ಬೆಂಗಳೂರು; ನಿವೃತ್ತ ಲೋಕಾಯುಕ್ತ ವೈ ಭಾಸ್ಕರರಾವ್ ಅವರ ಪುತ್ರ ವೈ ಬಿ ಅಶ್ವಿನ್, ವಿವಿಧ ಕಾರ್ಪೋರೇಟ್ ಕಂಪನಿಗಳ ಖಾತೆಗೆ ಅಕ್ರಮವಾಗಿ ಕೋಟ್ಯಂತರ ರುಪಾಯಿಗಳನ್ನು ವರ್ಗಾವಣೆ ಮಾಡಿದ್ದ ಎಂದು ಜಾರಿ ನಿರ್ದೇಶನಾಲಯದ ನಿವೃತ್ತ ಉಪ ನಿರ್ದೇಶಕ ಜೆ ಸುಬ್ರಹ್ಮಣ್ಯನ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ.
ಭ್ರಷ್ಟಾಚಾರ, ಲಂಚಗುಳಿತನದ ಆರೋಪದಡಿಯಲ್ಲಿ ಲೋಕಾಯುಕ್ತ ಸಂಸ್ಥೆಯ ವಿಚಾರಣೆ ಎದುರಿಸುತ್ತಿದ್ದ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಕೋಟ್ಯಂತರ ರುಪಾಯಿಗಳನ್ನು ವಸೂಲಿ ಮಾಡಿದ್ದ ಎಂಬ ಗಂಭೀರ ಆರೋಪದ ಪ್ರಕರಣದ ಕುರಿತಂತೆ ನ್ಯಾಯಾಲಯದಲ್ಲಿ 2022ರ ಅಕ್ಟೋಬರ್ 27ರಂದು ನಡೆದ ವಿಚಾರಣೆ ವೇಳೆಯಲ್ಲಿ ಸಾಕ್ಷ್ಯ ನುಡಿದಿರುವ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಜೆ ಸುಬ್ರಹ್ಮಣ್ಯನ್ ಅವರು ವೈ ಬಿ ಅಶ್ವಿನ್ ನಡೆಸಿದ್ದ ಹಣದ ವಹಿವಾಟು ಮತ್ತು ಬಳಸಿದ್ದ ಮಾರ್ಗಗಳನ್ನು ಸುದೀರ್ಘವಾಗಿ ಪಾಟಿ ಸವಾಲಿನಲ್ಲಿ ವಿವರಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
2015ರ ಫೆಬ್ರುವರಿಯಿಂದ ಏಪ್ರಿಲ್ 2015ರ ಅವಧಿಯಲ್ಲಿಯೇ ಅಶ್ವಿನ್‌ರಾವ್ ಹೈದರಾಬಾದ್‌ನ ಖಾಸಗಿ ಬ್ಯಾಂಕ್‌ನಲ್ಲಿ 4.90 ಕೋಟಿ ರು.ಗಳನ್ನು ಠೇವಣಿ ಇರಿಸಿದ್ದ. ಅಲ್ಲದೇ ಈ ಅವಧಿಯಲ್ಲಿ ಗಳಿಸಿದ್ದ ಎನ್ನಲಾದ ಕಪ್ಪು ಹಣವನ್ನು ಸಕ್ರಮ ಮಾಡಿಕೊಳ್ಳಲು ಪರಿಚಿತ ಚಾರ್ಟೆಟ್ ಅಕೌಂಟೆಂಟ್‌ಗಳ ನೆರವಿನಿಂದ ವಿವಿಧ ಕಾರ್ಪೋರೇಟ್ ಕಂಪನಿಗಳಿಗೆ ಹೇಗೆಲ್ಲಾ ವರ್ಗಾವಣೆ ಮಾಡಿಸಿದ್ದ ಎಂಬುದನ್ನು ಪಾಟೀ ಸವಾಲಿನಲ್ಲಿ ಅನಾವರಣಗೊಳಿಸಿರುವುದು ತಿಳಿದು ಬಂದಿದೆ.
ಹೈದರಾಬಾದ್‌ನಲ್ಲಿ ಕಾರ್ಯಾಚರಿಸುತ್ತಿರುವ M/s IPitch, M/s ರೀಟಾ ಕಮಾಡಿಟಿ ಪ್ರೈವೇಟ್ ಲಿಮಿಟೆಡ್, M/s ಎಕ್ಸೆಲ್ ವಾಣಿಜ್ಯ ಪ್ರೈವೈಟ್ ಲಿಮಿಟೆಡ್, ಕ್ವಾಲಿಟಿ ಆಗ್ರೋ ಪ್ರಾಡಕ್ಟ್ಸ್, ಮಹತಿ ಸಾಫ್ಟ್‌ವೇರ್ ಪ್ರೈವೈಟ್ ಲಿಮಿಟೆಡ್ ಖಾತೆ ಮೂಲಕ ಅಶ್ವಿನ್ ಖಾತೆಗೆ ಹಣ ವರ್ಗಾವಣೆಯಾಗಿತ್ತು.
ಈ ಹಣದಿಂದ ಅಶ್ವಿನ್ ಹಲವೆಡೆ ಸ್ಥಿರಾಸ್ತಿಗಳನ್ನು ಖರೀದಿ ಮಾಡಿದ್ದ ಎಂಬ ವಿವರಗಳನ್ನು ಜೆ ಸುಬ್ರಹ್ಮಣ್ಯನ್ ಅವರು ತೆರೆದಿಟ್ಟಿದ್ದಾರೆ.
ಈ ಸಂಬಂಧ ಕಂಪನಿಯ ನಿರ್ದೇಶಕರುಗಳನ್ನು ಜಾರಿ ನಿದೇರ್ಶನಾಲಯವು ಪಿಎಂಎಲ್‌ಎ ಕಾಯ್ದೆ ಸೆಕ್ಷನ್ 50(2)ರ ಅನ್ವಯ ತನಿಖೆಗೊಳಪಡಿಸಿತ್ತು. ಅಲ್ಲದೇ ಅಶ್ವಿನ್ ಹೊಂದಿದ್ದ ಹಣದ ವಿವರಗಳನ್ನು ಖಾಸಗಿ ಬ್ಯಾಂಕ್‌ನಿಂದಲೂ ಸಂಗ್ರಹಿಸಲಾಗಿತ್ತು. ಇದರ ಪ್ರಕಾರ 2015ರ ಜನವರಿ 16ರಿಂದ 2015ರ ಮಾರ್ಚ್ 17ರವರೆಗೆ ತನ್ನ ಖಾತೆಯಲ್ಲಿ (ಸಂಖ್ಯೆ; 304010069160) ಒಟ್ಟು 5.39 ಕೋಟಿ ರುಗ.ಳನ್ನು ಠೇವಣಿ ಇರಿಸಿದ್ದ. ಇದರಲ್ಲಿ 4.9 ಕೋಟಿ ರು. ಮತ್ತು 40 ಲಕ್ಷ ರು. ನಗದು ರೂಪದ ಠೇವಣಿಯಲ್ಲಿದ್ದವು ಎಂದು ತನಿಖೆ ವೇಳೆಯಲ್ಲಿ ಪತ್ತೆ ಹಚ್ಚಲಾಗಿತ್ತು ಎಂದು ತಿಳಿಸಿದ್ದಾರೆ.
ಅದೇ ರೀತಿ ಮತ್ತೊಂದು ಬ್ಯಾಂಕ್‌ನ ಖಾತೆ (ಸಂಖ್ಯೆ; 3008954702) ಯಲ್ಲಿ 2014ರ ಡಿಸೆಂಬರ್ 23ರವರೆಗೆ 53,32,000 ರು.ಇತ್ತು. ಐ ಪಿಚ್ ಕನ್ಸಲ್ಟೆನ್ಸಿ ಸರ್ವಿಸ್‌ನ ನಿರ್ದೇಶಕ ಡಿ ಜೇಮ್ಸ್ ವಿಲ್ಸನ್ ಅವರು ನೀಡಿದ ಹೇಳಿಕೆ ಪ್ರಕಾರ ಈ ಕಂಪನಿಯಿಂದ ಅಶ್ವಿನ್ ಖಾತೆಗೆ 2015ರ ಮಾರ್ಚ್ 9ರಂದು ಒಟ್ಟು 1.00 ಕೋಟಿ ರು.ಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದಕ್ಕೂ ಮುನ್ನ ಹೈದರಾಬಾದ್‌ನ ಚಾರ್ಟೆಟ್ ಅಕೌಂಟೆಂಟ್ ಸಿರೀಶ್ ಮತ್ತು ಮೋಹನ್ ಮನವಿ ಮೇರೆಗೆ ಐಪಿಚ್ ಕಂಪನಿ ಖಾತೆಗೆ 1 ಕೋಟಿ ರು. ಜಮಾ ಮಾಡಲಾಗಿತ್ತು. ಆ ನಂತರ ಅದನ್ನು ನಗದು ರೂಪದಲ್ಲಿ ಪಡೆದಿದ್ದ ಅಶ್ವಿನ್, ಸ್ಥಿರಾಸ್ತಿ ಖರೀದಿಸಿದ್ದ ಎಂದು ಸಾಕ್ಷ್ಯದಲ್ಲಿ ದಾಖಲಿಸಿದ್ದಾರೆ.
ಅದೇ ರೀತಿ ರಿಟಾ ಕಮಾಡಿಟಿ ಪ್ರೈವೈಟ್ ಲಿಮಿಟೆಡ್‌ನ ನಿರ್ದೇಶಕ ಪವನ್ ಕುಮಾರ್ ತಿವಾರಿ ಅವರನ್ನೂ ತನಿಖೆಗೊಳಪಡಿಸಲಾಗಿತ್ತು. ಈತನ ಹೇಳಿಕೆ ಪ್ರಕಾರ ಇಂಡಸ್ ಇಂಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ 1.99 ಕೋಟಿ ರು. ಮೊತ್ತದ ಕಪ್ಪು ಹಣವನ್ನು ಪರಿವರ್ತಿಸಿ ವರ್ಗಾವಣೆ ಮಾಡಲು ಅನಿಲ್ ಕುಮಾರ್ ಸಿಂಗ್ ನೆರವು ಪಡೆಯಲಾಗಿತ್ತು. ಇದಕ್ಕಾಗಿ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಲಾಗಿತ್ತು. ಆ ನಂತರ ಅಶ್ವಿನ್ ಖಾತೆಗೆ ಈ ಹಣವನ್ನು 2015ರ ಮಾರ್ಚ್ 17ರಂದು ಜಮೆ ಮಾಡಲಾಗಿತ್ತು. ಈ ವರ್ಗಾವಣೆಯನ್ನು ಪವನ್‌ಕುಮಾರ್ ತಿವಾರಿ ಅವರು ತನಿಖೆ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಸಾಕ್ಷ್ಯದಲ್ಲಿ ವಿವರಿಸಿದ್ದಾರೆ.
ಇನ್ನು ಲೆಕ್ಕದ ವ್ಯಾಪ್ತಿಗೆ ಒಳಪಡದ ಹಣವನ್ನು ಕ್ರಮಬದ್ಧಗೊಳಿಸಲೂ ಇವರ ನೆರವು ಪಡೆಯಲಾಗಿತ್ತು. ಅಶ್ವಿನ್‌ರಾವ್, ಆಂಧ್ರಪ್ರದೇಶದ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ವೈ ಭಾಸ್ಕರರಾವ್ ಅವರ ಪುತ್ರನಾಗಿದ್ದರಿಂದ ಯಾರೂ ಅನುಮಾನಿಸಲಿಲ್ಲ. ಅದೇ ರೀತಿ ಎಕ್ಸೆಲ್ ವಾಣಿಜ್ಯ ಕಂಪನಿಯ ಖಾತೆಯಿಂದ 1.75 ಕೋಟಿ ರು. , ಕ್ವಾಲಿಟಿ ಆಗ್ರೋ ಪ್ರಾಡಕ್ಟ್ಸ್ ನಿಂದ 50 ಲಕ್ಷ, ಕೃಷಿ ಉತ್ಪನ್ನಗಳ ಕಂಪನಿಯಿಂದ 25 ಲಕ್ಷ ಮತ್ತು 50 ಲಕ್ಷ ಹಾಗೂ 20 ಲಕ್ಷ ರು.ಗಳನ್ನು ವರ್ಗಾವಣೆ ಮಾಡಲಾಗಿತ್ತು ಎಂದು ಕ್ವಾಲಿಟಿ ಆಗ್ರೋ ಪ್ರೈ.ಲಿ. ಲಿಮಿಟೆಡ್‌ನ ನಿರ್ದೇಶಕರು ತನಿಖೆ ವೇಳೆಯಲ್ಲಿ ಹೇಳಿಕೆ ನೀಡಿದ್ದರು.
ಹಾಗೆಯೇ ಅಶ್ವಿನ್ ಖಾತೆ ಮೂಲಕ 90 ಲಕ್ಷ ರು.ಗಳ ಮತ್ತೊಂದು ಮೊತ್ತವನ್ನು ಮಹತಿ ಸಾಫ್ಟ್‌ವೇರ್ ಪ್ರೈವೈಟ್ ಲಿಮಿಟೆಡ್ ಮೂಲಕ ಕ್ರಮಬದ್ಧಗೊಳಿಸಲಾಗಿತ್ತು ಎಂಬ ವಿವರವನ್ನು ನೀಡಿದ್ದನ್ನು ಸಾಕ್ಷ್ಯದಲ್ಲಿ ವಿವರಿಸಿದ್ದಾರೆ.