ಬೆಂಗಳೂರು; ಜನಪ್ರಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಬಕಾರಿ ಇಲಾಖೆಗೆ ನಿಗದಿಪಡಿಸಿರುವ 35,000 ಕೋಟಿ ರುಪಾಯಿಗಳಿಗೂ ಮೀರಿ ಅತ್ಯಧಿಕ ರಾಜಸ್ವ ಸಂಗ್ರಹಿಸುವ ಭಾಗವಾಗಿಯೇ ಮದ್ಯ ಮಾರಾಟ ಗುರಿಯನ್ನೂ ಹೆಚ್ಚಳ ಮಾಡುವುದು ಮತ್ತು ಆನ್‌ಲೈನ್ ಮೂಲಕ ಮದ್ಯ ಮಾರಾಟ ಮಾಡುವ ಕುರಿತೂ ರಾಜ್ಯ ಸರ್ಕಾರವು ಗಂಭೀರವಾಗಿ ಚಿಂತಿಸಿದೆ.
ಅಬಕಾರಿ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳೊಂದಿಗೆ 2023ರ ಜೂನ್ 9ರಂದು ನಡೆಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಆರ್ ಬಿ ತಿಮ್ಮಾಪುರ್ ಅವರು ಈ ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ, ಯುವ ನಿಧಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಜಾರಿಗೊಳಿಸಲು ಸಂಪನ್ಮೂಲ ಕ್ರೋಢೀಕರಣ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರವು ಏದುಸಿರು ಬಿಡುತ್ತಿರುವ ಬೆನ್ನಲ್ಲೇ ಮದ್ಯ ಮಾರಾಟದ ಗುರಿ ಹೆಚ್ಚಳ ಮಾಡುವುದು ಮತ್ತು ನಿರೀಕ್ಷೆಗೂ ಮೀರಿ ಅಬಕಾರಿ ರಾಜಸ್ವ ಸಂಗ್ರಹಿಸಲು ಅಬಕಾರಿ ಸಚಿವರು ನೀಡಿರುವ ನಿರ್ದೇಶನವು ಚರ್ಚೆಗೆ ಗ್ರಾಸವಾಗಿದೆ.
‘ಒಟ್ಟಾರೆಯಾಗಿ ಘನ ಸರ್ಕಾರವು ಕರ್ನಾಟಕ ಜನತೆಗೆ ರೂಪಿಸಿರುವ ಜನಪ್ರಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಬಕಾರಿ ಇಲಾಖೆಯಿಂದ ಹೆಚ್ಚಿನ ಅಂದರೆ 35,000 ಕೋಟಿ ರು.ಗಳ ರಾಜಸ್ವ ಸಂಗ್ರಹಣೆಯು ನಿರೀಕ್ಷೆಯಲ್ಲಿದ್ದು. ಪ್ರಸ್ತುತ ವರ್ಷಕ್ಕೆ ನೀಡಿರುವ ಗುರಿಯು ಅತ್ಯಧಿಕವಾಗಿದೆ. ಸದರಿ ನಿರೀಕ್ಷೆಯನ್ನು ಮೀರಿ ರಾಜಸ್ವ ಸಂಗ್ರಹಿಸುವ ದಿಸೆಯಲ್ಲಿ ಆದಾಯ ವೃದ್ಧಿಸಲು (Revenue Generate) ಮಾಡಲು ಇರುವ ಎಲ್ಲಾ ಸಾಧ್ಯತೆಗಳ ಕಡೆ ರಾಜ್ಯದ ಎಲ್ಲಾ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರು, ವಿಭಾಗೀಯ ಅಬಕಾರಿ ಜಂಟಿ ಆಯುಕ್ತರುಗಳು ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ತಮ್ಮ ಗಮನಹರಿಸಬೇಕು,’ ಎಂದು ಅಬಕಾರಿ ಆಯುಕ್ತರು ನಿರ್ದೇಶಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ಮದ್ಯ ಮಾರಾಟ ಗುರಿ ಹೆಚ್ಚಳ
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮದ್ಯ ಮಾರಾಟ ಗುರಿ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಆಗ ಕೇಳಿ ಬಂದಿದ್ದ ವಿರೋಧ ಮತ್ತು ಲೋಕಾಯುಕ್ತರ ಸೂಚನೆ ಮೇರೆಗೆ ಮೂರು ವರ್ಷಗಳ ಹಿಂದೆಯೇ ಮದ್ಯ ಮಾರಾಟದ ಗುರಿಯನ್ನು ನಿಗದಿಪಡಿಸುವ ವ್ಯವಸ್ಥೆಯನ್ನು ಕೈ ಬಿಡಲಾಗಿತ್ತು. ಆದರೀಗ ಪ್ರಸ್ತುತ ಗುರಿ ಹಂಚಿಕೆ ಮಾಡುವ ಬಗ್ಗೆ ಸಚಿವರು ನೀಡುವ ನಿರ್ದೇಶನ ಅನುಸಾರ ಕ್ರಮ ಕೈಗೊಳ್ಳುವುದಾಗಿ ಅಬಕಾರಿ ಇಲಾಖೆ ಆಯುಕ್ತರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ನಡವಳಿಯಿಂದ ಗೊತ್ತಾಗಿದೆ.
‘ಮದ್ಯ ಮಾರಾಟದ ಗುರಿಯನ್ನು ಹಂಚಿಕೆ ಮಾಡಿ ಸಾಧಿಸುವ ಬಗ್ಗೆ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರುಗಳಿಗೆ ಹೆಚ್ಚಿನ ಅನುಭವ ಇರುವುದರಿಂದ ಆಯಾ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರುಗಳಿಗೆ ಮದ್ಯ ಮಾರಾಟದ ಸಾಧನೆ ಜವಾಬ್ದಾರಿಯನ್ನು ನೀಡುವುದು ಉತ್ತಮ,’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
ರಾಜಸ್ವ ಸಂಗ್ರಹಣೆಯೇ ಇಲಾಖೆಯ ಮೂಲ ಧೈಯೋದ್ದೇಶವಾಗಿರುವ ಕಾರಣ ಆನ್ ಲೈನ್ ಮೂಲಕ ಮದ್ಯ ಮಾರಾಟ ಸಾಧಕ ಬಾಧಕಗಳ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲು ಸಭೆ ತೀರ್ಮಾನಿಸಿದೆ.
ಹಾಗೆಯೇ ‘ ರಾಜಸ್ವ ಸಂಗ್ರಹಣೆಯ ವಿಷಯದಲ್ಲಿ ಹಾಗೂ ಕರ್ತವ್ಯ ನಿರ್ವಹಣೆಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜೀ ಆಗುವುದಿಲ್ಲ. ಈ ವಿಷಯದಲ್ಲಿ ತೊಂದರೆಗಳೇನಾದರೂ ಇದ್ದಲ್ಲಿ ತನ್ನನ್ನು ನೇರವಾಗಿ ಸಂಪರ್ಕಿಸಿ ಪರಿಹಾರೋಪಾಯಗಳ ಬಗಗೆ ಚರ್ಚಿಸಲಾಗುವುದು,’ ಎಂಬ ಸೂಚನೆಯನ್ನು ನೀಡಿರುವುದು ನಡವಳಿಯಿಂದ ಗೊತ್ತಾಗಿದೆ.
2023-24ನೇ ಸಾಲಿನಲ್ಲಿ 35,000 ಕೋಟಿಗಳ ರಾಜಸ್ವ ಸಂಗ್ರಹಣೆಯನ್ನು ನಿರೀಕ್ಷಿಸಿದೆ. ಮೇ ಅಂತ್ಯಕ್ಕೆ 4,834.48 ಕೋಟಿಗಳಷ್ಟು ರಾಜಸ್ವ ಸಂಗ್ರಹಣೆಯಾಘಿತ್ತು. ಇದು ಆಯವ್ಯಯ ಗುರಿಗೆ ಶೇ.13.81ರಷ್ಟು ಸಾಧನೆಯಾಗಿತ್ತು. ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇ. 93.09 ಕೋಟಿಗಳಷ್ಟು ಹೆಚ್ಚಿನ ರಾಜಸ್ವ ಸಂಗ್ರಹಣೆಯಾಗಿತ್ತು.