ಇಲಾಖೆಗಳಿಗೆ ಹಾಗೂ ನಿಗಮ, ಮಂಳಿಗಳಿಗೆ ಸರಬರಾಜು ಮಾಡುವಂತೆ ಆದೇಶ ಹೊರಡಿಸಲು ಆರ್ಥಿಕ ಇಲಾಖೆಗೆ ಶಿಫಾರಸ್ಸು ಮಾಡಬೇಕು,’ ಎಂದು ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 2023ರ ಆಗಸ್ಟ್‌ 28ರಂದು ಪತ್ರ ಮುಖೇನ  ಕೋರಿದ್ದರು.

 

ನಿಗಮದ ವ್ಯವಸ್ಥಾಪಕ ನಿರ್ದೇಶಕರು ಬರೆದಿದ್ದ ಪತ್ರವನ್ನಾಧರಿಸಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಅನುಮತಿ ಕೋರಿ ಸರ್ಕಾರಕ್ಕೆ ಪತ್ರವನ್ನು ಬರೆದಿತ್ತು. ಆದರೆ  ಈ ಪತ್ರಕ್ಕೆ ಆರ್ಥಿಕ ಇಲಾಖೆಯೂ ಯಾವುದೇ ಕಿಮ್ಮತ್ತು ನೀಡಿಲ್ಲ. ಬದಲಿಗೆ  ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್‌ ಲಿಮಿಟೆಡ್‌ ಉತ್ಪನ್ನಗಳ ಸರಬರಾಜು ಮಾಡಲು ಆರ್ಥಿಕ ಇಲಾಖೆಯಿಂದ 4(ಜಿ) ವಿನಾಯಿತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಗಣಿಸಲು ಅವಕಾಶವೇ ಇಲ್ಲವೆಂದು ಆರ್ಥಿಕ ಇಲಾಖೆಯು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2023ರ ಸೆ.19ರಂದು ತನ್ನ (ಆಇ 322 ವೆಚ್ಚ-1/2023 ಸಿಐ 9 ಸಿಪಿಎಂ 2023) ಅಭಿಪ್ರಾಯ ತಿಳಿಸಿತ್ತು.

 

‘ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್‌ ಲಿಮಿಟೆಡ್‌ ಉತ್ಪನ್ನಗಳ ಸರಬರಾಜು ಮಾಡಲು ಆರ್ಥಿಕ ಇಲಾಖೆಯಿಂದ 4(ಜಿ) ವಿನಾಯಿತಿ ನೀಡುವ ಕುರಿತು ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಗಣಿಸಲು ಅವಕಾಶವಾಗುವುದಿಲ್ಲವೆಂದು ಹಾಗೂ ಸಂಗ್ರಹಣಾ ಪ್ರಾಧಿಕಾರಗಳು ಕೇಸ್‌ ಟು ಕೇಸ್‌ ಆಧಾರದಲ್ಲಿ ಕೆಎಸ್‌ಡಿಎಲ್‌ ಸಂಸ್ಥೆ ಸೇವೆಯನ್ನು ಪಡೆಯುವ ಕುರಿತು ಸೂಕ್ತ ಸಮರ್ಥನೆಗಳೊಂದಿಗೆ ನಿರ್ದಿಷ್ಟ ಪ್ರಸ್ತಾವನೆ ಸಲ್ಲಿಸಿದಲ್ಲಿ ಪರಿಶೀಲಿಸಲಾಗುತ್ತದೆ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ 2023ರ ಸೆ.19ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ತಿಳಿಸಿರುವುದು ದಾಖಲೆಯಿಂದ  ಗೊತ್ತಾಗಿದೆ.

 

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಆರ್ಥಿಕ ಇಲಾಖೆಯು ಇದಕ್ಕೆ ಸೂಕ್ತ ಸಮರ್ಥನೆಗಳನ್ನು ನೀಡದೇ ಇರುವುದು ದಾಖಲೆಗಳಿಂದ ಕಂಡು ಬರುತ್ತದೆ.

 

ಡಾಬರ್, ಹಿಂದೂಸ್ಥಾನ್‌ ಲಿವರ್ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಗಳು ಮಾರುಕಟ್ಟೆಯಲ್ಲಿ ಸಿಂಹಪಾಲು ಪಡೆದಿವೆ. ಈ ಕಂಪನಿಗಳ ಉತ್ಪನ್ನಗಳೊಂದಿಗೆ ಕೆಎಸ್‌ಡಿಎಲ್‌ ಮಾರುಕಟ್ಟೆಯಲ್ಲಿ ಸೆಣಸಬೇಕಿದೆ. ಹಲವು ಬ್ರ್ಯಾಂಡ್‌ಗಳನ್ನು ಹೊಂದಿರುವ ಕೆಎಸ್‌ಡಿಎಲ್‌ ಸಂಸ್ಥೆಯು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಭಾಗವಾಗಿಯೇ 4 (ಜಿ) ವಿನಾಯಿತಿ ಕೋರಿತ್ತು. ಈ ವಿನಾಯಿತಿ ನೀಡಿದ್ದಲ್ಲಿ ಕೆಎಸ್‌ಡಿಎಲ್‌ನ ಮಾರುಕಟ್ಟೆ ಜಾಲ ವಿಸ್ತರಣೆಗೆ ಅವಕಾಶವಾಗುತ್ತಿತ್ತು. ಆದರೇ ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿಯನ್ನು ನೀಡುವ ಪ್ರಸ್ತಾವನೆಯನ್ನೇ ತಿರಸ್ಕರಿಸಿರುವುದು ಅದರ ಮಾರುಕಟ್ಟೆ ಜಾಲ ವಿಸ್ತರಣೆಗೆ ತೊಡಕಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಂತಾಗಿದೆ.

ಕೆಎಸ್‌ಡಿಎಲ್‌ ಉತ್ಪನ್ನಗಳ ಸರಬರಾಜು; 4 (ಜಿ) ವಿನಾಯಿತಿ ಪ್ರಸ್ತಾವ ತಿರಸ್ಕರಿಸಿದ ಸರ್ಕಾರ

 

‘ಕೆಎಸ್‌ಡಿಎಲ್ ಅನ್ನು ಕೇವಲ ಸರಕಾರಿ ಉದ್ದಿಮೆಯಾಗಿ ನೋಡುವ ದೃಷ್ಟಿಕೋನಕ್ಕೆ ವಿದಾಯ ಹೇಳಲಾಗುವುದು. ಈ ಸಂಸ್ಥೆ ತಯಾರಿಸುವ ಮೈಸೋಪು, ಊದುಗಡ್ಡಿ ಸೇರಿದಂತೆ ಪ್ರತಿಯೊಂದು ಉತ್ಪನ್ನವೂ ಸಾಮಾನ್ಯ ಕಿರಾಣಿ ಅಂಗಡಿಯಿಂದ ಹಿಡಿದು ಮಾಲ್‌ವರೆಗೆ ಎಲ್ಲೆಡೆಯೂ ಸಿಗುವಂತೆ ಮಾಡಲಾಗುವುದು. ಒಟ್ಟಿನಲ್ಲಿ, ಇಡೀ ಭಾರತದಾದ್ಯಂತ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು ಎನ್ನುವುದು ಈಗಿನ ಗುರಿಯಾಗಿದೆ,” ಎಂದು ಸಚಿವ ಎಂ ಬಿ ಪಾಟೀಲ್‌ ಅವರು ಆಡಳಿತ ಮಂಡಳಿ ಸಭೆಯಲ್ಲಿ ಹೇಳಿದ್ದರು.

 

ಕೆಎಸ್‌ಡಿಎಲ್ ಈಗ ಹಲವು ಬ್ರ್ಯಾಂಡ್‌ಗಳನ್ನು ಹೊಂದಿದೆ. ಇವುಗಳ ಜತೆಗೆ ಹೊಸ ಹೊಸ ಬ್ರ್ಯಾಂಡ್ ಉತ್ಪನ್ನಗಳನ್ನೂ ಬಿಡುಗಡೆಗೆ ಉತ್ಸುಕವಾಗಿದೆ. ಲ್ಯಾವೆಂಡರ್, ಬೇವು, ಗುಲಾಬಿ, ಅರಿಶಿಣ ಸೇರಿದಂತೆ ವಿಧದ ರೀತಿಯ ಸಾಬೂನುಗಳನ್ನು ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲು ಅಣಿಯಾಗುತ್ತಿದೆ. ಗುಣಮಟ್ಟ, ದಕ್ಷ ಆಡಳಿತ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಸಜ್ಜಾಗುತ್ತಿದೆ.

 

ಕೆಎಸ್‌ಡಿಎಲ್ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟದಿಂದ ಕೂಡಿವೆ. ಆದರೆ, ಮಾರುಕಟ್ಟೆಯಲ್ಲಿ ಡಾಬರ್, ಹಿಂದೂಸ್ಥಾನ್‌ ಯೂನಿಲಿವರ್ ಲಿಮಿಟೆಡ್ ತರಹದ ಕಂಪನಿಗಳು ಸಿಂಹಪಾಲು ಹೊಂದಿವೆ. ಜತೆಗೆ ಕೆಎಸ್‌ಡಿಎಲ್‌ ಕರ್ನಾಟಕವನ್ನು ದಾಟಿ ಆಚೆಗೆ ಹೆಚ್ಚಾಗಿ ಹೋಗಿಲ್ಲ. ಹೀಗಾಗಿ ಕೆಎಸ್‌ಡಿಎಲ್‌ ರಾಜ್ಯದ ಜತೆಗೆ ಇಡೀ ದೇಶದ ಸಾಬೂನು ಮತ್ತು ಮಾರ್ಜಕಗಳ ಮಾರುಕಟ್ಟೆಯಲ್ಲಿ ಅತ್ಯಧಿಕ ಪಾಲು ಹೊಂದಲು ನೀಲನಕ್ಷೆ ತಯಾರಿಸಿದೆ.

 

ರಾಜ್ಯದ ಉದ್ದಗಲಕ್ಕೂ ಇರುವ ಸರಕಾರಿ ಕಚೇರಿಗಳು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಇನ್ನು ಮುಂದೆ ಕೆಎಸ್‌ಡಿಎಲ್‌ ತಯಾರಿಸುವ ಸಾಬೂನು, ಲಿಕ್ವಿಡ್ ಸೋಪ್, ಹ್ಯಾಂಡ್ ವಾಶ್, ಡಿಶ್ ವಾಶ್‌ಗಳನ್ನೇ ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರ ಜತೆಗೆ ವ್ಯಾಪಕ ಸ್ವರೂಪದಲ್ಲಿ ಬ್ರ್ಯಾಂಡಿಂಗ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮುಂದಾಗಿತ್ತು.

SUPPORT THE FILE

Latest News

Related Posts