ಶರಣರಿಗೆ ‘ಎದೆ ನೋವೆಂದು’ ಕೋರ್ಟ್‌ ದಾರಿತಪ್ಪಿಸಿದ್ದ ಅಧಿಕಾರಿ, ವೈದ್ಯರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು; ಅಪ್ರಾಪ್ತ ಶಾಲಾ ಬಾಲಕಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದಡಿಯಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಡಾ ಶಿವಮೂರ್ತಿ ಶರಣರ ಆರೋಗ್ಯ  ವಿಚಾರದಲ್ಲಿ ನ್ಯಾಯಾಲಯವನ್ನೇ ದಾರಿತಪ್ಪಿಸಲೆತ್ನಿಸಿದ ಆರೋಪದಡಿಯಲ್ಲಿ ಜಿಲ್ಲಾಸ್ಪತ್ರೆಯ ಸರ್ಜನ್‌, ಜಿಲ್ಲಾ ಕಾರಾಗೃಹ ಅಧೀಕ್ಷಕರು  ಸೇರಿದಂತೆ ಇನ್ನಿತರೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರೊಂದು ದಾಖಲಾಗಿದೆ.

 

 

ಈ ಪ್ರಕರಣದಲ್ಲಿ  ಮುರುಘಾ ಶರಣರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯವು ತಿರಸ್ಕರಿಸಿರುವ ಬೆನ್ನಲ್ಲೇ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರು ಪ್ರಕರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದಂತಾಗಿದೆ.

 

ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಿಂದ ಮುರುಘಾ ಶರಣರನ್ನು ರಕ್ಷಿಸಲು ನೆರವಾಗಿ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪಿಸಿರುವ ನೈಜ ಹೋರಾಟಗಾರರ ವೇದಿಕೆಯು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ ಎಂ ಮರಕಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ ರಂಗನಾಥ್‌, ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಡಾ ಬಸವರಾಜ್ ಎಂಬುವರ ವಿರುದ್ಧ ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರಿಗೆ ದೂರು ಸಲ್ಲಿಸಿದೆ.  ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ನ್ಯಾಯಾಂಗ ಬಂಧನಲ್ಲಿದ್ದ ಆರೋಪಿಯನ್ನು ಮುಂಜಾನೆ ಆಸ್ಪತ್ರೆಗೆ ದಾಖಲು ಮಾಡುವ ಮುನ್ನ ಅಥವಾ ದಾಖಲಾದ ನಂತರ ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಕಾರಾಗೃಹ ಅಧೀಕ್ಷಕಿ ಎಂ ಎಂ ಮರಕಟ್ಟಿ , ಆರೋಪಿಯ ಹೃದ್ರೋಗದ ನಕಲಿ ತೀವ್ರತೆಯನ್ನು ಸೃಷ್ಟಿಸಿದ ಡಿಎಚ್‌ಒ ಡಾ ರಂಗನಾಥ್‌, ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ ಬಸವರಾಜ್‌ ಮತ್ತಿತರ ಪೊಲೀಸ್‌ ಅಧಿಕಾರಿಗಳು ಮತ್ತು ಸರ್ಕಾರದ ವೈದ್ಯರು ಆರೋಪಿಯ ಜೊತೆ ಕೈಜೋಡಿಸಿದ್ದಾರೆ. ಆರೋಪಿಯ ನ್ಯಾಯಾಂಗ ಬಂಧನವನ್ನು ತಪ್ಪಿಸಲು ಜೈಲು ಶಿಕ್ಷೆಯಿಂದ ಪಾರಾಗಿಸಲು ಶಾಮೀಲಾಗಿ ಅಧಿಕಾರ ದುರ್ಬಳಕೆ ಮಾಡಿಕ ಕರ್ತವ್ಯಲೋಪವೆಸಗಿರುವ ಅಧಿಕಾರಿಗಳು ನ್ಯಾಯಾಲಯವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ,’ ಎಂದು ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌ ಅವರು ದೂರಿನಲ್ಲಿ ವಿವರಿಸಿದ್ದಾರೆ.

 

ಈ ಪ್ರಕರಣದ ಮೊದಲನೇ ಆರೋಪಿಯಾಗಿರುವ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದಾಗ ಅವರಿಗೆ ತುಂಬಾ ಎದೆನೋವಿತ್ತು ಎಂದು ಕಾರಣ ಮುಂದಿರಿಸಿದ್ದಾರೆ. ಆದರೆ ಈ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತರದೆಯೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಬೆಳಿಗ್ಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ನೀಡುವ ಹಂತದಲ್ಲಿಯೇ ಅಲ್ಲಿನ ವೈದ್ಯಾಧಿಕಾರಿಯು ಮುರುಘಾ ಶರಣರಿಗೆ ತೀವ್ರತರನಾದ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಸುಳ್ಳು ಹೇಳಿದ್ದಾರಲ್ಲದೆ ಇದಕ್ಕೆ ದಾಖಲೆಗಳನ್ನೂ ಸೃಷ್ಟಿಸಿದ್ದಾರೆ ಎಂದು ನೈಜ ಹೋರಾಟಗಾರರ ವೇದಿಕೆಯು ಆರೋಪಿಸಿದೆ.

 

‘ದಾವಣಗೆರೆಯ ಖಾಸಗಿ ಹೃದಯ ತಜ್ಞರನ್ನು ಕರೆಸಿ ಆರೋಪಿಗೆ ತೀವ್ರತರವಾದ ಎದೆನೋವಿದೆ, ಹೃದಯಕ್ಕೆ ಘಾಸಿಯಾಗಿದೆ ಈ ಆಸ್ಪತ್ರೆಯ್ಲಲಿ ಅವರಿಗೆ ಚಿಕಿತ್ಸೆ ನೀಡಲು ಹೆಚ್ಚಿನ ವೈದ್ಯಕೀಯ ಸೌಲಭ್ಯವಿಲ್ಲ, ಇವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ವಿಶೇಷ ಚಿಕಿತ್ಸೆ ನೀಡಬೇಕೆಂದು ತಕ್ಷಣವೇ ಆರೋಪಿಯನ್ನು ಐಸಿಯುನಲ್ಲಿ ದಾಖಲಿಸಿ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹುನ್ನಾರ ನಡೆಸಿದ್ದಾರೆ,’ ಎಂದು ವೇದಿಕೆಯು ದೂರಿನಲ್ಲಿ ಆಪಾದಿಸಿದೆ.

 

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನ್ಯಾಯಾಧೀಶರು ಅದೇಶಿಸಿದ ನಂತರ ಐಸಿಯುನಲ್ಲಿ ನಕಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿಯನ್ನು ಪೊಲೀಸ್‌ ವಾಹನನದಲ್ಲಿಯೇ ನ್ಯಾಯಾಲಯದಲ್ಲಿ ಕರೆದುಕೊಂಡು ಬರಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿಯು ಕೋರ್ಟ್‌ ಆವರಣದಿಂದ ನಡೆದಿದ್ದರಲ್ಲದೇ ಮೆಟ್ಟಿಲುಗಳನ್ನು ಹತ್ತಿ ಕೋರ್ಟ್‌ ಹಾಲ್‌ಗೆ ಹಾಜರಾಗಿ ನ್ಯಾಯಾಧೀಶರ ಮುಂದೆ ಕಟಕಟೆಯಲ್ಲಿ ನಿಂತಿದ್ದರು. ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಐಸಿಯುನಲ್ಲಿ ಆರೋಪಿಯು ಸಲೀಸಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿರುವುದು ಆಶ್ಚರ್ಯಕರ ಸಂಗತಿ ಮತ್ತು ಪವಾಡ ಸದೃಶ ಸಂಗತಿಯಾಗಿದೆ ಎಂದು ವೇದಿಕೆಯು ದೂರಿನಲ್ಲಿ ಹೇಳಿದೆ.

 

ಅರೋಪಿಯ ಜತೆ ಶಾಮೀಲಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪವೆಸಗಿದ ಪೊಲೀಸರು, ಕಾರಾಗೃಹ ಅಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ವರ್ಗದವರನ್ನು ಸಮಗ್ರ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ವೇದಿಕೆಯು ಒತ್ತಾಯಿಸಿದೆ.

the fil favicon

SUPPORT THE FILE

Latest News

Related Posts