702 ಕೋಟಿ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ; ಆರ್ಥಿಕ ಇಲಾಖೆ ನೆನಪೋಲೆಗಳಿಗೆ ಕಿಮ್ಮತ್ತಿಲ್ಲ

ಬೆಂಗಳೂರು; ತುಂಗಾ ಮೇಲ್ದಂಡೆ ಯೋಜನೆ ಕಾಮಗಾರಿ ಕೈಗೆತ್ತಿಕೊಂಡಿದ್ದ ಕರ್ನಾಟಕ ನೀರಾವರಿ ನಿಗಮವು ಪರಿಷ್ಕೃತ ಅಂದಾಜಿಗೆ ಅನುಮೋದನೆ ತೆಗೆದುಕೊಳ್ಳಲು ಆರ್ಥಿಕ ಇಲಾಖೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಅನುಮೋದನೆಯನ್ನೂ ಪಡೆದಿರಲಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಸರ್ಕಾರದ ಅನುಮೋದನೆಯಿಲ್ಲದೆಯೇ ಹೆಚ್ಚುವರಿಯಾಗಿ 702.12 ಕೋಟಿ ರು.ಗೂ ಅಧಿಕ ವೆಚ್ಚ ಮಾಡಿರುವುದು ಬಹಿರಂಗವಾದ ಬೆನ್ನಲ್ಲೇ ಅನುಮೋದನೆ ಪಡೆಯಲು ಆರ್ಥಿಕ ಇಲಾಖೆ ನೀಡಿದ್ದ ಸೂಚನೆಯನ್ನೂ ನಿಗಮವು ಪಾಲಿಸಿರಲಿಲ್ಲ ಎಂಬುದು ಮುನ್ನೆಲೆಗೆ ಬಂದಿದೆ. ಈ ಸಂಬಂಧ ‘ದಿ ಫೈಲ್‌’ ಸಮಗ್ರ ದಾಖಲೆಗಳನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

‘ಈಗಾಗಲೇ ಅನುಮೋದಿತ ಮೊತ್ತವು 2,561.88 ಕೋಟಿಗಳಾಗಿದ್ದು 2,782.47ಕೋಟಿ ವೆಚ್ಚ ಭರಿಸಲಾಗಿದೆ. ಅದರಂತೆ 220.59 ಕೋಟಿಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿರುತ್ತದೆ. ಆರ್ಥಿಕ ಇಲಾಖೆಯಿಂದ ಪರಿಷ್ಕೃತ ಅಂದಾಜಿಗೆ ಅನುಮೋದನೆ ತೆಗೆದುಕೊಳ್ಳಲು ಹಲವು ಬಾರಿ ತಿಳಿಸಿದಾಗಲೂ ಸಹ ಯಾವುದೇ ಅನುಮೋದನೆಯನ್ನು ಪಡೆಯದೇ ಯಾವ ಆಧಾರದ ಮೇಲೆ 220.59 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿರುತ್ತದೆ ಹಾಗೂ  ಇದನ್ನು ಯಾವ ಅನುದಾನ/ಲೆಕ್ಕ ಶೀರ್ಷಿಕೆಯಿಂದ ಭರಿಸಲಾಗಿದೆ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಆಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಲಗುರ್ಕಿ ಅವರು 2019ರ ಜುಲೈ 30ರಂದೇ ಟಿಪ್ಪಣಿಯಲ್ಲಿ ದಾಖಲಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಅದೇ ರೀತಿ ಪ್ರಸ್ತಾಪಿತ ಮೊತ್ತವು 3,395.02 ಕೋಟಿಗಳಾಗಿದ್ದು ಈಗಾಗಲೇ 2,782.47ಕೋಟಿ ವೆಚ್ಚ ಭರಿಸಲಾಗಿದ ಎಂದು ನಿಗಮವು ತಿಳಿಸಿತ್ತು. ಅದರಂತೆ 612.55 ಕೋಟಿ ಬಾಕಿ ಕಾಮಗಾರಿ ಉಳಿಕೆಯಾಗಬೇಕಿತ್ತು. ಆದರೆ ಪ್ರಸ್ತಾವನೆಯಲ್ಲಿ 770.16 ಕೋಟಿಗಳೆಂದು ತಿಳಿಸಿತ್ತು. ಒಟ್ಟು 157.61 ಕೋಟಿ ರು. ವ್ಯತ್ಯಾಸ ಕಂಡುಬಂದಿತ್ತು. ಆರ್ಥಿಕ ಇಲಾಖೆಯು ಈ ವ್ಯತ್ಯಾಸಕ್ಕೆ ಸ್ಪಷ್ಟೀಕರಣ ಕೇಳಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಸಚಿವ ಸಂಪುಟಕ್ಕೆ ಕಡತ ಮಂಡಿಸುವ ಮುನ್ನ ಸಚಿವ ಗೋವಿಂದ ಕಾರಜೋಳ ಅವರೂ ಆರ್ಥಿಕ ಇಲಾಖೆಯ ನೆನಪೋಲೆಗಳತ್ತ ಗಮನಹರಿಸಿಲ್ಲ ಎಂದು ಗೊತ್ತಾಗಿದೆ.

 

ಹಾಗೆಯೇ ಪ್ರಸ್ತಾವನೆಯಲ್ಲಿ 770.16 ಕೋಟಿ ಉಳಿಕೆ ಕಾರ್ಯಭಾರ ಎಂದು ನಿಗಮವು ಹೇಳಿತ್ತು. ಕರಡು ಸಚಿವ ಸಂಪುಟ ಟಿಪ್ಪಣಿಯ ಕಂಡಿಕೆ 6ರಲ್ಲಿ 833.14 ಕೋಟಿ ರು ಹೆಚ್ಚುವರಿ ಎಂದು ತೋರಿಸಿತ್ತು. ಆದರೆ 770.16 ಕೋಟಿಗಳನ್ನು ಮಾತ್ರ ಕೇಂದ್ರ ಮತ್ತು ರಾಜ್ಯದ ಪಾಲನ್ನು ಲೆಕ್ಕ ಹಾಕಲು ಪರಿಗಣಿಸಲಾಗಿತ್ತು. ಉಳಿಕೆ ಮೊತ್ತ 62.98 ಕೋಟಿ ಮೊತ್ತವನ್ನು ಯಾವ ಮೂಲದಿಂದ ಭರಿಸಲಾಗುವುದು ಮತ್ತು ಈ ಮೊತ್ತವನ್ನು ಕೈಬಿಡಲು ಕಾರಣಗಳೇನು ಎಂದೂ ಆರ್ಥಿಕ ಇಲಾಖೆಯು ವಿವರಣೆ ಬಯಸಿ ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿತ್ತು.

 

ಈ ಯೋಜನೆಯು 2014-15ನೇ ಸಾಲಿನಿಂದ ಕೇಂದ್ರ ಪುರಸ್ಕೃತ ಎಐಬಿಪಿ ಅನುದಾನದಡಿ ಸೇರ್ಪಡೆಯಾಗಿತ್ತು. ಯೋಜನೆಯ ಅನುಮೋದಿತ ಮೊತ್ತವು 2,561.88 ಕೋಟಿ ರು.ಗಳಾಗಿತ್ತು. ಈ ಪೈಕಿ ಸಿಬ್ಬಂದಿ ವೆಚ್ಚವನ್ನು ಹೊರತುಪಡಿಸಿ ಕಾಮಗಾರಿ ಅಂದಾಜು ಮೊತ್ತ 2,3342.33 ಕೋಟಿ ರುಗಳಾಗಿತ್ತು.

 

ಎಐಬಿಪಿ ಅಡಿ ಸೇರ್ಪಡೆಗೊಳ್ಳುವ ಸಮಯದಲ್ಲಿ ಅಂದರೆ 2014ರ ಮಾರ್ಚ್‌ 31ರ ಅಂತ್ಯಕ್ಕೆ 1,572.07 ಕೋಟಿ ರು. ವೆಚ್ಚವಾಗಿತ್ತು. 2017-18ನೇ ಸಾಲಿನ ದರಪಟ್ಟಿಯಂತೆ ತಯಾರಿಸಿದ ಅಂದಾಜು ಮೊತ್ತ 3,395.02 ಕೋಟಿ ರು ಗಳಾಗಿತ್ತು. 2018-19ನೇ ಸಾಲಿನ ಅಂತ್ಯದವರೆಗಿನ ವೆಚ್ಚವು 2,782.47 ಕೋಟಿ ರು.ಗಳಾಗಿತ್ತು. ಅದರಂತೆ ಉಳಿಕೆ ಮೊತ್ತ 612.55 ಕೋಟಿ ರು. ಎಂದು ನಿಗಮವು ಮಾಹಿತಿ ಒದಗಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts