ಕಟ್ಟಡ ಕಲ್ಲು ಅಕ್ರಮ ಸಾಗಾಣಿಕೆ; 520 ಕೋಟಿ ನಷ್ಟದ ಪೈಕಿ ವಸೂಲಾಗಿದ್ದು ಕೇವಲ 60.39 ಕೋಟಿ

ಬೆಂಗಳೂರು; ಖನಿಜ ರವಾನೆ ಪರವಾನಿಗೆ ಪಡೆಯದೇ ರಾಜ್ಯದ ಒಟ್ಟು 12 ಜಿಲ್ಲೆಗಳಲ್ಲಿ ಕಲ್ಲು ಗಣಿ ಗುತ್ತಿಗೆದಾರರು ಕಟ್ಟಡ ಕಲ್ಲನ್ನು ಸಾಗಾಣಿಕೆ ಮಾಡಿದ್ದರಿಂದಾಗಿ ಸರ್ಕಾರಕ್ಕೆ ನಷ್ಟವಾಗಿರುವ 520.0 ಕೋಟಿ ಪೈಕಿ ಕೇವಲ 60.39 ಕೋಟಿಯಷ್ಟನ್ನೇ ವಸೂಲು ಮಾಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಬಾಕಿ 459.61 ಕೋಟಿ ವಸೂಲಿಗೆ ಕಠಿಣ ಕ್ರಮಕೈಗೊಂಡಿಲ್ಲ.

 

ವಿವಿಧ ಪರವಾನಿಗೆ ಉಲ್ಲಂಘನೆಗಳಿಗಾಗಿ ರಾಜ್ಯದಲ್ಲಿ ಒಟ್ಟಾರೆ 6,105 ಕೋಟಿ ರು. ದಂಡ ವಿಧಿಸಲಾಗಿದ್ದು ಇದನ್ನ ಒಟಿಎಸ್‌ ಮೂಲಕ ಜಾರಿಗೊಳಿಸಲು ನಿರ್ಧಾರ ಕೈಗೊಂಡಿರುವ ಬೆನ್ನಲ್ಲೇ 459.61 ಕೋಟಿ ಬಾಕಿ ಉಳಿದಿರುವ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮಂಡಿಸಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ. ಇಲಾಖೆಯು ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ  ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಗೆ ಮಂಡಿಸಿರುವ ಅಂಕಿ ಅಂಶಗಳಲ್ಲಿ ಈ ವಿವರಗಳಿವೆ. ನಷ್ಟದ ಮೊತ್ತವನ್ನು ವಸೂಲು ಮಾಡುವ ಕುರಿತು ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್ ಅವರು ಕೆಲವು ಸಲಹೆಗಳನ್ನು ನೀಡಿದರು ಎಂದು ಗೊತ್ತಾಗಿದೆ. ಅಂಕಿ ಅಂಶಗಳನ್ನೊಳಗೊಂಡ ಪ್ರಾತ್ಯಕ್ಷಿಕೆಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಅವಧಿ ಮುಗಿದ ಎ ಮತ್ತು ಬಿ ಕೆಟಗರಿ ಹಾಗೂ ರದ್ದುಪಡಿಸಿರುವ ಸಿ ಕೆಟಗರಿ ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಇಲಾಖೆಯು ವಶಪಡಿಸಿಕೊಂಡು ದಾಸ್ತಾನಿರಿಸಿರುವ (ಹಳೆಯ ದಾಸ್ತಾನು) ಕಬ್ಬಿಣ ಅದಿರು ಹರಾಜು, ಚಾಲ್ತಿಯಲ್ಲಿರುವ ಉಪ ಖನಿಜ ಗಣಿಗುತ್ತಿಗೆಗಳಿಂದ ಒಟ್ಟಾರೆ 9,115.55 ಕೋಟಿ ರು. ಮೊತ್ತದಲ್ಲಿ ರಾಜಸ್ವ ಸಂಗ್ರಹಿಸಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅಂದಾಜಿಸಿದೆ.
ಅದೇ ರೀತಿ ಉಪ ಖನಿಜಗಳಮೇಲಿನ ರಾಜಧನವನ್ನು ಶೇ.15ರಷ್ಟು ಹೆಚ್ಚಿಸಲು ಇಲಾಖೆ ಚಿಂತಿಸಿದೆ. ಸರ್ಕಾರಿ ಸಂಸ್ಥೆಗಳ ಗಣಿಗಾರಿಕೆಗೆ ಹೆಚ್ಚುವರಿ ರಾಜಧನ ನಿಗದಿಪಡಿಸಿದ್ದು ಅದರಂತೆಯೇ ಹರಾಜೇತರ ಗುತ್ತಿಗೆಗಳಿಗೂ ಕನಿಷ್ಠ ಶೇ.22ರಷ್ಟು ಹೆಚ್ಚುವರಿ ಮೊತ್ತವನ್ನು ವಿಧಿಸಿದಲ್ಲಿ ಪ್ರತಿ ವರ್ಷ ಸರ್ಕಾರಕ್ಕೆ 1,000 ಕೋಟಿಗೂ ಅಧಿಕ ರಾಜಸ್ವ ಸಂಗ್ರಹವಾಗುವ ಸಾಧ್ಯತೆ ಇದೆ ಎಂದ ಅಂದಾಜಿಸಿದೆ.

 

ಗೃಹಲಕ್ಷ್ಮಿ ಸೇರಿದಂತೆ ಒಟ್ಟು 5 ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಿಸುವ ನಿಟ್ಟಿನಲ್ಲಿ ಲೆಕ್ಕಚಾರ ಮಾಡುತ್ತಿರುವ ಹೊತ್ತಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮಂಡಿಸಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ. ಇಲಾಖೆಯು ಸಭೆಗೆ ಮಂಡಿಸಿರುವ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

2023 ರ ಜುಲೈ 27ರ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಸಭೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ವಾರ್ಷಿಕ ರಾಜಸ್ವ ಸಂಗ್ರಹ ಗುರಿಯನ್ನು ಸಾಧಿಸಲು 9,115.55 ಕೋಟಿ ಸಂಗ್ರಹ ಗುರಿಯ ಲೆಕ್ಕಾಚಾರವನ್ನು ಮಂಡಿಸಿತ್ತು.

 

ರಾಜಸ್ವ ಗುರಿ ಸಾಧಿಸುವ ಸಂಬಂಧ ಹರಾಜು ಮಾಡಲಾದ ಕಬ್ಬಿಣ ಅದಿರಿನ ಬ್ಲಾಕ್‌ಗಳಿಗೆ ಎಂಎಂಡಿಆರ್‍‌ ಕಾಯ್ದೆ 1957ರ ಕಲಂ 8 ಬಿ ಅನ್ವಯ ಅರಣ್ಯ ಅನುಮತಿಗಳನ್ನು ವರ್ಗಾಯಿಸುವುದು, ಅರಣ್ಯ ಅನುಮತಿ ನೀಡುವ ಸಂದರ್ಭದಲ್ಲಿ ಪರಿಹಾರಾತ್ಮಕ ನೆಡುತೋಪುಗೆ ಭೂಮಿ ನೀಡುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಸಿ ವರ್ಗದ ಅದಿರಿನ ಬ್ಲಾಕ್‌ಗಳಿಗೆ ಸರ್ವೋಚ್ಛ ನ್ಯಾಯಾಲಯದ ಆದೇಶದ ಅನ್ವಯ ಅರಣ್ಯ ಅನುಮತಿಗಳನ್ನು ವರ್ಗಾಯಿಸಲು ಸಹಕಾರ ಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕೋರಿತ್ತು.

 

ಹಾಗೆಯೇ ಸಿ ವರ್ಗದ ಗಣಿ ಗುತ್ತಿಗೆ, ರದ್ದಾದ ಗಣಿ ಗುತ್ತಿಗೆಗಳು, ಸ್ಟಾಕ್‌ ಯಾರ್ಡ್‌ ಮತ್ತು ವಿವಿಧೆಡೆ ಜಫ್ತಿ ಮಾಡಲಾದ ಕಬ್ಬಿಣದ ಅದಿರನ್ನು ಹರಾಜು ಮೂಲಕ ವಿಲೇ ಮಾಡಲು ಕ್ರಮ ವಹಿಸುತ್ತಿರುವ ಇಲಾಖೆಯು ಕಬ್ಬಿಣ ಅದಿರಿನ ಪೈಕಿ 2.71 ಎಂಎಂಟಿ ಪ್ರಮಾಣದಷ್ಟು ಅದಿರು ಅರಣ್ಯ ಪ್ರದೇಶದಲ್ಲಿ ದಾಸ್ತಾನಿದೆ ಎಂದು ಸಭೆಗೆ ಮಾಹಿತಿ ಒದಗಿಸಿದೆ.

 

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಅವಧಿ ಮುಗಿದ ಎ ಮತ್ತು ಬಿ ಕೆಟಗರಿ ಹಾಗೂ ರದ್ದುಪಡಿಸಿರುವ ಸಿ ಕೆಟಗರಿ ಗಣಿ ಗುತ್ತಿಗೆ ಪ್ರದೇಶಗಳಲ್ಲಿ 5.89 ಎಂಎಂಟಿ ಪ್ರಮಾಣದಲ್ಲಿ ಕಬ್ಬಿಣ ಅದಿರನ್ನು ವಶಪಡಿಸಿಕೊಂಡು ಇಲಾಖೆಯು ದಾಸ್ತಾನಿನಲ್ಲಿರಿಸಿದೆ. ಇದನ್ನು ಹರಾಜು ಮಾಡಿದಲ್ಲಿ ಅಂದಾಜು 1,200.00 ಕೋಟಿ ರು ರಾಜಸ್ವ ಸಂಗ್ರಹಿಸಬಹುದು ಎಂದು ಇಲಾಖೆಯು ಅಂದಾಜಿಸಿದೆ.

 

ರದ್ದುಪಡಿಸಿರುವ ದಾಸ್ತಾನು ಕೇಂದ್ರಗಳಲ್ಲಿ ಪೊಲೀಸ್‌ ಠಾಣೆ ಮತ್ತು ರೈಲ್ವೆ ಯಾರ್ಡ್‌ಗಳಲ್ಲಿ 0.9 ಎಂಎಂಟಿ ಪ್ರಮಾಣದಲ್ಲಿರುವ ಕಬ್ಬಿಣ ಅದಿರನ್ನು ಇಲಾಖೆಯು ವಶಪಡಿಸಿಕೊಂಡಿದೆ. ಇದನ್ನು ಹರಾಜು ಹಾಕಿದಲ್ಲಿ 50.00 ಕೋಟಿ ರು., ಚಾಲ್ತಿಯಲ್ಲಿರುವ ಕಬ್ಬಿಣ ಅದಿರು ಗಣಿಗುತ್ತಿಗೆಗಳಿಂದ (ಹರಾಜು ಮತ್ತು ಹರಾಜು ರಹಿತ ಗಣಿ ಗುತ್ತಿಗೆಗಳು 42.19 ಎಂಎಟಿ) 3,664.00 ಕೋಟಿ ರು., ಹರಾಜು ಪ್ರಕ್ರಿಯೆ ಮುಗಿದಿರುವ 27 ಗಣೀ ಗುತ್ತಿಗೆ ಬ್ಲಾಕ್‌ಗಳಿಗೆ ಶಾಶನ ಬದ್ಧ ದಾಖಲೆಗಳು ಸಲ್ಲಿಕೆಯಾಗಿ ಗಣಿ ಕಾರ್ಯ ನಿರ್ವಹಿಸಿದ್ದಲ್ಲಿ (27 ಗಣಿ ಗುತ್ತಿಗೆ ಬ್ಲಾಕ್‌ಗಳ ಪೈಕಿ ಪ್ರಸ್ತುತ ಸಾಲಿನಲ್ಲಿ 12 ಬ್ಲಾಕ್‌ಗಳಲ್ಲಿ 9 ಕಬ್ಬಿಣ ಅದಿರು, 3 ಸುಣ್ಣದ ಕಲ್ಲು- 4.607 ಎಂಎಂಟಿ) 589.55 ಕೋಟಿ ರು., ಇತರೆ ಮುಖ್ಯ ಖನಿಜಗಳಿಂದ (ಸುಣ್ಣದ ಕಲ್ಲು ಮತ್ತು ಚಿನ್ನದ ಅದಿರು- 33.46 ಎಂಎಂಟಿ) 342.00 ಕೋಟಿ ರು.ಗಳ ರಾಜಸ್ವ ಸಂಗ್ರಹಿಸಬಹುದು ಎಂದು ಅಂಕಿ ಅಂಶಗಳ ವಿವರಗಳನ್ನು ಮಂಡಿಸಿರುವುದು ತಿಳಿದು ಬಂದಿದೆ.

 

ಚಾಲ್ತಿ ಉಪ ಖನಿಜ ಗಣಿ ಗುತ್ತಿಗೆಗಳಿಂದ 2,600 ಕೋಟಿ ರು., ಉಪ ಖನಿಜಗಳಮೇಲಿನ ರಾಜಧನವನ್ನು ಶೇ.15ರಷ್ಟು ಹೆಚ್ಚಿಸಿದಲ್ಲಿ 390.00 ಕೋಟಿ ರು., ಹೊಸ ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ಮತ್ತು ಬಾಕಿ ವಸೂಲಾತಿಯಿಂದ 300.00 ಕೋಟಿ ರು.ಗಳ ರಾಜಸ್ವ ಸಂಗ್ರಹಿಸಬಹುದು ಎಂದು ಅಂದಾಜಿಸಿದೆ.

 

ಬಳ್ಳಾರಿ ಜಿಲ್ಲೆಯಲ್ಲಿ ಎ ಮತ್ತು ಬಿ ವರ್ಗದ ಗಣಿ ಗುತ್ತಿಗೆ (11)ಗಳಲ್ಲಿ 481209 ಟನ್‌, ಸಿ ವರ್ಗ (41)ದಲ್ಲಿ 1327214 ಪ್ರಮಾಣದಲ್ಲಿ ಕಬ್ಬಿಣ ಅದಿರು ದಾಸ್ತಾನಿದೆ. ಅದೇ ರೀತಿ ಇದೇ ಜಿಲ್ಲೆಯಲ್ಲಿ ಎ ಮತ್ತು ಬಿ ವರ್ಗದಲ್ಲಿ (4) 125856 ಟನ್‌, ಸಿ ವರ್ಗದಲ್ಲಿ (2) 903 ಟನ್‌ನಷ್ಟು ಮ್ಯಾಂಗನೀಸ್‌ ಅದಿರು ದಾಸ್ತಾನಿದೆ. ವಿಜಯನಗರ ಜಿಲ್ಲೆಯಲ್ಲಿ ಎ ಮತ್ತು ಬಿ (23) 196186.62 ಟನ್‌, ಸಿ ವರ್ಗದಲ್ಲಿ (6) 97009 ಟನ್‌, ಚಿತ್ರದುರ್ಗ ಜಿಲ್ಲೆಯಲ್ಲಿ ಎ ಮತ್ತು ಬಿ (9) 11850 ಟನ್‌ ಸೇರಿದಂತೆ ಒಟ್ಟಾರೆ 815101.62 ಟನ್‌ನಷ್ಟು, ತುಮಕೂರು ಜಿಲ್ಲೆಯಲ್ಲಿ ಸಿ ವರ್ಗ (112) ಟನ್‌ ಅದಿರು ಸೇರಿದಂತೆ ಒಟ್ಟಾರೆ 1880587.3 ಟನ್‌ನಷ್ಟು ಅದಿರು ಇದೆ ಎಂದು ಇಲಾಖೆಯು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

ಎಂಎಂಡಿಆರ್‍‌ ಕಾಯ್ದೆಗೆ ತಿದ್ದುಪಡಿ ತಂದು ನವೀಕರಣ ಪದ್ಧತಿ ಕೈ ಬಿಟ್ಟು ಚಾಲ್ತಿ ಗಣಿ ಗುತ್ತಿಗೆಗಳ ಅವಧಿ ವಿಸ್ತರಿಸಲು ನಿಯಮಗಳಲ್ಲಿ ಅವಕಾಶ ಕಲ್ಪಿಸಿದೆ. ಈ ಗಣಿ ಗುತ್ತಿಗೆಗಳಿಂದ ಸರ್ಕಾರಕ್ಕೆ ರಾಜಧನ ಮಾತ್ರ ಸಂದಾಯವಾಗುತ್ತಿದೆ. ಎಂಎಂಡಿಆರ್‍‌ ತಿದ್ದುಪಡಿ ಕಾಯ್ದೆ 2015 ಅನ್ವಯ ಗಣಿ ಗುತ್ತಿಗೆಗಳನ್ನು ಹರಾಜು ಮೂಲಕವೇ ವಿಲೇ ಮಾಡುತ್ತಿದ್ದರೂ ಈ ಪ್ರಕರಣಗಳಲ್ಲಿ ಸರ್ಕಾರಕ್ಕೆ ರಾಜಧನ ಜತೆ ಹರಾಜು ಮೊತ್ತವೂ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿದೆ. ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ಗಣಿ ಪ್ರದೇಶಗಳು ಐಬಿಎಂ ಪ್ರಕಟಿಸುವ ಬೆಲೆ ಮೇಲೆ ಕನಿಷ್ಠ ಶೇ. 26ರಿಂದ ಶೇ. 145.80 ಗೆ ಹರಾಜಾಗಿದೆ ಎಂದು ಗೊತ್ತಾಗಿದೆ.

 

‘ಇತ್ತೀಚೆಗೆ ಭಾರತ ಸರ್ಕಾರವು 2021ರ ಮಾರ್ಚ್‌ 28ರಂದು ಎಂಎಂಡಿಆರ್‍‌ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರಿ ಸ್ವಾಮ್ಯದ ಗಣಿ ಗುತ್ತಿಗೆ ಅವಧಿ ವಿಸ್ತರಿಸಿದ್ದಲ್ಲಿ ಐಬಿಎಂ ಪ್ರಕಟಿಸುವ ಬೆಲೆಯ ಮೇಲೆ ಹೆಚ್ಚುವರಿಯಾಗಿ ಶೇ.22.5ರಷ್ಟು ಮೊತ್ತವನ್ನು ಸರ್ಕಾರಕ್ಕೆ ಸಂದಾಯ ಮಾಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಹರಾಜೇತರ ಗಣೀ ಗುತ್ತಿಗೆಗಳಿಗೆ ಕನಿಷ್ಠ ಶೇ.22ರಷ್ಟು ಹೆಚ್ಚುವರಿ ಮೊತ್ತವನ್ನು ವಿಧಿಸಿದಲ್ಲಿ ಪ್ರತಿ ವರ್ಷ ಸರ್ಕಾರಕ್ಕೆ 1,000 ಕೋಟಿಗೂ ಅಧಿಕ ರಾಜಸ್ವ ಸಂಗ್ರಹವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರವನ್ನು ಎಂಎಂಡಿಆರ್‍‌ ಕಾಯ್ದೆಗೆ ತಿದ್ದುಪಡಿ ಅಥವಾ ಈ ಸಂಬಂಧಿಸಿಂತೆ ನಿರ್ದೇಶನ ನೀಡಲು ಪ್ರಸ್ತಾವನೆ ಸಲ್ಲಿಸಬಹುದು,’ ಎಂದು ಇಲಾಖೆಯು ಸಲಹೆ ನೀಡಿರುವುದು ತಿಳಿದು ಬಂದಿದೆ.

 

ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಹೆಚ್ಚುವರಿಯಾಗಿ 127 ಎಂಎಂಟಿ ಹಾಗೂ ಗುತ್ತಿಗೆ ಪ್ರದೇಶದ ಹೊರಗಡೆ 75 ಎಂಎಂಟಿ ಕಟ್ಟಡ ಕಲ್ಲನ್ನು ತೆಗೆದು ಸಾಗಾಣಿಕೆ ಮಾಡಿದ್ದು ಈ ಪ್ರಾಣದಕ್ಕೆ ರಾಜಧನದ 05 ಪಟ್ಟು ದಂಡ ವಿಧಿಸಲಾಗಿದೆ. ಈ ಪ್ರಕ್ರಿಯೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ರಾಜಧನ ಪ್ರತಿ ಮೆಟ್ರಿಕ್‌ ಟನ್‌ಗೆ 60 ರು. ನಂತೆ ಈ ಪ್ರಮಾಣಕ್ಕೆ ಅಂದಾಜು 1,200 ಕೋಟಿ ರಾಜಧನ ಮತ್ತು ಇದೇ ಪ್ರಮಾಣಕ್ಕ 05 ಪಟ್ಟು ರಾಜಧನ ವಿಧಿಸಿದರೆ ಒಟ್ಟು ಅಂದಾಜು ದಂಡದ ಮೊತ್ತವು 6,105 ಕೋಟಿ ರುಗಳಾಗುತ್ತವೆ ಎಂದು ಅಂದಾಜಿಸಿದೆ.

the fil favicon

SUPPORT THE FILE

Latest News

Related Posts