ಬೆಂಗಳೂರು; ರಾಜ್ಯದಲ್ಲಿ ಉಗ್ರಾಣಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಗುತ್ತಿಗೆದಾರ ಕಂಪನಿ ವಿರುದ್ಧ ಎನ್‌ಸಿಎಲ್‌ಟಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಮತ್ತು ದಿವಾಳಿತನದ ಸಂಬಂಧ ಗುತ್ತಿಗೆದಾರರೊಂದಿಗೆ ಪೂರಕ ಒಪ್ಪಂದವನ್ನು ಮಾಡಿಕೊಳ್ಳುವುದು ಸೂಕ್ತವಲ್ಲ ಎಂದು ಅಧಿಕಾರಿಗಳು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿರುವ ಈಗಿನ ಕಾಂಗ್ರೆಸ್ ಸರ್ಕಾರವು ಇದೇ ಗುತ್ತಿಗೆದಾರ ಕಂಪನಿಯೊಂದಿಗೆ ಪೂರಕ ಒಪ್ಪಂದವನ್ನು ಮಾಡಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಉಗ್ರಾಣ ನಿಗಮದ ಆರ್‌ಐಡಿಎಫ್ 22 ಯೋಜನೆಯಡಿ ಅಪೂರ್ಣಗೊಂಡ ಉಗ್ರಾಣಗಳ ನಿರ್ಮಾಣ ಮತ್ತು ಅವಶ್ಯವಿರುವ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು 376.54 ಕೋಟಿ ರು. ಬಿಡುಗಡೆ ಮಾಡಲು ಸಚಿವ ಸಂಪುಟವು ಅನುಮೋದನೆ ನೀಡಿರುವ ಬೆನ್ನಲ್ಲೇ ಪೂರಕ ಒಪ್ಪಂದ ಮಾಡಿಕೊಂಡಿರುವ ಪ್ರಕರಣವೂ ಮುನ್ನೆಲೆಗೆ ಬಂದಿದೆ.
ಅಲ್ಲದೇ 724.81 ಕೋಟಿ ರು ಮೊತ್ತದಲ್ಲಿ 60 ಉಗ್ರಾಣಗಳ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ತೋರದ ಗುತ್ತಿಗೆದಾರ ಕಂಪನಿಯು, ತನ್ನೊಂದಿಗೆ ಪೂರಕ ಒಪ್ಪಂದವನ್ನು ಮಾಡಿಕೊಳ್ಳದಿದ್ದರೇ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಮುಂದುವರೆಸಲಿದೆ ಎಂದು ಹೂಡಿದ್ದ ಬೆದರಿಕೆ ತಂತ್ರಗಾರಿಕೆಗೆ ಕಾಂಗ್ರೆಸ್ ಸರ್ಕಾರವು ಮಣಿದಿದೆ. ಇದರಿಂದಾಗಿ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟದ ಹೊರೆಯನ್ನು ಹೊರಿಸಿದಂತಾಗಿದೆ.
ಈ ಯೋಜನೆಯಲ್ಲಿ ಈಗಾಗಲೇ 495 ಕೋಟಿ ರು.ಗೂ ಅಧಿಕ ನಷ್ಟವಾಗಿದೆ. ಹೀಗಿದ್ದರೂ ಇದೇ ಕಂಪನಿಯೊಂದಿಗೆ ಪೂರಕ ಒಪ್ಪಂದವನ್ನು 2023ರ ಆಗಸ್ಟ್ 3ರಂದು ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ ಸಂಕ್ಷಿಪ್ತ ಟಿಪ್ಪಣಿ ಹಾಳೆಗಳು ಸೇರಿ ಸಮಗ್ರ ದಾಖಲಾತಿಗಳು ಲಭ್ಯವಾಗಿವೆ.
ಪೂರಕ ಒಪ್ಪಂದದ ಪ್ರಕಾರ ಗುತ್ತಿಗೆದಾರ ಕಂಪನಿಗೆ 2023ರ ಜುಲೈ ಮತ್ತು ಸೆಪ್ಟಂಬರ್‍ನಲ್ಲಿ 209.09 ಕೋಟಿ ರು., ಅಕ್ಟೋಬರ್-ಡಿಸೆಂಬರ್‍ನಲ್ಲಿ 90.00 ಕೋಟಿ ರು., 2024ರ ಜನವರಿ-ಮಾರ್ಚ್‌ನಲ್ಲಿ 77.45 ಕೋಟಿ ರು. ಸೇರಿ ಒಟ್ಠಾರೆ 376.54 ಕೋಟಿ ರು. ಗಳನ್ನು ಬಿಡುಗಡೆ ಮಾಡಬೇಕಿದೆ. ಈ ಸಂಬಂಧ ಕರ್ನಾಟಕ ಉಗ್ರಾಣ ನಿಗಮವು ಪೂರಕ ಒಪ್ಪಂದ ಮಾಡಿಕೊಂಡ ದಿನವೇ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಪತ್ರವನ್ನು ಬರೆದಿದೆ.
ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಂಬಂಧ ಕೆಲ ಷರತ್ತುಗಳಿಗೆ ಒಳಪಟ್ಟು 2022ರ ಅಕ್ಟೋಬರ್ 11ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತಾದರೂ 7 ತಿಂಗಳು ಕಳೆದಿದ್ದರೂ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಅಲ್ಲದೇ ಗುತ್ತಿಗೆದಾರರ ವಿರುದ್ಧ ಎನ್‌ಸಿಎಲ್‌ಟಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ ಗುತ್ತಿಗೆದಾರರೊಂದಿಗೆ ಪೂರಕ ಒಪ್ಪಂದವನ್ನು ಮಾಡಿಕೊಳ್ಳುವುದು ಸೂಕ್ತವಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದರು.
ಆದರೀಗ ಉಗ್ರಾಣ ನಿಗಮವು ಸೋಮ ಎಂಟರ್ ಪ್ರೈಸೆಸ್‌ನೊಂದಿಗೆ 2023ರ ಆಗಸ್ಟ್ 3ರಂದು ಪೂರಕ ಒಪ್ಪಂದವನ್ನು ಮಾಡಿಕೊಂಡಿದೆ. ಕಾಮಗಾರಿಗಳ ಪರಿಮಾಣವನ್ನು ದೃಢೀಕರಿಸಿಕೊಳ್ಳದೆಯೇ ಇದೇ ಗುತ್ತಿಗೆದಾರ ಕಂಪನಿಗೆ 2019ರಲ್ಲೇ ಮುಂಗಡವಾಗಿ 612.18 ಕೋಟಿ ರು.ಗಳನ್ನು ಪಾವತಿ ಮಾಡಿದ್ದು ಸಂಶಯಗಳಿಗೆ ಕಾರಣವಾಗಿದ್ದರ ಬೆನ್ನಲ್ಲೇ ಪೂರಕ ಒಪ್ಪಂದ ಮಾಡಿಕೊಂಡಿರುವುದು ಸಹ ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಉಗ್ರಾಣಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿ ಅನುಷ್ಠಾನಗೊಳಿಸುವ ಸಂಬಂಧ ಕೈಗೆತ್ತಿಕೊಂಡಿದ್ದ 724.81 ಕೋಟಿ ರು ಮೊತ್ತದ ಯೋಜನೆಯಲ್ಲಿ ಇದುವರೆಊ 495 ಕೋಟಿ ರು.ಗೂ ಅಧಿಕ ನಷ್ಟವಾಗಿದೆ.
ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಆಡಳಿತಾತ್ಮಕ ನಿಯಮಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸದಿರುವುದು ಅನುಮೋದಿತ ಅಂದಾಜು ಪಟ್ಟಿಯಲ್ಲಿ ಅವಕಾಶ ಕಲ್ಪಿಸದೇ ಇರುವ ಕೆಲವು ಹೆಚ್ಚುವರಿ ಐಟಂಗಳನ್ನು ಉಪಯೋಗಿಸಿಕೊಂಡು ನಿರ್ಮಾಣ ಇರುವುದೇ ಯೋಜನಾ ಮೊತ್ತದಲ್ಲಿ ಹೆಚ್ಚುವರಿಯಾಗಿದೆ. ಇದಕ್ಕೆ ಸಂಬಂಧಿಸಿದ ಐಎಎಸ್ ಅಧಿಕಾರಿಗಳ ವಿರುದ್ಧ ಇದುವರೆಗೂ ಯಾವುದೇ ಶಿಸ್ತು ಕ್ರಮ ಜರುಗಿಸದೆಯೇ ಗುತ್ತಿಗೆದಾರ ಕಂಪನಿಯೊಂದಿಗೇ ಪೂರಕ ಒಪ್ಪಂದ ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಬೆದರಿಸಿತ್ತೇ ಕಂಪನಿ?
ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದ ಸೋಮಾ ಎಂಟರ್ ಪ್ರೈಸೆಸ್ 2023ರ ಏಪ್ರಿಲ್ 18ರಂದು ಪತ್ರ ಬರೆದಿತ್ತು. ‘ಏಪ್ರಿಲ್ 24ರೊಳಗೆ ಪೂರಕ ಒಪ್ಪಂದವನ್ನು ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ದಾವೆ ಮುಂದುವರೆಸಲಾಗುವುದು. ಅಲ್ಲದೇ ತಮಗೆ ಬರಬೇಕಾದ ಬಾಕಿ ಹಣವನ್ನು ನೀಡಬೇಕು,’ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿತ್ತು.
ಪೂರಕ ಒಪ್ಪಂದ ಸೂಕ್ತವಲ್ಲ
ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಂಬಂಧ ಕೆಲವೊಂದು ಷರತ್ತಿಗೊಳಪಟ್ಟು 2022ರ ಅಕ್ಟೋಬರ್ 11ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಸುಮಾರು 7 ತಿಂಗಳು ಕಳೆದಿದ್ದರೂ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಈ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಅಲ್ಲದೇ ಗುತ್ತಿಗೆದಾರರ ವಿರುದ್ಧ ಎನ್‌ಸಿಎಲ್‌ಟಿಯಲ್ಲಿ ಪ್ರಕರಣ ದಾಖಲಿಸಿತ್ತು.
ಹಾಗೂ ದಿವಾಳಿತನ ಸಂಬಂಧ (insolvency) ಗುತ್ತಿಗೆದಾರರಾದ ಸೋಮಾ ಎಂಟರ್ ಪ್ರೈಸೆಸ್‌ನೊಂದಿಗೆ ಪೂರಕ ಒಪ್ಪಂದವನ್ನು ಮಾಡಿಕೊಳ್ಳುವುದು ಸೂಕ್ತವಲ್ಲ. ಪೂರಕ ಒಪ್ಪಂದದ ನಿರ್ಧಾರವೂ ಸಚಿವ ಸಂಪುಟದ ಮುಂದಿರಲಿಲ್ಲ. ಹೀಗಾಗಿ ಆದೇಶಕ್ಕಾಗಿ ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ಈ ವಷಿಯವನ್ನು ಮಂಡಿಸಲು ಹಾಗೂ ಕಾನೂನು ಇಲಾಖೆ ಅಭಿಪ್ರಾಯ ಪಡೆದು ಸಲ್ಲಿಸುವಂತೆ ಕೋರುವುದು ಸೂಕ್ತವಲ್ಲ ಎಂದೂ ಅಧಿಕಾರಿಗಳು ಅಭಿಪ್ರಾಯಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಹಾಗೆಯೇ ‘ ಈಗಾಗಲೇ ಸರ್ಕಾರವು ಈ ವಿಷಯದಲ್ಲಿ ಒಂದು ನಿರ್ಣಯ ಕೈಗೊಂಡು ನಿಗಮಕ್ಕೆ ನಿರ್ದೇಶನ ನೀಡಿರುವುದರಿಂದ ನಿಗದಮ ಅಧಿಕಾರ ಪ್ರತ್ಯಾಯೋಜನೆಯ ಅನ್ವಯ ಗುತ್ತಿಗೆದಾರರೊಂದಿಗೆ ಪೂರಕ ಒಪ್ಪಂದವನ್ನು ಮಾಡಿಕೊಳ್ಳುವ ಅಧಿಕಾರವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರತ್ಯಾಯೋಜಿಸಲಾಗಿದೆ.
ಆದರೂ ಪದೇ ಪದೇ ಈ ವಿಷಯದ ಕುರಿತು ತೀರ್ಮಾನವನ್ನು ಆಡಳಿತ ಮಂಡಳಿ ಸಭೆಯಲ್ಲಿಟ್ಟು ಸರ್ಕಾರಕ್ಕೆ ಮುಜುಗರ ಉಂಟು ಮಾಡಲಾಗುತ್ತಿದೆ. ಈ ವಿಷಯದ ಕುರಿತು ಈವರೆವಿಗೂ ಯಾವುದೇ ನಿರ್ಣಯ ತೆಗೆದುಕೊಳ್ಳದಿರುವುದು ವಿಷಾದನೀಯ. ಇದರಿಂದಾಗಿ ಸಮಯ ವ್ಯರ್ಥವಾಗುತ್ತಿದೆ. ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಂಡಿರುವುದಿಲ್ಲ,’ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅಲ್ಲದೇ, ಪ್ರಕರಣದಲ್ಲಿ ಈವರೆವಿಗೆ ಪೂರಕ ಒಪ್ಪಂದ ಮಾಡಿಕೊಳ್ಳದ ಕಾರಣ ಗುತ್ತಿಗೆದಾರರು ಅವರಿಗೆ ನಿಗಮದಿಂದ ಬಾಕಿ ಬರಬೇಕಿರುವ 322.67 ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕು ಎಂದ ಸರ್ಕಾರಕ್ಕೆ ಗುತ್ತಿಗೆದಾರ ಕಂಪನಿಯು ಕೋರಿಕೆ ಸಲ್ಲಿಸಿದೆ.
ಒಂದೊಮ್ಮೆ ಈ ಕೋರಿಕೆಯಂತೆ ನಿರ್ಣಯ ಕೈಗೊಂಡಲ್ಲಿ ಗುತ್ತಿಗೆದಾರರು ಮಧ್ಯಸ್ಥಿಕೆ ಪ್ರಕರಣವನ್ನು ಹಿಂಪಡೆದಲ್ಲಿ ಮಧ್ಯಸ್ಥಿಕೆ ನ್ಯಾಯಾಲಯದ ಅವಾರ್ಡ್ ಮೊತ್ತದಲ್ಲಿ ಪೂರ್ಣ ಬಡ್ಡಿ ಮೊತ್ತ ಬಿಟ್ಟುಕೊಡಲು ಹಾಗೂ ದರ ಹೊಂದಾಣಿಕೆಯಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲು ಒಪ್ಪಿಕೊಂಡಿರುವ ಮೊತ್ತವನ್ನು ಪುನಃ ಭರಿಸಬೇಕಾದ ಸಾಧ್ಯತೆಗಳೂ ಇವೆ. ಇದರಿಂದಾಗಿ ಸರ್ಕಾರಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಗಳಿವೆ ಎಂದು ಟಿಪ್ಪಣಿ ಹಾಳೆಯಲ್ಲಿ ಪ್ರಸ್ತಾವಿಸಿರುವುದು ಗೊತ್ತಾಗಿದೆ.
ಏನಿದು ಯೋಜನೆ?
ಡಬ್ಲ್ಯುಐಎಫ್ ಮತ್ತು ಎನ್‌ಡಬ್ಲ್ಯೂಎಸ್ 2015-16ರ ಯೋಜನೆ ಅಡಿಯಲ್ಲಿ ವೈಜ್ಞಾನಿಕ ಉಗ್ರಾಣಗಳ ನಿರ್ಮಾಣ ಮತ್ತು ಆರ್‍ಐಡಿಎಫ್ ಯೋಜನೆ ಅಡಿಯಲ್ಲಿ ಮೂಲಭೂತ ಸೌಕರ್ಯ ಕಾಮಗಾರಿಗಳ ಅನುಷ್ಠಾನ ಮಾಡುವ ಯೋಜನೆ ಇದಾಗಿದೆ. 16.25 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸಲು ನಬಾರ್ಡ್‌ನಿಂದ 650.00 ಕೋಟಿ ರು. ಸಾಲವನ್ನು ಸರ್ಕಾರದ ಬೇಷರತ್ತು ಖಾತ್ರಿ ಮೇಲೆ ತೆಗೆದುಕೊಳ್ಳಲು 2015ರ ಜೂನ್ 6ರಂದು ನಡೆದಿದ್ದ ಸಚಿವ ಸಂಪುಟವು ಅನುಮೋದಿಸಿತ್ತು.
ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಜಮೀನುಗಳು ನಿಗದಿತ ಪರಿಮಾಣದಲ್ಲಿ ಲಭ್ಯವಿರಲಿಲ್ಲ . ಹೀಗಾಗಿ ಈ ಕಾಮಗಾರಿಯ ಅಂದಾಜನ್ನು 739.33 ಕೋಟಿ ರು. ವೆಚ್ಚದಲ್ಲಿ 11.14 ಲಕ್ಷ ಮೆಟ್ರಿಕ್ ಟನ್ ಸಮಾರ್ಥ್ಯದ ಗೋದಾಮುಗಳನ್ನು ನಿರ್ಮಾಣಕ್ಕೆ ಯೋಜನೆ ಪರಿಷ್ಕರಿಸಿತ್ತು. ರಾಜ್ಯದ 89 ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಕಾಮಗಾರಿ ಕೈಗೆತ್ತಿಕೊಳ್ಳಲು 724.81 ಕೋಟಿ ರು.ಗಳಿಗೆ ಇ-ಟೆಂಡರ್ ಕರೆಯಲಾಗಿತ್ತು.
ಈ ಟೆಂಡರ್ ಮೊತ್ತವು ಲೋಕೋಪಯೋಗಿ ಇಲಾಖೆಯ ದರಪಟ್ಟಿ 2015-16ರರಲ್ಲಿದ್ದಂಗೆ ಶೇ. 7.673 ರಷ್ಟು ಹೆಚ್ಚಾಗಿತ್ತು. 795, 97,52,981 ರು. ಮೊತ್ತಕ್ಕೆ ಈ ಕಾಮಗಾರಿಯನ್ನು ಸೋಮಾ ಎಂಟರ್‍ಪ್ರೈಸೆಸ್ ಲಿಮಿಟೆಡ್‌ಗೆ 2016ರ ಮೇ 17ರಂದು ಕಾರ್ಯಾದೇಶ ನೀಡಲಾಗಿತ್ತು. ಈ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಕರಾರು ಒಪ್ಪಂದದ ಅವಧಿಯನ್ನು 9 ತಿಂಗಳಿಗೆ ನಿಗದಿಪಡಿಸಲಾಗಿತ್ತು.
ಹೊಸ ವೈಜ್ಞಾನಿಕ ಮಾದರಿಯ ಉಗ್ರಾಣಗಳ ನಿರ್ಮಾಣಕ್ಕಾಗಿ ಗುರುತಿಸಿದ್ದ 60 ಕೇಂದ್ರಗಳ ಪೈಕಿ 6 ಕೇಂದ್ರಗಳನ್ನು ಕೈಬಿಡಲಾಗಿತ್ತು. ಉಳಿದ 54 ಕೇಂದ್ರಗಳಲ್ಲಿ 9.24 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯಕ್ಕೆ ಇಳಿಸಲಾಗಿತ್ತು. ಕಾಮಗಾರಿ ಸ್ಥಳವನ್ನು ನಿಗದಿತ ಅವಧಿಯಲ್ಲಿ ಗುತ್ತಿಗೆದಾರರಿಗೆ ಹಸ್ತಾಂತರಿಸದ ಕಾರಣ ಸಕಾಲದಲ್ಲಿ ಕಾಮಗಾರಿ ಆರಂಭವಾಗಿರಲಿಲ್ಲ. ಮೊದಲ ನಿವೇಶನವನ್ನು 2016ರ ಮೇ 17ರಂದು ಹಾಗೂ 2018ರ ಮೇ 19ರಂದು ಕೊನೆಯ ನಿವೇಶನವನ್ನು ಹಸ್ತಾಂತರಿಸಲಾಗಿತ್ತು ಎಂದು ತಿಳಿದು ಬಂದಿದೆ.
2017ರ ಫೆ.16ರಂದು ಕಾಮಗಾರಿ ಪೂರ್ಣಗೊಳಿಸಲು ಕಡೆಯ ದಿನಾಂಕವಾಗಿತ್ತಾದರೂ ಗುತ್ತಿಗೆದಾರ ಕಂಪನಿಯು 2019ರ ಜನವರಿ 28ರವರೆಗೆ ನಿಗಮದಿಂದ ಯಾವುದೇ ಸಮಯ ವಿಸ್ತರಣೆಯಿಲ್ಲದೇ ಕಾಮಗಾರಿ ನಿರ್ವಹಿಸಿದ್ದರು. ಬಾಕಿ ಬಿಲ್ 66.33 ಕೋಟಿ ರು. ಪಾವತಿಯಾಗದ ಕಾರಣ ಕಂಪನಿಯು 2019ರ ಜನವರಿ 28ರಂದು ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಅಲ್ಲದೇ ಬಾಕಿ ಪಾವತಿ, ಬಾಕಿ ಪಾವತಿ ಮೇಲಿನ ಬಡ್ಡಿ, ಬೆಲೆ ಏರಿಕೆ/ ಹೊಂದಾಣಿಕೆ ಮತ್ತು ಇತ್ಯಾದಿಗಳಿಗಾಗಿ ಮಧ್ಯಸ್ಥಿಕೆ ದಾವೆಯನ್ನು ಹೂಡಿತ್ತು. 2019ರ ಮೇ 4ರವರೆಗೆ ಗುತ್ತಿಗೆದಾರ ಕಂಪನಿಗೆ 612.18 ಕೋಟಿ ರು.ಗಳಿವರೆಗೆ ಯಾವುದೇ ಸಮಯ ವಿಸ್ತರಣೆ ನೀಡದೇ ಪಾವತಿಸಲಾಗಿತ್ತು. ಕಂಪನಿಯು ಕಾರ್ಯಗತಗೊಳಿಸಿದ್ದ ಕಾಮಗಾರಿಯ ಪರಿಮಾಣವನ್ನು ದೃಢೀಕರಿಸಿಕೊಳ್ಳದೆಯೇ ಮುಂಗಡವಾಗಿ ಪಾವತಿಸಲಾಗಿತ್ತು ಎಂಬುದು ದಾಖಲೆಯಿಂದ ಗೊತ್ತಾಗಿದೆ.
ನ್ಯಾಯಾಧೀಶರಾದ ಎನ್ ಸಂತೋಷ್ ಹೆಗ್ಡೆ (ನಿವೃತ್ತ) ಅವರ ಅಧ್ಯಕ್ಷತೆಯಲ್ಲಿದ್ದ ಮಧ್ಯಸ್ಥಿಕೆಯ ನ್ಯಾಯಮಂಡಳಿಯು 2021ರ ಜೂನ್ 10ರಂದು ಗುತ್ತಿಗೆದಾರರ ಆರ್ಬಿಟ್ರೇಷನ್‌ನ್ನು ಅಂಗೀಕರಿಸಿತ್ತು. ನಿಗಮದ ವಿಳಂಬದ ಕಾರಣದಿಂದಾಗಿ ಸಮಯ ವಿಸ್ತರಣೆಗೆ ಅವಾರ್ಡ್ ಮಾಡಲಾಗಿದೆ. ಒಪ್ಪಂದದ ಷರತ್ತುಗಳ ಪ್ರಕಾರ ಬೆಲೆ ಏರಿಕೆ, ಹೊಂದಾಣಿಕೆ ಷರತ್ತು ಪ್ರಕಾರ ಪ್ರತೀ ವರ್ಷಕ್ಕೆ ಶೇ. 15ರ ದರದಂತೆ ಕ್ಲೈಮ್‌ಗಳ ಮೇಲಿನ ಬಡ್ಡಿಯನ್ನು ಪಾವತಿಸಲು ಗುತ್ತಿಗೆದಾರರ ಪರವಾಗಿ ತೀರ್ಪು ನೀಡಿತ್ತು. ಸದ್ಯ ಈ ಪ್ರಕರಣವು ವಿಚಾರಣೆ ಹಂತದಲ್ಲಿದೆ.
ಈ ಮಧ್ಯೆ 862.37 ಕೋಟಿ ರು.ಗಳ ಪರಿಷ್ಕೃತ ಅಂದಾಜಿನ ಅನುಮೋದನೆಗೆ ಪ್ರಸ್ತಾವನೆ ಮತ್ತು ಕಾಮಗಾರಿ ಪೂರ್ಣಗೊಳಿಸಲು 250.20 ಕೋಟಿ ರು.ಗಳ ಸಾಲವನ್ನು ನಿಗಮಕ್ಕೆ ಒದಗಿಸುವುದು ಮತ್ತು 126.34 ಕೋಟಿ ರು.ಗಳ ಬೆಲೆ ಏರಿಕೆ/ಹೊಂದಾಣಿಕೆಯನ್ನು ಗುತ್ತಿಗೆದಾರರಿಗೆ ಪಾವತಿಸಲು ಮತ್ತು ಸಂಪೂರ್ಣ ಕೆಲಸ ಹಾಗೂ ನಬಾರ್ಡ್ ಸಾಲಗಳನ್ನು ಮರು ಪಾವತಿಸಲು 240.51 ಕೋಟಿ ರು.ಗಳನ್ನು ಒದಗಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸುವ ಸಂಬಂಧ 2022ರ ಮೇ 12ರಂದು ನಡೆದಿದ್ದ ಸಚಿವ ಸಂಪುಟವು ಉಪ ಸಮಿತಿಯನ್ನು ರಚಿಸಿತ್ತು.
ಈ ಉಪಸಮಿತಿಯು 2022ರ ಜೂನ್ 29ರಂದು ಸಭೆ ನಡೆಸಿತ್ತಲ್ಲದೇ ಪ್ರಸ್ತಾವನೆಯಲ್ಲಿದ್ದ ಎಲ್ಲಾ ಅಂಶಗಳನ್ನೂ ಅನುಮೋದಿಸಲು ಶಿಫಾರಸ್ಸು ಮಾಡಿತ್ತು. ಇದನ್ನು 2022ರ ಸೆ.14ರಂದು ನಡೆದಿದ್ದ ಸಚಿವ ಸಂಪುಟವೂ ಸಹ ಒಪ್ಪಿಗೆ ನೀಡಿತ್ತು. ಅದರಂತೆ ಯೋಜನೆಯ ಪರಿಷ್ಕೃತ ಅಂದಾಜು 862.37 ಕೋಟಿ ರು.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ 2022ರ ಅಕ್ಟೋಬರ್ 11ರಂದು ಆದೇಶ ಹೊರಡಿಸಿತ್ತು. ಆದರೆ ಉಗ್ರಾಣ ನಿಗಮವು ಈ ಸಂಬಂಧ 7 ತಿಂಗಳಾದರೂ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ.
ಯೋಜನೆ ವಿಳಂಬಕ್ಕೆ ಸಂಬಂಧಿಸಿದಂತೆ 2019ರಲ್ಲಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿದ್ದ ಸಭೆಯು ಸಂಬಂಧಿತ ಐಎಎಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸೂಚಿಸಿತ್ತು.ಈ ಪ್ರಕರಣದಲ್ಲಿ ಆಡಳಿತಾತ್ಮಕ ನಿಯಮಗಳ ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿರುವ ಬಿಡಿಎನ ಹಾಲಿ ಆಯುಕ್ತ ಎಂ ಬಿ ರಾಜೇಶ್‌ಗೌಡ, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಐಎಎಸ್ ಅಧಿಕಾರಿ ಜಯ ವಿಭವಸ್ವಾಮಿ ಸೇರಿ ಹಲವು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರವು ಕಳೆದ 4 ವರ್ಷಗಳಿಂದಲೂ ಮೀನಮೇಷ ಎಣಿಸುತ್ತಿದೆ.
ಉಗ್ರಾಣಕ್ಕೆ ಬಾಯಿ ಹಾಕಿದ ಐಎಎಸ್ ಹೆಗ್ಗಣಗಳು; 495 ಕೋಟಿ ನಷ್ಟದ ಹೊಣೆ ಹೊರುವರ್ಯಾರು?
ಕಪ್ಪು ಮಣ್ಣು ಪ್ರದೇಶ, ಭೂ ಜಾಗ ಬದಲಿಸಿದ ಕಾಋಣ ಹೆಚ್ಚುವರಿಯಾಗಿ ತಳಪಾಯದ ಕಾಮಘಾರಿಗಳ ನಿರ್ವಹಣೆಯಿಂದ ಹಾಗೂ ಸ್ಥಳೀಯ ಕಾರಣಗಳಿಂದ ವಿವಿಧ ವಿನ್ಯಾಸಗಳ ಅಳವಡಿಕೆ ಸೆರಿದಂತೆ ಇನ್ನಿತರ ಅಂಶಗಳಿಂದಾಗಿ ಯೋಜನಾ ಮೊತ್ತದಲ್ಲಿ ಏರಿಕೆಯಾಗಿತ್ತು. ಅಧಿಕಾರಿಗಳು ಮೊದಲೇ ಸರಿಯಾಗಿ ಅಂದಾಜಿಸಿದ್ದರೆ ಯೋಜನಾ ಮೊತ್ತದಲ್ಲಿ ಏರಿಕೆಯಾಗುತ್ತಿರಲಿಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನಾ ಮೊತ್ತದಲ್ಲಿ ಏರಿಕೆಯಾಗಿತ್ತು.
2013-14, 2014-15, 2015-16ನೆ ಸಾಲಿನ ಡಬ್ಲ್ಯೂಐಎಫ್, ಎನ್‌ಡಬ್ಲ್ಯೂಎಸ್ ಯೋಜನೆಯಡಿಯಲ್ಲಿ ನಬಾರ್ಡ್ ಸಂಸ್ಥೆಯಿಂದ 615.78 ಕೋಟಿ ಸಾಲವನ್ನು ಸರ್ಕಾರದ ಖಾತರಿಯೊಂದಿಗೆ ಪಡೆಇದತ್ತು. 2015-16ನೇ ಸಾಲಿನ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿದ್ದ ಸೋಮಾ ಎಂಟರ್‌ಪ್ರೈಸೆಸ್ ಕರಾರು ಒಪ್ಪಂದದ ಪ್ರಕಾರ ಕಾಮಗಾರಿಯನ್ನು ಪೂರ್ಣಗೊಳಿಸಿರಲಿಲ್ಲ.
ಹೀಗಾಗಿ ಬಾಡಿಗೆ ಆದಾಯದಲ್ಲಿಯೂ ಖೋತಾ ಆಗಿತ್ತು. ಅಲ್ಲದೆ ಎರಡು ವರ್ಷದ ಮೊರಾಟರಿಯಮ್ ಅವಧಿ ಮುಗಿದ ನಂತರ ಸಾಲ ಮರುಪಾವತಿಯ ಷೆಡ್ಯೂಲ್ 2019-20ರಿಂದ ಪ್ರಾರಂಭವಾಗಿತ್ತು. ಉಗ್ರಾಣಗಳ ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳದಿರುವ ಕಾರಣ ನಿರೀಕ್ಷೆಯಂತೆ ಸಂಗ್ರಹಣಾ ಶುಲ್ಕ ರೂಪದಲ್ಲಿ ನಿಗಮಕ್ಕೆ ಆದಾಯ ಪಡೆಯಲು ಸಾಧ್ಯವಾಗಿಲ್ಲ ಎಂಬುದು ಗೊತ್ತಾಗಿದೆ.