ಬಿ ಆರ್‍‌ ಪಾಟೀಲ್ ಕೋಪ ಶಮನಕ್ಕೆ ಯತ್ನ; ಆಯುಕ್ತರ ಅಭಿಪ್ರಾಯವನ್ನೂ ಧಿಕ್ಕರಿಸಿ 4 ಎಕರೆ ಜಾಗ ಹಸ್ತಾಂತರ

ಬೆಂಗಳೂರು; ಅಳಂದದಲ್ಲಿ ಕೃಷಿ ಇಲಾಖೆಗೆ ಸೇರಿದ ಜಾಗವನ್ನು ಕೃಷಿ ಇಲಾಖೆ ಆಯುಕ್ತರ ಅಭಿಪ್ರಾಯವನ್ನೂ ಧಿಕ್ಕರಿಸಿ ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ಮೂಲಕ ಶಾಸಕ ಬಿ ಆರ್‍‌ ಪಾಟೀಲ್‌ ಅವರು ಇತ್ತೀಚೆಗಷ್ಟೇ ಹೊರಹಾಕಿದ್ದ ಅಸಮಾಧಾನವನ್ನು ಶಮನಗೊಳಿಸಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.

 

ಬೀಜೋತ್ಪಾದನೆ ಕ್ಷೇತ್ರದ ವಿಸ್ತೀರ್ಣ ಕಡಿಮೆಗೊಳಿಸಿದರೆ ರೈತರಿಗೆ ತೊಂದರೆಯಾಗಲಿದೆ ಎಂದು ಕೃಷಿ ಇಲಾಖೆ ಆಯುಕ್ತರು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿರುವ ಕೃಷಿ ಸಚಿವ ಎನ್‌ ಚೆಲುವರಾಯಸ್ವಾಮಿ ಅವರು ಕೃಷಿ ಇಲಾಖೆಗೆ ಸೇರಿದ 4 ಎಕರೆ ಜಮೀನನ್ನು ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಕೃಷಿ ಇಲಾಖೆಗೆ ಸೇರಿದ ಜಮೀನಿನ ಪೈಕಿ 4 ಎಕರೆ ವಿಸ್ತೀರ್ಣ ಜಮೀನನ್ನು ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು 2023ರ ಅಕ್ಟೋಬರ್‍‌ 5ರಂದು ಆದೇಶ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಕರಣದ ವಿವರ

 

ಅಳಂದ ತಾಲೂಕಿಗೆ 2017-18ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರಾಗಿತ್ತು. ಆದರೆ ಕಳೆದ 5 ವರ್ಷಗಳಿಂದಲೂ ಕಾಲೇಜು ಕಟ್ಟಡ ನಿರ್ಮಾಣವಾಗಿರಲಿಲ್ಲ. ಕಾಲೇಜು ನಿರ್ಮಿಸಬೇಕಾದ ಜಾಗದಿಂ 4 ಕಿ ಮೀ ದೂರದ ಜಾಗವನ್ನು ಅಧಿಕಾರಿಗಳು ತೋರಿಸಿದ್ದರು. ಆದರೆ ಈ ಜಾಗವು ವಿದ್ಯಾರ್ಥಿಗಳಿಗೆ ಹೋಗಿ ಬರುವುದಕ್ಕೆ ಅನಾನುಕೂಲವಾಗಿತ್ತು.

 

ಹೀಗಾಗಿ ಉನ್ನತ ಶಿಕ್ಷಣ ಇಲಾಖೆಯು ಕೃಷಿ ಇಲಾಖೆಗೆ ಸೇರಿದ ಜಾಗಕ್ಕೆ ಬೇಡಿಕೆ ಇರಿಸಿದ್ದರು. ಕೃಷಿ ಇಲಾಖೆಗೆ ಸೇರಿರುವ ಸರ್ವೆ ನಂಬರ್‍‌ 696ರಲ್ಲಿ 23 ಎಕರೆ ಜಾಗದಲ್ಲಿ 05 ಎಕರೆ ಮಿನಿ ವಿಧಾನಸೌಧ, 05 ಎಕರೆ ಉಗ್ರಾಣ ಕಟ್ಟಡಕ್ಕೆ ನೀಡಲಾಗಿತ್ತು. ಬಾಕಿ ಉಳಿದಿದ್ದ 13 ಕೆರೆ ಜಾಗದಲ್ಲಿಯೇ ಸರ್ಕಾರಿ ಪಾಲಿಟೆಕ್ನಿಕ್‌ ಕಟ್ಟಡ ನಿರ್ಮಾಣ ಮಾಡಲು ಉನ್ನತ ಶಿಕ್ಷಣ ಇಲಾಖೆಯು ಮುಂದಾಗಿತ್ತು ಎಂಬುದು ತಿಳಿದು ಬಂದಿದೆ.

 

ಇದನ್ನಾಧರಿಸಿ ಶಾಸಕ ಬಿ ಆರ್‍‌ ಪಾಟೀಲ್‌ ಅವರು ಕೃಷಿ ಇಲಾಖೆ ಸಚಿವ ಎನ್ ಚೆಲುವರಾಯಸ್ವಾಮಿ ಅವರಿಗೆ ಪತ್ರವನ್ನು ಬರೆದಿದ್ದರು. ಈ ಪತ್ರವನ್ನಾಧರಿಸಿ ಕಡತವನ್ನು ಮಂಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

 

ಕೃಷಿ ಇಲಾಖೆ ತಕರಾರೇನು?

 

ಅಳಂದ ತಾಲೂಕಿನಲ್ಲಿರುವ ಬೀಜೋತ್ಪಾದನಾ ಕೇಂದ್ರಕ್ಕಾಗಿ ಮಂಜೂರಾಗಿದ್ದ 23 ಎಕರೆ ಪ್ರದೇಶದಲ್ಲಿ ಈಗಾಗಲೇ ವಿವಿಧ ಉದ್ದೇಶಕ್ಕಾಗಿ 10 ಎಕರೆ ಜಮೀನು ನೀಡಲಾಗಿದೆ. ಬಾಕಿ ಉಳಿದಿರುವ 13 ಎಕರೆ ಪ್ರದೇಶದಲ್ಲಿ ಬೀಜೋತ್ಪಾದನಾ ಕೇಂದ್ರದಿಂದ ತೊಗರಿ ಬೆಳೆಯ ಬೀಜೋತ್ಪಾದನೆಯನ್ನು ಕೈಗೊಳ್ಳಲಾಗಿತ್ತು. ಇಲ್ಲಿ ಬೆಳೆಯುವ ಪ್ರಮಾಣಿತ ಬಿತ್ತನೆ ಬೀಜವನ್ನು ಕಲ್ಬುರ್ಗಿ ಜಿಲ್ಲೆಯ ರೈತರಿಗೆ ವಿತರಿಸಲಾಗುತ್ತಿದೆ.

 

ಹೀಗಾಗಿ ಈಗ ಹಾಲಿ ಇರುವ ಬೀಜೋತ್ಪಾದನಾ ಕ್ಷೇತ್ರದ ವಿಸ್ತೀರ್ಣವನ್ನು ಕಡಿಮೆಗೊಳಿಸಿದಲ್ಲಿ ತೊಗರಿ ಬೆಳೆಯ ಪ್ರಮಾಣಿಕೃತ ಬಿತ್ತನೆ ಬೀಜದ ಉತ್ಪಾದನೆ ಕಡಿತಗೊಂಡು ಆ ಪ್ರದೇಶದಲ್ಲಿನ ರೈತರುಗಳಿಗೆ ತೊಂದರೆಯಾಗುವ ಸಾಧ್ಯತಗಳು ಹೆಚ್ಚಾಗಲಿದೆ. ಹೀಗಾಗಿ ಉಳಿದಿರುವ ಜಮೀನನ್ನು ರೈತರ ಹಿತದೃಷ್ಟಿಯಿಂದ ಕೃಷಿ ಇಲಾಖೆಯಲ್ಲಿಯೇ ಉಳಿಸಿಕೊಂಡು ಬೀಜೋತ್ಪಾದನೆ ಕೈಗೊಳ್ಳುವುದು ಸೂಕ್ತವಾಗಿದೆ ಎಂದು ಆಯುಕ್ತರು 2023ರ ಆಗಸ್ಟ್‌ 21ರಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂಬುದು ಆದೇಶದಿಂದ ಗೊತ್ತಾಗಿದೆ.

 

ಆದರೆ ಈ ಅಭಿಪ್ರಾಯವನ್ನು ಬದಿಗೊತ್ತಿರುವ ಕೃಷಿ ಸಚಿವರು ಕೃಷಿ ಇಲಾಖೆಗೆ ಸೇರಿದ ಜಮೀನನ್ನು ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು ಅನುಮತಿ ನೀಡಿದ್ದಾರೆ. ಕೃಷಿ ಇಲಾಖೆಯ ಅಳಂದ ಬೀಜೋತ್ಪಾದನಾ ಕೇಂದ್ದ ಜಮೀನಿನಲ್ಲಿ 4 ಎಕರೆ ಜಾಗ ಮಂಜೂರು ಮಾಡುವುದು ಮತ್ತು ಇಲಾಖೆಯಿಂದ ನೀಡಿರುವ ಜಮೀನಿಗೆ ಪರ್ಯಾಯವಾಗಿ 20 ಎಕರೆ ಜಾಗವನ್ನು ಕಂದಾಯ ಇಲಾಖೆಯಿಂದ ಪಡೆಯುವಂತೆ ತೀರ್ಮಾನಿಸಿ ಆದೇಶ ಹೊರಡಿಸಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts