ರಾಜಕೀಯ ಕಾರ್ಯದರ್ಶಿ, ಕಾನೂನು, ಮುಖ್ಯ ಸಲಹೆಗಾರರ ನೇಮಕ; ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗುವುದೇ?

ಬೆಂಗಳೂರು; ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿ ಮತ್ತು ಸಲಹೆಗಾರರಂತಹ ಕ್ಯಾಬಿನೆಟ್‌ ಸಚಿವರು ಮತ್ತು ಸಚಿವರ ಹುದ್ದೆಗಳ ರಚನೆಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಸಲಹೆಗಾರರ ಹುದ್ದೆ ಸೃಷ್ಟಿಸಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವ ಕ್ರಮದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಸಲಹೆಗಾರರು ಮತ್ತು ಇಬ್ಬರು ರಾಜಕೀಯ ಕಾರ್ಯದರ್ಶಿಗಳನ್ನು ನೇಮಿಸಿರುವುದು ಹೈಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

 

ಈ ಅರ್ಜಿಯ ವಿಚಾರಣೆಯು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರ ಪೀಠದ ಮುಂದೆ ಇರುವಾಗಲೇ ಸುನೀಲ್‌ ಕುನಗೋಳು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಸಲಹೆಗಾರರನ್ನಾಗಿ, ವಿಧಾನ ಪರಿಷತ್‌ ಸದಸ್ಯ ನಸೀರ್‍‌ ಅಹ್ಮದ್‌, ಕೆ ಗೋವಿಂದ ರಾಜು ಅವರನ್ನು ರಾಜಕೀಯ ಕಾರ್ಯದರ್ಶಿಗಳನ್ನಾಗಿ ಹಾಗೂ ಶಾಸಕ ಎ ಎಸ್‌ ಪೊನ್ನಣ್ಣ ಅವರನ್ನು ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರನ್ನಾಗಿ, ಕೆ ವಿ ಪ್ರಭಾಕರ ಅವರನ್ನು ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿರುವುದು ಮುನ್ನೆಲೆಗೆ ಬಂದಿದೆ.

 

ಸಮಾಜ ಪರಿವರ್ತನಾ ಸಮುದಾಯವು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌ ಕಿಣಗಿ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟೀಸ್‌ ನೀಡಿತ್ತು. ಸದ್ಯ ಈ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ಪೀಠದ ಮುಂದಿದೆ.

 

ರಾಜಕೀಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳ ಸಲಹೆಗಾರರಂತಹ ಕ್ಯಾಬಿನೆಟ್ ಸಚಿವರು ಮತ್ತು ಸಚಿವರ ಹುದ್ದೆಗಳ ರಚನೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

 

ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿಜೆಪಿಯ ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದು, ಬೇಳೂರು ಸುದರ್ಶ ಅವರನ್ನು ಸಲಹೆಗಾರರಾಗಿ (ಇ-ಆಡಳಿತ) ಮತ್ತು ಕೇದಾರನಾಥ ಮುದ್ದಾ ಅವರನ್ನು ನೇಮಿಸಿದ್ದನ್ನೂ ಅರ್ಜಿದಾರರು ಪ್ರಶ್ನಿಸಿದ್ದಾರೆ. ಸಿಎಂಗೆ ಸಲಹೆಗಾರರಾಗಿ (ವಾಣಿಜ್ಯ, ಕೈಗಾರಿಕೆಗಳು ಮತ್ತು ಹೂಡಿಕೆಗಳು). ಈ ನಾಲ್ವರಿಗೂ ನೋಟಿಸ್ ಜಾರಿ ಮಾಡುವಂತೆಯೂ ಪೀಠ ಆದೇಶಿಸಿತ್ತು.

 

2023ರ ಜನವರಿ13ರಂದು ಸಲ್ಲಿಕೆಯಾಗಿದ್ದ ಈ ಅರ್ಜಿಯು ಕ್ರಮವಾಗಿ ಜನವರಿ 22, ಜನವರಿ 31, ಫೆಬ್ರುವರಿ 13 ಮತ್ತು ಮೇ 30 ರಂದು ವಿಚಾರಣೆಗೆ ಬಂದಿತ್ತು. ಈ ಅರ್ಜಿಯು 2024ರ ನವೆಂಬರ್‍‌ 11ಕ್ಕೆ ವಿಚಾರಣೆಗೆ ನಿಗದಿಯಾಗಿರುವುದು ಹೈಕೋರ್ಟ್ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.

 

ಹಿಂದಿನ ಬಿಜೆಪಿ ಸರ್ಕಾರವು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಡಿ ಎನ್‌ ಜೀವರಾಜ್‌ ಅವರನ್ನು ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ರಾಜಕೀಯ ಕಾರ್ಯದರ್ಶಿ ಮತ್ತು ಬೇಳೂರು ಸುದರ್ಶನ್‌ ಅವರನ್ನು ಸಲಹೆಗಾರರನ್ನಾಗಿ ನೇಮಿಸಿದ್ದನ್ನು ಎಸ್‌ ಆರ್‍‌ ಹಿರೇಮಠ್‌ ಅವರು ಮುನ್ನೆಡೆಸುವ ಸಮಾಜ ಪರಿವರ್ತನಾ ಸಮುದಾಯವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (581/2023) ಸಲ್ಲಿಸಿ ಈ ಎಲ್ಲಾ ನೇಮಕಾತಿಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿತ್ತು.

 

ಅದೇ ರೀತಿ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ಎನ್‌ ಆರ್‍‌ ಸಂತೋಷ್‌ ಅವರನ್ನು ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದನ್ನು ಪ್ರಶ್ನಿಸಿದ್ದ ಮತ್ತೊಬ್ಬ ವಕೀಲ ಉಮಾಪತಿ ಅವರೂ ಸಹ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

 

ರಾಜ್ಯ ಸಚಿವರು ಮತ್ತು ಕ್ಯಾಬಿನೆಟ್ ಸಚಿವರ ಶ್ರೇಣಿಯ ಈ ಹುದ್ದೆಗಳನ್ನು ರಚಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವ ಸಂಪುಟದಲ್ಲಿನ ಮಂತ್ರಿಗಳ ಸಂಖ್ಯೆಯನ್ನು ಪರಿಚ್ಛೇದದ ಅಡಿಯಲ್ಲಿ ಸೀಮಿತಗೊಳಿಸುವ ಸಾಂವಿಧಾನಿಕ ನಿಬಂಧನೆಯನ್ನು ತಪ್ಪಿಸುವ ಸ್ಪಷ್ಟ ಪ್ರಯತ್ನವಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು. ಪ್ರತಿವಾದಿಗಳಾಗಿರುವ ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಡಿ ಎನ್ ಜೀವರಾಜ್, ಬೇಳೂರು ಸುದರ್ಶನ್ ಮತ್ತು ಕೇದಾರನಾಥ ಮುದ್ದಾ ಅವರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.

 

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಇನ್ನೂ ಬೇಳೂರು ಸುದರ್ಶನ್ (ಇ-ಆಡಳಿತ ವಿಭಾಗ) ಮತ್ತು ಕೇದಾರನಾಥ ಮುದ್ದಾ (ವಾಣಿಜ್ಯ ಕೈಗಾರಿಕೆ ಇಲಾಖೆಯ) ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನ ಮಾನ ನೀಡಲಾಗಿದೆ. ಈ ರೀತಿ ರಾಜಕೀಯ ಕಾರ್ಯದರ್ಶಿಗಳು ಹಾಗೂ ಸಲಹೆಗಾರರನ್ನಾಗಿ ನೇಮಕ ಮಾಡಿರುವ ಸರ್ಕಾರದ ಕ್ರಮ ಸಂವಿಧಾನಬಾಹಿರವಾಗಿದೆ ಎಂದು ಆಕ್ಷೇಪಿಸಿದ್ದರು.

 

ರಾಜ್ಯ ಸರ್ಕಾರ ತನ್ನ ನಿಷ್ಠಾವಂತ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಸಚಿವ ಸಂಪುಟ ದರ್ಜೆಗೆ ಸಮಾನವಾದ ಹುದ್ದೆ ಕಲ್ಪಿಸುವುದು ತಂತ್ರಗಾರಿಕೆ ಭಾಗವಾಗಿದೆ. ಅಲ್ಲದೆ, ನೇಮಕಾತಿಗಳಲ್ಲಿ ಸರ್ಕಾರಕ್ಕೆ ನೀಡಿರುವ ಅಧಿಕಾರದ ಉಲ್ಲಂಘನೆಯಾಗಿದೆ. ಜತೆಗೆ, ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ. ಆದ್ದರಿಂದ, ನೂತನವಾಗಿ ಸೃಷ್ಟಿ ಮಾಡಿರುವ ಈ ನಾಲ್ಕು ಹುದ್ದೆಗಳನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

 

ಭಾರತದ ಸಂವಿಧಾನದ 164(1)(A) ಪ್ರಕಾರ “ಈ ನೇಮಕಾತಿಗಳ ಅಧಿಸೂಚನೆಗಳು ಅನುಚ್ಛೇದ 162 ರ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ವಹಿಸಲಾದ ಕಾರ್ಯನಿರ್ವಾಹಕ ಅಧಿಕಾರದ ಉಪ ಉತ್ಪನ್ನ ವರ್ಣರಂಜಿತ ವ್ಯಾಯಾಮವಾಗಿದೆ ಮತ್ತು ಈ ನೇಮಕಾತಿಗಳು ರಾಜಕೀಯ ಗುರಿಗಳನ್ನು  ಹಾಳುಮಾಡುತ್ತವೆ ಮತ್ತು ನೈಜ ಆಡಳಿತವನ್ನು ಸಾಧಿಸಲು ಯಾವುದೇ ಸಂಬಂಧವನ್ನು ಹೊಂದಿಲ್ಲ” ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

 

ಸಂವಿಧಾನದ 162 ನೇ ವಿಧಿಯ ಅಡಿಯಲ್ಲಿ ಕಾರ್ಯನಿರ್ವಾಹಕ ಆದೇಶವು ಸಾಂವಿಧಾನಿಕ ಹುದ್ದೆಗೆ ಸಮಾನವಾದ ಹುದ್ದೆಯನ್ನು ರಚಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತ್ತಲ್ಲದೇ “ಸರ್ಕಾರವು ತನ್ನ ನಿಷ್ಠಾವಂತರು ಮತ್ತು ಲಾಬಿ ಮಾಡುವವರನ್ನು ಮೆಚ್ಚಿಸಲು ವಾಸ್ತವಿಕವಾಗಿ ಸಮಾನಾಂತರ ಹುದ್ದೆಯನ್ನು ಸೃಷ್ಟಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

 

ರಾಜಕೀಯ ಕಾರ್ಯದರ್ಶಿಗೆ ಒಬ್ಬ ಆಪ್ತ ಕಾರ್ಯದರ್ಶಿ ಸೇರಿ 11 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಈ ಎಲ್ಲಾ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜಕೀಯ ಕಾರ್ಯದರ್ಶಿಗಳಿಗೆ ವಿಧಾನಸೌಧದಲ್ಲಿ ಕೊಠಡಿ ಮತ್ತು ವಾಹನ ಸೌಲಭ್ಯವೂ ಇರುತ್ತದೆ. ಅಲ್ಲದೇ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳು ಲಭ್ಯವಾಗಲಿವೆ.

 

ಈ ಹುದ್ದೆಗಳ ಸೃಷ್ಟಿಯು ಗುರಿಯಿಲ್ಲದ, ಅರ್ಥಹೀನ ಮತ್ತು ಶಕ್ತಿಹೀನವಾಗಿದೆ ಮತ್ತು ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯನ್ನು ಮಾತ್ರ ಉಂಟುಮಾಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

SUPPORT THE FILE

Latest News

Related Posts