ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ಸಂಬಂಧ ಅಬಕಾರಿ ಇಲಾಖೆಯ ಶಾಖೆಯಲ್ಲಿ ಇದುವರೆಗೂ ಯಾವುದೇ ಪ್ರಸ್ತಾವನೆಗಳೂ ಸಲ್ಲಿಕೆಯಾಗಿಲ್ಲ ಮತ್ತು ಈ ಕುರಿತಾಗಿ ಸರ್ಕಾರದಲ್ಲಿಯೂ ಯಾವುದೇ ಸಭೆಗಳು ನಡೆದಿಲ್ಲ ಎಂದು ಅಬಕಾರಿ ಇಲಾಖೆಯು ಹಿಂಬರಹ ನೀಡಿದೆ.
ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಪರವಾನಿಗೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಚಿಂತಿಸಲಾಗಿದೆ ಮತ್ತು ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿರುವ ಬೆನ್ನಲ್ಲೇ ಅಬಕಾರಿ ಇಲಾಖೆಯು ‘ದಿ ಫೈಲ್’ಗೆ ನೀಡಿರುವ ಹಿಂಬರಹವು ಮುನ್ನೆಲೆಗೆ ಬಂದಿದೆ.
ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಹೊಸದಾಗಿ ಮದ್ಯದ ಅಂಗಡಿಗಳನ್ನು ತೆರೆಯಲು ಪರವಾನಿಗೆ ನೀಡುವ ಸಂಬಂಧ ಸರ್ಕಾರದಲ್ಲಿ ನಡೆದಿರುವ ಸಭೆಗಳು, ನಡವಳಿಗಳು ಮತ್ತು ಪ್ರಸ್ತಾವನೆಗಳನ್ನು ಒದಗಿಸಬೇಕು ಎಂದು ‘ದಿ ಫೈಲ್’ 2023ರ ಸೆ.25ರಂದು ಆರ್‍ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಐದೇ ಐದು ದಿನದಲ್ಲಿ ಅಬಕಾರಿ ಇಲಾಖೆಯು ಹಿಂಬರಹ ನೀಡಿದೆ.
ಹಿಂಬರಹದಲ್ಲೇನಿದೆ?
‘ತಾವು ಕೋರಿರುವ ಮಾಹಿತಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಯಾವುದೇ ಸಭೆಗಳು ನಡೆದಿರುವುದಿಲ್. ಅದರಂತೆ ಹೊಸ ಪರವಾನಗಿ ನೀಡುವ ಸಂಬಂಧ ಅಬಕಾರಿ ಶಾಖೆಯಲ್ಲಿ ಯಾವುದೇ ಪ್ರಸ್ತಾವನೆಗಳು ಸ್ವೀಕೃತವಾಗಿರುವುದಿಲ್ಲ,’ ಎಂದು 2023ರ ಸೆ.30ರಂದು ಹಿಂಬರಹ ನೀಡಿದೆ.
ಅಬಕಾರಿ ಇಲಾಖೆಯ ಆಯುಕ್ತರ ಕಚೇರಿಯಲ್ಲಿಯೂ ಇದುವರೆಗೂ ಯಾವುದೇ ಸಭೆಗಳು ನಡೆದಿಲ್ಲ ಮತ್ತು ಅಲ್ಲಿಯೂ ಯಾವ ಪ್ರಸ್ತಾವನೆಗಳೂ ಸಲ್ಲಿಕೆಯಾಗಿಲ್ಲ. ಒಂದೊಮ್ಮೆ ಪ್ರಸ್ತಾವನೆಗಳಿದ್ದರೇ ಸರ್ಕಾರಕ್ಕೆ ಸಲ್ಲಿಕೆಯಾಗಬೇಕು. ಅನುಮೋದನೆ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಸಭೆ ನಡೆಯಬೇಕು. ಆದರೆ ಈ ಯಾವ ಪ್ರಕ್ರಿಯೆಯೂ ಸರ್ಕಾರದ ಹಂತದಲ್ಲಿ ನಡೆದಿಲ್ಲ ಎಂದು ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
3 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಪರವಾನಗಿ ಹಾಗೂ ಸೂಪರ್ ಮಾರುಕಟ್ಟೆಗಳಲ್ಲೂ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಬಕಾರಿ ಇಲಾಖೆಯು ಪ್ರಸ್ತಾವನೆ ಸಿದ್ಧಪಡಿಸಿದ್ದು, ಇದರಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಲೈಸೆನ್ಸ್ ವಿತರಣೆ ಮಾಡುವ ಬಗ್ಗೆ ಪ್ರಸ್ತಾಪಿಸಿದೆ ಎಂದು ಕೆಲ ಮಾಧ್ಯಮಗಳು ಪ್ರಕಟಿಸಿದ್ದ ವರದಿಗಳು ರಾಜಕೀಯಕರಣಗೊಂಡಿದ್ದವು. ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪತ್ರಿಕಾ ವರದಿಗಳನ್ನಾಧರಿಸಿ ‘ ಕಾಂಗ್ರೆಸ್ ಸರ್ಕಾರ ‘ಕರ್ನಾಟಕವನ್ನು ಕುಡುಕರ ತೋಟ’ ಮಾಡಲಿದೆ ಎಂದು ಟೀಕಿಸಿದ್ದರು.
ರಾಜ್ಯದಲ್ಲಿ ಹೊಸದಾಗಿ ವೈನ್‌ಶಾಪ್ (ಸಿಎಲ್2), ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9) ಹಾಗೂ ಇಂಡಿಪೆಂಡೆಂಟ್ ರಿಟೇಲ್ ವೆಂಡರ್ ಬಿಯರ್(ಆರ್‌ವಿಬಿ) ಪಬ್ ತೆರೆಯುವುದಕ್ಕೆ ಪರವಾನಗಿ ನೀಡಲು ಸದ್ದಿಲ್ಲದೇ ತಯಾರಿ ನಡೆಸುತ್ತಿರುವ ರಾಜ್ಯ ಸರ್ಕಾರವು ಹೊಸ ಪರವಾನಗಿ ನೀಡುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರವೂ ‘ಅಬಕಾರಿ ನೀತಿ’ಗೆ ತಿದ್ದುಪಡಿ ತರಲು ಮುಂದಾಗಿತ್ತು.
ಹೊಸದಾಗಿ ವೈನ್‌ಶಾಪ್‌ಗಳಿಗೆ ಪರವಾನಿಗೆ ನೀಡುವ ಉದ್ದೇಶದಿಂದಲೇ ಅಬಕಾರಿ ನೀತಿಗೆ ತಿದ್ದುಪಡಿ ತರಲು ನಿವೃತ್ತ ಐಎಎಸ್ ಅಧಿಕಾರಿ ಯಶವಂತಕುಮಾರ್ ಎಂಬುವರ ನೇತೃತ್ತದಲ್ಲಿ ಸಮಿತಿ ರಚನೆಯಾಗಿದೆ. ಈಗಾಗಲೇ ಸಮಿತಿಯು ಕರಡು ನಿಯಮಾವಳಿಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಇದಿನ್ನೂ ಅಂತಿಮಗೊಂಡಿಲ್ಲ. ಈ ನಡುವೆಯೇ ಸಮಿತಿಯಲ್ಲಿ ಇರುವ ಕೆಲ ಅಧಿಕಾರಿಗಳು ತಮಗೆ ಬೇಕಾದ ತಿದ್ದುಪಡಿ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಹೊಸ ಮದ್ಯದಂಗಡಿಗಳನ್ನು ಆರಂಭಿಸಲು ಲೈಸೆನ್ಸ್ ನೀಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆದ್ದರಿಂದ ಲೈಸೆನ್ಸ್ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವ ಕೆ ಗೋಪಾಲಯ್ಯ ಅವರು ಸ್ಪಷ್ಟೀಕರಣ ನೀಡಿರುವ ಮಧ್ಯೆಯೇ ಅಬಕಾರಿ ನೀತಿಗೆ ತಿದ್ದುಪಡಿ ಮಾಡಲು ಹೊರಟಿರುವುದು ಸಂಶಯಕ್ಕೆ ದಾರಿಮಾಡಿಕೊಟ್ಟಿತ್ತು.
ರಾಜ್ಯದಲ್ಲಿ ಒಟ್ಟು 3,618 ಬಾರ್ ಆ್ಯಂಡ್ ರೆಸ್ಟೋರೆಂಟ್ ಮದ್ಯದಂಗಡಿಗಳಿವೆ. ಇದರಲ್ಲಿಯೂ ಕೋಟಾ ಉಲ್ಲಂಘನೆಯಾಗಿದೆ ಎಂಬ ದೂರುಗಳನ್ನೇ ನೆಪಮಾಡಿಕೊಂಡು ಹೊಸದಾಗಿ ಸಿಎಲ್9 ತೆರೆಯಲು ಪರವಾನಗಿ ನೀಡಲು ಸರ್ಕಾರ ಗಂಭೀರ ಚಿಂತಿಸಿತ್ತು. ಕೋಟಾದಡಿ ಬಾಕಿ ಉಳಿದಿರುವ ಲೈಸೆನ್ಸ್ ನೀಡಲು ಏನು ಮಾಡಬೇಕು? ಯಾವೆಲ್ಲ ಕ್ರಮ ಕೈಗೊಳ್ಳಬೇಕು, ಏನೇನು ತಿದ್ದುಪಡಿ ಮಾಡಬೇಕು ಎಂದು ಎದುರಾಗುವ ಸಮಸ್ಯೆಗಳ ಬಗೆಹರಿಸುವುದು ಹೇಗೆ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು ಎಂಬ ಮಾತುಗಳು ಕೇಳಿ ಬಂದಿದ್ದವು.
ಹೊಸ ಸಿಎಲ್ 2 ಲೈಸೆನ್ಸ್ ನೀಡಿಕೆ
ರಾಜ್ಯದಲ್ಲಿ 3,974 ವೈನ್‌ಶಾಪ್‌ಗಳಿವೆ. ಅಬಕಾರಿ ಇಲಾಖೆ ನಿಯಮ 12ರಂತೆ ರಾಜ್ಯದ ಪ್ರತಿ ತಾಲೂಕು ಹಾಗೂ ನಗರದ ಪ್ರದೇಶಕ್ಕೆ 7,500 ಜನಕ್ಕೆ ಒಂದು ಸಿಎಲ್2 ಹಾಗೂ 3,500 ಜನಕ್ಕೆ ಹೆಚ್ಚುವರಿ ಸನ್ನದು ನಿಗದಿಪಡಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಮಂದಿಗೆ ಒಂದು ಸಿಎಲ್2 ಹಾಗೂ 7500 ಜನಕ್ಕೆ ಹೆಚ್ಚುವರಿ ಒಂದು ಸನ್ನದು ನಿಗದಿಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ 1987ರಲ್ಲಿ ನಿಯಮ 12ರಂತೆ ಅಂದಿನ ಸರ್ಕಾರವು, ಎಲ್ಲ ತಾಲೂಕಿನಲ್ಲಿ ಕೋಟಾ ನಿಗದಿಪಡಿಸಿತ್ತು.
ನಿಯಮ 12ರಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಿಎಲ್2 ಹೆಚ್ಚುವರಿ ಸನ್ನದು ನಿಗದಿಯಂತೆ ಒಟ್ಟು 385 ಸಿಎಲ್ ಶಾಪ್ ಮಂಜೂರು ಮಾಡಲಾಗಿತ್ತು. ಆದರೆ, 1994ರಲ್ಲಿ ಹೆಚ್ಚುವರಿ ನೀಡಲಾಗಿದ್ದ ವೈನ್ ಶಾಪ್‌ಗಳನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ಆದೇಶಿತ್ತು. ಆದರೆ, ಸರ್ಕಾರ ಹಾಗೂ ಹೈಕೋರ್ಟ್ ಹೊರಡಿಸಿದ್ದ ಆದೇಶಗಳನ್ನು ಅಬಕಾರಿ ಇಲಾಖೆಯು ಕಸದ ಬುಟ್ಟಿಗೆ ಎಸೆದಿದೆ.
ಬೆಂಗಳೂರು 289, ರಾಮನಗರ 10, ಕೊಡಗು 49, ಹಾಸನ 28, ಧಾರವಾಡ 7 ಹಾಗೂ ಚಿಕ್ಕಮಗಳೂರು 2 ಸೇರಿ ಒಟ್ಟು 385 ಸಿಎಲ್2 ವೈನ್ ಶಾಪ್ ಕೋಟಾ ಉಲ್ಲಂಸಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಸಕ್ರಮಗೊಳಿಸಲು ಅಥವಾ ಹೆಚ್ಚುವರಿಯಾಗಿ ನಗರ ಪ್ರದೇಶದಲ್ಲಿ ನೀಡಲಾಗಿದ್ದ ಸಿಎಲ್2 ಶಾಪ್‌ಗಳನ್ನು ರದ್ದುಪಡಿಸಿ ಕೋಟಾದಂತೆ ಬಾಕಿ ಉಳಿದ 258 ಸಿಎಲ್2 ಶಾಪ್‌ಗಳ ಭರ್ತಿ ಮಾಡುವುದಕ್ಕೆ ಲೈಸೆನ್ಸ್ ನೀಡುವಂತೆ ಕೆಲವರು ಭಾರೀ ಲಾಬಿ ನಡೆಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಇಲಾಖೆಯಲ್ಲಿ ಶುರುವಾಗಿದೆ.
ಹೊಸ ಮದ್ಯದಂಗಡಿ, ಪಬ್‌ಗಳಿಗೆ ಪರವಾನಿಗೆ; ಹಗರಣಕ್ಕೆ ನಾಂದಿಯಾಗಲಿದೆಯೇ ಅಬಕಾರಿ ನೀತಿ ತಿದ್ದುಪಡಿ
ಇಂಡಿಪೆಂಡೆಂಟ್ ಪಬ್ ಲೈಸನ್ಸ್
ರಾಜ್ಯದಲ್ಲಿ 65 ಇಂಡಿಪೆಂಡೆಂಟ್, 625 ಅಟ್ಯಾಚ್ಡು ಸೇರಿ ಒಟ್ಟು 690 ಪಬ್‌ಗಳಿವೆ. ಮದ್ಯದಂಗಡಿ ಹೊಂದಿರುವ ಮಾಲೀಕರಿಗೆ ಮಾತ್ರ ಅಟ್ಯಾಚ್ಡ್ ಪಬ್ ತೆರೆಯುವುದಕ್ಕೆ ಸದ್ಯ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಇಂಡಿಪೆಂಡೆಂಟ್ ಪಬ್ ತೆರೆಯಲು 15 ವರ್ಷಗಳ ಹಿಂದೆ ಲೈಸೆನ್ಸ್ ಕೊಡುವುದನ್ನು ಸರ್ಕಾರ ನಿಲ್ಲಿಸಿತ್ತು.
ಮದ್ಯ ಮಾರಾಟಗಾರರ ಆದಾಯ, ವಹಿವಾಟು, ಪರವಾನಿಗೆ, ಮಾಹಿತಿ ನಿರ್ವಹಣೆ ಖಾಸಗಿ ಕಂಪನಿ ತೆಕ್ಕೆಗೆ?
ಈಗ ಇಂಡಿಪೆಂಡೆಂಟ್ ಪಬ್‌ಗೆ ಪರವಾನಗಿ ನೀಡುವುದಕ್ಕೆ ‘ಅಬಕಾರಿ ನೀತಿ’ಯನ್ನೇ ತಿದ್ದುಪಡಿ ಮಾಡುವುದಕ್ಕೆ ಇಲಾಖೆ ಮುಂದಾಗಿದೆ. ಎಷ್ಟು ಪಬ್ ನೀಡಬೇಕೆಂಬುದು ನಿಗದಿಗೊಳಿಸದೆ ಸಾವಿರಾರು ಪಬ್‌ಗಳಿಗೆ ಪರವಾನಗಿ ನೀಡಲು ಇಲಾಖೆ ಆಲೋಚಿಸುತ್ತಿದೆ. ಇದಕ್ಕೆ ಇಲಾಖೆಯ ಕೆಲ ಅಧಿಕಾರಿಗಳು ಕೈಜೋಡಿಸಿದ್ದರು ಎಂದು ಹೇಳಲಾಗಿತ್ತು.
ಬ್ಯಾಂಗಲ್ ಸ್ಟೋರ್, ಕಾರು, ಆಟೋದಲ್ಲಿಯೂ ಮದ್ಯ ಮಾರಾಟ; ಸರ್ಕಾರಕ್ಕೆ ಗ್ರಾಮಸ್ಥರಿಂದ ದೂರಿನ ಸರಮಾಲೆ
1987ರ ಜೂ.30ರಂದು ರಾಜ್ಯದ ಎಲ್ಲ ತಾಲೂಕುಗಳಲ್ಲಿ ನಗರ ಪ್ರದೇಶ(ಎ) ಹಾಗೂ ಗ್ರಾಮೀಣ ಪ್ರದೇಶಕ್ಕೆ (ಬಿ) ಬೇಡಿಕೆ ಅನುಗುಣವಾಗಿ ನಿಗದಿತ ಕೋಟಾಕ್ಕಿಂತ ಹೆಚ್ಚುವರಿ ಸಿಎಲ್ 2 ಮದ್ಯದಂಗಡಿ ಮಂಜೂರು ಮಾಡಲಾಗಿತ್ತು. 1994 ಮಾ.4ರಂದು ಅಬಕಾರಿ ನಿಯಮ 12 ಸಬ್‌ರೂಲ್ (3ಎ) ನಿಗದಿತ ಕೋಟಾಕ್ಕಿಂತ ಹೆಚ್ಚುವರಿ ಮಂಜೂರಾಗಿರುವ ಸಿಎಲ್ ಮದ್ಯದಂಗಡಿ ರದ್ದುಪಡಿಸಲು ಆದೇಶ ಹೊರಡಿಸಿತ್ತು.
ಜನಪ್ರಿಯ ಯೋಜನೆಗಳ ಅನುಷ್ಠಾನ; ಅತ್ಯಧಿಕ ರಾಜಸ್ವ ಸಂಗ್ರಹಣೆಗೆ ಗುರಿ ನಿಗದಿ, ಆನ್‌ಲೈನ್ ಮದ್ಯ ಮಾರಾಟ!
1999 ಜೂ.15ರಂದು ನಾಗರಾಜು ವರ್ಸಸ್ ಕರ್ನಾಟಕ ಸರ್ಕಾರ ನಡುವಿನ ಪ್ರಕರಣ ಸಂಬಂಧ ನಿಯಮ 12ರಲ್ಲಿ ಹೆಚ್ಚುವರಿ ಸನ್ನದುಗಳನ್ನು ರದ್ದುಪಡಿಸಲು ಆದೇಶ ಹೊರಡಿಸಿರುವ ಹೈಕೋರ್ಟ್. * 2016 ಜೂ.29ರಂದು ಪ್ರೇಮ್‌ಕುಮಾರ್ ವರ್ಸಸ್ ಕರ್ನಾಟಕ ಸರ್ಕಾರ ನಡುವಿನ ಪ್ರಕರಣ ಸಂಬಂಧ ನಿಯಮ 12ರಲ್ಲಿ ಹೆಚ್ಚವರಿ ಸನ್ನದು ರದ್ದತಿಗೆ ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.