‘ಮಾದರಿ ಶಾಲೆ’ ಕೇವಲ ಘೋಷಣೆಗಷ್ಟೇ ಸೀಮಿತ; ಅನುದಾನವೇ ಲಭ್ಯವಿಲ್ಲವೆಂದ ಅಧಿಕಾರಿಗಳು

ಬೆಂಗಳೂರು; ಸರ್ಕಾರಿ ಶಾಲೆಗಳ ಪುನಶ್ಚೇತನ ಮತ್ತು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಪ್ರತಿ ಹೋಬಳಿ ಮಟ್ಟದಲ್ಲಿ 4,900 ಕೋಟಿ ರು. ಅನುದಾನದಲ್ಲಿ ಮಾದರಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಿ ಬೀಗಿದ್ದ ರಾಜ್ಯ ಬಿಜೆಪಿ ಸರ್ಕಾರವು ಇದೀಗ ಈ ಯೋಜನೆಗಾಗಿ ಯಾವುದೇ ಅನುದಾನವನ್ನು ಲಭ್ಯಗೊಳಿಸಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಶಾಲೆಗಳ ಕೊಠಡಿ ಮತ್ತು ಕಾಂಪೌಂಡ್‌ಗಳಿಗೆ ಕೇಸರಿ ಬಣ್ಣ ಬಳಿಯಲು ಸೂಚಿಸಲಾಗಿತ್ತು ಎಂಬುದು ವಿವಾದಕ್ಕೀಡಾಗಿರುವ ಬೆನ್ನಲ್ಲೇ  ಶೈಕ್ಷಣಿ ವರ್ಷ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದರೂ ಮಾದರಿ ಶಾಲೆಗಳ ಆರಂಭಕ್ಕೆ ಅನುದಾನವನ್ನೇ ಲಭ್ಯವಾಗಿಸಿಲ್ಲ ಎಂಬುದು ಮುನ್ನೆಲೆಗೆ ಬಂದಿದೆ.

 

2022-23ನೇ ಸಾಲಿನ ಆಯವ್ಯಯ ಘೋಷಿತ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾದರಿ ಶಾಲೆಗಳ ಸ್ಥಾಪನೆ ಕುರಿತು ಚರ್ಚೆಯಾಗಿದೆ. ಈ ಸಭೆಯ ನಡವಳಿಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯದಲ್ಲಿ ಹೋಬಳಿ ಮಟ್ಟದಲ್ಲಿ ಒಟ್ಟು 1441 ಶಾಲೆಗಳನ್ನು ಗುರುತಿಸಿದ್ದ ಸರ್ಕಾರವು 4900 ಕೋಟಿ ರು. ಅನುದಾನದಲ್ಲಿ ಮಾದರಿ ಶಾಲೆಗಳನ್ನು ತೆರೆಯಲು ಯೋಜಿಸಿತ್ತು. ಆದರೆ ಇದಕ್ಕೆ ಅನುದಾನವನ್ನೇ ಲಭ್ಯವಾಗಿಸಿಲ್ಲ. ಅಲ್ಲದೇ ಅನುದಾನ ಲಭ್ಯವಿಲ್ಲದ ಕಾರಣ ಈಗಿರುವ ಹಳೆಯ ಶಾಲೆಗಳಲ್ಲಿ Soft Components ಅಳವಡಿಸಿಕೊಂಡು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕು ಎಂದು ಸಚಿವ ಬಿ ಸಿ ನಾಗೇಶ್‌ ಅವರು ಸೂಚಿಸಿದ್ದರು ಎಂಬುದು ನಡವಳಿಯಿಂದ ತಿಳಿದು ಬಂದಿದೆ.

 

‘ಹೋಬಳಿ ಮಟ್ಟದಲ್ಲಿ ಮೂಲಭೂತ ಸೌಕರ್ಯವಿರುವ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಯಾವುದೇ ಅನುದಾನ ನಿಗದಿಯಾಗದ ಕಾರಣ ಶಾಸಕರ ನಿಧಿಯಿಂದ ಶಾಸಕರ ಸಹಕಾರದೊಂದಿಗೆ ಕ್ರಮ ವಹಿಸಲು ನಿರ್ದೇಶಿಸಲಾಗಿತ್ತು. ಅದರಂತೆ 1441 ಶಾಲೆಗಳನ್ನು ಗುರುತಿಸಿ 4,900 ಕೋಟಿ ರು. ಅನುದಾನ ಅಗತ್ಯವಿದ್ದು ಅಂದಾಜು ಆಯವ್ಯಯ ಬೇಡಿಕೆಗಾಗಿ ಪ್ರಸ್ತಾವನೆ ಕಳಿಸಲಾಗಿತ್ತು. ಆದರೆ ಪ್ರಸ್ತುತ ಸದರಿ ಕಾರ್ಯಕ್ರಮಕ್ಕೆ ಯಾವುದೇ ಅನುದಾನ ಲಭ್ಯವಿಲ್ಲದ ಕಾರಣ ಶಿಕ್ಷಣ ಸಚಿವರ ಸಭೆಯಲ್ಲಿ ಚರ್ಚಿಸಿದಂತೆ ಈಗಿರುವ ಹಳೆಯ ಶಾಲೆಗಳಲ್ಲಿ Soft Components ಅಳವಡಿಸಿಕೊಂಡು ಮಾದರಿ ಶಾಲೆಗಳನ್ನಾಗಿ ಅಭಿವೃದ್ದಿಪಡಿಸಲು ಕ್ರಮವಹಿಸಬೇಕು,’ ಎಂದು ಸಚಿವ ಬಿ ಸಿ ನಾಗೇಶ್‌ ಅವರು ಸೂಚಿಸಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಭೆಯ ಗಮನಕ್ಕೆ ತಂದಿರುವುದು ನಡವಳಿಯಿಂದ ಗೊತ್ತಾಗಿದೆ.

 

ಸಚಿವರ ಸೂಚನೆಯಂತೆ ಮಕ್ಕಳ ಸಂಖ್ಯೆ ಹೆಚ್ಚು ಇರುವ, ಕನಿಷ್ಠ ಮೂಲಭೂತ ಸೌಕರ್ಯ ಹೊಂದಿರುವ ಶಾಲೆಗಳನ್ನು ಗುರುತಿಸಿ ಮಾದರಿ ಶಾಲೆಗಳನ್ನಾಗಿ ಘೋಷಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಸಭೆಯಲ್ಲಿ ತಿಳಿಸಿದ್ದಾರೆ.

 

ಸರ್ಕಾರಿ ಶಾಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯ ಆಗದೇ ಇರುವುದರಿಂದ ಶೈಕ್ಷಣಿಕ ಸಾಧನೆ ಕುಂಠಿತಗೊಂಡು, ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿರುವ ಕಾರಣ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯದ 5,631 ಗ್ರಾಮ ಪಂಚಾಯಿತಿಗಳ ಕೇಂದ್ರ ಸ್ಥಾನದಲ್ಲಿ ತಲಾ ಒಂದರಂತೆ ಮಾದರಿ ಶಾಲೆಗಳನ್ನು ರೂಪಿಸಲು ಮುಂದಾಗಿತ್ತು.

 

ಪಠ್ಯದ ಜೊತೆಗೆ ದೈಹಿಕ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣಕ್ಕೂ ಪ್ರಾಮುಖ್ಯತೆ ನೀಡಿ ಮಕ್ಕಳ ದಾಖಲಾತಿ ಹೆಚ್ಚಿಸುವ ಉದ್ದೇಶವೂ ಹೊಂದಿತ್ತು. ಸುಸಜ್ಜಿತ ಬೋಧನಾ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿ, ಸಿಬ್ಬಂದಿ, ಗಣಕಯಂತ್ರ ಕೊಠಡಿ, ವಿದ್ಯಾರ್ಥಿಗಳಿಗೆ ಸಮರ್ಪಕ ಆಸನ ವ್ಯವಸ್ಥೆ, ಉತ್ತಮ ಗ್ರಂಥಾಲಯ, ಪ್ರಯೋಗಾಲಯ, ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಅಡುಗೆ ಕೋಣೆ, ಊಟದ ಕೋಣೆ, ಸುಸಜ್ಜಿತ ಆಟದ ಮೈದಾನ, ರಂಗ ಮಂಟಪ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕೈತೋಟ, ವ್ಯವಸಾಯೋಪಕರಣಗಳು, ಟೈಲರಿಂಗ್ ಮಷಿನ್, -ಶ್ರವಣ ಉಪಕರಣಗಳು, ಚಿತ್ರಕಲೆ ಸಾಮಗ್ರಿಗಳು, ಸಂಗೀತ ಉಪಕರಣಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಈ ಮಾದರಿ ಶಾಲೆಯಲ್ಲಿ ಒದಗಿಸಲಾಗುವುದು ಎಂದು ಹೇಳಲಾಗಿತ್ತು.

 

ಪಂಚಾಯಿತಿಯ ಕೇಂದ್ರ ಭಾಗದಲ್ಲಿದ್ದು ಉತ್ತಮ ರಸ್ತೆ ಸಂಪರ್ಕ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಿಶಾಲವಾದ ಆಟದ ಮೈದಾನ, ಅಗತ್ಯ ಮೂಲ ಸೌಕರ್ಯಗಳನ್ನು ಹೊಂದಿರುವ ಶಾಲೆಗಳನ್ನು ವಿಲೀನಗೊಳಿಸಿ ಮಾದರಿ ಶಾಲೆಯನ್ನಾಗಿಸಲು ಮುಂದಾಗಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts