ಪ್ರೌಢಶಾಲಾ ಶಿಕ್ಷಕರ ಅಕ್ರಮ ನೇಮಕ; 29 ವರ್ಷಗಳ ನಂತರ ದೂರು ಸಲ್ಲಿಸಿದ ಮಂಡಳಿ

ಬೆಂಗಳೂರು; ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಸೂರು ವಿಭಾಗದಲ್ಲಿ ನಡೆದಿದ್ದ ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಯಲ್ಲಿ ಕರ್ತವ್ಯಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಜಂಟಿ ನಿರ್ದೇಶಕರು ಸೇರಿದಂತೆ ಮತ್ತಿತರರ ಅಧಿಕಾರಿಗಳ ವಿರುದ್ಧ 29 ವರ್ಷಗಳ ನಂತರ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ದೂರು ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

1993-94ರಲ್ಲಿ ಮೈಸೂರು ವಿಭಾಗದ ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಯಲ್ಲಿ ಕರ್ತವ್ಯಲೋಪ ಎಸಗಿರುವ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ವಿಭಾಗೀಯ ಕಾರ್ಯದರ್ಶಿ ಹಾಗೂ ಜಂಟಿ ನಿರ್ದೇಶಕರಾದ ಭಾರತಿ ಎಂಬುವರು 2022ರ ಡಿಸೆಂಬರ್‍‌ 7ರಂದು ಮೈಸೂರಿನ ಲಕ್ಷ್ಮಿಪುರಂ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

 

ಈ ದೂರು ಆ ನಂತರ ಸಿಐಡಿಗೆ ವರ್ಗಾವಣೆಯಾಗಿತ್ತು. ದೂರಿನ ಕುರಿತಾಗಿ ತನಿಖೆ ನಡೆಸಿರುವ ಸಿಐಡಿಯು ಇದೀಗ ಅಧಿಕಾರಿಗಳಿಬ್ಬರನ್ನು ವಿಚಾರಣೆಗೊಳಪಡಿಸಲು ಕೋರಿದ್ದ ಮಂಜೂರಾತಿಯನ್ನು ಈಗಿನ ಕಾಂಗ್ರೆಸ್‌ ಸರ್ಕಾರವು ಅನುಮತಿ ನೀಡಿ ಆದೇಶ (ಇಡಿ 52 ಡಿಜಿಪಿ 2023)  ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವೀರಪ್ಪ ಮೊಯಿಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1993-94) ಮೈಸೂರು ವಿಭಾಗದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿತ್ತು. ಈ ಪ್ರಕರಣದ ಕುರಿತು ಸಿಐಡಿ (ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು) ತನಿಖೆಯನ್ನು ಕೈಗೆತ್ತಿಕೊಂಡಿತ್ತು ಎಂಬುದು ಆದೇಶದಿಂ ತಿಳಿದು ಬಂದಿದೆ.

 

ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಕ್ಕೆ ಒಳಗಾಗಿದ್ದ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ವೈ ಜಿ ಸತ್ಯನಾರಾಯಣ (ಈಗ ನಿವೃತ್ತ), ಪತ್ರಾಂಕಿತ ವ್ಯವಸ್ಥಾಪಕ ಬಿ ಜಿ ರಂಗೇಗೌಡ (ನಿವೃತ್ತ) ಇವರನ್ನು ವಿಚಾರಣೆಗೆ ಒಳಪಡಿಸಲು 2023ರ ಸೆಪ್ಟಂಬರ್‍‌ನಲ್ಲಿ ಸರ್ಕಾರವು ಅನುಮತಿ ನೀಡಿದೆ. ಸಚಿವ ಮಧು ಬಂಗಾರಪ್ಪ ಅವರು ಇದನ್ನು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ವೀರಪ್ಪ ಮೊಯಿಲಿ, ಎಚ್‌ ಡಿ ದೇವೇಗೌಡ, ಜೆ ಹೆಚ್‌ ಪಟೇಲ್‌, ಎಸ್‌ ಎಂ ಕೃಷ್ಣ, ಧರಂಸಿಂಗ್‌, ಎಚ್‌ ಡಿ ಕುಮಾರಸ್ವಾಮಿ (3 ಬಾರಿ) ಬಿ ಎಸ್‌ ಯಡಿಯೂರಪ್ಪ (4 ಬಾರಿ) ಸದಾನಂದ ಗೌಡ, ಜಗದೀಶ್‌ ಶೆಟ್ಟರ್‍‌, ಸಿದ್ದರಾಮಯ್ಯ ಅವರು ಮೊದಲ ಅವಧಿಯವರೆಗಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಗಮನಿಸಿರಲಿಲ್ಲ.

 

ಪ್ರಕರಣದ ವಿವರ

 

1993-94ನೇ ಸಾಲಿನಲ್ಲಿ ಮೈಸೂರು ವಿಭಾಗದ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇದ್ದ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು 1994ರ ಫೆ.5ರಂದು ಅಧಿಸೂಚನೆ ಹೊರಡಿಸಿತ್ತು. ಹುದ್ದೆ ನೇಮಕಾತಿ ಸಂಬಂಧ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಆಧರಿಸಿ ನೇಮಕಾತಿ ಮಾಡಿಕೊಳ್ಳಲಾಗಿತ್ತು.

 

ಈ ಅವಧಿಯಲ್ಲಿ ನೇಮಕಗೊಂಡಿದ್ದ ಚನ್ನಪಟ್ಟಣದ ಬಿ ಎನ್‌ ಶಿವಪ್ಪ, ಬಿ ಎನ್‌ ಯೋಗಣ್ಣ, ಹಾಸನದ ಮೋಹಿನಿ, ಕಾವೇರಿ ಎಂಬುವರು ಅಕ್ರಮವಾಗಿ ನೇಮಕವಾಗಿದ್ದರು. ಈ ನಾಲ್ವರು ಅಭ್ಯರ್ಥಿಗಳು ನಮ್ಮ ನೈಜ ಪದವಿ ಅಂಕಗಳಿಗಿಂತ ಅಧಿಕ ಅಂಕಗಳೊಂದಿಗೆ ಆಯ್ಕೆಯಾಗಿದ್ದರು. ಈ ರೀತಿ ನೇಮಕಾತಿ ಪ್ರಕ್ರಿಯೆ ವೇಳೆಯಲ್ಲಿ ನೀಡಿದ ಮಾಹಿತಿ ಮತ್ತು ದಾಖಲಾತಿಗಳ ನೈಜತೆಯನ್ನು ಪರಿಶೀಲಿಸದೇ ನೇಮಕಾತಿ ಆದೇಶಗಳನ್ನು ನೀಡಲಾಗಿತ್ತು.

 

ಅಲ್ಲದೇ ಈ ನಾಲ್ವರು ಅಭ್ಯರ್ಥಿಗಳು ನಿಯಮಬಾಹಿರವಾಗಿ ಸೇವೆಯಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಂತಾಗಿತ್ತು. ಈ ಪ್ರಕರಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವೈ ಜಿ ಸತ್ಯನಾರಾಯಣ, ಬಿ ಜಿ ರಂಗೇಗೌಡ ಎಂಬುವರು ಕರ್ತವ್ಯಲೋಪ ಎಸಗಿದ್ದರು ಎಂದು ಆರೋಪಿಸಲಾಗಿತ್ತು ಎಂಬ ಅಂಶವು ಆದೇಶದಿಂದ ಗೊತ್ತಾಗಿದೆ.

 

ಬಿ ಜಿ ರಂಗೇಗೌಡ ಎಂಬುವರು 1993-94ರಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಮೈಸೂರು ವಿಭಾಗದ ಸಹ ನಿರ್ದೇಶಕರ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕರಾಗಿದ್ದರು. ನೇಮಕಾತಿ ವಿಭಾಗದ ವಿಷಯ ನಿರ್ವಾಹಕರಾಗಿದ್ದ ಇವರು ನೇಮಕಾತಿ ಸಂಬಂಧ ಅಭ್ಯರ್ಥಿಗಳು ಸಲ್ಲಿಸಿದ್ದ ಖಾಯಂ ದಾಖಲೆಗಳು, ಅರ್ಜಿಗಳು ಮತ್ತು ಅದರೊಂದಿಗೆ ಸಲ್ಲಿಸಿದ್ದ ಅಂಕಪಟ್ಟಿ ಮತ್ತು ಇತರೆ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಮರೆಮಾಚಿದ್ದರು.

 

ಅಥವಾ ಎಲ್ಲೋ ಬಚ್ಚಿಟ್ಟು ಅನರ್ಹ ಅಭ್ಯರ್ಥಿಗಳು ಅಕ್ರಮವಾಗಿ ನೇಮಕಾತಿ ಹೊಂದಿದ ನಂತರವೂ ಸೇವೆಯಲ್ಲಿ ಮುಂದುವರೆಯರಲು ಅವಕಾಶ ಮಾಡಿಕೊಟ್ಟಿದ್ದರು. ಇದು ಸರ್ಕಾರಕ್ಕೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ಮೋಸ ಮಾಡಿದಂತಾಗಿದೆ ಎಂದು ತನಿಖೆ ವೇಳೆಯಲ್ಲಿ ತನಿಖಾಧಿಕಾರಿಗಳು ದೃಢಪಡಿಸಿದ್ದರು ಎಂದು ಅದೇಶದಲ್ಲಿ ವಿವರಿಸಲಾಗಿದೆ.

 

ಮತ್ತೊಬ್ಬ ಆರೋಪಿ ವೈ ಜಿ ಸತ್ಯನಾರಾಯಣ ಎಂಬುವರು ಸಹ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸಿರಲಿಲ್ಲ ಮತ್ತು ದಾಖಲಾತಿಗಳು ನಾಶವಾಗಲು ಅಥವಾ ಮರೆಮಾಚಲು ಕಾರಣರಾಗಿದ್ದರು ಎಂಬುದನ್ನು ತನಿಖೆಯಿಂದ ಸಾಬೀತುಪಡಿಸಿತ್ತು. ಇವರಿಬ್ಬರ ವಿರುದ್ಧ ಸಿಐಡಿಯು ಐಪಿಸಿ 420, 465, 471, 204 ರೆ/ವಿ 36 ಮತ್ತು 37 ಅನ್ವಯ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ತನಿಖೆಯಲ್ಲಿ ಹೇಳಲಾಗಿತ್ತು.

the fil favicon

SUPPORT THE FILE

Latest News

Related Posts