ಮುಖ್ಯ ಕಾರ್ಯದರ್ಶಿ, ಡಿಜಿಪಿ ಸೇರಿ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಆಸ್ತಿ ವಿವರ ಮುಚ್ಚಿಟ್ಟ ಸರ್ಕಾರ

photo credit;deccan hearald

ಬೆಂಗಳೂರು; ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಡಿಜಿಐಜಿಪಿ ಪ್ರವೀಣ್‌ ಸೂದ್‌ ಸೇರಿದಂತೆ ರಾಜ್ಯದ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಸಲ್ಲಿಸಿರುವ ಸ್ಥಿರಾಸ್ತಿ ವಿವರಗಳು ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣ ಡಿಒಪಿಟಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ಆರ್‌ಟಿಐ ಅಡಿಯಲ್ಲಿ ನೀಡದೇ ಮುಚ್ಚಿಟ್ಟಿರುವುದು ಇದೀಗ ಬಹಿರಂಗವಾಗಿದೆ.

 

ಅಧಿಕಾರಿ ನೌಕರರ ಚರಾಸ್ತಿ ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ ವಿವರಗಳು ವೈಯಕ್ತಿಕ ಮಾಹಿತಿಯಡಿಯಲ್ಲಿ ಬರುತ್ತದೆ ಎಂಬ ಕಾರಣ ನೀಡಿ ಆರ್‌ಟಿಐ ಅಡಿಯಲ್ಲಿ ಮಾಹಿತಿ ನೀಡಲು ನಿರಾಕರಿಸಿದೆ. ಐಎಎಸ್‌, ಐಪಿಎಸ್‌ ಅಧಿಕಾರಿಗಳ ಆಸ್ತಿ ಹೊಣೆಗಾರಿಕೆಗಳ ಪಟ್ಟಿಯನ್ನು ಸರ್ಕಾರ ಮುಚ್ಚಿಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌ ಅವರು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ‘ಕೋರಿರುವ ಮಾಹಿತಿಯು ಮೂರನೇ ವ್ಯಕ್ತಿಯ ವೈಯಕ್ತಿಕ ಮಾಹಿತಿಯಾಗಿದ್ದು ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 8(1)(ಜೆ) ಅಡಿಯಲ್ಲಿ ಮಾಹಿತಿಯನ್ನು ಒದಗಿಸಲು ಸಾಧ್ಯವಿರುವುದಿಲ್ಲ,’ ಎಂದು 2022ರ ಆಗಸ್ಟ್‌ 8ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಉತ್ತರ ನೀಡಿದೆ. ಇದರ ಪ್ರತಿಯು ‘ದಿ ಫೈಲ್‌’ ಗೆ ಲಭ್ಯವಾಗಿದೆ.

 

ಆದರೆ ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಅಧಿಕಾರಿಗಳು ಪ್ರತಿ ವರ್ಷ ಸ್ಥಿರಾಸ್ತಿಗಳ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ನೇರವಾಗಿ ಸಲ್ಲಿಸುತ್ತಿದ್ದಾರೆ. ಇದು ಡಿಒಪಿಟಿ ವೆಬ್‌ಸೈಟ್‌ನಲ್ಲಿಯೂ ಸಾರ್ವಜನಿಕರಿಗೆ ಲಭ್ಯವಿದೆ. ಹೀಗಿದ್ದರೂ ರಾಜ್ಯ ಸರ್ಕಾರವು ಆಸ್ತಿ ಹೊಣೆಗಾರಿಕೆ ಪಟ್ಟಿಯನ್ನು ನೀಡದೆಯೇ ಮಾಹಿತಿ ಹಕ್ಕಿನಡಿಯಲ್ಲಿ ನಿರಾಕರಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

‘ಅಖಿಲ ಭಾರತ ಆಡಳಿತ ಸೇವೆ ಮತ್ತು ಅಖಿಲ ಭಾರತ ಪೊಲೀಸ್ ಸೇವೆಯ ಅಧಿಕಾರಿಗಳು ತಮ್ಮ ಚರ ಸ್ಥಿರ ಆಸ್ತಿಯನ್ನು ಪ್ರತಿವರ್ಷ ಘೋಷಿಸಬೇಕೆಂಬ ಕಾನೂನು ನಿಯಮವಿದೆ. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿ ಮುಖ್ಯ ನ್ಯಾಯಮೂರ್ತಿ ಪ್ರಧಾನಮಂತ್ರಿ ಮತ್ತು ಜನಪ್ರತಿನಿಧಿಗಳು ತಮ್ಮ ಚರ ಸ್ಥಿರ ಆಸ್ತಿಯನ್ನು ಸಂಬಂಧಪಟ್ಟವರಿಗೆ ಸಲ್ಲಿಸುತ್ತಿದ್ದಾರೆ. ಆದರೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಇವರೆಲ್ಲರಿಗಿಂತ ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದೇವೆ ಎಂಬ ಭ್ರಮೆ ಲೋಕದಲ್ಲಿದ್ದಾರೆ. ಇವರು ತೆಗೆದುಕೊಳ್ಳುತ್ತಿರುವ ಸಂಬಳ ಸಾರ್ವಜನಿಕರ ತೆರಿಗೆ ಹಣದಿಂದ ಎಂಬುದನ್ನೇ ಮರೆತುಬಿಟ್ಟಿದ್ದಾರೆ. ಲಂಚ ಪ್ರಕರಣದಿಂದ ಐಪಿಎಸ್, ಐಎಎಸ್‌ ಅಧಿಕಾರಿಯೊಬ್ಬರು ಜೈಲಿನಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಭ್ರಷ್ಟಾಚಾರದಿಂದ ಮಾಡಿದ ಚರ ಸ್ಥಿರ ಆಸ್ತಿಯನ್ನು ಹಲವಾರು ಐಎಎಸ್. ಐಪಿಎಸ್ ಅಧಿಕಾರಿಗಳ ಬಹಿರಂಗಪಡಿಸುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಎಚ್‌ ಎಂ ವೆಂಕಟೇಶ್‌ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ಐಎಎಸ್‌, ಐಪಿಎಸ್‌ ಅಧಿಕಾರಿಗಳು ಡಿಒಪಿಟಿಗೆ ಸಲ್ಲಿಸಿರುವ ವಾರ್ಷಿಕ ಸ್ಥಿರಾಸ್ತಿ ಘೋಷಣಾ ಪತ್ರಗಳನ್ನು ‘ದಿ ಫೈಲ್‌’ ಪರಿಶೀಲಿಸಿದೆ. ಬಹುತೇಕ ಅಧಿಕಾರಿಗಳು ಘೋಷಣೆ ಮಾಡುವ ನಮೂನೆಯಲ್ಲಿ ಏನನ್ನೂ ಮಾಹಿತಿ ಒದಗಿಸದೆಯೇ ಖಾಲಿ ನಮೂನೆಗಳನ್ನು ಸಿಬ್ಬಂದಿ ಆಡಳಿತ ತರಬೇತಿ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿದ್ದಾರೆ. ಅದೇ ರೀತಿ ಕಳೆದ 10 ವರ್ಷಗಳಿಂದಲೂ ಅಖಿಲಭಾರತ ಸೇವೆಯಲ್ಲಿರುವ ಹಲವು ಅಧಿಕಾರಿಗಳೂ ತಮ್ಮ ಬಳಿ ಒಂದೇ ಒಂದು ಸ್ಥಿರಾಸ್ತಿಯೂ ಇಲ್ಲ ಎಂದು ಘೋಷಿಸಿರುವುದು ಪಟ್ಟಿಯಿಂದ ಗೊತ್ತಾಗಿದೆ.

 

ಆದಾಯ ತೆರಿಗೆ ಸಲ್ಲಿಸುವ ಸಂದರ್ಭದಲ್ಲೇ ಚರಾಸ್ತಿ ವಿವರಗಳನ್ನು ಘೋಷಿಸುವುದರಿಂದ ಪ್ರತ್ಯೇಕವಾಗಿ ಭಾರತ ಸರ್ಕಾರಕ್ಕೆ ಸಲ್ಲಿಸುವ ಪ್ರಮೇಯವಿಲ್ಲ ಎಂದು ಕೆಲ ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಅಧಿಕಾರಿಗಳು ಕುಂಟು ನೆಪವೊಡ್ಡಿದ್ದಾರೆ.

 

ಸಾರ್ವಜನಿಕ ನೌಕರನು (ಆಸ್ತಿಗಳ ವಿವರಗಳ ವಾರ್ಷಿಕ ಸಲ್ಲಿಕೆ ಮತ್ತು ಮಾಹಿತಿ ಘೋಷಣೆ ಹಾಗೂ ಆಸ್ತಿಗಳ ವಿನಾಯಿತಿಯ ಮಿತಿ) 2014ರ ಪರಿಷ್ಕೃತ ನಿಯಮದ ಪ್ರಕಾರ ಅಧಿಸೂಚನೆ ಸಂಖ್ಯೆ ಜಿಎಸ್‌ಆರ್‌ 918(ಇ- 2014ರ ಡಿಸೆಂಬರ್‌ 26ರಲ್ಲಿ ಸೂಚಿಸಿರುವ ನಮೂನೆ 2 ಮತ್ತು 4 ರ ಪ್ರಕಾರ ಚರಾಸ್ತಿ, ಸಾಲ , ಹೊಣೆಗಾರಿಕೆಯ ವಿವರಗಳನ್ನು ಸಲ್ಲಿಸಬೇಕು ಇದೇ ಪತ್ರದಲ್ಲಿಯೇ ಪ್ರಸ್ತಾಪಿಸಿತ್ತು. ಅಲ್ಲದೆ ನಮೂನೆಗಳ ಮಾದರಿಗಳನ್ನೂ ಒದಗಿಸಿತ್ತು.

 

ಆದರೆ ಅಖಿಲ ಭಾರತ ಸೇವೆ ಅಧಿಕಾರಿಗಳು ಕಳೆದ ಆರೇಳು ವರ್ಷದಿಂದಲೂ ಈ ಯಾವ ವಿವರಗಳನ್ನು ಒದಗಿಸಿಲ್ಲ ಎಂದು ತಿಳಿದು ಬಂದಿದೆ. ಹಾಗೆಯೇ ಚರಾಸ್ತಿಗಳ ವಿವರಗಳನ್ನು ಒದಗಿಸುವ ನಮೂನೆಯನ್ನೂ ಭಾರತ ಸರ್ಕಾರಕ್ಕೆ ಸಲ್ಲಿಸದಿರುವುದು ಗೊತ್ತಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮುಖ್ಯಮಂತ್ರಿಗಳ ಬಳಿಯೇ ಇದ್ದರೂ ಈ ಹಿಂದಿನ ಮೂವರು ಮುಖ್ಯಮಂತ್ರಿಗಳು ಭಾರತ ಸರ್ಕಾರದ ಸೂಚನೆಯತ್ತ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ.

 

‘1968ರ ಅಖಿಲ ಭಾರತ ಸೇವೆಗಳ ನಿಯಮದ ಪ್ರಕಾರ ಈ ಮೊದಲಿನಿಂದಲೂ ಚರಾಸ್ತಿಗಳ ವಿವರಗಳ ಪಟ್ಟಿಯನ್ನು ಘೋಷಿಸಬೇಕಿತ್ತು. ತದನಂತರ 2013ರಲ್ಲಿ ಜಾರಿಗೊಂಡ ಲೋಕಪಾಲ್‌/ಲೋಕಾಯುಕ್ತ ಕಾಯ್ದೆ ಪ್ರಕಾರ ನಿರ್ದಿಷ್ಟವಾದ ಸೂಚನೆಗಳಿದ್ದರೂ ಸಹ ಚರಾಸ್ತಿಗಳ ವಿವರವನ್ನು ಘೋಷಿಸದೆಯೇ ನಿಯಮ ಉಲ್ಲಂಘಿಸುವ ಮೂಲಕ ಭಾರತ ಸರ್ಕಾರದ ಅಧಿಸೂಚನೆಯನ್ನು ಬದಿಗೆ ಸರಿಸಲಾಗುತ್ತಿದೆ. ಉನ್ನತ ಅಧಿಕಾರಿಗಳೇ ಈ ತರಹದ ಉಲ್ಲಂಘನೆ ಮಾಡುತ್ತಿರುವುದರ ಹಿಂದೆ ಅವರು ಮಾಡಿರಬಹುದಾದ ಹೂಡಿಕೆಗಳು, ಷೇರುಗಳ ಖರೀದಿ ಸೇರಿದಂತೆ ಇನ್ನಿತರೆ ವಾಣಿಜ್ಯ/ವ್ಯವಹಾರ ಚಟುವಟಿಕೆಗಳನ್ನು ಮುಚ್ಚಿಟ್ಟಿರುವ ಹಿಂದೆ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಕೂಡ ಬಲವಾದ ಕಾರಣ ಇರಬಹುದು,’ ಎನ್ನುತ್ತಾರೆ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಐಯ್ಯರ್‌.

 

ಆಸ್ತಿ ವಿವರ ಸಲ್ಲಿಸದ ಅಧಿಕಾರಿಗಳ ಭಡ್ತಿ ಮತ್ತಿತರ ವೃತ್ತಿ ಸಂಬಂಧಿ ಅಂಶಗಳನ್ನು ತಡೆಹಿಡಿಯಲು ಸರ್ಕಾರಕ್ಕೆ ಅವಕಾಶವಿದೆ. ನಿಯಮಗಳ ಪ್ರಕಾರ, ದೇಶದ ಎಲ್ಲ ನಾಗರಿಕ ಸೇವಾ ಅಧಿಕಾರಿಗಳು ಪ್ರತಿ ವರ್ಷ ತಮ್ಮ ಸ್ಥಿರಾಸ್ತಿ ಹಾಗೂ ತಮ್ಮ ಭೋಗ್ಯದಲ್ಲಿರುವ ವಸ್ತುಗಳ ವಿವರವನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು.

 

ಅಲ್ಲದೆ ಕೈಯಲ್ಲಿರುವ ನಗದು, ಬ್ಯಾಂಕ್ ಠೇವಣಿ, ಬಾಂಡ್, ಡಿಬೆಂಚರ್, ಷೇರು, ಮ್ಯೂಚುಯಲ್ ಫಂಡ್‌ ಗಳಲ್ಲಿನ ಹೂಡಿಕೆ, ವಿಮೆ, ಫ್ರಾವಿಡೆಂಡ್ ಫಂಟ್, ವೈಯಕ್ತಿಕ ಸಾಲ, ಬೇರೆ ವ್ಯಕ್ತಿಗಳಿಗೆ ನೀಡಿರುವ ಸಾಲ ಮುಂತಾದ ವಿವರಗಳನ್ನು ಸಲ್ಲಿಸಬೇಕು. ಉದ್ಯೋಗಿಗಳು ಹೊಸ ನಿಯಮದಂತೆ ಹೊಂದಿರುವ ವಾಹನ ವಾಹನ ಚಿನ್ನಬೆಳ್ಳಿ ಆಭರಣಗಳು, ಗಟ್ಟಿಗಳ ವಿವರಗಳನ್ನು ಘೋಷಿಸಬೇಕು.

 

‘ಐಎಎಸ್. ಐಪಿಎಸ್ ಅಧಿಕಾರಿಗಳು ತಾವು ಹೊಂದಿದ ಚರ ಸ್ಥಿರ ಆಸ್ತಿ ಘೋಷಣೆ ಪ್ರಮಾಣ ಪತ್ರವನ್ನು ನೀಡಲು ಮಾಹಿತಿ ಹಕ್ಕು ಅಧಿನಿಯಮ 8(1) ಜೆ ಕೆಳಗಡೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬ ಪತ್ರವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಯರು ನೀಡಿರುವುದು ಎಲ್ಲೋ ಒಂದು ಕಡೆ ಇವರ ಭ್ರಷ್ಟ ಲಂಚತನದಿಂದ ಮಾಡಿದ ಆಸ್ತಿಗಳನ್ನು ಬಹಿರಂಗಪಡಿಸಲು ಹಿಂಜರಿಕೆ ಮಾಡುತ್ತಿದ್ದಾರೆ. ಇದರ ಹಿಂದೆ ಹಿರಿಯ ಐಎಎಸ್ ಐಪಿಎಸ್ ಅಧಿಕಾರಿಗಳು ಕೈವಾಡವಿರುವುದು ಸ್ಪಷ್ಟವಾಗಿದೆ,’ ಎಂದೂ ಎಚ್‌ ಎಂ ವೆಂಕಟೇಶ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

SUPPORT THE FILE

Latest News

Related Posts