ಕಾಮಗಾರಿ ಅಕ್ರಮ; 42 ಕೋಟಿ ನಷ್ಟವಾದರೂ ಸಿಬಿಐ, ಲೋಕಾಯುಕ್ತಕ್ಕೆ ವಹಿಸದ ಸರ್ಕಾರ

photo credit;govind karjola twitter account

ಬೆಂಗಳೂರು; ನಾರಾಯಣಪುರ ಬಲದಂಡೆ ವಿತರಣೆ ಕಾಲುವೆ ಹಾಗೂ ಸೀಳು ಕಾಲುವೆಗಳ ಆಧುನೀಕರಣ ಕಾಮಗಾರಿಯ ಅಂದಾಜು ಪತ್ರಿಕೆಯಲ್ಲಿ ಅನವಶ್ಯಕ ಐಟಂ ಸೇರಿಸಿ 42.78 ಕೋಟಿ ರು. ನಷ್ಟ ಸಂಭವಿಸಿದ್ದರೂ ಈ ಪ್ರಕರಣವನ್ನು ಸಿಬಿಐ ಅಥವಾ ಲೋಕಾಯುಕ್ತಕ್ಕೆ ವಹಿಸಿಲ್ಲ.

 

ಅಂದಾಜುಪತ್ರಿಕೆ ಗಾತ್ರ ಹೆಚ್ಚಿಸಿದ್ದ ಪ್ರಕರಣದಲ್ಲಿ ಗುತ್ತಿಗೆದಾರರಿಂದ ನಷ್ಟದ ಮೊತ್ತವನ್ನು ವಸೂಲು ಮಾಡಲಾಗಿದೆಯಾದರೂ ಇದಕ್ಕೆ ಕಾರಣರಾದ ಅಧಿಕಾರಿ, ಸಿಬ್ಬಂದಿ ವಿರುದ್ಧ ಇಲಾಖಾ ಹಂತದಲ್ಲಿಯೂ ಯಾವುದೇ ಕ್ರಮವಹಿಸಿಲ್ಲ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸವನಗೌಡ ದದ್ದಲ ಹಾಗೂ ಹೂಲಗೇರಿ ಡಿ ಎಸ್‌ ಅವರು ವಿಧಾನಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಪ್ರಕರಣವನ್ನು ಲೋಕಾಯುಕ್ತ ಅಥವಾ ಸಿಬಿಐಗೆ ವಹಿಸುವ ಸಂಬಂಧ ಯಾವುದೇ ನಿಲುವನ್ನೂ ತಿಳಿಸಿಲ್ಲ.

 

95.00 ರಿಂದ 145.00 ವರೆಗೆ ಮುಖ್ಯ ಕಾಲುವೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿದ್ದು 145ರಿಂದ 155ವರೆಗಿನ ಕಾಮಗಾರಿಯು ಪ್ರಗತಿಯಲ್ಲಿದೆ. ಪ್ರತಿ ಕಿ ಮೀ ಗೆ ಒಟ್ಟಾರೆ ಸರಾಸರಿ 16.96 ಕೋಟಿ ರು ಖರ್ಚಾಗಿದೆ. ಪ್ಯಾಕೇಜ್‌-1ರ ಕಾಮಗಾರಿ (526.10 ಕಿ ಮೀ) ಸಂಬಂಧಿಸಿದಂತೆ ಗುತ್ತಿಗೆದಾರರಿಗೆ 373.30 ಕೋಟಿ ರು., ಪ್ಯಾಕೇಜ್‌ -2 ಕಾಮಗಾರಿಗೆ (431 ಕಿ ಮೀ) ಗುತ್ತಿಗೆದಾರರಿಗೆ 180.59 ಕೋಟಿ ರು.ಗಳನ್ನು ಈಗಾಗಲೇ ಪಾವತಿಸಲಾಗಿದೆ.

 

ಸಚಿವ ಗೋವಿಂದ ಕಾರಜೋಳ ಅವರು ನೀಡಿರುವ ಉತ್ತರದ ಪ್ರತಿ

 

ಪ್ರಕರಣದ ವಿವರ

 

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ ಬರುವ ನಾರಾಯಣಪುರ ಬಲದಂಡೆ ಕಾಲುವೆಯು 0.00 ಕಿ ಮೀ. 95 ಕಿ ಮೀ ವರೆಗೆ ವಿತರಣೆ ಕಾಲುವೆ ಹಾಗೂ ಸೀಳುಕಾಲುವೆಗಳ ಆಧುನೀಕರಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅಧಿಕಾರಿಗಳು ಈ ಸಂಬಂಧ ಸಿದ್ಧಪಡಿಸಿದ್ದ ಅಂದಾಜು ಪತ್ರಿಕೆಯಲ್ಲಿ ಅನವಶ್ಯಕ ಐಟಂ ಸೇರಿಸಿ ಗಾತ್ರವನ್ನು ಹೆಚ್ಚಳ ಮಾಡಲಾಗಿತ್ತು. ಇದರಿಂದಾಗಿ 45 ಕೋಟಿ ರು. ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿತ್ತು ಎಂದು ಸರ್ಕಾರವೇ ರಚಿಸಿದ್ದ ಸತ್ಯಶೋಧನೆ ಸಮಿತಿ ವರದಿ ಕೊಟ್ಟಿತ್ತು.

 

‘ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ ಕಿ ಮೀ 0.00 ರಿಂದ 95.00 ಕಿ ಮೀ ವರೆಗಿನ ಆಧುನೀಕರಣ ಪ್ಯಾಕೇಜ್‌ ಕಾಮಗಾರಿಗೆ ಸಂಬಂಧಪಟ್ಟ ಸರ್ಕಾರ ರಚಿಸಿದ್ದ ಸತ್ಯಶೋಧನಾ ಸಮಿತಿಯ ಶಿಫಾರಸ್ಸುಗಳನ್ವಯ (ಸರ್ಕಾರದ ಆದೇಶ ಸಂಖ್ಯೆ ಜಸಂಇ 146ಸೇಇವಿ 2020 ದಿನಾಂಕ 05-07-2021) ರಂದು ಒಟ್ಟು 42.785 ಕೋಟಿ ರು.ಗಳನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ವಸೂಲಾತಿ ಮಾಡಲಾಗಿದೆ,’ ಎಂದು ಸಚಿವ ಗೋವಿಂದ ಕಾರಜೋಳ ಅವರು ಸದನಕ್ಕೆ ಉತ್ತರ ಒದಗಿಸಿದ್ದಾರೆ.

 

ಇದಲ್ಲದೇ ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಉಪ, ಸೀಳು ಕಾಲುವೆಯ ಆಧುನೀಕರಣ ಪ್ಯಾಕೇಜ್‌ 1 ಮತ್ತು 2 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಂಜೂರಾದ ಅಂದಾಜು ಪತ್ರಿಕೆಗಳಲ್ಲಿ ಕಂಡು ಬಂದ ಲೋಪದೋಷಗಳನ್ನು ಪ್ರಮಾಣೀಕರಿಸುವ ಸಲುವಾಗಿ (ಸರ್ಕಾರದ ಆದೇಶ ದಿನಾಂಕ 2022ರ ಜೂನ್‌ 10) ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಮಂಜೂರಾದ ಅಂದಾಜು ಪತ್ರಿಕೆಗಳಲ್ಲಿ ಅಳವಡಿಸಿಕೊಂಡಿರುವ ಐಟಂಗಳಲ್ಲಿನ ಅವಶ್ಯಕತೆ ಹಾಗೂ ಅಂದಾಜು ಪತ್ರಿಕೆಗಳನ್ನು ಪರಿಶೀಲಿಸಿ ಗಮನಿಸಿರುವ ತಾಂತ್ರಿಕ ನ್ಯೂನತೆಗಳನ್ನು ಪ್ರಮಾಣೀಕರಿಸಿ ಸಿದ್ಧಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುವುದು ಉತ್ತರದಿಂದ ತಿಳಿದು ಬಂದಿದೆ.

 

1495 ಎಕರೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಜಕಿ 165 ಎಕರೆ 10 ಗುಂಟೆ ಜಮೀಇಗೆ ಹಣ ಪಾವತಿಯಾಗಿದೆ. 953 ಎಕರೆ 38 ಗುಂಟೆ ಜಮೀನಿಗೆ ಹಣ ಪಾವತಿಸುವ ಹಂತದಲ್ಲಿದೆ. ಮತ್ತು 180 ಎಕರೆ 11 ಗುಂಟೆಯಷ್ಟು ಜಮೀನಿಗೆ ಅವಾರ್ಡ್‌ ಸ್ಟೇಜ್‌ ಹಂತದಲ್ಲಿದೆ.

the fil favicon

SUPPORT THE FILE

Latest News

Related Posts