ಬೆಂಗಳೂರು; ಲಾಭಕರವಲ್ಲದ ಹಾಗೂ ದುಬಾರಿ ಸಹಾಯಧನಗಳಿಂದಾಗಿ ಜಿಎಸ್‌ಡಿಪಿಗೆ ಹೋಲಿಸಿದಲ್ಲಿ ತೆರಿಗೆಯೇತರ ರಾಜಸ್ವದ ಪ್ರಮಾಣವು ನಗಣ್ಯವಾಗಿದೆ. ಹೀಗಾಗಿ ಹೊಸ ತೆರಿಗೆ ಪ್ರಸ್ತಾಪಿಸುವುದು ಮತ್ತು ತೆರಿಗೆ ಸ್ವರೂಪಗಳ ಪರಿಷ್ಕರಣೆ ಮೂಲಕ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.
ಐದು ಗ್ಯಾರಂಟಿಗಳ ಅನುಷ್ಠಾನದಿಂದಾಗಿ ಎದುರಾಗಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಈಗಿನಿಂದಲೇ ಸಜ್ಜಾಗಿರುವ ಸರ್ಕಾರವು ಇದಕ್ಕಾಗಿ ತೆರಿಗೆಯೇತರ, ಬಳಕೆದಾರರ ಶುಲ್ಕ, ಬಾಕಿ ಇರುವ ಸಾಲವನ್ನು ವಸೂಲು ಮಾಡಬೇಕು ಎಂದು ಇಲಾಖೆ ಮುಖ್ಯಸ್ಥರಿಗೆ ಸೂಚಿಸಿರುವುದು ಮುನ್ನೆಲೆಗೆ ಬಂದಿದೆ.
2024-25ನೇ ಸಾಲಿನ ಆಯವ್ಯಯ ರಾಜಸ್ವ-ಜಮೆ ತಯಾರಿಕೆ ಸಂಬಂಧ ಆರ್ಥಿಕ ಇಲಾಖೆಯು ಇಲಾಖೆ ಮುಖ್ಯಸ್ಥರಿಗೆ ನೀಡಿರುವ ಸೂಚನೆಗಳಲ್ಲಿ ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆಯು ಸುತ್ತೋಲೆ (ಆಇ 27 ಬಿಪಿಎ 2023) ಹೊರಡಿಸಿದೆ. ಸುತ್ತೋಲೆ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ರಾಜಸ್ವ ಸ್ವೀಕೃತಿಯಲ್ಲಿ ತೆರಿಗೆಯೇತರ ರಾಜಸ್ವದ ಪಾಲು ಹಿಂದಿನ ಹಲವಾರು ವರ್ಷಗಳಿಂದಲೂ ಇಳಿಮುಖವಾಗಿದೆ. ಪ್ರಮುಖವಾಗಿ ವೆಚ್ಚ ವಸೂಲಾತಿ ದರದಲ್ಲಿ ಇಳಿಕೆಯಾಗಿದೆಯಲ್ಲದೇ ಕ್ಷೀಣಗೊಂಡಿದೆ. ಸಾರ್ವಜನಿಕ ಉದ್ದಿಮೆಗಳ ಕಳಪೆ ನಿರ್ವಹಣೆ ಹಾಗೂ ಲಾಭಕರವಲ್ಲದ, ದುಬಾರಿ ಸಹಾಯಧನಗಳಿಂದಾಗಿ ಜಿಎಸ್‌ಡಿಪಿಗೆ ಹೋಲಿಸಿದಲ್ಲಿ ತೆರಿಗೆಯೇತರ ರಾಜಸ್ವದ ಪ್ರಮಾಣವು ನಗಣ್ಯವಾಗಿದೆ,’ ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ರಾಜಸ್ವ ಸಂಗ್ರಹಿಸಲು ನಿಯಮಿತವಾಗಿ ಬಳಕೆದಾರರ ಶುಲ್ಕಗಳನ್ನು ಪರಿಷ್ಕರಣೆ ಮಾಡಬಹುದು ಎಂದು ಮಹಾಲೇಖಪಾಲರು ಈ ಹಿಂದೆಯೇ ನೀಡಿದ್ದ ಸೂಚನೆಯನ್ನು ಪಾಲಿಸಲು ನಿರ್ದೇಶಿಸಿರುವ ಆರ್ಥಿಕ ಇಲಾಖೆಯು ಎಲ್ಲಾಇಲಾಖೆಗಳು ತಮ್ಮ ಇಲಾಖೆಗಳ ತೆರಿಗೆಯೇತರ ರಾಜಸ್ವಗಳನ್ನು ಪರಿಶೀಲಿಸಬೇಕು. ಕಳೆದ 3 ವರ್ಷಗಳಿಂದ ಪರಿಷ್ಕರಣೆಯಾಗದೇ ಇದ್ದಲ್ಲಿ ಕೂಡಲೇ ತೆರಿಗೆಯೇತರ ರಾಜಸ್ವ ದರಗಳನ್ನು ಈಗಿರುವ ಹಣದುಬ್ಬರದ ದರಕ್ಕೆ ಅನುಗುಣವಾಗಿ ಪರಿಶೀಲಿಸಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಿ ಸಿ ಜಾಫರ್ ಅವರು ಇಲಾಖೆ ಮುಖ್ಯಸ್ಥರಿಗೆ ನಿರ್ದೇಶಿಸಿರುವುದು ಗೊತ್ತಾಗಿದೆ.
‘ಎಲ್ಲಾ ಇಲಾಖೆ ಮುಖ್ಯಸ್ಥರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ತೆರಿಗೆಯೇತರ ಆದಾಯದ ದರಗಳನ್ನು ಕಳೆದ ಮೂರು ವರ್ಷಗಳಲ್ಲಿ ಪರಿಷ್ಕರಿಸದಿದ್ದಲ್ಲಿ ಪರಿಷ್ಕರಿಸಬೇಕು. ಎಲ್ಲಾ ಇಲಾಖೆಗಳು ತೆರಿಗೆಯೇತರ ರಾಜಸ್ವ ಅಂದಾಜುಗಳನ್ನು ಸಲ್ಲಿಸುವ ಮುನ್ನ ಎಲ್ಲಾ ತೆರಿಗೆಯೇತರ ರಾಜಸ್ವ ಮೂಲಗಳನ್ನು ಪರಿಶೀಲಿಸಿ ದರಗಳನ್ನು/ ಬಳಕೆದಾರರ ಶುಲ್ಕಗಳನ್ನು ಪರಿಷ್ಕರಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು,’ ಎಂದು ಸುತ್ತೊಲೆಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.
ಅಲ್ಲದೆ ಸಾಲ ಮರುಪಾವತಿಯ ಷರತ್ತು , ನಿಬಂಧನೆಗಳು, ಬಂಡವಾಳ ಹೂಡಿಕೆ ಮತ್ತು ಮರು ಪಾವತಿ ಅವಧಿ ಮುಂತಾದ ಅಂಶಗಳನ್ನು ಪರಿಶೀಲಿಸಲು ಸೂಚಿಸಿದೆ. ವಿವಿಧ ಸಾರ್ವಜನಿಕ ಉದ್ದಿಮೆಗಳು, ಸಹಕಾರಿ ಸಂಘಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಬಡ್ಡಿ ಸ್ವೀಕೃತಿಗಳು, ಲಾಭಾಂಶಗಳು, ಬಂಡವಾಳ ಸಾಲ ವಸೂಲು ಮಾಡಬೇಕು. ಇತರೆ ಇಲಾಖೆ ಸಾಲಗಳನ್ನು ವಸೂಲು ಮಾಡಲು ಕ್ರಮವಹಿಸಬೇಕು ಎಂದೂ ಸೂಚಿಸಿರುವುದು ಗೊತ್ತಾಗಿದೆ.
ಹಾಗೆಯೇ ವಾರ್ಷಿಕ ಯೋಜನೆಗಳಿಗೆ ಹಿಂದಿನ ಯೋಜನಾ ಅವಧಿಯ ಬದ್ಧ ವೆಚ್ಚಗಳಿಗೆ, ಕಾಲಕಾಲಕ್ಕೆ ತುಟ್ಟಿಭತ್ಯೆ ಹೆಚ್ಚಳ, ಕಾನೂನು ಸುವ್ಯವಸ್ಥೆ ನಿರ್ವಹಣೆ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಪರಿಹಾರ ಕಾಮಗಾರಿಗಳನ್ನೊಳಗೊಂಡಂತೆ ಸಮಾಜ ಕಲ್ಯಾಣ ಕಾರ್ಯಗಳು ಮುಂತಾದವುಗಳಿಗೆ ಹಣ ಒದಗಿಸಲು ಸಂಪನ್ಮೂಲ ಸಂಗ್ರಹಿಸಬೇಕು ಎಂದು ವಿವರಿಸಿದೆ. ಹೀಗಾಗಿ ಇಲಾಖೆ ಮುಖ್ಯಸ್ಥರುಗಳು ಬಾಕಿ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ನಿರ್ದೇಶಿಸಿರುವುದು ತಿಳಿದು ಬಂದಿದೆ.
ಸಾಲ ವಸೂಲಾತಿ ಬಗ್ಗೆ ನಿರ್ದಿಷ್ಟವಾಗಿ ಸೂಚನೆಗಳನ್ನು ನೀಡಿದೆ. ಈ ಹಿಂದೆ ಸಾಕಷ್ಟು ಸಾಲಗಳನ್ನು ಮಂಜೂರು ಮಾಡಿದ್ದು ಅವುಗಳು ವಸೂಲಾಗದೇ ಇನ್ನೂ ಬಾಕಿ ಉಳಿದಿವೆ. ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ಚಟುವಟಿಕೆಗಳಿಗಾಗಿ ಸರ್ಕಾರಿ ಕಂಪನಿಗಳು, ಕಾರ್ಪೋರೇಷನ್‌ಗಳು, ಸ್ಥಳೀಯ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರಿ ಸಂಘಗಳು, ಸರ್ಕಾರೇತರ ಸಂಸ್ಥೆಗಳು ಮತ್ತಿತರೆ ಸಂಸ್ಥೆಗಳಿಗೆ ನೀಡಿರುವ ಸಾಲಗಳು ವಸೂಲಾಗಿಲ್ಲ. ಬದಲಿಗೆ ಸಾಲದ ಪ್ರಮಾಣವು ಹೆಚ್ಚಾಗಿದೆ. ಸಾಲಗಳ ವಸೂಲಾತಿಯು ಹೆಚ್ಚಾಗದೇ ಸ್ಥಿರವಾಗಿದೆ ಎಂಬ ಅಂಶವನ್ನು ಸುತ್ತೋಲೆಯಲ್ಲಿ ಪ್ರಸ್ತಾವಿಸಿದೆ.
‘ಸರ್ಕಾರವು ಹೂಡಿಕೆಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಲ್ಲಿ ಸಾಲ ಪಡೆಯುತ್ತಿದ್ದು ಈ ಹೂಡಿಕೆಗಳ ಮೇಲಿನ ಮರು ಪಾವತಿಯ ಶೇಕಡವಾರು ಪ್ರಮಾಣವು ತುಂಬಾ ಕಡಿಮೆಯಾಗುತ್ತಿದೆ. ಬಾಕಿ ಇರುವ ಸಾಲಗಳು, ಸಾಲದ ನಿಬಂಧನೆಗಳ ಮತ್ತು ಷರತ್ತುಗಳ ಅನ್ವಯ ವಸೂಲಾತಿ ಆಧಾರದ ಮೇಲೆ ಸಾಲ ಸ್ವೀಕೃತಿಗಳ ಅಂದಾಜುಗಳನ್ನು ತಯಾರಿಸಬೇಕು,’ ಎಂದು ಸೂಚಿಸಿದೆ.