ಕಲ್ಲಿದ್ದಲು ಹರಾಜು ಹಗರಣ; ಗೋಯೆಂಕಾ ಗೆಲ್ಲಲು ಮೋದಿ ಸರ್ಕಾರ, ಅನುವು ಮಾಡಿಕೊಟ್ಟಿದ್ಹೇಗೆ?

photo credit;startuptalky

ಪಶ್ಚಿಮ ಬಂಗಾಳದ  ಸರಿಸಟೋಳಿ ಕಲ್ಲಿದ್ದಲು ಗಣಿಯ ಹರಾಜಿನಲ್ಲಿ ಭಾಗವಹಿಸಿದ್ದ  ಸಂಜೀವ್‌ ಗೋಯೆಂಕಾ ಕಂಪನಿ(ಆರ್‌ಪಿಎಸ್‌ಜಿ)ಯು ಹೂಡಿದ್ದ ತಂತ್ರಗಾರಿಕೆ ಮತ್ತು ಹರಾಜು ಪ್ರಕ್ರಿಯೆಯ ಹಿಂದಿನ ರಹಸ್ಯಗಳನ್ನು ಹೊರಗೆಡವಿರುವ  ರಿಪೋಟರ್ಸ್‌ ಕಲೆಕ್ಟಿವ್‌ (ಲಾಭದಾಯಕವಲ್ಲದ ಸಂಸ್ಥೆ) ತಂಡದ ತನಿಖಾ ಪತ್ರಕರ್ತರು  ಇಡೀ ಹಗರಣದ ಜಾಲವನ್ನು  ಬೇಧಿಸಿದ್ದಾರೆ.

 

ಸಿಎಜಿ ವರದಿಯನ್ನೂ ಕಸದಬುಟ್ಟಿಗೆ ಎಸೆದು ಆರ್‌ಪಿಎಸ್‌ಜಿ ಸಮೂಹದ ಕಂಪನಿ ಮತ್ತು ಒಂದೇ ಗುಂಪಿಗೆ ಸೇರಿದ ಮೂರು ಕಂಪನಿಗಳು ಶೂನ್ಯ ಸಂಪಾದನೆಯ ಕಂಪನಿಗಳಾಗಿದ್ದವು ಮತ್ತು  ದೋಷಪೂರಿತ ನಿಯಮಗಳನ್ನೂ   ಪತ್ತೆ ಹಚ್ಚಿದ್ದಾರೆ. ಈ  ತನಿಖಾ ವರದಿಯು ಕನ್ನಡದ ತನಿಖಾ ಸುದ್ದಿ ಜಾಲತಾಣ ‘ದಿ ಫೈಲ್‌’  ಸಹಯೋಗದಲ್ಲಿ  ಎರಡು ಕಂತುಗಳಲ್ಲಿ ಪ್ರಕಟಗೊಳ್ಳಲಿದೆ.  ಮೊದಲ ಕಂತಿನ ತನಿಖಾ ವರದಿಯನ್ನು ಇಲ್ಲಿ ಕೊಡಲಾಗಿದೆ.

…………………………………………………………………………………………………………………………………………….

ಹೊಸದೆಹಲಿ;  2015 ಜನವರಿ 31 ರಂದು ಕಲ್ಲಿದ್ದಲು ಸಚಿವಾಲಯವು ಪಶ್ಚಿಮ ಬಂಗಾಳದ  ಸರಿಸಟೋಳಿ ಕಲ್ಲಿದ್ದಲು ಗಣಿಯ ಹರಾಜು ಪ್ರಕ್ರಿಯೆಯ ಪ್ರಕಟಣೆ ನೀಡಿತು. ಒಂದೂವರೆ ಗಂಟೆ ಒಳಗೆ ಒಂದು ಕಾರ್ಪೋರೇಟ್‌ ಸಂಸ್ಥೆ ಮೊದಲ ಬಿಡ್‌ ಮಾಡಿತು. ಇನ್ನೊಂದು ಸಂಸ್ಥೆ ಹೀಗೆ ಅರ್ಜಿ ಹಾಕಿ ಹಾಗೆ ಮರೆಯಾಯಿತು,. ಉಳಿದ ಮೂರು ಸಂಸ್ಥೆಗಳು ಬಿಡ್‌ ಮಾಡಲೇ ಇಲ್ಲ. ಈ ಹರಾಜು ಗೆದ್ದ ಕಂಪೆನಿಯೂ ಸೇರಿ ಮೂರೂ ಕಂಪೆನಿಗಳು ಒಂದೇ ಗುಂಪಿಗೆ ಸೇರಿದ್ದವು. (RP-Sanjiv Goenka (RPSG) group)

 

ಈ ಗೋಯೆಂಕಾ ಉಪ ಸಂಸ್ಥೆಗಳಲ್ಲಿ ಒಂದು ಬಿಡ್‌ ಮಾಡಲೇ ಇಲ್ಲ. ಇನ್ನೊ೦ದು ಮೂಲ ಕಂಪೆನಿಯ ವಿಳಾಸವನ್ನೇ ಹೊಂದಿತ್ತು! ಮಹಾ ಲೇಖಪಾಲರ ಪ್ರಕಾರ ಈ ರೀತಿಯ ಹರಾಜು ಪ್ರಕ್ರಿಯೆಗೆ ಪಾರದರ್ಶಕತೆಯೂ ಇರುವುದಿಲ್ಲ. ರಹಸ್ಯವೂ ಇರುವುದಿಲ್ಲ. ಕಲ್ಕತ್ತಾ ವಿದ್ಯುತ್‌ ಸರಬರಾಜು ಕಂಪೆನಿ ( CESC̲ ಗೊಯೆಂಕಾ ಕಂಪೆನಿ) ಈ ಹಿಂದೆ ಈ  ಗಣಿ ಲೈಸನ್ಸ್‌ ಹೊಂದಿತ್ತು. ಹಗರಣದ ವಾಸನೆಯ ಕಾರಣಕ್ಕೆ ಸುಪ್ರೀಂ ಕೋರ್ಟು ಈ ಲೈಸನ್ಸನ್ನು ರದ್ದುಗೊಳಿಸಿತ್ತು.

 

ಮೋದಿ ಆಡಳಿತಕ್ಕೆ ಬಂದಿದ್ದೇ ಎಲ್ಲಾ ಸ್ಪರ್ಧಾತ್ಮಕ ನಿಯಮಗಳನ್ನು ಗಾಳಿಗೆ ತೂರಿ ಈ ಗಣಿಗಳನ್ನು ಕಾರ್ಪೊರೇಟುಗಳಿಗೆ ಧಾರೆ ಎರೆಯುವ ಪ್ರಕ್ರಿಯೆ ಆರಂಭಿಸಿತು. ಸಿಎಜಿ ತನ್ನ ವರದಿಯಲ್ಲಿ ಈ ಹರಾಜುಗಳು ದೋಷಪೂರ್ಣ ಎಂದಿತ್ತು. ಅನೇಕ ಉದ್ಯಮ ಸಂಸ್ಥೆಗಳು ಬಿಡ್‌ ಮಾಡಿ ಅದರಲ್ಲಿ ಹೆಚ್ಚು ಬಿಡ್‌ ಮಾಡಿದವರಿಗೆ ನೀಡುವ ಸ್ಪರ್ಧಾತ್ಮಕತೆಯೇ ಹರಾಜಿನ ಜೀವಾಳ. ಆದರೆ ಈ ತುರಸಿನ ಸ್ಪರ್ಧೆ ಈ ಹರಾಜಿನಲ್ಲಿ ನಡೆದಿರಲಿಲ್ಲ.

 

ಗೋಯೆಂಕಾ ಕಂಪೆನಿ ಅಲ್ಲದೇ ವೇದಾಂತದ ಬಾಲ್ಕೋ, ಆದಿತ್ಯ ಬಿರ್ಲಾ ಅವರ ಹಿಂಡಾಲ್ಕೋ ಕೂಡಾ ಇದೇ ರೀತಿ ಉಪಸಂಸ್ಥೆಗಳನ್ನು ಬಿಡ್‌ ನಲ್ಲಿ ಭಾಗವಹಿಸುವ ತಂತ್ರ ಹೂಡಿದ್ದವು. ಸಿಎಜಿ  ಈ ತಂತ್ರಗಾರಿಕೆಯ ವಿವರವನ್ನು ಬಿಚ್ಚಿಟ್ಟರೂ ಸರಕಾರ ಈ ವರದಿಯನ್ನು ಕಸದ ಬುಟ್ಟಿಗೆ ತಳ್ಳಿತು. ಈ ಹರಾಜು ನಡೆದ ಕೆಲವು ತಿಂಗಳುಗಳ ಬಳಿಕ ಮೋದಿ ಸರಕಾರ ತನ್ನ ಆಂತರಿಕ ಟಿಪ್ಪಣಿಗಳಲ್ಲಿ ಈ ಹರಾಜು ಪ್ರಕ್ರಿಯೆ ಸ್ಪರ್ಧಾತ್ಮಕತೆಯನ್ನು  ಹೊಸಕಿ ಹಾಕುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿತ್ತು. ಇಷ್ಟಾಗಿಯೂ ಗೋಯೆಂಕಾ ಮತ್ತಿತರ ಕಂಪೆನಿಗಳು ಗಣಿಗಾರಿಕೆಯನ್ನು ಯಥಾ ಪ್ರಕಾರ ಮುಂದುವರಿಸಿದ್ದವು. ಈ ಕುರಿತು ಕೇಳಲಾದ ಪ್ರಶ್ನೆಗಳಿಗೆ ಗೋಯೆಂಕಾ ಕಂಪೆನಿಯಾಗಲೀ ಇತರ ಕಂಪೆನಿಗಳಾಗಲೀ ಉತ್ತರಿಸಲಿಲ್ಲ!

 

ಹರಾಜಿನ ಸ್ಪರ್ಧಾತ್ಮಕತೆಯನ್ನು ಖಚಿತಪಡಿಸಿಕೊಳ್ಳಲು, ಕನಿಷ್ಠ ಮೂರು ಅರ್ಹತೆ ಪಡೆದ ಬಿಡ್ಡರ್‌ಗಳು ಅಂತಿಮ ಹರಾಜಿನಲ್ಲಿ ಇರಬೇಕು ಎಂಬ ನಿಯಮವನ್ನು ಕಲ್ಲಿದ್ದಲು ಇಲಾಖೆಯು ಮಾಡಿತ್ತು. ಹರಾಜಿನಲ್ಲಿ ಭಾಗವಹಿಸಲು ಎರಡೇ ದಿನ ಮೊದಲು ಸಿಇಎಸ್‌ಸಿಯ ಮೂರು ಶೆಲ್‌ ಕಂಪೆನಿಗಳನ್ನು ಕೊಂಡುಕೊಂಡು ಅವುಗಳ ಮೂಲಕ ಅರ್ಜಿ ಹಾಕಿತು. ಅಂತಿಮವಾಗಿ ಅದಾನಿ ಪವರ್‌ ಲಿಮಿಟೆಡ್‌ ಮತ್ತು ಜಿಎಂಆರ್‌ ಕಂಪೆನಿಗಳು ಭಾಗವಹಿಸಿದರೂ ಅದಾನಿ ಬಿಡ್‌ ಮಾಡಲೇ ಇಲ್ಲ. ಜಿಎಂಆರ್‌ ಗಂಭೀರವಾಗಿ ಬಿಡ್‌ ನಲ್ಲಿ ಭಾಗವಹಿಸಲಿಲ್ಲ.

 

ಸಿಇಎಸ್‌ಸಿಯ ಉಪ ಕಂಪೆನಿಗಳಾದ ಹಲ್ಡಿಯಾ ಎನರ್ಜಿ ಬಿಡ್‌ ನಲ್ಲಿ ಭಾಗವಹಿಸಲೇ ಇಲ್ಲ. ಇನ್ನೊಂದು ಕಂಪೆನಿ ಸಿಇಎಸ್‌ಸಿ ವಿಳಾಸವನ್ನೇ ಹೊಂದಿತ್ತು; ಅಷ್ಟೇ ಅಲ್ಲ. ಪ್ರಾಥಮಿಕ ಬಿಡ್‌ ಮಾಡಿದ ಮೇಲೆ ಮಾಯವಾಯಿತು! ಹರಾಜು ನಿಯಮಗಳ ಪ್ರಕಾರ ಬಿಡ್ಡುದಾರರು ತಾವು ಹೊಂದಿರುವ ವಿದ್ಯುತ್‌ ಉತ್ಪಾದನಾ ಕಾರ್ಖಾನೆಗಳ ವಿವರ ನೀಡಿ, ಯಾವ ಕಾರ್ಖಾನೆಗೆ ಈ ಕಲ್ಲಿದ್ದಲು ಬಳಸಲಾಗುತ್ತದೆ ಎಂಬ ವಿವರ ನೀಡಬೇಕು.

 

ಶೀಶಮ್‌ ಕಮರ್ಶಿಯಲ್‌ ಎಂಬ ಕಂಪೆನಿ ಬಿಡ್‌ ಗೆ ಅರ್ಜಿ ಹಾಕಿದರೂ ಅದು ಯಾವುದೇ ವಿದ್ಯುತ್‌ ಉತ್ಪಾದನಾ ಘಟಕ ಹೊಂದಿರಲಿಲ್ಲ. ಸಿಇಎಸ್‌ಸಿಯ ಒಂದು ಘಟಕವನ್ನು ತನ್ನದೆಂದು ಹೇಳಿಕೊಂಡಿತ್ತು! ಬಿಡ್‌ ಗೆದ್ದ ಬಳಿಕ ಸಿಇಎಸ್‌ಸಿ ಈ ಘಟಕಕ್ಕೆ ಕಲ್ಲಿದ್ದಲು ಬಳಸಲು ಕೋರಿಕೆ ಸಲ್ಲಿಸಿತು. ಕಲ್ಲಿದ್ದಲು ಸಚಿವಾಲಯ ಒಪ್ಪಿಗೆ ನೀಡಿತು. ಕಾರ್ಟೆಲ್‌ ಕಾರ್ಯಾಚರಣೆಯ ಅತುತ್ತಮ ಉದಾಹರಣೆ ಇದು ಎಂದು ಖ್ಯಾತ ವಕೀಲ ಸುದೀಪ್‌ ಶ್ರೀ ವಾಸ್ತವ ಹೇಳುತ್ತಾರೆ. ಕಲ್ಲಿದ್ದಲು ಗಣಿಗಳ ಲೈಸನ್ಸ್‌ ರದ್ದತಿ ಪ್ರಕರಣದಲ್ಲಿ ಸುದೀಪ್‌ ಅವರ ಪಾಲು ದೊಡ್ಡದಿದೆ.

 

 

ಈ ಪ್ರಕ್ರಿಯೆಯ ಪ್ರಹಸನ ನೋಡಿ!

 

ಒಂದೇ ಕಂಪೆನಿಯ ಮೂರು ಉಪ ಕಂಪೆನಿಗಳು ಬಿಡ್‌ ಮಾಡುತ್ತವೆ. ಎರಡು ಸಲೀಸಾಗಿ ಸೋಲುತ್ತವೆ. ಅಗ್ಗದ ದರದಲ್ಲಿ ಗೆದ್ದ ಕಂಪೆನಿ ಬಿಡ್‌ ಸೋತ ಕಂಪೆನಿಯ ವಿದ್ಯುತ್‌ ಘಟಕಕ್ಕೆ ಕಲ್ಲಿದ್ದಲು ಪೂರೈಸುವ ಅನುಮತಿ ಕೇಳುತ್ತೆ!

 

ಶೂನ್ಯ ಸಂಪಾದನೆಯ ಕಂಪೆನಿಗಳ ಜಾಲ!

 

CESC ಯ ಶೆಲ್‌ ಕಂಪೆನಿಗಳಾದ ಶೀಶಮ್‌ ಕಮರ್ಶಿಯಲ್‌, ವಿಜಿಯೋನ್‌ ಕಮೋಟ್ರೇಡ್ ಹಾಗೂ ವಾಟರ್‌ ಹಯಸಿಂತ್‌ ಕಮೋಸೇಲ್‌ ಗಳನ್ನು ಮೇ 2012 ರಂದು ಕೊಲ್ಕತ್ತಾದಲ್ಲಿ ನೋಂದಣಿ ಮಾಡಲಾಯಿತು. ಇದಾದ ಎರಡು ತಿಂಗಳಿಗೆ ಸಿಎಜಿಯ ಕರಡು ವರದಿ ಕಲ್ಲಿದ್ದಲು ಗಣಿ ನೀಡಿರುವ ಅವ್ಯವಹಾರವನ್ನು ಬಯಲುಗೊಳಿಸಿತು. ಈ ಕಂಪೆನಿಗಳ ದಾಖಲೆಗಳ ಪ್ರಕಾರ ಕಂಪೆನಿಗಳ ಉದ್ದೇಶ, ತಮ್ಮ ಶೇರುದಾರರ ವಿದ್ಯುತ್‌ ಘಟಕಗಳಿಗೆ ಕಲ್ಲಿದ್ದಲು ಸರಬರಾಜು ಮಾಡುವುದು! ಈ ಕಂಪೆನಿಗಳ ಯಾವ ಶೇರುದಾರರಿಗೂ ಅಧಿಕೃತವಾಗಿ ಯಾವುದೇ ವಿದ್ಯುತ್‌ ಸ್ಥಾವರ ಇಲ್ಲ. ಅಥವಾ ಇಂಥಾ ಸ್ಥಾವರಗಳ ಜೊತೆ ಸಂಬಂಧವೂ ಇಲ್ಲ. ಈ ಮೂರೂ ಕಂಪೆನಿಗಳೂ ಒಂದೇ ಇ-ಮೈಲ್‌ ವಿಳಾಸ ಹೊಂದಿದ್ದವು. ಎರಡು ಕಂಪೆನಿಗಳು ಒಂದೇ ಅಂಚೆ ವಿಳಾಸ ಹೊಂದಿದ್ದವು.

 

2013-14ರ  ಹಣಕಾಸು ವರ್ಷದ ಲೆಕ್ಕದಲ್ಲಿ ಈ ಮೂರೂ ಕಂಪೆನಿಗಳು ಒಂದೇ ರೀತಿಯ ಆರ್ಥಿಕ ವರದಿ ಹೊಂದಿದ್ದವು. ವಾಟರ್‌ ಹಯಸಿಂತ್‌ ಕಂಪೆನಿಯ ಆರ್ಥಿಕ ದಾಖಲೆಗಳನ್ನು ಶೀಶಮ್‌ ಕಮರ್ಶಿಯಲ್ಲಿನ ವರದಿಯಲ್ಲೂ ಕಾಣಿಸಲಾಗಿತ್ತು. ಆಗಸ್ಟ್‌ 2014ರಲ್ಲಿ ಇನ್ನೂ ಹಲವು ಕಂಪೆನಿಗಳು ಶೀಶಮ್‌ ನ ಪಾಲುದಾರರಾದವು. ಈ ಕಂಪೆನಿಗಳ ಆರ್ಥಿಕ ವರದಿಯನ್ನು ಪರಾಮರ್ಶಿಸಿದಾಗ ಇವುಗಳಿಗೆ ಗೋಯೆಂಕಾ ಅವರ ಕಂಪೆನಿ ಜೊತೆ ಸಂಬಂಧವಿರುವುದು ಬಯಲಾಯಿತು.

 

ಜನವರಿ 29, 2015 ರಂದು ಅಂದರೆ ಹರಾಜಿಗೆ ಅರ್ಜಿ ಹಾಕಲು 48 ಗಂಟೆ ಬಾಕಿ ಇದ್ದಾಗ ಗೋಯೆಂಕಾ ಕಂಪೆನಿ ಈ ಮೂರೂ ಶೆಲ್‌ ಕಂಪೆನಿಗಳ ಪೂರ್ಣ ನಿಯಂತ್ರಣ ಪಡೆದುಕೊಂಡಿತು. ಕಲ್ಲಿದ್ದಲು ಹರಾಜು ಆದ ಒಂದು ವರ್ಷದ ವರೆಗೂ ಈ ಕಂಪೆನಿಗಳು ಯಾವುದೇ ವ್ಯವಹಾರ ನಡೆಸಲಿಲ್ಲ. 2016 ರವರೆಗೂ ಈ ಕಲ್ಲಿದ್ದಲು ಗಣಿ ಹರಾಜಿನ ಬಿಡ್‌ ನಲ್ಲಿ ಭಾಗವಹಿಸಲು ಮೂಲ ಕಂಪೆನಿಯಿಂದ ಸಾಲ ಪಡೆದಿದ್ದು ಬಿಟ್ಟರೆ ಇನ್ಯಾವುದೇ ವ್ಯವಹಾರ ಮಾಡಿದ ದಾಖಲೆಗಳಿಲ್ಲ.

 

ಜನವರಿ 2016ರಲ್ಲಿ ಆರ್‌ಪಿಎಸ್‌ಜಿ ಯು ( ಗೋಯೆಂಕಾ ಕಂಪೆನಿ) ಈ ಶೀಶಮ್‌ ಕಮರ್ಶಿಯಲ್‌ ಕಂಪೆನಿಯ ಹೆಸರನ್ನು ಕೋಟಾ ಎಲಕ್ಟ್ರಿಸಿಟೀ ಡಿಸ್ಟ್ರಿಬ್ಯೂಶನ್‌ ಲಿಮಿಟೆಡ್‌ ಎಂದು ಬದಲಾಯಿಸಿತು. ಇದೇ ರೀತಿ ವಿಜಿಯೋನ್‌ ಕಮೋಟ್ರೇಡ್‌ ಕಂಪೆನಿಯ ಹೆಸರನ್ನು ಭರತ್‌ ಪುರ್‌ ಎಲೆಕ್ಟ್ರಿಸಿಟಿ ಸರ್ವಿಸಸ್‌ ಎಂದೂ ವಾಟರ್‌ ಹಯಸಿಂತ್‌ ಕಂಪೆನಿಯ ಹೆಸರನ್ನು ಬಿಕಾನೇರ್‌ ಎಲೆಕ್ಟ್ರಿಸಿಟಿ ಸಪ್ಪೈ ಲಿಮಿಟೆಡ್‌ ಎಂದು ಬದಲಾಯಿಸಲಾಯಿತು. ಇವೆರಡೂ ವಿದ್ಯುತ್‌ ವಿತರಣೆ ಹೀಗೆ ಶುರುಮಾಡಿದವು!

 

ದೋಷಪೂರಿತ ನಿಯಮ

 

ಅಕ್ಟೋಬರ್‌ 25ರ ಲೆಕ್ಕಪತ್ರದ ಪ್ರಶ್ನೆಯೊಂದನ್ನು ಸಿಎಜಿ ಯು ಸಿಇಎಸ್‌ಸಿಗೆ  ಹಾಕಿ, ಹರಾಜು ಪ್ರಕ್ರಿಯೆ ಅಂತ್ಯವಾಗುವ ಕೇವಲ ಎರಡು ದಿನ ಮೊದಲು ಈ ಶೀಶಮ್‌ ಕಮರ್ಶಿಯಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ಮಾಲಕತ್ವ ಸಿಇಎಸ್‌ಸಿಗೆ ಬಂದ ವಿವರ ಗೊತ್ತಿತ್ತೇ ಎಂದು ಕೇಳಿತು. ಒಂದೇ ಈಪಿ ವಿಳಾಸದಿಂದ ಈ ಎರಡೂ ಕಂಪೆನಿಗಳು ಅರ್ಜಿ ಹಾಕಿದ್ದು ಗೊತ್ತಿತ್ತೇ ಸಿಇಎಸ್‌ಸಿಯ ವಿದ್ಯುತ್‌ ಸ್ಥಾವರವನ್ನು ತನ್ನ ಸ್ಥಾವರ ಎಂದು ಶೀಶಮ್‌ ಹೇಳಿಕೊಂಡಿದ್ದು ಗೊತ್ತಿತ್ತೇ, ಹೌದಾದರೆ ಕಲ್ಲಿದ್ದಲು ಸಚಿವಾಲಯ ಯಾವುದೇ ಸ್ಪಷ್ಠೀಕರಣ ಕೇಳಿತ್ತೇ ಎಂಬಿತ್ತಾದಿ ಪ್ರಶ್ನೆಗಳನ್ನು ಹಾಕಿತು.

 

ಜಂಟಿ ಸಹಯೋಗದ ಕಂಪೆನಿಗಳು ಮತ್ತು ಅವುಗಳ ಮಾತೃ ಕಂಪೆನಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಸಾಮಾನ್ಯ ಎಂದು ಕಲ್ಲಿದ್ದಲು ಸಚಿವಾಲಯ ಆಂತರಿಕ ಹೇಳಿದೆ. ಅಂತಿಮ ಐದು ಬಿಡ್ಡರುಗಳಲ್ಲಿ ಅತೀ ಹೆಚ್ಚು ರಾಯಧನ ನೀಡುವ ಕಂಪೆನಿಗೆ ಗಣಿ ವಹಿಸಲಾಗುವುದು ಎಂಬುದು ನಿಯಮ. ಆದರೆ ಜಂಟಿ ಸಹಭಾಗಿತ್ವದ ಕಂಪೆನಿಗಳು ಮತ್ತು ಅವುಗಳ ಮಾತೃ ಕಂಪೆನಿ ಜೊತೆಯಾಗಿ ಈ ಬಿಡ್‌ ನಲ್ಲಿ ಭಾಗವಹಿಸಿದರೆ ಅವು ಒಳಗೊಳಗೇ ಮಾಹಿತಿ ಹಂಚಿಕೊಂಡು, ಬಿಡ್‌ ಬೆಲೆ ಬಗ್ಗೆ ಹೊಂದಾಣಿಕೆ ಮಾಡುವ ಸಾಧ್ಯತೆ ನೇರ ಎದ್ದು ಕಾಣುತ್ತದೆ.

 

ಈ ಹರಾಜು ನಡೆದ ಒಂದೇ ವಾರದಲ್ಲಿ ಅಂದರೆ ಫೆಬ್ರವರಿ 2015ರಲ್ಲಿ ಒಬ್ಬ ಬಿಡ್ಡರ್‌ ಈ ಹರಾಜು ಪ್ರಕ್ರಿಯೆಯನ್ನು ದೆಹಲಿ ಹೈಕೋರ್ಟಿನಲ್ಲಿ ಪ್ರಶ್ನಿಸಿದರು. ಈ ನಿಯಮದಿಂದಾಗಿ ಕಾರ್ಟೆಲ್‌ ಸೃಷ್ಟಿಯಾಗಿ ಅಂತಿಮ ಬೆಲೆ ಕಡಿಮೆಯಾಗುವ ಸಾಧ್ಯತೆ ಬಗ್ಗೆ ವಾದ ಮಂಡಿಸಿದರು. ಆದರೆ ಈ ಹಿಂದೆಯ ಪ್ರಕ್ರಿಯೆಗಳಲ್ಲಿ ಇಂಥಾದ್ದು ಕಂಡು ಬಾರದಿರುವ ಕಾರಣ ಈ ಹರಾಜನ್ನು ಪ್ರಶ್ನಿಸಲು ಆಧಾರಗಳಿಲ್ಲ ಎಂದು ಹೈಕೋರ್ಟ್‌ ಈ ದೂರನ್ನು ವಜಾ ಮಾಡಿತು.

 

ಸರಿಸಟೋಲಿ ಗಣಿಯ ಬಿಡ್ಡಿಂಗ್‌ ದಾಖಲೆಗಳನ್ನು ಕೋರ್ಟಿಗೆ ಹಾಜರುಪಡಿಸದೇ ಕಲ್ಲಿದ್ದಲು ಇಲಾಖೆ, ಈ ಕೋರ್ಟ್‌ ತೀರ್ಪನ್ನು ಮಾತ್ರ  ಮುಂದಿಟ್ಟು ಈ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ತಪ್ಪಾಗಿಲ್ಲ ಎಂದು ವಾದಿಸಿತು.

 

ಜಂಟಿ ಕಂಪೆನಿಗಳು ಮತ್ತು ಅವುಗಳ ಮಾತೃ ಕಂಪನಿಯನ್ನು ಭಾಗವಹಿಸಲು ಬಿಡುವುದು ದೋಷಪೂರಿತ ಎಂದು ಸಚಿವಾಲಯವು ಆಂತರಿಕವಾಗಿ ಒಪ್ಪಿಕೊಂಡು ತರುವಾಯ ಈ ನಿಯಮವನ್ನು ರದ್ದು ಮಾಡಿತು. ತದನಂತರದ ಎಲ್ಲಾ ಹರಾಜು ಪ್ರಕ್ರಿಯೆಗಳಲ್ಲಿ ಸರಕಾರವು ಈ ರೀತಿಯ ಒಳ ಸಂಬಂಧ ಇರುವ ಎಲ್ಲಾ ಕಂಪೆನಿಗಳನ್ನು ಏಕ ಬಿಡ್ಡರ್‌ ಎಂದು ಪರಿಗಣಿಸಿತು.

 

ಆದರೆ ಈ ಸಂಬಂಧಪಟ್ಟ ಹರಾಜು ಪ್ರಕ್ರಿಯೆ ಬಗ್ಗೆ ಸಿಎಜಿ ಆಕ್ಷೆಪಗಳ ಬಗ್ಗೆ ಸಚಿವಾಲಯ ಕ್ರಮ ಕೈಗೊಳ್ಳಲೇ ಇಲ್ಲ. ಸಂಸತ್ತಿನಲ್ಲಿ ಆಗಸ್ಟ್‌ ೨೦೧೬ರಲ್ಲಿ ಮಂಡಿಸಲಾದ ಸಿಎಜಿ  ವರದಿಯಲ್ಲಿ ಈ ಹರಾಜು ಬಗ್ಗೆ ವಿವರಗಳು ನೀಡಲಿಲ್ಲವಾದರೂ, ಈ ಜಂಟಿ ಭಾಗೀದಾರ ಕಂಪೆನಿಗಳು ಭಾಗವಹಿಸುವ ನಿಯಮದಿಂದಾಗಿ 29  ಹರಾಜುಗಳಲ್ಲಿ ಕನಿಷ್ಠ 11  ಹರಾಜು ಪ್ರಕ್ರಿಯೆಗಳು ಕೇವಲ 2-3 ಬಿಡ್ಡರುಗಳಿಗಷ್ಟೇ ಅವಕಾಶ ಕಲ್ಪಿಸಿತು ಎಂದು ಹೇಳಿದೆ. ಉಳಿದ ಅರ್ಹ ಬಿಡ್ಡರ್‌ ಗಳ ಭಾಗವಹಿಸುವಿಕೆ ಈ ನಿಯಮದಿಂದಾಗಿ ದುಸ್ತರವಾಯಿತು ಎಂದೂ ಸಿಎಜಿ  ಹೇಳಿದೆ.

 

ಸಿಎಜಿಯ ಪ್ರಶ್ನೆಗಳಿಗೆ ಸಚಿವಾಲಯದ ಉತ್ತರವನ್ನು ಮಾಹಿತಿ ಹಕ್ಕಿನ ಮೂಲಕ ಪಡೆಯಲಾಯಿತು. ಈ ದಾಖಲೆಗಳಲ್ಲಿ ಸಚಿವಾಲಯವು ಈ ನಿಯಮವನ್ನು ಸಮರ್ಥಿಸಿಕೊಂಡಿದೆ. ಆದರೆ ಸಿಎಜಿಯು ಇದು ದುರುಪಯೋಗವಾಗುವ ಸಾಧ್ಯತೆ ಇರುವ ನಿಯಮ ಎಂದು ತಾನೇ ಷರಾ ಬರೆದಿದ್ದ ನಿಯಮವನ್ನು ಸಚಿವಾಲಯ ಸಮರ್ಥಿಸಿಕೊಳ್ಳುವ ವಿಚಿತ್ರದ ಬಗ್ಗೆ ಗಮನ ಸೆಳೆಯಿತು. 11  ಶಂಕಾಸ್ಪದ ಹರಾಜು ಪ್ರಕ್ರಿಯೆ ಬಗ್ಗೆ ಸಚಿವಾಲಯವು ನಿರ್ದಿಷ್ಟ ಸ್ಪಷ್ಠೀಕರಣ ನೀಡಿಲ್ಲ ಎಂದೂ ಹೇಳಿತು.

 

ಸಚಿವಾಲಯದ ಕ್ರಮ ಕೈಗೊಂಡ ಟಿಪ್ಪಣಿ ಮತ್ತು ಅದಕ್ಕೆ ಸಿಎಜಿಯ ಟಿಪ್ಪಣಿಗಳನ್ನು ಸಂಸತ್ತಿನಲ್ಲಿ ಮಂಡಿಸಿದರೂ ಇಂದಿನವರೆಗೂ ಇದರ ಬಗ್ಗೆ ಚರ್ಚೆ ಆಗಿಲ್ಲ. ಆಗ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಅನಿಲ್‌ ಸ್ವರೂಪ್‌ ಸಿಎಜಿ ಮೇಲೆಯೇ ಶಂಕೆ ವ್ಯಪ್ತಪಡಿಸಿದ್ದರು. ಅಷ್ಟೇ ಅಲ್ಲ, ತಮ್ಮ ಸ್ಮೃತಿ ಕಥನದಲ್ಲಿ, , ಸಿಎಜಿಯ ಆರಂಭಿಕ ತಪಾಸಣೆಯ ಎಷ್ಟೋ ಅಂಶಗಳು ಅಂತಿಮ ವರದಿಯ ಭಾಗವಾಗದಂತೆ ಸರಕಾರ ನೋಡಿಕೊಂಡಿತು ಎಂದೂ ಹೇಳಿದ್ದಾರೆ.

 

ಈ ನಿಯಮವನ್ನು ಬದಲಾಯಿಸಿದ ಮೇಲೆ ಮೊದಲ ಎರಡು ಸುತ್ತಿನಲ್ಲಿ ಉಪಯೋಗಕ್ಕೆ ಲಭ್ಯವಿರುವ ಗಣಿಗಳು ಹರಾಜಾದ ಮೇಲೆ ತರುವಾಯದ ಗಣಿಗಳ ಹರಾಜಿನಲ್ಲಿ 2020ರ ವರೆಗೆ ಹೆಚ್ಚಿನವರು ಆಸಕ್ತಿ ತೋರಲಿಲ್ಲ. 2020ರಲ್ಲಿ ಕೇಂದ್ರ ಸರಕಾರವು ತಮ್ಮ ವಿದ್ಯುತ್‌ ಸ್ಥಾವರಗಳಲ್ಲೇ ಈ ಕಲ್ಲಿದ್ದಲು ಬಳಸಬೇಕೆಂಬ ನಿಯಮವನ್ನು ಬದಲಾಯಿಸಿ ಗಣಿಗಾರಿಕೆ ನಡೆಸಿ ತೆಗೆದ ಕಲ್ಲಿದ್ದಲನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಅವಕಾಶ ಕಲ್ಪಿಸಿತು. ಈ ವಿನಾಯಿತಿಯ ಬಳಿಕ ೪೩ ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಹಾಕಲಾಯಿತು.. ಇನ್ನೂ 141 ಗಣಿಗಳನ್ನು ಹರಾಜು ಪ್ರಕ್ರಿಯೆಗೆ ತರಲಾಗಿದೆ.

 

ಬಿಡ್ಡಿಂಗ್‌ ಪ್ರಕ್ರಿಯೆ ಯಲ್ಲಿ ಅಡ್ಡ ದಾರಿ ಹಿಡಿದು ಅನುಕೂಲ ಕಲ್ಪಿಸುವುದು ಒಂದು ಬಗೆಯಾದರೆ ಇನ್ನೊಂದು ಅಡ್ಡ ದಾರಿ ಮೂಲಕ ಮೋದಿ ಸರಕಾರ ಇನ್ನೊಂದು ಕಾರ್ಪೋರೇಟ್‌ ಗೆ ಸಹಾಯ ಮಾಡಿದ್ದನ್ನು ಎರಡನೇ ಭಾಗದಲ್ಲಿ ದಾಖಲಿಸಿದ್ದೇವೆ.

                                                                                                                ಅನುವಾದ; ಸುರೇಶ್‌ ಕಂಜರ್ಪಣೆ

the fil favicon

SUPPORT THE FILE

Latest News

Related Posts