ಕಂಪ್ಯೂಟರ್‍‌, ಪ್ರಿಂಟರ್, ಜೆರಾಕ್ಸ್‌ ಉಪಕರಣ ಖರೀದಿ; ತಾಂತ್ರಿಕ ಸಮಿತಿ ಶಿಫಾರಸ್ಸು ಬದಿಗೊತ್ತಿದ್ದ ಸಚಿವಾಲಯ

ಬೆಂಗಳೂರು; ಎಪ್ಪತ್ತೈದು ಲಕ್ಷ ರು. ಮೌಲ್ಯದಲ್ಲಿ ಕಂಪ್ಯೂಟರ್‍‌, ಪ್ರಿಂಟರ್‍‌, ಜೆರಾಕ್ಸ್‌ ಯಂತ್ರೋಪಕರಣಗಳನ್ನು ಅಲ್ಪಾವಧಿ ಟೆಂಡರ್‍ ಆಹ್ವಾನಿಸುವ ಮೂಲಕ ಖರೀದಿಸಬೇಕು ಎಂದು ತಾಂತ್ರಿಕ ಸಮಿತಿಯು ಮಾಡಿದ್ದ ಶಿಫಾರಸ್ಸನ್ನು ಬದಿಗೊತ್ತಿದ್ದ ವಿಧಾನಸಭೆ ಸಚಿವಾಲಯವು ಕಿಯೋನಿಕ್ಸ್‌ ಮೂಲಕ ನೇರವಾಗಿ ಖರೀದಿಸಿರುವುದನ್ನು ಇಂಡಿಯನ್‌ ಆಡಿಟ್‌ ಅಂಡ್‌ ಅಕೌಂಟೆಂಟ್‌ನ ತಪಾಸಣೆ ವರದಿಯು ಪತ್ತೆ ಹಚ್ಚಿದೆ.

 

ಕರ್ನಾಟಕ ವಿಧಾನಸಭೆ ಸಚಿವಾಲಯಕ್ಕೆ ಸಂಬಂಧಿಸಿದಂತೆ 2018-19ರಿಂದ 2021-22ರವರೆಗಿನ ಅವಧಿಯಲ್ಲಿ ತಪಾಸಣೆ ನಡೆಸಿರುವ ಇಂಡಿಯನ್‌ ಆಡಿಟ್‌ ಅಂಡ್‌ ಅಕೌಂಟೆಂಟ್‌, ವಿಧಾನಸಭೆ ಸಚಿವಾಲಯದ ಹಣಕಾಸು ಆಡಳಿತ, ದುಂದುವೆಚ್ಚ, ನಿಯಮಗಳ ಉಲ್ಲಂಘನೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸಂಭವಿಸಿರುವ ನಷ್ಟದ ಕುರಿತೂ ಬೆಳಕು ಚೆಲ್ಲಿದೆ. 2023ರ ಜನವರಿಯಲ್ಲಿ ವಿಧಾನಸಭೆ ಸಚಿವಾಲಯಕ್ಕೆ ಸಲ್ಲಿಕೆಯಾಗಿರುವ  ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಅವಧಿಯಲ್ಲಿ ಸ್ಪೀಕರ್‍‌ ಆಗಿ ಕಾರ್ಯನಿರ್ವಹಿಸಿದ್ದರು. ಕೋವಿಡ್‌ ಸಂದರ್ಭದಲ್ಲೂ ವಿಧಾನಸಭೆ ಸಚಿವಾಲಯ ಮತ್ತು ಶಾಸಕರ ಭವನದ ಕೊಠಡಿಗಳಿಗೂ ಸ್ಯಾನಿಟೈಸರ್‍‌ ಮಾಡಿಸಿದ್ದರ  ಬಗ್ಗೆಯೂ ಇಂಡಿಯನ್‌ ಆಡಿಟ್‌ ಅಕೌಟೆಂಟ್‌ನ ತಪಾಸಣೆಯು ಬಹಿರಂಗಗೊಳಿಸಿತ್ತು. ಇದರ ಬೆನ್ನಲ್ಲೇ ಕಂಪ್ಯೂಟರ್‍‌ ಸೇರಿದಂತೆ ಇನ್ನಿತರೆ ವಿದ್ಯುನ್ಮಾನ ಉಪಕರಣಗಳ ಖರೀದಿಯಲ್ಲಿಯೂ ತಾಂತ್ರಿಕ ಸಮಿತಿ ಶಿಫಾರಸ್ಸನ್ನು ಬದಿಗೊತ್ತಿರುವ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಹಲವು ಅಕ್ರಮಗಳ ಕುರಿತು ಕಾಂಗ್ರೆಸ್‌ ಸರ್ಕಾರವು ತನಿಖಾ ಆಯೋಗಗಳನ್ನು ರಚಿಸಿದ್ದರೇ ವಿಧಾನಸಭೆ ಸಚಿವಾಲಯದಲ್ಲಿ ನಡೆದಿರುವ ಅಕ್ರಮಗಳ ಕುರಿತು ಯಾವ ತನಿಖೆಯನ್ನೂ ನಡೆಸಿಲ್ಲ.  ಈ ಕುರಿತು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಈಗಾಗಲೇ ಈ ಸಂಬಂಧ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಇದನ್ನು ಹಾಲಿ ಸ್ಪೀಕರ್‍‌ ಯು ಟಿ ಖಾದರ್‍‌ ಅವರು ಅನುಮೋದಿಸಿದ್ದಾರೆ  ಎಂದು ಗೊತ್ತಾಗಿದೆ.

 

ಹೆಚ್‌ಪಿ ಡೆಸ್ಕ್‌ಟಾಪ್‌ ಕಂಪ್ಯೂಟರ್ಸ್‌, ಹೆಚ್‌ಪಿ ಆಲ್‌ ಇನ್‌ ಒನ್ ಡೆಸ್ಕ್‌ ಟಾಪ್‌, ಕೆನಾನ್‌ ಪ್ರಿಂಟರ್ಸ್‌, ಸ್ಕ್ಯಾನರ್‍‌, ಕೆನಾನ್‌ ಪ್ರಿಂಟರ್ಸ್, ಹೆಚ್‌ಪಿ ಕಲರ್‍‌ ಪ್ರಿಂಟರ್ಸ್‌, ಶಾರ್ಪ್ ಜೆರಾಕ್ಸ್‌ ಯಂತ್ರಗಳನ್ನು ಅಲ್ಪಾವಧಿ ಟೆಂಡರ್‍‌ ಆಹ್ವಾನಿಸಿ ಖರೀದಿಸಬೇಕು ಎಂದು ತಾಂತ್ರಿಕ ಸಮಿತಿಯು ಶಿಫಾರಸ್ಸು ಮಾಡಿತ್ತು. 2020ರ ಮೇ 26 ರಂದು ನಡೆದಿದ್ದ ಸಭೆಯ ನಡವಳಿಯಲ್ಲಿಯೂ ದಾಖಲಾಗಿತ್ತು. ಆದರೆ ಇದನ್ನು ವಿಧಾನಸಭೆ ಸಚಿವಾಲಯದ ಮುಖ್ಯಸ್ಥರು ಇದನ್ನು ತಿರಸ್ಕರಿಸಿದ್ದರು ಎಂಬುದು ತಪಾಸಣೆ ವರದಿಯಿಂದ ಗೊತ್ತಾಗಿದೆ.

 

ಉಪಕರಣಗಳ ಖರೀದಿ ಪ್ರಕ್ರಿಯೆಯು ಮೂಲತಃ 2020ರ ಆರಂಭದಲ್ಲಿ ಶುರುವಾಗಿತ್ತು. ಆದರೆ ಇದನ್ನು 2022ರ ಮಾರ್ಚ್‌ನಲ್ಲಿ ಖರೀದಿಸಲಾಗಿತ್ತು. ಅಲ್ಪಾವಧಿ ಟೆಂಡರ್‍‌ ಆಹ್ವಾನಿಸಿ ಖರೀದಿಸಬೇಕು ಎಂದು ತಾಂತ್ರಿಕ ಸಮಿತಿಯ ಶಿಫಾರಸ್ಸನ್ನು ತಿರಸ್ಕರಿಸಲು ವಿಧಾನಸಭೆ ಸಚಿವಾಲಯವು ನೀಡಿದ್ದ ಕಾರಣಗಳು ಸಮರ್ಥನೀಯವಾಗಿರಲಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ತಾಂತ್ರಿಕ ಸಮಿತಿಯು ಶಿಫಾರಸ್ಸು ಮಾಡಿದ್ದ ನಿರ್ದಿಷ್ಟತೆಯುಳ್ಳ ಉಪಕರಣಗಳನ್ನೇ ಕಿಯೋನಿಕ್ಸ್‌ ಮೂಲಕ ಖರೀದಿಸಿದ್ದ ಸಚಿವಾಲಯವು ಅಲ್ಪಾವಧಿ ಟೆಂಡರ್‍‌ ಮೂಲಕ ಖರೀದಿಸಿ ಸ್ಪರ್ಧಾತ್ಮಕ ದರಗಳನ್ನು ಕಳೆದುಕೊಂಡಿತ್ತು. ಕಿಯೋನಿಕ್ಸ್‌ ಮೂಲಕವೇ ಖರೀದಿಸುವ ಮೂಲಕ ಹೆಚ್ಚುವರಿ ವೆಚ್ಚಕ್ಕೆ ಕಾರಣವಾಗಿತ್ತು ಎಂಬ ಅಂಶವು ತಪಾಸಣೆ ವರದಿಯಿಂದ ತಿಳಿದು ಬಂದಿದೆ.

 

ಅದೇ ರೀತಿ ನಗದು ಪುಸ್ತಕ, ನಗದು ವಹಿಯಲ್ಲಿನ ಲೋಪಗಳನ್ನೂ ತಪಾಸಣೆ ವರದಿಯಲ್ಲಿ ವಿವರಿಸಲಾಗಿದೆ. 2020ರ ಅಕ್ಟೋಬರ್‍‌ 21ರಿಂದ 2021ರ ಅಕ್ಟೋಬರ್‍‌ 21ರವರೆಗಿನ 19,49,809 ರು. ಮೊತ್ತದ ವೋಚರ್‍‌ಗಳನ್ನು ಲೆಕ್ಕ ತಪಾಸಕರಿಗೆ ವಿಧಾನಸಭೆ ಸಚಿವಾಲಯವು ಒದಗಿಸಿರಲಿಲ್ಲ. ವೋಚರ್‍‌ಗಳನ್ನು ಪರಿಶೀಲನೆಗೆ ಒದಗಿಸದ ಕಾರಣ ಈ ವೆಚ್ಚವನ್ನು ತಪಾಸಣೆಗೆ ಒಳಪಡಿಸಿಲ್ಲ ಎಂಬುದೂ ವರದಿಯಿಂದ ಗೊತ್ತಾಗಿದೆ.

Your generous support will help us remain independent and work without fear.

Latest News

Related Posts